ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಮಾತನಾಡದೆ ಹೊರಗಡೆ ರಾಜಕೀಯ ಭಾಷಣ ಮಾಡುವ ಮೂಲಕ ಪ್ರಜಾಪ್ರಭುತ್ವಕ್ಕೆ ಕಳಂಕ ತಂದಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಆರೋಪಿಸಿದ್ದಾರೆ.
ಸಂಸತ್ತಿನ ಇತಿಹಾಸದಲ್ಲೇ ದೇಶ ಇದಕ್ಕಿಂತ ಕರಾಳ ಅವಧಿಯನ್ನು ಕಂಡಿಲ್ಲ ಎಂದೂ ಹೇಳಿದರು. ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಒತ್ತಾಯಿಸಿ ವಿಪಕ್ಷಗಳು ಗುರುವಾರವೂ ಗದ್ದಲ ಎಬ್ಬಿಸಿದವು. ಖರ್ಗೆ ಸೇರಿದಂತೆ ವಿಪಕ್ಷಗಳ ನಾಯಕರು ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸಿದರು.
ಇದನ್ನೂ ಓದಿ:ಮಣಿಪುರ ವಿಷಯದಲ್ಲಿ ಮೋದಿಯವರೇ ನಿಮ್ಮ ಮೌನವನ್ನು ಭಾರತ ಎಂದಿಗೂ ಕ್ಷಮಿಸುವುದಿಲ್ಲ:ಮಲ್ಲಿಕಾರ್ಜುನ ಖರ್ಗೆ
ಸಂಸತ್ತಿನಲ್ಲಿ ಮುಂಗಾರು ಅಧಿವೇಶನ ನಡೆಯುತ್ತಿದ್ದು, ಪ್ರಧಾನಿ ಸದನದೊಳಗೆ ಮಾತನಾಡುವ ಬದಲು ಅಲ್ಲಿ-ಇಲ್ಲಿ ಮಾತನಾಡುವ ಮೂಲಕ ದೇಶದ ಪ್ರಜಾಪ್ರಭುತ್ವಕ್ಕೆ ಕಳಂಕ ತಂದಿದ್ದಾರೆ.ವಿರೋಧ ಪಕ್ಷಗಳ ಹೆಸರು ಉಲ್ಲೇಖಿಸಿ ನಿಂದಿಸುವುದರಿಂದ ಸರ್ಕಾರದ ತಪ್ಪುಗಳನ್ನು ಅಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕಪ್ಪು ಬಟ್ಟೆಯನ್ನು ದಲಿತ,ಬುಡುಕಟ್ಟು ಹಾಗೂ ಹಿಂದುಳಿದ ವಿರೋಧಿ ಮನಸ್ಥಿತಿ ಹೊಂದಿದವರು ಮಾತ್ರ ಲೇವಡಿ ಮಾಡಬಹುದು. ಆದರೆ ನಮ್ಮ ಪಾಲಿಗಿದು ಪ್ರತಿಭಟನೆ ಹಾಗೂ ಶಕ್ತಿಯ ಸಂಕೇತವಾಗಿದೆ. ಕಪ್ಪು ಬಣ್ಣವು ನ್ಯಾಯ ಮತ್ತು ಘನತೆಯ ಸಂಕೇತ. ಮಣಿಪುರದ ಜನರು ನ್ಯಾಯ,ಶಾಂತಿ ಮತ್ತು ಗೌರವಕ್ಕೆ ಅರ್ಹರಾಗಿದ್ದಾರೆ ಎಂದರು.
ಮಣಿಪುರ ಹಿಂಸಾಚಾರವು ದೇಶದ ಪಾಲಿಗೆ ಕರಾಳ ಆಧ್ಯಾಯವಾಗಿದ್ದು, ಜವಾಬ್ದಾರಿಯಿಂದ ಬಿಜೆಪಿಗೆ ಓಡಿ ಹೋಗಲು ಸಾಧ್ಯವಿಲ್ಲ. ಸಂಸತ್ತು ಎಂಬ ಪ್ರಜಾಪ್ರಭುತ್ವದ ದೇವಾಲಯದಲ್ಲೇ ಪ್ರಧಾನಿ ಉತ್ತರ ನೀಡಬೇಕು ಎಂದು ಹೇಳಿದರು.