ಇಂದು ರಾಷ್ಟ್ರಪತಿ ಚುನಾವಣೆ – ಜು.21ಕ್ಕೆ ಫಲಿತಾಂಶ

ನವದೆಹಲಿ : ಭಾರತದ 15ನೇ ರಾಷ್ಟ್ರಪತಿಯನ್ನು ಆಯ್ಕೆ ಮಾಡಲು ಸೋಮವಾರ ಸುಮಾರು 4,800 ಸಂಸದರು ಮತ್ತು ಶಾಸಕರು ಮತ ಚಲಾಯಿಸಲಿದ್ದಾರೆ. ರಾಷ್ಟ್ರಪತಿ ಚುನಾವಣೆಗಾಗಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಕಣದಲ್ಲಿದ್ದರೆ, ಪ್ರತಿಪಕ್ಷದ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಕಣದಲ್ಲಿದ್ದಾರೆ.

ಸಂಸತ್ ಭವನ ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಜುಲೈ 21 ರಂದು ಮತ ಎಣಿಕೆ ನಡೆಯಲಿದ್ದು, ಜುಲೈ 25 ರಂದು ದೇಶದ ಮುಂದಿನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಸ್ತುತ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಅವಧಿ ಜುಲೈ 24 ರಂದು ಕೊನೆಗೊಳ್ಳಲಿದೆ.

ಪ್ರಾದೇಶಿಕ ಪಕ್ಷಗಳಾದ ಬಿಜೆಡಿ, ವೈಎಸ್‌ಆರ್‌ಸಿಪಿ, ಬಿಎಸ್‌ಪಿ, ಎಐಎಡಿಎಂಕೆ, ಟಿಡಿಪಿ, ಜೆಡಿ (ಎಸ್), ಶಿರೋಮಣಿ ಅಕಾಲಿದಳ, ಶಿವಸೇನೆ ಮತ್ತು ಈಗ ಜೆಎಂಎಂ ಬೆಂಬಲದೊಂದಿಗೆ ದ್ರೌಪದಿ ಮುರ್ಮು ಅವರ ಮತಗಳ ಪ್ರಮಾಣವು ಸುಮಾರು ಮೂರನೇ ಎರಡರಷ್ಟು ತಲುಪುವ ಸಾಧ್ಯತೆಯಿದೆ. ದ್ರೌಪದಿ ಮುರ್ಮು ಅವರು ದೇಶದ ನೂತನ ರಾಷ್ಟ್ರಪತಿ ಆಗಿ ಆಯ್ಕೆ ಆದರೆ ಬುಡಕಟ್ಟು ಸಮುದಾಯದಿಂದ ಉನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ.

ಅನುಪಾತದ ಪ್ರಾತಿನಿಧ್ಯದ ವ್ಯವಸ್ಥೆಯ ಮೂಲಕ ರಾಷ್ಟ್ರಪತಿ ಅವರನ್ನು ಚುನಾಯಿತ ಸಂಸದರು ಮತ್ತು ರಾಜ್ಯ ಶಾಸಕಾಂಗ ಸಭೆಗಳ ಸದಸ್ಯರು ಮತ ಚಲಾಯಿಸುವ ಹಕ್ಕನ್ನು ಹೊಂದಿರುತ್ತಾರೆ. ನಾಮನಿರ್ದೇಶಿತ ಸಂಸದರು ಮತ್ತು ಶಾಸಕರು ಮತ್ತು ವಿಧಾನ ಪರಿಷತ್ತಿನ ಸದಸ್ಯರು ಈ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಲ್ಲ ಎಂಬುದು ಗಮನಾರ್ಹ ಸಂಗತಿ. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಸಕಾಂಗ ಸಭೆ ಇಲ್ಲದ ಕಾರಣ ಈ ಬಾರಿಯ ರಾಷ್ಟ್ರಪತಿ ಚುನಾವಣೆಯಲ್ಲಿ ಸಂಸತ್ತಿನ ಸದಸ್ಯರ ಮತದ ಮೌಲ್ಯ 708 ರಿಂದ 700 ಕ್ಕೆ ಇಳಿದಿದೆ. ಪ್ರತಿ ಶಾಸಕರ ಮತದ ಮೌಲ್ಯವು ವಿವಿಧ ರಾಜ್ಯಗಳಲ್ಲಿ ಬದಲಾಗುತ್ತದೆ.

ರಾಜ್ಯದಲ್ಲೂ ಸಿದ್ದತೆ : ರಾಜ್ಯದಲ್ಲೂ ಮತದಾನಕ್ಕೆ ವಿಧಾನಸೌಧದ 106ನೇ ಸಂಖ್ಯೆಯ ಕೊಠಡಿ ಸಜ್ಜುಗೊಂಡಿದೆ. ರಾಷ್ಟ್ರಪತಿ ಚುನಾವಣೆಗೆ ಮತದಾರರಾಗಿರುವ 224 ಶಾಸಕರ ಜತೆಗೆ ವಿಶೇಷ ಅನುಮತಿ ಪಡೆದಿರುವ ಇಬ್ಬರು ಸಂಸದರು ವಿಧಾನಸೌಧದಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ಮತದಾನ ಮಾಡಲಿದ್ದಾರೆ.  ಕೇಂದ್ರ ಚುನಾವಣ ಆಯೋಗದ ವಿಶೇಷ ವೀಕ್ಷಕ ಅಮಿತ್‌ ಕುಮಾರ್‌ ಘೋಷ್‌ ಮಾರ್ಗದರ್ಶನದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ಹಾಗೂ ಸಹಾಯಕ ಚುನಾವಣಾ ಧಿಕಾರಿಯೂ ಆಗಿರುವ ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರ ನೇತೃತ್ವದಲ್ಲಿ ಮತದಾನಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಸಾಮಾನ್ಯವಾಗಿ ಲೋಕಸಭಾ ಸದಸ್ಯರು ಸಂಸತ್ತಿನಲ್ಲಿ ಮತ ಚಲಾಯಿಸಬೇಕು. ಆದರೆ ವಿಶೇಷ ಸಂದರ್ಭಗಳಲ್ಲಿ ಕೇಂದ್ರ ಚುನಾವಣ ಆಯೋಗದ ಅನುಮತಿ ಪಡೆದು ಆಯಾ ರಾಜ್ಯಗಳಲ್ಲೂ ಸಂಸದರು ಮತ ಹಾಕಬಹುದು. ಅದರಂತೆ, ಚಾಮರಾಜ ನಗರದ ಸಂಸದ ವಿ. ಶ್ರೀನಿವಾಸ ಪ್ರಸಾದ್‌ ಹಾಗೂ ರಾಜ್ಯ ಸಭಾ ಸದಸ್ಯರಾಗಿರುವ ಎಚ್‌.ಡಿ. ದೇವೇಗೌಡರು ವಿಧಾನಸೌಧದಲ್ಲಿ ಮತ ಚಲಾಯಿಸಲಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *