ಪ್ರಧಾನ ಮಂತ್ರಿ ಮೋದಿಯವರು ‘ಪ್ರಚಾರಕ ಮೋದಿ’ಯಾಗಿ ಬಿಟ್ಟಿದ್ದಾರೆ

ಪ್ರಧಾನಮಂತ್ರಿ ನರೇಂದ್ರ ಮೋದಿ  79ನೇ ಸ್ವಾತಂತ್ರ್ಯ ದಿನಾಚರಣೆಯ ತಮ್ಮ ಭಾಷಣದಲ್ಲಿ, ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯದ ಪ್ರಧಾನಿ ಮತ್ತು, ಸಂಕುಚಿತ ಮತೀಯ ಸಂಘಟನೆಯ ಪ್ರಚಾರಕನನ್ನು ಪ್ರತ್ಯೇಕಿಸುವ ಗೆರೆಯನ್ನು ದಾಟಿ, ಪ್ರಚಾರಕ ಮೋದಿಯಾಗಿಬಿಟ್ಟಿದ್ದಾರೆ, 77 ವರ್ಷಗಳ ಹಿಂದೆಯೇ, ಭಾರತದ ಮೊದಲ ಗೃಹಮಂತ್ರಿಗಳು “”ನಮ್ಮ ದೇಶದಲ್ಲಿ ದ್ವೇಷ ಮತ್ತು ಹಿಂಸಾಚಾರವನ್ನು ಸೃಷ್ಟಿಸುತ್ತಿರುವ, ದೇಶದ ಸ್ವಾತಂತ್ರ್ಯಕ್ಕೆ ಅಪಾಯವನ್ನು ಉಂಟುಮಾಡುತ್ತಿರುವ ಮತ್ತು ಅದರ ಉತ್ತಮ ಹೆಸರಿಗೆ ಕಳಂಕ ತರುತ್ತಿರುವ ಶಕ್ತಿ” ಎಂದು ಆರೋಪಿಸಿದ ಸಂಘಟನೆಯ ಪ್ರಚಾರಕರಾಗಿದ್ದಾರೆ. ಮೋದಿ
ಬೃಂದಾ ಕಾರಟ್
ಅನು: ಸಿ.ಸಿದ್ದಯ್ಯ

ಸ್ವಾತಂತ್ರ್ಯ ದಿನಾಚರಣೆಯ ಭಾಷಣವು ನಮ್ಮ ಸ್ವಾತಂತ್ರ್ಯವನ್ನು ಆಚರಿಸಲು, ನಮ್ಮ ಹುತಾತ್ಮರನ್ನು, ಸ್ವತಂತ್ರ ಭಾರತವು ಯಾವಾಗಲೂ ಋಣಿಯಾಗಿರುವ ಅಸಂಖ್ಯಾತ ಪುರುಷರು ಮತ್ತು ಮಹಿಳೆಯರನ್ನು ಸ್ಮರಿಸಲು, ನಮ್ಮ ಸಾಧನೆಗಳ ಬಗ್ಗೆ ಹೆಮ್ಮೆ ಪಡಲು ಮತ್ತು ನಮ್ಮ ಸವಾಲುಗಳನ್ನು ಗುರುತಿಸಲು ಒಂದು ಸಂದರ್ಭವಾಗಿದೆ. ಇದು ಆತ್ಮ ಪ್ರಶಂಸೆಗೆ, ಪಕ್ಷಪಾತೀ ರಾಜಕಾರಣಕ್ಕೆ ಮತ್ತು ವಿಭಜಕ ಶಕ್ತಿಗಳ ಪ್ರಚಾರಕ್ಕೆ ವೇದಿಕೆಯಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ  79ನೇ ಸ್ವಾತಂತ್ರ್ಯ ದಿನಾಚರಣೆಯ ತಮ್ಮ ಭಾಷಣದಲ್ಲಿ, ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯದ ಪ್ರಧಾನಿ ಮತ್ತು, ಸಂಕುಚಿತ ಮತೀಯ ಸಂಘಟನೆಯ ಪ್ರಚಾರಕನನ್ನು ಪ್ರತ್ಯೇಕಿಸುವ ಗೆರೆಯನ್ನು ದಾಟಿದರು. ಹಾಗೆ ಮಾಡುವ ಮೂಲಕ, ಅವರು ಐತಿಹಾಸಿಕ ಸಂದರ್ಭವನ್ನು ಕಳಂಕಿತಗೊಳಿಸಿ, ನಮ್ಮ ಹುತಾತ್ಮರನ್ನು ಅವಮಾನಿಸಿದರು.

ಪ್ರಧಾನಮಂತ್ರಿಯವರು ತಮ್ಮ ಅಭಿವೃದ್ಧಿಯ ಭಾಷಣದಲ್ಲಿ ಮಾಡಿದ ಅನೇಕ ದಾವೆಗಳನ್ನು ಪ್ರಶ್ನಿಸಬಹುದಾಗಿದೆ. ಗ್ರಾಮೀಣ ಬಡವರಲ್ಲಿ ಹೆಚ್ಚುತ್ತಿರುವ ಭೂಹೀನತೆ, ಕುಂಠಿತ ವೇತನ, ಮನರೇಗ ಅಥವಾ ಅರಣ್ಯ ಹಕ್ಕುಗಳ ಕಾಯ್ದೆಯಡಿಯಲ್ಲಿ ಹಕ್ಕುಗಳನ್ನು ದುರ್ಬಲಗೊಳಿಸುವುದು, ನಿರುದ್ಯೋಗ, ಸಂಸದೀಯ ಸ್ಥಾಯಿ ಸಮಿತಿಯ ಇತ್ತೀಚಿನ ವರದಿಯಲ್ಲಿ ಸೂಚಿಸಿರುವಂತೆ ಭಾರೀ ಪ್ರಮಾಣದಲ್ಲಿ ಎಸ್‌ಟಿ/ಎಸ್‌ಸಿ ಬಡ್ತಿ ಮತ್ತು ಖಾಲಿ ಹುದ್ದೆಗಳನ್ನು ಭರ್ತಿ ಮಾಡದೆ ಉಳಿಸಿರುವುದು ಇತ್ಯಾದಿಗಳನ್ನು ಪ್ರಶ್ನಿಸಬಹುದಾಗಿದೆ. ಆದರೆ ಈ ಚರ್ಚೆಗಳು ಮತ್ತು ತರ್ಕಗಳು ಹೊಸದೇನಲ್ಲ, ಅವು ಮುಂದುವರೆಯುತ್ತವೆ. ಒಬ್ಬ ಪ್ರಧಾನಿ ಹೇಳಿಕೆಗಳನ್ನು, ಅವು ಎಷ್ಟೇ ದೋಷಪೂರಿತವಾಗಿದ್ದರೂ ಪುನರುಚ್ಚರಿಸುವುದು ಅಪರೂಪವೇನಲ್ಲ. ಅಂತಹವುಗಳನ್ನು ಖಂಡಿತವಾಗಿಯೂ ಪ್ರಶ್ನಿಸಬಹುದು ಮತ್ತು ಪ್ರಶ್ನಿಸಲಾಗುತ್ತಿದೆ ಕೂಡ.

ಇದನ್ನೂ ಓದಿ: ಶವಪೆಟ್ಟಿಗೆ ಮೇಲೆ ತಪ್ಪು ಚೀಟಿ; ಮೃತದೇಹ ಅದಲು ಬದಲು

‘ಭ್ರಷ್ಟಾಚಾರ’ ಮತ್ತು ‘ಮತದಾನದ ಹಕ್ಕು’ ಮುಂತಾದ ಪದಗಳು ಕಾಣೆ ಯಾಗಿರುವುದೇಕೆ?

ಭಾಷಣದಲ್ಲಿ ಹೇಳದಿರುವುಂತದ್ದು  ಕೂಡ ಎದ್ದು ಕಾಣುವ ಸಂಗತಿ. ಕಳೆದ ವರ್ಷ, ಪ್ರಧಾನಿಯವರು “ಭ್ರಷ್ಟಾಚಾರದ ಗೆದ್ದಲು” ಬಗ್ಗೆ ಬಹಳವಾಗಿ ಮಾತನಾಡಿದ್ದರು. ಈ ವರ್ಷ, “ಭ್ರಷ್ಟಾಚಾರ” ಎಂಬ ಪದವನ್ನು ಉಲ್ಲೇಖಿಸಿಯೇ ಇಲ್ಲ. ಭ್ರಷ್ಟಾಚಾರದ ವಿರುದ್ಧ ಘೋಷಿತ ಸಮರ ಅಂತ್ಯಗೊಂಡಿದೆಯೇ? ಯುಎಸ್ ನ ಎಸ್‍ಇಸಿ (ಸೆಕ್ಯುರಿಟೀಗಳು ಮತ್ತು ವಿನಿಮಯಗಳ ಆಯೋಗ) 2000 ಕೋಟಿ ರೂ.ಗಳ ಲಂಚ ಪ್ರಕರಣದಲ್ಲಿ ಅದಾನಿ ಅಧಿಕಾರಿಗಳಿಗೆ ಸಮನ್ಸ್ ಮತ್ತು ದೂರನ್ನು ತಲುಪಿಸಲು ಸಹಾಯಕ್ಕಾಗಿ ಭಾರತದ ಕಾನೂನು ಮತ್ತು ನ್ಯಾಯ ಸಚಿವಾಲಯವನ್ನು ಕೇಳಿದ್ದೆವು, ಆದರೆ ಭಾರತದಲ್ಲಿನ ಅಧಿಕಾರಿಗಳು ಆರು ತಿಂಗಳ ನಂತರವೂ ಆ ದಾಖಲೆಗಳನ್ನು ತಲುಪಿಸಿಲ್ಲ ಎಂದು ಕೆಲವು ದಿನಗಳ ಹಿಂದೆ ನ್ಯೂಯಾರ್ಕ್ ಪೂರ್ವ ಜಿಲ್ಲಾ ನ್ಯಾಯಾಲಯಕ್ಕೆ ತಿಳಿಸಿದೆ. ಸಂಸತ್ತಿನಲ್ಲಿ ಮತ್ತೊಂದು ಸ್ಪಷ್ಟ ಉತ್ತರದಲ್ಲಿ, ಕಪ್ಪು ಹಣ ಕಾಯ್ದೆ (2015) ಅಡಿಯಲ್ಲಿ ಕಳೆದ 10 ವರ್ಷಗಳಲ್ಲಿ 35,000 ಕೋಟಿ ರೂಪಾಯಿ ತೆರಿಗೆ ಮತ್ತು ದಂಡದ ಬೇಡಿಕೆಗಳನ್ನು ಎತ್ತಲಾಗಿತ್ತು, ಆದರೆ ಇಲ್ಲಿಯವರೆಗೆ ವಸೂಲಿ ಮಾಡಲಾದ ಮೊತ್ತ ಕೇವಲ 338 ಕೋಟಿ ರೂಪಾಯಿಗಳು ಮಾತ್ರ ಎಂದು ಸರ್ಕಾರ ಹೇಳಿದೆ. ಇದೇ ವೇಳೆಯಲ್ಲಿ, ಅತ್ತ ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯ-ಸಂಬಂಧಿತ ನಿಧಿಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ.

ತುರ್ತು ಪರಿಸ್ಥಿತಿಯ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿದ ಪ್ರಧಾನಿ, ತುರ್ತು ಪರಿಸ್ಥಿತಿ ಹೇರಿದವರನ್ನು “ಪಾಪಿಗಳು” ಎಂದು ಕರೆದರು. ಪದಗಳ ಆಯ್ಕೆ ಅವರ ವಿಶೇಷ ಹಕ್ಕು. ಆದರೆ ಸಂಸದೀಯ ಪ್ರಜಾಪ್ರಭುತ್ವದ ಅಡಿಪಾಯವಾದ ಮತದಾನದ ಹಕ್ಕು ದಾಳಿಗೆ ಒಳಗಾಗಿರುವ ಸಮಯದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸುವುದಾಗಿ ಹೇಳಿಕೊಳ್ಳುವುದು ವಿಪರ್ಯಾಸ. ಮತದಾನದ ಹಕ್ಕನ್ನು ರಕ್ಷಿಸಲು ಬದ್ಧ  ಎಂದು ಪ್ರಧಾನಿ ಹೇಳುತ್ತಾರೆಂದು ದೇಶ ನಿರೀಕ್ಷಿಸಿತ್ತು. ಗುರುವಾರ (ಆಗಸ್ಟ್ 14ರಂದು) ತನ್ನ ಮಧ್ಯಂತರ ತೀರ್ಪಿನಲ್ಲಿ, ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕನ್ನು ರಕ್ಷಿಸಬೇಕು ಎಂದು ಸುಪ್ರೀಂ ಕೋರ್ಟ್ ಕಾಳಜಿ ವ್ಯಕ್ತಪಡಿಸಿತು. ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಎತ್ತಿದ್ದ ಹಲವು ಪ್ರಶ್ನೆಗಳನ್ನು ಅದರ ಆದೇಶವು ಎತ್ತಿಹಿಡಿದಿದೆ. ಸಂವಿಧಾನದ ದೇಶ ಪಡೆದಿರುವ ಸಂಸ್ಥೆಗಳ ಸ್ವಾಯತ್ತತೆ ಗಂಭೀರ ಬೆದರಿಕೆಗೆ ಒಳಗಾಗಿದೆ. ಈ ಕಾಳಜಿಗಳು ಪ್ರಧಾನಿಯವರ ಭಾಷಣದಲ್ಲಿ ಕಾಣಬಂದಿಲ್ಲ. “ಭ್ರಷ್ಟಾಚಾರ” ಮತ್ತು “ಮತದಾನದ ಹಕ್ಕು” ನಂತಹ ಕಾಣೆಯಾದ ಪದಗಳು ತಮ್ಮದೇ ಆದ ಕಥೆಯನ್ನು ಹೇಳುತ್ತವೆ.

“ನುಸುಳುಕೋರರ ಪಿತೂರಿ”

ಎಂಬ ಆಧಾರಹೀನ  ಆರೋಪ

ಪ್ರಧಾನಿಯವರ ಭಾಷಣದ ಎರಡು ನಿರ್ದಿಷ್ಟ ಅಂಶಗಳು ಎಲ್ಲಾ ಭಾರತೀಯರನ್ನು ತೀವ್ರವಾಗಿ ಆತಂಕಕ್ಕೆ ಈಡು ಮಾಡುವ ವಿಷಯಗಳು. ಮೊದಲ ಅಂಶವೆಂದರೆ, ಭಾರತದ ಜನಸಂಖ್ಯಾಸ್ವರೂಪವನ್ನು  ಬದಲಾಯಿಸಲು “ನುಸುಳುಕೋರರು” ನಡೆಸಿರುವರೆನ್ನಲಾದ “ಪಿತೂರಿ”ಯ ಬಗ್ಗೆ ಅವರು ನೀಡಿದ ಅದ್ಭುತ ಎಚ್ಚರಿಕೆ. ಇದು ಜಾರ್ಖಂಡ್ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ “ಮುಸ್ಲಿಂ ನುಸುಳುಕೋರರು” ಬುಡಕಟ್ಟು ಜನಗಳ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಬುಡಕಟ್ಟು ಮಹಿಳೆಯರನ್ನು ಶೋಷಿಸುತ್ತಿದ್ದಾರೆ ಎಂದು ಯಾವುದೇ ಆಧಾರವಿಲ್ಲದೆ ಪ್ರಚಾರ ಮಾಡಿದ ಆರೋಪದ  ಪುನರುಚ್ಚಾರವೇ ಆಗಿದೆ. ಆ ಚುನಾವಣೆಯಲ್ಲಿ ಪ್ರಧಾನಿಯವರ ಪಕ್ಷವನ್ನು ನಿರ್ಣಾಯಕವಾಗಿ ಸೋಲಿಸಲಾಯಿತು, ಆದರೆ ಅದರಿಂದ ಯಾವುದೇ ಪಾಠ ಕಲಿಯಲಿಲ್ಲ. ಅಂತಹ ಪಿತೂರಿ ನಡೆದಿದ್ದರೆ, ಇಷ್ಟು ವರ್ಷಗಳಲ್ಲಿ ಗೃಹ ಮತ್ತು ರಕ್ಷಣಾ ಸಚಿವಾಲಯದ ಪಾತ್ರವೇನು? ಅಂತಹ “ಪಿತೂರಿ” ಯ ಬಗ್ಗೆ ಸಂಸತ್ತನ್ನು ಎಂದಿಗೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲವೇಕೆ? ‘ನುಸುಳುಕೋರರು’ ಭಾರತವನ್ನು ಅತಿಕ್ರಮಿಸಿದ ದಶಕದಲ್ಲಿ ಇಂತಹ ಒಂದು ಸರಕಾರದ ಮುಖ್ಯಸ್ಥರಾಗಿರುವ ವ್ಯಕ್ತಿಗೆ ದೇಶವು ಆಶ್ರಯ ಕೊಟ್ಟಿತ್ತು ಎಂಬುದು ವಿರೋಧಾಭಾಸದ ಸಂಗತಿಯಲ್ಲವೇ?

ಅತಿ ಹೆಚ್ಚು ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿರುವುದು ಕಾರ್ಪೊರೇಟ್‌ಗಳು, ಅದೂ  ಕೂಡ ಕೇಂದ್ರ ಸರಕಾರದ ನೆರವಿನಿಂದ, ಎಂಬುದನ್ನು ಅಂಕಿಅಂಶಗಳು ತೋರಿಸುತ್ತವೆ, ಈ ವರ್ಷದ ಫೆಬ್ರವರಿಯಲ್ಲಿ ಸಂಸತ್ತಿನಲ್ಲಿ ನೀಡಿದ ಉತ್ತರದ ಪ್ರಕಾರ, 2020 ಮತ್ತು 2022 ರ ನಡುವೆ ಒಟ್ಟು 6,779 ಪರಿಶಿಷ್ಟ ಬುಡಕಟ್ಟುಗಳ ಮಹಿಳೆಯರ ಮೇಲೆ ಲೈಂಗಿಕ ಅಪರಾಧಗಳು ದಾಖಲಾಗಿವೆ. ‘ನುಸುಳುಕೋರ’ರಿಂದ  ಅಪರಾಧಗಳಾಗಿರುವ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ. ಪ್ರಧಾನಿಯವರು ಸ್ವಾತಂತ್ರೋತ್ಸವದ ವೇದಿಕೆಯನ್ನು ಬಳಸಿಕೊಂಡು ಸತ್ಯಾಂಶಗಳಿಲ್ಲದ ಇಂತಹ ಗಂಭೀರವಾದ ಕೋಮುವಾದೀ  ಪ್ರತಿಪಾದನೆಗಳನ್ನು ಮಾಡಿರುವುದು ನಾಚಿಕೆಗೇಡಿನ ಸಂಗತಿ.

ಭಾರತದಾದ್ಯಂತ, ವಿದೇಶಿಯರನ್ನು ಪತ್ತೆಹಚ್ಚುವ ಹೆಸರಿನಲ್ಲಿ, ಬಂಗಾಳಿ ಮಾತನಾಡುವ ಬಡ ವಲಸಿಗ ಕಾರ್ಮಿಕರನ್ನು ಮತ್ತು ವಿಶೇಷವಾಗಿ ಮುಸ್ಲಿಂ ವಲಸಿಗರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಅಕ್ರಮ ವಲಸಿಗರ ಪ್ರಶ್ನೆಯನ್ನು ನಿಭಾಯಿಸಲು ಅಂತರರಾಷ್ಟ್ರೀಯ ಶಿಷ್ಟಾಚಾರಗಳಿವೆ. ಆ ವಿಧಿವಿಧಾನಗಳ ಪ್ರಕಾರ ಅವರನ್ನು ಗುರುತಿಸಿ ಗಡೀಪಾರು ಮಾಡಬೇಕು. ಆದರೆ ಇಲ್ಲಿ ಭಾರತದಲ್ಲಿ, ಇದು ಸಂಪೂರ್ಣವಾಗಿ ಕೋಮು ಪರಿಗಣನೆಗಳಿಂದ ನಡೆಸಲ್ಪಡುತ್ತಿದೆ. ಪ್ರಧಾನಿಯವರ ಭಾಷಣದಲ್ಲಿ ಪ್ರತಿಫಲಿಸಿರುವುದು ಒಂದು ಜನವಿಭಾಗವನ್ನು ರಾಕ್ಷಸರೆಂಬಂತೆ ಬಿಂಬಿಸುವ ಈ ಪ್ರಯತ್ನವೇ.

ಒಂದು ಅಭೂತಪೂರ್ವವಿಶ್ವಾಸ ದ್ರೋಹ

ಎರಡನೆಯದಾಗಿ, ಒಂದು ಅಭೂತಪೂರ್ವವಿಶ್ವಾಸ ದ್ರೋಹ ಎಂದು ಖಂಡಿತವಾಗಿಯೂ ಹೇಳಬಹುದಾದ ಒಂದು ಹೇಳಿಕೆ. ಪ್ರಧಾನಮಂತ್ರಿಯವರು ಆರ್‌ಎಸ್‌ಎಸ್ ಅನ್ನು ಬಾಯಿ ತುಂಬಾ ಹೊಗಳಲು ಈ ಸಂದರ್ಭವನ್ನು ಬಳಸಿಕೊಂಡರು. ಬಿಜೆಪಿ ಉಕ್ಕಿನ ಮನುಷ್ಯ ಎಂದು ಗೌರವಿಸುವ ಭಾರತದ ಮೊದಲ ಗೃಹ ಮಂತ್ರಿ ವಲ್ಲಭಭಾಯಿ ಪಟೇಲ್ ರವರೇ ಈ ಸಂಘಟನೆಯ ಸ್ವರೂಪವನ್ನು ಸ್ಪಷ್ಟವಾದ  ಪದಗಳಲ್ಲಿ ವಿವರಿಸಿದ್ದಾರೆ.

“ನಮ್ಮ ದೇಶದಲ್ಲಿ ದ್ವೇಷ ಮತ್ತು ಹಿಂಸಾಚಾರವನ್ನು ಸೃಷ್ಟಿಸುತ್ತಿರುವ, ದೇಶದ ಸ್ವಾತಂತ್ರ್ಯಕ್ಕೆ ಅಪಾಯವನ್ನು ಉಂಟುಮಾಡುತ್ತಿರುವ ಮತ್ತು ಅದರ ಉತ್ತಮ ಹೆಸರಿಗೆ ಕಳಂಕ ತರುತ್ತಿರುವ ಶಕ್ತಿಗಳನ್ನು ಬೇರುಸಹಿತ ನಿರ್ಮೂಲನೆ ಮಾಡಲು” ಎಂದು ಆರ್‌ಎಸ್‌ಎಸ್ ಅನ್ನು ನಿಷೇಧಿಸುವ ಸಂದರ್ಭದಲ್ಲಿ ಅವರು ಹೇಳಿದ್ದರು. ಮುಂದುವರೆದು-“ಆರ್‌ಎಸ್‌ಎಸ್ ಸದಸ್ಯರು ಅನಪೇಕ್ಷಿತ ಮತ್ತು ಅಪಾಯಕಾರಿಯೂ ಆಗಿರುವ ಕೃತ್ಯಗಳನ್ನು ನಡೆಸಿದ್ದಾರೆ. . . ರಾಷ್ಟ್ರೀಯ ಸ್ವಯಂಸೇವಕ ಸಂಘದ ವೈಯಕ್ತಿಕ ಸದಸ್ಯರು ಬೆಂಕಿ ಹಚ್ಚುವುದು ಮತ್ತು ಲೂಟಿ ಸೇರಿದಂತೆ ಹಿಂಸಾಚಾರದ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ” ಎಂದೂ ಅವರು ಹೇಳಿದ್ದರು.

ಅಂದಿನಿಂದ ಹಿಡಿದು ಸ್ವತಂತ್ರ ಭಾರತದಲ್ಲಿ ದಶಕ-ದಶಕಗಳಲ್ಲಿ  ಹಿಂಸಾತ್ಮಕ ಕೋಮು ಗಲಭೆಗಳಿಗೆ ಆರ್‌ಎಸ್‌ಎಸ್ ಹೊಣೆ ಎಂದು ಅಧಿಕೃತ ತನಿಖಾ  ಆಯೋಗಗಳು ಬೊಟ್ಟುಮಾಡಿ ದೂಷಿಸಿವೆ. ಪ್ರಧಾನಿಯವರು ಈ ಸತ್ಯವನ್ನು ಮರೆಮಾಚಿದ್ದು ಮಾತ್ರವಲ್ಲ, ಅವರು ಅದಕ್ಕೆ ಸಾರ್ವಜನಿಕ ಅನುಮೋದನೆಯ ಮುದ್ರೆಯನ್ನು ಒತ್ತಿದ್ದಾರೆ.. ಇದು ಸಂವಿಧಾನ ಮತ್ತು ಅದರ ಮೌಲ್ಯಗಳನ್ನು ರಕ್ಷಿಸುತ್ತಾರೆಂದು ಅವರಲ್ಲಿ ಇಟ್ಟಿರುವ ವಿಶ್ವಾಸದ ಉಲ್ಲಂಘನೆಯಾಗಿದೆ.

ಹೀಗೆ, ಎಲ್ಲೆ ಮೀರಿ, ಪ್ರಧಾನ ಮಂತ್ರಿ ಮೋದಿಯವರು  ಭಾರತ ಮತ್ತು ಜಗತ್ತಿನ ಕಣ್ಣಲ್ಲಿ ‘ಪ್ರಚಾರಕ ಮೋದಿ’ಯಾದರು – ಇದು ನಿಜಕ್ಕೂ ‘ಇಂಡಿಯಾ, ಅಂದರೆ ಭಾರತ’ದ ಪಾಲಿಗೆ ಒಂದು ದುಃಖದ ದಿನ.

ಕೃಪೆ: ‘ದಿ ಇಂಡಿಯನ್ ಎಕ್ಸ್‌ಪ್ರೆಸ್

ಇದನ್ನೂ ನೋಡಿ: ಧರ್ಮಸ್ಥಳ | ಪಂಚಾಯಿತಿಯಲ್ಲಿ ದಾಖಲೆಗಳನ್ನು ಸುಟ್ಟು ಹಾಕಿರಬಹುದು. ಆದರೆ ನ್ಯಾಯಾಲಯದಲ್ಲಿ ದಾಖಲೆಗಳು ಇವೆ – ಜಯನ್

Donate Janashakthi Media

Leave a Reply

Your email address will not be published. Required fields are marked *