ಮುಂದಿನ ವಾರ ಕಾಂಗ್ರೆಸ್‌ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆಗೆ ಸಿದ್ಧತೆ : ಮಾ.15 ರಂದು ಮಹತ್ವದ ಸಭೆ

ಬೆಂಗಳೂರು : ಹಾಲಿ ಶಾಸಕರ ಹೆಸರುಗಳೂ ಸೇರಿದಂತೆ ಗೆಲ್ಲಬಲ್ಲ ಅಭ್ಯರ್ಥಿಗಳನ್ನು ಒಳಗೊಂಡ 120 ಮಂದಿಯ ಮೊದಲ ಪಟ್ಟಿ ಮುಂದಿನ ವಾರ ಬಿಡುಗಡೆ ಮಾಡಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ.

ಕಾಂಗ್ರೆಸ್ ನಲ್ಲಿ ಈ ಬಾರಿ ಟಿಕೆಟ್‌ಗಾಗಿ 1230 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಈಗಾಗಲೇ 120 ಕ್ಷೇತ್ರ ಅಭ್ಯರ್ಥಿಗಳನ್ನ ಅಂತಿಮಗೊಳಿಸಿದ ಪಟ್ಟಿಯಲ್ಲಿನ ಕಾಂಗ್ರೆಸ್‌ನ ಅಭ್ಯರ್ಥಿಗಳ ಪಟ್ಟಿಯನ್ನ ಅಂತಿಮಗೊಳಿಸುವ ನಿಟ್ಟಿನಲ್ಲಿ ಮಾರ್ಚ್‌ 15 ರಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್‌ ಖರ್ಗೆ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಚುನಾವಣಾ ಸಮಿತಿಯ ಮಹತ್ವದ ಸಭೆ ನಡೆಯಲಿದೆ.

ಮಾರ್ಚ್‌ 20 ರಂದು 120 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ : 
ಈಗಾಗಲೇ ಕಾಂಗ್ರೆಸ್‌ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನ ಮೋಹನ್‌ ಪ್ರಕಾಶ್‌ ನೇತೃತ್ವದಲ್ಲಿ ಸ್ಕ್ರೀನಿಂಗ್‌ ಕಮಿಟಿ ಅಂತಿಮಗೊಳಿಸಲು ಎರಡು ದಿನಗಳ ಕಾಲ ಸಭೆ ನಡೆಸಿದ್ದು, 120 ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನ ಅಂತಿಮಗೊಳಿಸಿ ಕಾಂಗ್ರೆಸ್‌ ಹೈಕಮಾಂಡ್‌ ಗೆ ಕಳುಹಿಸಲಾಗಿದೆ. ಈ ಪಟ್ಟಿಯನ್ನ ಪರಿಶೀಲಿಸಿ ಅಂತಿಗೊಳಿಸಲು ಮಾರ್ಚ್‌ 15 ರಂದು ಎಐಸಿಸಿ ಮಟ್ಟದಲ್ಲಿ ಚುನಾವಣಾ ಸಮಿತಿಯ ಮಹತ್ವದ ಸಭೆ ನಡೆಯಲಿದ್ದು, ಈ 120 ಅಭ್ಯರ್ಥಿಗಳ ಪಟ್ಟಿಯನ್ನ ಮಾರ್ಚ್‌ 20 ರಂದು ಬಿಡುಗಡೆ ಮಾಡಲು ಎಐಸಿಸಿ ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಹಾಲಿ ಶಾಸಕರಿಗೆ ಟಿಕೆಟ್‌ ನೀಡುವುದಾಗಿ ಹೇಳಿದ್ರು. ಆದರೆ, ಸ್ಕ್ರೀನಿಂಗ್‌ ಸಮಿತಿಯು ಮೊದಲ 120 ಸಂಭಾವ್ಯ ಅಭ್ಯರ್ಥಿಗಳಲ್ಲಿ ನಾಲ್ಕೈದು ಹಾಲಿ ಶಾಸಕರಿಗೆ ವಿವಿಧ ಕಾರಣಗಳಿಂದ ಟಿಕೆಟ್‌ ನೀಡದಿರಲು ನಿರ್ಧರಿಸಿದೆ ಎನ್ನಲಾಗಿದ್ದು, ಅದರಂತೆ ಕುಂದಗೋಳ ಶಾಸಕಿ ಕುಸುಮಾ ಶಿವಳ್ಳಿ, ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ, ಅಘ್ಜಲ್‌ ಪುರ ಶಾಸಕ ಎಂ.ವೈ ಪಾಟೀಲ್‌ ಹಾಗೂ ಪಾವಗಡ ಶಾಸಕ ವೆಂಕಟರಮಣಪ್ಪ ಅವರಿಗೆ ಈ ಬಾರಿ ಟಿಕೆಟ್‌ ನೀಡದಿರಲು ನಿರ್ಧರಿಸಿದೆ.

ಅನ್ಯ ಪಕ್ಷದಿಂದ ಬರುವ ಸಮರ್ಥರು ನಾಯಕರಿಗೆ ಅವಕಾಶ: 
ಇನ್ನೂ ಈ ಬಾರಿ ವಿಧಾನಸಭಾ ಚುನಾವಣೆಗೆ ನಮಗೂ ಟಿಕೆಟ್‌ ನೀಡಿ ಎಂದು ಕಾಂಗ್ರೆಸ್‌ ವಿಧಾನ ಪರಿಷತ್‌ ಸದಸ್ಯರು ಸಹ ಟಿಕೆಟ್‌ ಸಲ್ಲಿಸಿದ್ದು, ಆ ಪೈಕಿ ಒಬ್ಬರಾದ ಯು.ಟಿ.ವೆಂಕಟೇಶ್‌ ಅವರಿಗೆ ಬಸವನಗುಡಿ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಲಿದೆ ಎನ್ನಲಾಗಿದೆ. ಇನ್ನೂ ಉಳಿದಂತೆ ಟಿಕೆಟ್‌ ಸಲ್ಲಿಸಿದ್ದ ವಿಧಾನಪರಿಷತ್‌ ಸದಸ್ಯರಿಗೆ ಮುಂದೆ ಸರ್ಕಾರ ಅಧಿಕಾರಕ್ಕೆ ಬಂದರೆ ಉನ್ನತ ಸ್ಥಾನಮಾನ ನೀಡಲು ನಿರ್ಧರಿಸಿದೆ ಎಂದು ಹೇಳಲಾಗಿದೆ. 120 ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಗಳನ್ನ ಹೊರತುಪಡಿಸಿ ಉಳಿದ 75 ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಕುರಿತು ಸ್ಕ್ರೀನಿಂಗ್‌ ಕಮಿಟಿ ಇನ್ನೊಂದು ಸಭೆ ನಡೆಸಲಿದ್ದು, ಈಗಾಗಲೇ ಕಾಂಗ್ರೆಸ್ ಸೇರ್ಪಡೆ ಕುರಿತು ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಬಿಜೆಪಿ ಹಾಗೂ ಜೆಡಿಎಸ್ ನ ಶಾಸಕರು ಹಾಗೂ ಸಚಿವರನ್ನ ಕರೆ ತರುವ ಪ್ರಯತ್ನವನ್ನ ನಡೆಸಿದೆ. ಹೀಗಾಗಿ ಅನ್ಯ ಪಕ್ಷದಿಂದ ಬರುವ ಸಮರ್ಥರು ನಾಯಕರಿಗೆ ಟಿಕೆಟ್ ನೀಡಲು 25 ರಿಂದ 30 ವಿಧಾನಸಭಾ ಕ್ಷೇತ್ರಗಳಲ್ಲಿ ಟಿಕೆಟ್ ಘೋಷಣೆ ಮಾಡದೆ ಕಾಯ್ದು ನೋಡುವ ತಂತ್ರಗಾರಿಕೆಯನ್ನ ಅನುಸರಿಸಲು ಸ್ಕ್ರೀನಿಂಗ್‌ ಸಮಿತಿಯಲ್ಲಿ ನಿರ್ಧರಿಸಲಾಗಿದೆ.

ಕಳೆದ ವಾರ ನಗರದಲ್ಲಿ ನಡೆದ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಎಲ್ಲ 224 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚೆ ನಡೆದಿದೆ. ಇವರಲ್ಲಿ ಗೆಲ್ಲುವ ಖಚಿತತೆ ಇರುವ ಹಾಗೂ ಒಬ್ಬರೇ ಅಭ್ಯರ್ಥಿಯನ್ನು ಅಂತಿಮಗೊಳಿಸಿ ಹೆಚ್ಚಿನ ಸ್ಪರ್ಧೆ ಇಲ್ಲದ ಕ್ಷೇತ್ರಗಳ ಉಮೇದುವಾರರ ಪಟ್ಟಿಯನ್ನು ಕಾಂಗ್ರೆಸ್ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಒಟ್ಟಾಗಿ ಕುಳಿತು ಸಿದ್ಧಪಡಿಸಿದ್ದಾರೆ ಎಂಬ ಮಾಹಿತಿ ಇದೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಧ್ರುವನಾರಾಯಣ ಅವರು ಶನಿವಾರ ಹೃದಯಾಘಾತದಿಂದ ನಿಧನರಾದ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಸಭೆ, ಅಂತಿಮ ನಮನ ಮತ್ತು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಕಾಂಗ್ರೆಸ್ ನಾಯಕರು ಕಳೆದ ಎರಡು ದಿನಗಳಿಂದ ಅಭ್ಯರ್ಥಿಗಳ ಆಯ್ಕೆ ಸಂಬಂಧ ನಡೆಯುತ್ತಿದ್ದ ಪ್ರಕ್ರಿಯೆಯನ್ನು ನಿಲ್ಲಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರು ಒಂದಿಬ್ಬರು ಕಾರ್ಯಾಧ್ಯಕ್ಷರ ಜೊತೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದು, ಅಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಜೊತೆ ಸಭೆ ನಡೆಸಲಿದ್ದಾರೆ. ಎಲ್ಲರ ಸಮ್ಮತಿ ಪಡೆದು ಕಾಂಗ್ರೆಸ್​ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಆಗಲಿದೆ. ಒಂದಕ್ಕಿಂತ ಹೆಚ್ಚು ಆಕಾಂಕ್ಷಿಗಳು ಇರುವ ಕ್ಷೇತ್ರ ಮತ್ತು ಬೇರೆ ಪಕ್ಷದಿಂದ ಕಾಂಗ್ರೆಸ್ ಸೇರ್ಪಡೆಯಾಗಿ ಟಿಕೆಟ್ ಬಯಸುತ್ತಿರುವ ಅಭ್ಯರ್ಥಿಗಳ ವಿಚಾರವಾಗಿ ಇನ್ನೊಮ್ಮೆ ಸಭೆ ಸೇರಿ ಚರ್ಚಿಸುವ ನಾಯಕರು ಯುಗಾದಿ ಹಬ್ಬ ಕಳೆದ ಬಳಿಕ ಎರಡನೇ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇದೇ ತಿಂಗಳ ಕೊನೆಯಲ್ಲಿ ರಾಜ್ಯ ವಿಧಾನಸಭೆ ಚುನಾವಣೆಗೆ ನೀತಿ ಸಂಹಿತೆ ಜಾರಿಗೆ ಬರುವ ಸಾಧ್ಯತೆ ದಟ್ಟವಾಗಿದೆ. ಗೊಂದಲವಿರುವ ಕ್ಷೇತ್ರಗಳ ಆಕಾಂಕ್ಷಿಗಳನ್ನು ಕರೆಯಿಸಿ ಸಮಾಲೋಚಿಸಿ ಒಮ್ಮತ ಮೂಡಿಸಿ ಎರಡನೇ ಪಟ್ಟಿ ಬಿಡುಗಡೆ ಮಾಡುವ ಚಿಂತನೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಿದ್ದಾರೆ.ಮೂರನೇ ಪಟ್ಟಿ ಮಾಡುವ ಆಸ್ಪದ ಇಲ್ಲದಂತೆ ಎರಡನೇ ಪಟ್ಟಿಯಲ್ಲೇ ಎಲ್ಲವನ್ನೂ ಅಂತಿಮಗೊಳಿಸುವ ಚಿಂತನೆ ಇದೆ. ಈ ತಿಂಗಳ ಕೊನೆಯ ಒಳಗೆ ಎಲ್ಲ ಅಭ್ಯರ್ಥಿಗಳ ಹೆಸರು ಅಂತಿಮಗೊಂಡು ಪ್ರಚಾರ ಕಾರ್ಯದಲ್ಲಿ ಅಭ್ಯರ್ಥಿಗಳು ತೊಡಗಿಕೊಳ್ಳಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಿರಂತರವಾಗಿ ಅತೃಪ್ತರ ಸಂಪರ್ಕದಲ್ಲಿದ್ದು, ಸಂಧಾನ ಪ್ರಯತ್ನ ಮುಂದುವರೆಸಿದ್ದಾರೆ. ಇದರ ನಡುವೆಯೇ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಿ, ಬಿಜೆಪಿಗಿಂತಲೂ ಮೊದಲೇ ತಮ್ಮ ಪಟ್ಟಿಯನ್ನು ಬಿಡುಗಡೆ ಮಾಡುವ ಗುರಿ ಹೊಂದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *