ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಹೆಸರು ಘೋಷಣೆ!

  • ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಹೆಸರು ಘೋಷಣೆ
  • ಸಂಸದೀಯ ಮಂಡಳಿ ಸಭೆಯಲ್ಲಿ ಅಧಿಕೃತ ಘೋಷಣೆ
  • ದ್ರೌಪದಿ ಮುರ್ಮು ಅವರು ಈ ಹಿಂದೆ ಜಾರ್ಖಂಡ್‌ನ ರಾಜ್ಯಪಾಲರಾಗಿದ್ದರು

ನವದೆಹಲಿ: ರಾಷ್ಟ್ರಪತಿ ಚುನಾವಣೆ  ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಹೆಸರನ್ನು ಘೋಷಿಸಿದ ಬಿಜೆಪಿ ನೇತೃತ್ವದ ಎನ್‌ಡಿಎ ಘೋಷಿಸಿದೆ. ಈ ಮೂಲಕ ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಊಹಾಪೋಹಗಳಿಗೆ ತೆರೆ ಬಿದ್ದಿದೆ.

ಈಗಾಗಲೇ ವಿಪಕ್ಷಗಳಿಂದ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಯಶವಂತ ಸಿನ್ಹ ಅವರ ಹೆಸರನ್ನು ಘೋಷಣೆ ಮಾಡಲಾಗಿತ್ತು. ಈ ಬೆನ್ನಲ್ಲೇ ಇದೀಗ ಬಿಜೆಪಿ ನೇತೃತ್ವದ ಎನ್ ಡಿ ಎ ಪಕ್ಷದಿಂದ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯನ್ನಾಗಿ ದ್ರೌಪದಿ ಮುರ್ಮು ಅವರ ಹೆಸರನ್ನು ಘೋಷಿಸಲಾಗಿದೆ. ತಾವು ಒಡಿಶಾ ರಾಜ್ಯದ ಮಣ್ಣಿನ ಮಗಳಾಗಿರುವುದರಿಂದ ಇಲ್ಲಿನ ಎಲ್ಲಾ ಪಕ್ಷಗಳ ಶಾಸಕರು ಮತ್ತು ಸಂಸದರು ಪಕ್ಷಬೇಧ ಮರೆತು ತಮಗೆ ಮತಹಾಕುವ ಆಶಾವಾದವನ್ನು ದ್ರೌಪದಿ ಮುರ್ಮು ಹೊಂದಿದ್ದಾರೆ.

ಒಬ್ಬ ಬುಡಕಟ್ಟು ಜನಾಂಗದ ಸ್ಥಳೀಯ ನಾಯಕಿಯಾಗಿ ತಮ್ಮ ರಾಜಕೀಯ ವೃತ್ತಿ ಜೀವನ ಆರಂಭಿಸಿ ಜಾರ್ಖಂಡ್ ನ ರಾಜ್ಯಪಾಲ ಹುದ್ದೆಗೇರಿ ಇದೀಗ ಎನ್ ಡಿಎ ಮೈತ್ರಿಕೂಟದ ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಯಾಗುವವರೆಗೆ ದ್ರೌಪದಿ ಮುರ್ಮು ಅವರ ರಾಜಕೀಯ ಬದುಕು ಬಂದು ನಿಂತಿದೆ.

ತಾವು ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಎಂದು ಘೋಷಣೆಯಾಗಿ ಸುದ್ದಿವಾಹಿನಿಗಳಲ್ಲಿ ಬಂದಾಗ ನಿಜಕ್ಕೂ ಖುಷಿಯಾಯಿತು ಜೊತೆಗೆ ಅಚ್ಚರಿ ಕೂಡ ಆಯಿತು. ಒಡಿಶಾ ರಾಜ್ಯದ ಮಯೂರ್ ಭಂಜ್ ಜಿಲ್ಲೆಯ ಬುಡಕಟ್ಟು ಜನಾಂಗದ ಮಹಿಳೆಯಾಗಿ ನಾನು ದೇಶದ ಅತ್ಯುನ್ನತ ಹುದ್ದೆಗೆ ಅಭ್ಯರ್ಥಿಯಾಗುತ್ತೇನೆಂದು ನಿಜಕ್ಕೂ ಭಾವಿಸಿರಲಿಲ್ಲ ಎಂದು ನಿನ್ನೆ ರೈರಂಗ್ ಪುರದಲ್ಲಿ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಶೇಕಡಾ 2.8ರಷ್ಟು ಮತಗಳನ್ನು ಹೊಂದಿರುವ ಬಿಜೆಡಿ ಪಕ್ಷ ತಮಗೆ ಬೆಂಬಲ ನೀಡುತ್ತದೆ ಎಂಬ ವಿಶ್ವಾಸವಿದೆಯೇ ಎಂದು ಕೇಳಿದಾಗ ಒಡಿಶಾ ವಿಧಾನಸಭೆಯ ಎಲ್ಲಾ ಶಾಸಕರು ಮತ್ತು ರಾಜ್ಯದ ಸಂಸದರೆಲ್ಲರ ಬೆಂಬಲ ಗಳಿಸುವ ವಿಶ್ವಾಸ ತಮಗಿದೆ ಎಂದು ಹೇಳಿದರು.ನಾನು ಒಡಿಶಾ ಮಣ್ಣಿನ ಮಗಳು, ಹೀಗಾಗಿ ಎಲ್ಲಾ ಸದಸ್ಯರ ಬೆಂಬಲ ಕೇಳುವ ಹಕ್ಕು ತಮಗಿದೆ ಎಂದರು.

ಯಾರು ಈ ದ್ರೌಪದಿ ಮುರ್ಮು: ಒಡಿಶಾ ರಾಜ್ಯದ ಬುಡಕಟ್ಟು ಜನಾಂಗದ ಸಂತಲ್ ಸಮುದಾಯದಲ್ಲಿ ಜನಿಸಿರುವ ಮುರ್ಮು 1997ರಲ್ಲಿ ರೈರಂಗ್ ಪುರ್ ನಗರ ಪಂಚಾಯತ್ ನಿಂದ ಕೌನ್ಸಿಲರ್ ಆಗಿ ವೃತ್ತಿಜೀವನ ಆರಂಭಿಸಿದರು. 2000ದಲ್ಲಿ ಬಿಜೆಡಿ-ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಸಚಿವೆಯಾಗಿದ್ದರು. ನಂತರ 2015ರಲ್ಲಿ ಜಾರ್ಖಂಡ್ ಸರ್ಕಾರದಲ್ಲಿ ಗವರ್ನರ್ ಆಗಿದ್ದರು. ರೈರಂಗ್ ಪುರ್ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕಿಯಾಗಿದ್ದರು. 2009ರಲ್ಲಿ ಬಿಜೆಪಿ ಮೈತ್ರಿಯಿಂದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪಕ್ಷವಾದ ಬಿಜೆಡಿ ಹೊರಬಂದಿದ್ದ ವೇಳೆ ಮುರ್ಮು ಶಾಸಕಿಯಾಗಿದ್ದರು.

ನಾನು ಈ ಅವಕಾಶವನ್ನು ನಿರೀಕ್ಷಿಸಿರಲಿಲ್ಲ. ನೆರೆಯ ಜಾರ್ಖಂಡ್‌ನ ರಾಜ್ಯಪಾಲೆಯಾದ ನಂತರ ಕಳೆದ ಆರು ವರ್ಷಗಳಿಂದ ಯಾವುದೇ ರಾಜಕೀಯ ಕಾರ್ಯಕ್ರಮಗಳಿಗೆ ಹಾಜರಾಗುತ್ತಿರಲಿಲ್ಲ. ಸಾರ್ವಜನಿಕ ಜೀವನದಿಂದ ಕೊಂಚ ದೂರ ಉಳಿದಿದ್ದೆ. ಇದೀಗ ಎಲ್ಲರೂ ನನ್ನನ್ನು ಬೆಂಬಲಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದರು. ದ್ರೌಪದಿ ಅಧ್ಯಕ್ಷೀಯ ಹುದ್ದೆಗೆ ಉಮೇದುವಾರಿಕೆಯನ್ನು ಪ್ರಕಟಿಸುತ್ತಿದ್ದಂತೆ, ರಾಜ್ಯಾದ್ಯಂತ ಮತ್ತು ವಿಶೇಷವಾಗಿ ಅವರು ವಾಸಿಸುವ ಮಯೂರ್‌ಭಂಜ್ ಜಿಲ್ಲೆಯಲ್ಲಿ ಸಂಭ್ರಮಾಚರಣೆ ಮುಗಿಲುಮುಟ್ಟಿದೆ.

ಮುರ್ಮು ಅವರನ್ನು ರಾಷ್ಟ್ರಪತಿ ಅಭ್ಯರ್ಥಿ ಎಂದು ಘೋಷಣೆ ಮಾಡುವ ಮೊದಲು ಬಿಜೆಪಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಜೊತೆ ಸಮಾಲೋಚನೆ ನಡೆಸಿದ್ದು, ಅದಕ್ಕೆ ಮುಖ್ಯಮಂತ್ರಿ ಪಾಟ್ನಾಯಕ್ ತಮ್ಮ ಬಿಜೆಪಿ ಶಾಸಕರು ಬೆಂಬಲ ನೀಡುತ್ತಾರೆ ಎಂದು ಹೇಳಿದ್ದಾರೆ ಎಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಬಿಶೀಸ್ವರ್ ಟುಡು ತಿಳಿಸಿದ್ದಾರೆ.

ಜೂನ್ 25ಕ್ಕೆ ನಾಮಪತ್ರ ಸಲ್ಲಿಕೆ?: ದ್ರೌಪದಿ ಮುರ್ಮು ಅವರು ಇದೇ 25ಕ್ಕೆ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ. ರಾಷ್ಟ್ರಪತಿ ಚುನಾವಣೆ ಜುಲೈ 18ರಂದು ನಡೆಯಲಿದೆ. ದ್ರೌಪದಿಯವರು ಆಯ್ಕೆಯಾದರೆ ದೇಶದ ಮೊದಲ ಬುಡಕಟ್ಟು ಜನಾಂಗದ ರಾಷ್ಟ್ರಪತಿ ಮತ್ತು ದೇಶದ ಎರಡನೇ ಮಹಿಳಾ ರಾಷ್ಟ್ರಪತಿ ಎನಿಸಿಕೊಳ್ಳಲಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *