ನವದೆಹಲಿ: ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ರಾಜಕೀಯ ವಿವಾದಗಳಿಗೆ ಕಾರಣರಾಗಿದ್ದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಇವರೊಂದಿಗೆ, ಲಡಾಖ್ ರಾಜ್ಯಪಾಲ ರಾಧಾ ಕೃಷ್ಣನ್ ಮಾಥುರ್ ರಾಜೀನಾಮೆ ಸಲ್ಲಿಸಿದ್ದಾರೆ. ಇಬ್ಬರು ರಾಜ್ಯಪಾಲದ ರಾಜೀನಾಮೆ ನೀಡಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು 12 ರಾಜ್ಯ-ಕೇಂದ್ರಾಡಳಿತ ಪ್ರದೇಶಗಳಿಗೆ ರಾಜ್ಯಪಾಲರನ್ನು ನೇಮಿಸಿ ಆದೇಶಿಸಿದ್ದಾರೆ.
ಹೊಸ ರಾಜ್ಯಪಾಲರನ್ನು ನೇಮಿಸಲಾದ ರಾಜ್ಯಗಳ ಪೈಕಿ ಮೇಘಾಲಯ ಮತ್ತು ನಾಗಾಲ್ಯಾಂಡ್ಗಳಲ್ಲಿ ಹತ್ತಿರದಲ್ಲೇ ಚುನಾವಣೆಗಳು ನಡೆಯಲಿರುವುದು ಗಮನಾರ್ಹ.
ರಾಜ್ಯಪಾಲರಾಗಿ ನೇಮಗೊಂಡಿರುವವರ ವಿವರ;
ಅರುಣಾಚಲ ಪ್ರದೇಶಕ್ಕೆ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಕೈವಲ್ಯ ತ್ರಿವಿಕ್ರಮ್, ಸಿಕ್ಕಿಂ ರಾಜ್ಯಕ್ಕೆ ಲಕ್ಷ್ಮಣ್ ಪ್ರಸಾದ್ ಆಚಾರ್ಯ, ಜಾರ್ಖಂಡ್ ರಾಜ್ಯಕ್ಕೆ ಸಿ.ಪಿ.ರಾಧಾಕೃಷ್ಣನ್, ಹಿಮಾಚಲ ಪ್ರದೇಶ ರಾಜ್ಯಕ್ಕೆ ಶಿವ ಪ್ರತಾಪ್ ಶುಕ್ಲಾ, ಅಸ್ಸಾಂ ರಾಜ್ಯಕ್ಕೆ ಗುಲಾಬ್ ಚಂದ್ ಕಟಾರಿಯಾ ಮತ್ತು ಆಂಧ್ರಪ್ರದೇಶ ರಾಜ್ಯಕ್ಕೆ ನ್ಯಾಯಮೂರ್ತಿ (ನಿವೃತ್ತ) ಎಸ್.ಅಬ್ದುಲ್ ನಜೀರ್ ಅವರನ್ನು ನೇಮಕ ಮಾಡಲಾಗಿದೆ.
ಹೊಸ ನೇಮಕಾತಿಗಳನ್ನು ಮಾಡುವುದರ ಜೊತೆಗೆ ಮುರ್ಮು ಏಳು ರಾಜ್ಯಪಾಲರನ್ನು ಬೇರೆ ರಾಜ್ಯಗಳಿಗೆ ವರ್ಗಾವಣೆ ಮಾಡಿದ್ದಾರೆ. ಆಂಧ್ರಪ್ರದೇಶದ ರಾಜ್ಯಪಾಲ ಬಿಸ್ವ ಭೂಷಣ ಹರಿಚಂದನ್ ಅವರನ್ನು ಛತ್ತೀಸ್‌ಗಢದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಛತ್ತೀಸ್‌ಗಢ ರಾಜ್ಯಪಾಲರಾಗಿದ್ದ ಶ್ರೀಮತಿ ಅನುಸೂಯಾ ಉಯಿಕ್ಯೆ ಮಣಿಪುರಕ್ಕೆ ಮಣಿಪುರ ರಾಜ್ಯಪಾಲ ಎಲ್.ಎ.ಗಣೇಶನ್ ನಾಗಾಲ್ಯಾಂಡ್ ಗೆ, ಬಿಹಾರದ ರಾಜ್ಯಪಾಲ ಫಾಗು ಚೌಹಾಣ್ ಮೇಘಾಲಯಕ್ಕೆ ವರ್ಗಾವಾಗಿದ್ದಾರೆ. ಹಿಮಾಚಲ ಪ್ರದೇಶದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಬಿಹಾರ ರಾಜ್ಯಕ್ಕೆ, ಜಾರ್ಖಂಡ್ ನ ರಮೇಶ್ ಬೈಸ್ ಮಹಾರಾಷ್ಟ್ರದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ಅರುಣಾಚಲ ಪ್ರದೇಶದ ರಾಜ್ಯಪಾಲ ಬ್ರಿಗೇಡಿಯರ್ ಬಿ ಡಿ ಮಿಶ್ರಾ (ನಿವೃತ್ತ) ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಿಸಲಾಗಿದೆ.
ನ್ಯಾ. ಅಬ್ದುಲ್ ನಜೀರ್: ಆಂಧ್ರ ಪ್ರದೇಶದ ರಾಜ್ಯಪಾಲರಾಗಿ ನೇಮಕಗೊಂಡಿರುವ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅಯೋಧ್ಯಾ ವಿವಾದದ ಕುರಿತು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಪೀಠದ ಸದಸ್ಯರಲ್ಲೊಬ್ಬರಾಗಿದ್ದರು. ಅಲ್ಲದೆ, ‘ತ್ರಿವಳಿ ತಲಾಖ್’ ವಿಚಾರಣೆಯಲ್ಲಿ ನೇಮಿಸಲಾಗಿದ್ದ ಐವರು ನ್ಯಾಯಾಧೀಶರ ಪೀಠದ ಭಾಗವಾಗಿದ್ದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ