ನಾ ದಿವಾಕರ
ಸಾಮಾನ್ಯ ಜನತೆಯ ಸಂವಿಧಾನ ನಿಷ್ಠೆ ಅಥವಾ ಬದ್ಧತೆ ಪಕ್ಷಾತೀತವಾಗಿರಬೇಕಾಗುತ್ತದೆ, ಅಧಿಕಾರ ರಾಜಕಾರಣದಿಂದ ಮುಕ್ತವಾಗಿರಬೇಕಾಗುತ್ತದೆ. ಸಾಮಾಜಿಕ ನ್ಯಾಯವನ್ನೇ ಉಸಿರಾಡುವ ಸಂವಿಧಾನದ ಗ್ರಾಂಥಿಕ ಅನುಯಾಯಿಗಳಾಗದೆ ಬೌದ್ಧಿಕವಾಗಿ, ಆಚರಣಾತ್ಮಕವಾಗಿ, ಅನುಭವಾತ್ಮಕವಾಗಿ ಹಾಗೂ ಅನುಭಾವದ ನೆಲೆಗಳಲ್ಲಿ ಅದರ ಮೌಲ್ಯಗಳನ್ನು ಮತ್ತು ಆಶಯಗಳನ್ನು ಭವಿಷ್ಯದ ಪೀಳಿಗೆಗಳಿಗಾಗಿ ಕಾಪಿಟ್ಟುಕೊಳ್ಳುವ ಸದುದ್ದೇಶ ನಮ್ಮದಾಗಿರಬೇಕಲ್ಲವೇ ? ಸ್ವಾತಂತ್ರ್ಯ ಬಂದಾಗಿನಿಂದಲೂ ಭಾರತದಲ್ಲಿ ಸರ್ಕಾರಗಳು ಬದಲಾಗುತ್ತಾ ಬಂದಿವೆ, ವ್ಯವಸ್ಥೆ ಬದಲಾಗಿಲ್ಲ ಎಂಬ ಕನಿಷ್ಠ ಪರಿವೆ ನಮ್ಮೊಳಗೆ ಸದಾ ಜಾಗೃತಾವಸ್ಥೆಯಲ್ಲಿರಬೇಕಲ್ಲವೇ ?
ಭಾರತೀಯ ಸಂವಿಧಾನದ ಶ್ರೇಷ್ಠತೆಗೆ ಕಾರಣ ಅದರಲ್ಲಿನ ಸಮಾನತೆಯ ಮಾನವೀಯ ಮೌಲ್ಯಗಳು
ಭಾರತದ ರಾಜಕಾರಣದಲ್ಲಿ ಕಾಣಬಹುದಾದ ಒಂದು ವೈಶಿಷ್ಟ್ಯ ಎಂದರೆ ಎಲ್ಲ ರಾಜಕೀಯ ಪಕ್ಷಗಳೂ ದೇಶದ ಸಂವಿಧಾನಕ್ಕೆ ತಮ್ಮ ಬದ್ಧತೆಯನ್ನು ಕಾಲಕಾಲಕ್ಕೆ ಪ್ರಕಟಿಸುತ್ತಲೇ ಇರುತ್ತವೆ. ತಮ್ಮ ರಾಜಕೀಯ ಚಟುವಟಿಕೆಗಳು, ಆಳ್ವಿಕೆಯ ಸಂದರ್ಭದಲ್ಲಿ ಅನುಸರಿಸುವ ಆಡಳಿತ ನೀತಿಗಳು ಹಾಗೂ ಬಾಹ್ಯ ಸಮಾಜದಲ್ಲಿ ತಮ್ಮ ಪ್ರಜಾಸತ್ತಾತ್ಮಕ ವರ್ಚಸ್ಸು ವಿಸ್ಮೃತಿಗೆ ಜಾರದಂತೆ ಜಾಗ್ರತೆ ವಹಿಸುವ ಒಂದು ಸೂಕ್ಷ್ಮ ಧೋರಣೆಯನ್ನು ಈ “ ಸಂವಿಧಾನ ಬದ್ಧತೆ” ಯ ಪ್ರಹಸನಗಳಲ್ಲಿ ಗುರುತಿಸಬಹುದು. ಸೈದ್ಧಾಂತಿಕವಾಗಿ ಸಮಕಾಲೀನ ಭಾರತ ಎಡ-ಬಲ-ಮಧ್ಯಮ ಪಂಥೀಯ ರಾಜಕೀಯ ಸಿದ್ಧಾಂತಗಳಿಂದ ಹೊಸ ಹಾದಿಗಳನ್ನು ಕಂಡುಕೊಳ್ಳುತ್ತಿದ್ದರೂ ಮೂರೂ ತಾತ್ವಿಕ ನೆಲೆಗಳಲ್ಲಿರುವ ತೀವ್ರಗಾಮಿ ಆಲೋಚನೆಗಳು, ಅತಿರೇಕದ ಒಲವು-ನಿಲುಮೆಗಳು ಹಾಗೂ ಸಾಂದರ್ಭಿಕ ಹೊಂದಾಣಿಕೆಗಳು ಸಾಮಾನ್ಯ ಜನರಲ್ಲಿ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸುತ್ತಲೇ ಬರುತ್ತಿದೆ. ಅನೇಕ ಸನ್ನಿವೇಶಗಳಲ್ಲಿ ಈ ಸೈದ್ಧಾಂತಿಕ ನೆಲೆಗಳಲ್ಲಿ ಪ್ರಕಟವಾಗುವ ತಾತ್ವಿಕ ಅಸ್ಪಷ್ಟತೆ ಜನಸಾಮಾನ್ಯರನ್ನು ಜಿಜ್ಞಾಸೆಗೆ ದೂಡುವುದನ್ನೂ ಕಾಣುತ್ತಿದ್ದೇವೆ.
ಆಳ್ವಿಕೆ ಮತ್ತು ಸಾಂಸ್ಕೃತಿಕ ನೆಲೆಗಳು
ಇಲ್ಲಿ ಎರಡು ರೀತಿಯ ಸಂದಿಗ್ಧತೆಗಳನ್ನು ಗುರುತಿಸಬಹುದು. ಒಂದೆಡೆ ಪ್ರಜಾಸತ್ತಾತ್ಮಕ ಮಾದರಿಯ ಚುನಾವಣೆಗಳ ಮೂಲಕವೇ ಆಯ್ಕೆಯಾಗಿ ಅಧಿಕಾರ ವಹಿಸಿಕೊಳ್ಳುವ ಸರ್ಕಾರಗಳು ತಮ್ಮ ಸಾಮಾಜಿಕ-ಆರ್ಥಿಕ ನೀತಿಗಳ ಮೂಲಕ, ವಿವಿಧ ಯೋಜನೆಗಳ ಮೂಲಕ ಹಾಗೂ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳ ಮೂಲಕ ತಮ್ಮ ಸಂವಿಧಾನ ಬದ್ಧತೆಯನ್ನು ನಿರೂಪಿಸುವ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತವೆ. ನವ ಉದಾರವಾದಿ ಕಾರ್ಪೋರೇಟ್ ಮಾರುಕಟ್ಟೆಯ ಹಿಡಿತದಲ್ಲಿರುವ ಭಾರತದ ಅರ್ಥವ್ಯವಸ್ಥೆ ಹಾಗೂ ಸಾಮಾಜಿಕ ಪರಿಸರದಲ್ಲಿ ರಾಜಕೀಯ ಅಧಿಕಾರ ಕೇಂದ್ರಗಳು ತಮ್ಮ ಪ್ರಸ್ತುತತೆ, ಅಸ್ತಿತ್ವ ಹಾಗೂ ಭವಿಷ್ಯವನ್ನು ನಿರ್ಧರಿಸುವ ನಿಕ್ಷೇಪಗಳಂತೆ ಕಾಣುವುದರಿಂದ, ರಾಜಕೀಯ ನಾಯಕರಿಗೆ ಮತ್ತು ಇವರಿಗೆ ಸದಸ್ಯತ್ವ-ಮಾನ್ಯತೆ ನೀಡುವ ಬಂಡವಾಳಿಗ ಪಕ್ಷಗಳಿಗೆ ಸಂವಿಧಾನ ಬದ್ಧತೆ ಒಂದು ಆಸರೆಯಾಗಿ ಪರಿಣಮಿಸುತ್ತದೆ. ಇಂದಿಗೂ ಸಹ ದೇಶದ ಬಹುಸಂಖ್ಯೆಯ ಜನತೆ ಸಂವಿಧಾನವನ್ನು ತಮ್ಮ ಅಳಿವು-ಉಳಿವಿನ ಒಂದು ಭದ್ರಕೋಟೆ ಎಂದೇ ಭಾವಿಸಿರುವುದರಿಂದ ರಾಜಕೀಯ ಪಕ್ಷಗಳಿಗೆ ಈ ಸ್ವಘೋಷಿತ ಬದ್ಧತೆ ಅನಿವಾರ್ಯವೂ ಆಗಿರುತ್ತದೆ.
ಮತ್ತೊಂದೆಡೆ ಬದಲಾದ ಭಾರತದಲ್ಲಿ ಸಂವಿಧಾನವು ಗ್ರಾಂಥಿಕವಾಗಿ ಸುಸ್ಥಿತಿಯಲ್ಲಿದ್ದರೂ, ನೆಲಮಟ್ಟದಲ್ಲಿ ಸಮಾಜದ ವಿವಿಧ ಸಮುದಾಯಗಳ ನಡುವೆ, ಸಾಂಸ್ಕೃತಿಕ ವಲಯಗಳಲ್ಲಿ, ಶೈಕ್ಷಣಿಕ-ಬೌದ್ಧಿಕ ವಾತಾವರಣದಲ್ಲಿ ಹಂತಹಂತವಾಗಿ ಶಿಥಿಲವಾಗುತ್ತಿರುವುದನ್ನು ಗಮನಿಸುತ್ತಿರುವ ಸಾಮಾನ್ಯ ಜನತೆಗೆ ಈ ಮೌಲಿಕ ಪತನದ ಪರಿಣಾಮಗಳೂ ಢಾಳಾಗಿ ಗೋಚರಿಸುತ್ತಲೇ ಇದೆ. ಸಂವಿಧಾನವು ಭಾರತದ ಜನತೆಗೆ ನೀಡುವ ಧಾರ್ಮಿಕ ಆಚರಣೆಯ, ಅಭಿವ್ಯಕ್ತಿಯ ಸ್ವಾತಂತ್ರ್ಯದ ನೆಲೆಗಳು ಸರ್ಕಾರೇತರ ತುಡುಗು ಗುಂಪುಗಳ (Non government Fringe elements) ಹಾವಳಿಯಿಂದ ದಾಳಿಗೊಳಗಾಗುತ್ತಿದ್ದರೂ, ತಳಮಟ್ಟದಲ್ಲಿ ಈ ಶಕ್ತಿಗಳನ್ನು ನಿಯಂತ್ರಿಸಲು ಸರ್ಕಾರಗಳು ವಿಫಲವಾಗುತ್ತಿರುವುದು ಸಮಾಜದ ಭೌತಿಕ ವಿಭಜನೆಗೆ ಎಡೆಮಾಡಿಕೊಡುತ್ತಿದೆ. ಆಳುವ ವರ್ಗಗಳ ಸೈದ್ಧಾಂತಿಕ ನಿಲುವುಗಳು, ತಾತ್ವಿಕ ನಂಬಿಕೆಗಳು ಸಂವಿಧಾನದ ಆಶಯಗಳನ್ನು ದಾಟಿ ಪ್ರಕಟವಾಗುತ್ತಿರುವುದನ್ನೂ ಜನರು ಗಮನಿಸುತ್ತಲೇ ಬಂದಿದ್ದಾರೆ. ಭಾರತದ ಬಹುತ್ವವನ್ನು ಗೌರವಿಸಬೇಕಾದ ಸಂವಿಧಾನಬದ್ಧ ಸರ್ಕಾರಗಳು, ಕಾನೂನು ಸುವ್ಯವಸ್ಥೆ ಅಥವಾ ವಿಭಿನ್ನ ಅಸ್ಮಿತೆಗಳ ರಕ್ಷಣೆಯ ನೆಪದಲ್ಲಿ ಅನುಸರಿಸುತ್ತಿರುವ ನಿಷೇಧ ರಾಜಕಾರಣ ಸಮಾಜದಲ್ಲಿನ ಒಳಬಿರುಕುಗಳನ್ನು ಮತ್ತಷ್ಟು ಜಟಿಲಗೊಳಿಸುತ್ತಿರುವ ಪ್ರಕ್ರಿಯೆಗೆ ಜನರು ಮೌನ ಪ್ರೇಕ್ಷಕರಾಗಿದ್ದಾರೆ. ಕೆಲವು ರಾಜ್ಯಗಳಲ್ಲಿ ಅಧಿಕೃತವಾಗಿ ಜಾರಿಯಲ್ಲಿರುವ ಬುಲ್ಡೋಜರ್ ನೀತಿಗಳು ಪ್ರತಿಭಟನೆಯ ಹಕ್ಕುಗಳನ್ನೂ ಕಸಿದುಕೊಂಡಿರುವುದು ಒಂದು ನಿದರ್ಶನ.
ಗ್ರಾಂಥಿಕವಾಗಿ ಸಂವಿಧಾನದಲ್ಲಿ ಹೇಳಿರುವುದಕ್ಕೂ ಕಾರ್ಯತಃ ಜನಸಾಮಾನ್ಯರ ನಿತ್ಯ ಬದುಕಿನಲ್ಲಿ ಸಂವಿಧಾನದ ಆಶಯಗಳು ಹಾಗೂ ಮೌಲ್ಯಗಳು ಜೀವಂತವಾಗಿರುವುದಕ್ಕೂ ನಡುವೆ ಒಂದು ತೆಳುವಾದ ಪರದೆ ಇರುವುದನ್ನು ಗಮನಿಸಬಹುದು. ದೆಹಲಿಯಲ್ಲಿ ನಡೆದ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ವಿದೇಶಿ ಗಣ್ಯರಿಂದ ನಮ್ಮ ಒಡಲಿನ ಹಸಿವು-ಬಡತನ-ದಾರಿದ್ರ್ಯತೆಯನ್ನು ಮರೆಮಾಚಲು ಬಳಸಲಾದ ಪರದೆಗಳೇ ನಮ್ಮ ನಿತ್ಯ ಜೀವನದಲ್ಲೂ ಮತ್ತಾವುದೋ ರೂಪದಲ್ಲಿ ಕಟ್ಟಕಡೆಯ ಮನುಷ್ಯನನ್ನು ಸಾರ್ವಜನಿಕ ನೋಟದಿಂದ ಮರೆಮಾಡುತ್ತಿವೆ. ಕಾರ್ಪೋರೇಟ್ ಮಾಧ್ಯಮಗಳು ಈ ಜವಾಬ್ದಾರಿ ನಿಭಾಯಿಸುತ್ತವೆ. ಮತ-ಧರ್ಮ-ಜಾತಿ-ಕುಲ-ಪಂಥ-ಭಾಷೆ ಹೀಗೆ ಭಾವುಕ ಪರದೆಗಳು ಸಮಸ್ಯೆಯ ಕೂಪದಲ್ಲಿರುವವರನ್ನೂ ಭ್ರಮಾಧೀನಗೊಳಿಸುತ್ತಿರುವುದು ಸಂವಿಧಾನ ಉಲ್ಲಂಘನೆಯ ಲೌಕಿಕ ಸ್ವರೂಪ ಎಂದು ಹೇಳಬಹುದು. ಹಾಗಾಗಿಯೇ ದಿನನಿತ್ಯ ನಡೆಯುತ್ತಿರುವ ಸಾವಿರಾರು ಅತ್ಯಾಚಾರಗಳು, ಮಹಿಳಾ ದೌರ್ಜನ್ಯದ ಪ್ರಕರಣಗಳು, ಅಸ್ಪೃಶ್ಯತೆಯ ಪ್ರಸಂಗಗಳು, ಹತ್ಯೆಗಳು ನಮ್ಮ ಸಾಂವಿಧಾನಿಕ ಪ್ರಜ್ಞೆಯನ್ನು ಕದಡುತ್ತಿಲ್ಲ.
ಸಾಮಾಜಿಕ-ಸಾಂಸ್ಕೃತಿಕ ಆಯಾಮ
ಶತಮಾನಗಳಿಂದ ಸಮಾಜದಲ್ಲಿ ಬೇರೂರಿರುವ ವ್ಯಕ್ತಿಭೇದ, ಲಿಂಗಭೇದ ಹಾಗೂ ಸಾಂಸ್ಕೃತಿಕ ಭೇದಗಳು ಬೌದ್ಧಿಕ ಪರಿಸರದಲ್ಲಿ ಉತ್ತೇಜನ ಪಡೆಯುತ್ತಿರುವ ಒಂದು ಸನ್ನಿವೇಶವನ್ನು ಪ್ರತಿಷ್ಠಿತ ವಿಶ್ವವಿದ್ಯಾಲಯ-ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲೂ ಕಾಣುತ್ತಲೇ ಬಂದಿದ್ದೇವೆ. ಈ ಭೇದಗಳು ಪ್ರಚೋದಿಸುವ ಹಿಂಸೆ, ಕ್ರೌರ್ಯ ಮತ್ತು ಅಸಹಿಷ್ಣುತೆಯ ನೆಲೆಗಳನ್ನು ಕಂಡೂ ಕಾಣದಂತಿರುವ ಒಂದು ಬೃಹತ್ ವರ್ಗವನ್ನು ಆಳುವ ವರ್ಗಗಳು ಸೃಷ್ಟಿಸಿದ್ದರೆ ಮತ್ತೊಂದೆಡೆ ಇವೆಲ್ಲವನ್ನೂ ಸ್ವಾಭಾವಿಕ ಪ್ರಕ್ರಿಯೆಗಳೆಂದು ಭಾವಿಸುವ ಒಂದು ಭ್ರಮಾಧೀನ ವರ್ಗವನ್ನು ಸೈದ್ಧಾಂತಿಕ ರಾಜಕಾರಣ ಮತ್ತು ಅದರ ಸಾಂಸ್ಕೃತಿಕ ಆಲೋಚನೆಗಳು ಸೃಷ್ಟಿಸಿದೆ. ವಿಶಾಲ ಸಮಾಜವನ್ನು ಅಡ್ಡಡ್ಡಲಾಗಿ ಸೀಳಿರುವ ಈ ಸಾಂಸ್ಕೃತಿಕ ಆಲೋಚನಾ ವಿಧಾನಗಳು ಎರಡೂ ಬದಿಗಳಲ್ಲಿ ಸೃಷ್ಟಿಸಿರುವ ನಿರ್ಲಿಪ್ತತೆ ಮತ್ತು ನಿಷ್ಕ್ರಿಯತೆಗೆ ಅಸ್ಮಿತೆಗಳ ಹೊದಿಕೆಯನ್ನು ತೊಡಿಸಲಾಗುತ್ತಿದೆ. ಈ ಅಸ್ಮಿತೆಗಳ ಕೂಪವನ್ನು ನಿರ್ವಹಿಸುವ ಬೌದ್ಧಿಕ ವಲಯವೂ ಸಹ ತಳಮಟ್ಟದವರೆಗೂ ಜನರಲ್ಲಿ ನಿಷ್ಕ್ರಿಯತೆಯನ್ನು ಸೃಷ್ಟಿಸಿಬಿಡುತ್ತದೆ. ಬಾಹ್ಯ ಸಮಾಜವು ಇದನ್ನು ನಿರ್ಲಿಪ್ತತೆ ಎಂದು ಭಾವಿಸುತ್ತದೆ.
ಇದನ್ನೂ ಓದಿ:ಬ್ರಿಕ್ಸ್ ವಿಸ್ತರಣೆ ಮತ್ತು ಡಾಲರ್ ಪ್ರಾಬಲ್ಯಕ್ಕೆ ಸವಾಲು
ಆದರೆ ವಾಸ್ತವಾಗಿ ಇದು ಸಾಮಾಜಿಕ ಭೇದಗಳ ಮತ್ತು ಅದರಿಂದ ಸೃಷ್ಟಿಯಾಗುವ ಅಮಾನುಷತೆಗಳ ಮೌನ ಸಮರ್ಥನೆಯೇ ಆಗಿರುತ್ತದೆ. ಅಮಾಯಕ ಮಹಿಳೆಯರ ಮೇಲೆ ನಡೆಯುವ ಭೀಕರ ಅತ್ಯಾಚಾರಗಳಿಗೆ, ಹತ್ಯೆಗಳಿಗೆ, ಅಸ್ಪೃಶ್ಯತೆಯ ವೇದನೆಗೆ, ಕೌಟುಂಬಿಕ ದೌರ್ಜನ್ಯಗಳಿಗೆ ಮೂಕ ಪ್ರೇಕ್ಷಕನಾಗಿರುವ ಒಂದು ಸಮಾಜ ಈ ಸಮರ್ಥಕ ಭಾವದಲ್ಲೇ ಪ್ರಜಾಸತ್ತಾತ್ಮಕ ಆಶಯಗಳಿಗೂ ಜೋತುಬೀಳುವ ಒಂದು ವಿಡಂಬನೆಯನ್ನು ನಾವಿಂದು ಕಾಣುತ್ತಿದ್ದೇವೆ. ಭಾರತದ ಸಂದರ್ಭದಲ್ಲಿ ಸಾಮಾಜಿಕ ವಲಯದಲ್ಲಿ ನಡೆಯುವ ಅನ್ಯಾಯಗಳು ನಮ್ಮ ಬಹುಸಾಂಸ್ಕೃತಿಕ ಪರಂಪರೆಯಷ್ಟೇ ವೈವಿಧ್ಯಮಯವೂ ಆಗಿರುವುದನ್ನು ಸೂಕ್ಷ್ಮವಾಗಿ ಗಮನಿಸುವುದು ವರ್ತಮಾನದ ಅವಶ್ಯಕತೆಯಾಗಿದೆ. ಈ ಅನ್ಯಾಯಗಳನ್ನು ಪ್ರತಿಭಟಿಸುವ ಅಥವಾ ಅನ್ಯಾಯಕ್ಕೊಳಗಾದ ಸಂತ್ರಸ್ತರಿಗೆ ಸ್ಪಂದಿಸುವ ವಿವೇಕ-ವಿವೇಚನೆ- ವ್ಯವಧಾನವನ್ನೂ ಕಳೆದುಕೊಂಡಿರುವ ಬೃಹತ್ ವರ್ಗವೇ ಸಂವಿಧಾನ ಬದ್ಧತೆಯನ್ನು ಪ್ರಮಾಣೀಕರಿಸುವ ಮಾಧ್ಯಮಗಳನ್ನು, ರಾಜಕೀಯ ಕ್ಷೇತ್ರವನ್ನು ಹಾಗೂ ಬೌದ್ಧಿಕ ವಲಯವನ್ನೂ ಆಕ್ರಮಿಸಿಕೊಂಡಿರುವ ದುಸ್ಥಿತಿಯನ್ನು ನಾವು ಎದುರಿಸುತ್ತಿದ್ದೇವೆ.
ಈ ವಿಷಮ ಸನ್ನಿವೇಶದಲ್ಲೇ ನಮಗೆ ಭಾರತದ ಸಂವಿಧಾನ ಒಂದು ಆಶಾ ದೀಪ್ತಿಯಂತೆ ಕಾಣುತ್ತಿದೆ. ಭಾರತದ ಪ್ರಜಾಪ್ರಭುತ್ವದ ಉಳಿವಿಗೆ ಮುಖ್ಯವಾದಷ್ಟೇ ಸಂವಿಧಾನದ ಸಂರಕ್ಷಣೆ ನಮ್ಮ ಸಮಾಜದ ಉಳಿವಿಗೂ ಮುಖ್ಯವಾಗಿ ಕಾಣುತ್ತಿರುವುದೂ ಇದೇ ಕಾರಣಗಳಿಗೆ. ಇದೇ 15ರಂದು ನಾವು ವಿಶ್ವ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ರಾಜ್ಯ ಸರ್ಕಾರ ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಉಳಿವಿಗೆ ಮೂಲ ಆಧಾರ ಆಗಿರುವ ಭಾರತದ ಸಂವಿಧಾನ ಪೀಠಿಕೆಯ ಓದು ಕಾರ್ಯಕ್ರಮವನ್ನೂ ರಾಜ್ಯವ್ಯಾಪಿಯಾಗಿ ಹಮ್ಮಿಕೊಂಡಿದೆ. ಈ ಓದು ಮತ್ತು ಪ್ರಮಾಣೀಕರಣದಿಂದಾಚೆಗೆ ನೋಡುವ ದಾರ್ಷ್ಟ್ಯ ನಮ್ಮೊಳಗೆ ಇರುವುದೇ ಆದರೆ ನಾವು ಸಂವಿಧಾನದ ಗ್ರಾಂಥಿಕ ಅನುಯಾಯಿಗಳಾಗದೆ, ತಾತ್ವಿಕ ಪರಿಚಾರಕರಾಗಿ, ತುಳಿತಕ್ಕೊಳಗಾದ ಜನಸಮುದಾಯಗಳೊಡನೆ ನಿಲ್ಲಲು ಸಾಧ್ಯ. ರಾಜಕೀಯ ಪಕ್ಷಗಳು ತಮ್ಮ ಅಧಿಕಾರ ಪೀಠಗಳನ್ನು ಸಂರಕ್ಷಿಸುವ ಒಂದು ಅಡಿಪಾಯವಾಗಿ ಸಂವಿಧಾನವನ್ನು ಬಳಸಿಕೊಳ್ಳುತ್ತವೆ. ಆದರೆ ಸಾಮಾನ್ಯ ಜನತೆಯಾದ ನಾವು ಈ ಸಂವಿಧಾನ ಪೀಠಿಕೆಯ ಪ್ರತಿ ಅಕ್ಷರವನ್ನೂ ಪ್ರಜಾಪ್ರಭುತ್ವವನ್ನು ಭವಿಷ್ಯದ ಪೀಳಿಗೆಗಾಗಿ ಕಾಪಾಡುವ ರಕ್ಷಾ ಕವಚದಂತೆ ಭಾವಿಸಬೇಕಿದೆ.
ಹೀಗೆ ಭಾವಿಸಬೇಕಾದರೆ ಸಾಮಾನ್ಯ ಜನತೆಯ ಸಂವಿಧಾನ ನಿಷ್ಠೆ ಅಥವಾ ಬದ್ಧತೆ ಪಕ್ಷಾತೀತವಾಗಿರಬೇಕಾಗುತ್ತದೆ, ಅಧಿಕಾರ ರಾಜಕಾರಣದಿಂದ ಮುಕ್ತವಾಗಿರಬೇಕಾಗುತ್ತದೆ. ಸಾಮಾಜಿಕ ನ್ಯಾಯವನ್ನೇ ಉಸಿರಾಡುವ ಸಂವಿಧಾನದ ಗ್ರಾಂಥಿಕ ಅನುಯಾಯಿಗಳಾಗದೆ ಬೌದ್ಧಿಕವಾಗಿ, ಆಚರಣಾತ್ಮಕವಾಗಿ, ಅನುಭವಾತ್ಮಕವಾಗಿ ಹಾಗೂ ಅನುಭಾವದ ನೆಲೆಗಳಲ್ಲಿ ಅದರ ಮೌಲ್ಯಗಳನ್ನು ಮತ್ತು ಆಶಯಗಳನ್ನು ಭವಿಷ್ಯದ ಪೀಳಿಗೆಗಳಿಗಾಗಿ ಕಾಪಿಟ್ಟುಕೊಳ್ಳುವ ಸದುದ್ದೇಶ ನಮ್ಮದಾಗಿರಬೇಕಲ್ಲವೇ ? ಸ್ವಾತಂತ್ರ್ಯ ಬಂದಾಗಿನಿಂದಲೂ ಭಾರತದಲ್ಲಿ ಸರ್ಕಾರಗಳು ಬದಲಾಗುತ್ತಾ ಬಂದಿವೆ, ವ್ಯವಸ್ಥೆ ಬದಲಾಗಿಲ್ಲ ಎಂಬ ಕನಿಷ್ಠ ಪರಿವೆ ನಮ್ಮೊಳಗೆ ಸದಾ ಜಾಗೃತಾವಸ್ಥೆಯಲ್ಲಿರಬೇಕಲ್ಲವೇ ? ಈ ವ್ಯವಸ್ಥೆಯನ್ನು ನಿಯಂತ್ರಿಸುವ ಸಾಂಸ್ಕೃತಿಕ ಶಕ್ತಿಗಳು, ಮತೀಯ ಭೂಮಿಕೆಗಳು, ಧಾರ್ಮಿಕ ನಂಬಿಕೆಗಳು, ಆರ್ಥಿಕ ವೇದಿಕೆಗಳು ಹಾಗೂ ರಾಜಕೀಯ ಕೂಟಗಳು ಯಾವುದೋ ಒಂದು ಅಸ್ಮಿತೆಯ ಚೌಕಟ್ಟಿನಲ್ಲಿ ತಮ್ಮದೇ ಆದ ಭದ್ರಕೋಟೆಗಳನ್ನು ರಚಿಸಿಕೊಂಡಿರುತ್ತವೆ. ಅತ್ಯಂತ ಕ್ರೂರ ಬುಲ್ಡೋಜರ್ ನ್ಯಾಯದ ವಿರುದ್ಧ ರಾಜಕೀಯ ಪ್ರತಿರೋಧ ಕನಿಷ್ಠ ಮಟ್ಟದಲ್ಲಿರುವುದು, ಜಾತಿ ದೌರ್ಜನ್ಯ, ಮಹಿಳಾ ದೌರ್ಜನ್ಯ ಮತ್ತು ಅಸ್ಪೃಶ್ಯತೆಯ ವಿರುದ್ಧ, ಶ್ರಮಜೀವಿಗಳ ದುರ್ಭರ ಜೀವನೋಪಾಯಗಳ ಬಗ್ಗೆ ರಾಜಕೀಯ ಸ್ಪಂದನೆ ಪೇಲವವಾಗಿರುವುದು ಈ ಭದ್ರಕೋಟೆಗಳ ಪರಿಣಾಮವೇ ಆಗಿದೆ.
ಸಂವಿಧಾನದ ನೆರಳಲ್ಲಿ
ಹಾಗಾಗಿ ತುಳಿತಕ್ಕೊಳಗಾದ, ಅಂಚಿಗೆ ತಳ್ಳಲ್ಪಟ್ಟ, ವಂಚಿತ-ಶೋಷಿತ-ಅಪಮಾನಿತ ಜನಸಮುದಾಯಗಳ ದೃಷ್ಟಿಯಿಂದ “ ಭಾರತದ ಜನತೆಯಾದ ನಾವು ” ಸಂವಿಧಾನ ಎಂಬ ಗ್ರಂಥವನ್ನು ಅದರ ಭೌತಿಕ ಸ್ವರೂಪದಿಂದಾಚೆಗೆ ತಂದು ಗ್ರಾಂಥಿಕ ರೂಪವನ್ನು ಬದಿಗಿಟ್ಟು ಮೌಲಿಕವಾಗಿ ನಮ್ಮ ನಡುವೆ ನೆಲೆಗೊಳ್ಳುವಂತೆ ಮಾಡಬೇಕಿದೆ. ಆಗ ಮಾತ್ರ ನಾವು ಎಲ್ಲರನ್ನೊಳಗೊಂಡ ಒಂದು ಸಮಸಮಾಜವನ್ನು ಕಟ್ಟಲು ಸಾಧ್ಯವಾಗಬಹುದು. ಯಾವುದೇ ಸ್ವ- ಹಿತಾಸಕ್ತಿ ಇಲ್ಲದೆ ಸಂವಿಧಾನಕ್ಕೆ ಬದ್ಧತೆಯಿಂದ ಬದುಕಲಿಚ್ಚಿಸುವ ಜನಸಾಮಾನ್ಯರ ನಡುವೆ ಭೇದಭಾವಗಳನ್ನು ತೊಡೆದುಹಾಕುವುದೇ ಅಲ್ಲದೆ, ʼ ನಮ್ಮವರ ʼ ಮತ್ತು ʼ ಅನ್ಯರ ʼ ನಡುವಿನ ತೆಳುಗೆರೆಗಳನ್ನೂ ಅಳಿಸಿಹಾಕಬೇಕಾಗುತ್ತದೆ. ಸಂವಿಧಾನವು ಮಾತನಾಡುವ ಪರಿಭಾಷೆಯನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಂಡಾಗ, ಜನತೆಯ ಸಾಂಸ್ಕೃತಿಕ-ಧಾರ್ಮಿಕ-ಆಚರಣೆಯ-ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಇನ್ನೂ ತಳಮಟ್ಟದವರೆಗೂ ವಿಸ್ತರಿಸುವ ಅಗತ್ಯತೆಯನ್ನು ಸಹ ಕಾಣಬಹುದು.
ಹೀಗೆ ಕಾಣಲು ಸಾಧ್ಯವಾದರೆ ಸಂವಿಧಾನಬದ್ಧ ಸಾಮಾಜಿಕ ಚಳುವಳಿಗಳು ಅಧಿಕಾರ ರಾಜಕಾರಣದ ಸಾಮೀಪ್ಯ ಮತ್ತು ಸಾಂಗತ್ಯದಿಂದ ಕೊಂಚಮಟ್ಟಿಗಾದರೂ ದೂರ ಇರಬೇಕಾಗುತ್ತದೆ. ಹಾಗೆಯೇ ಬಂಡವಾಳಶಾಹಿ ಮಾರುಕಟ್ಟೆ ಅರ್ಥವ್ಯವಸ್ಥೆ ಸಾಮಾನ್ಯ ಜನತೆಯ ಬದುಕಿನಲ್ಲಿ ಸೃಷ್ಟಿಸುವ ತುಮುಲ-ತಲ್ಲಣಗಳಿಗೆ ಸ್ಪಂದಿಸಿ ಪ್ರತಿರೋಧಿಸುವ ತಮ್ಮ ಆಂತರಿಕ ಧ್ವನಿಯನ್ನೂ ಉಳಿಸಿಕೊಳ್ಳಬೇಕಾಗುತ್ತದೆ. ಸೈದ್ಧಾಂತಿಕ ಭಿನ್ನತೆಗಳು, ತಾತ್ವಿಕ ವೈವಿಧ್ಯತೆಗಳು ನಮ್ಮ ಪ್ರಜಾಪ್ರಭುತ್ವದ ಮಸೂರವನ್ನು ಮಸುಕುಗೊಳಿಸದಂತೆ ಎಚ್ಚರವಹಿಸಬೇಕಾಗುತ್ತದೆ. ಶತಮಾನಗಳ ಅಪಮಾನವನ್ನು ಇವತ್ತಿಗೂ ಸಹಿಸಿಕೊಂಡು ಬಂದಿರುವ ಬೃಹತ್ ಜನಸಮೂಹ ಸೈದ್ಧಾಂತಿಕ ಸ್ಪಷ್ಟತೆಯೊಂದಿಗೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಲೇ ಮತ್ತೊಂದು ʼ ಅನ್ಯರ ʼ ಚೌಕಟ್ಟನ್ನು ನಿರ್ಮಿಸದಂತೆ ಎಚ್ಚರವಹಿಸಬೇಕಿದೆ. ಹಾಗೆಯೇ ಈಗಾಗಲೇ ಬೇರೂರಿರುವ ಈ ಚೌಕಟ್ಟುಗಳನ್ನು ಕೆಡವಿ ಹೊಸ ಸಮಾಜವನ್ನು ಕಟ್ಟುವತ್ತ ಗಮನಹರಿಸಬೇಕಿದೆ.
ಸೆಪ್ಟಂಬರ್ 15ರಂದು ಆಚರಿಸಲಾಗುತ್ತಿರುವ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಮತ್ತು ಸರ್ಕಾರ ಆಯೋಜಿಸಿರುವ ಸಂವಿಧಾನ ಪೀಠಿಕೆಯ ಓದು ಸಾರ್ಥಕವಾಗಬೇಕಾದರೆ ನಮ್ಮ ನಡುವಿನ ಸಂಕುಚಿತ ಹಿನ್ನೋಟಗಳನ್ನು ಬದಿಗೆ ಸರಿಸಿ ವಿಶಾಲ ಸಮಾಜದ ಮುನ್ನೋಟಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಮುಂಗಾಣ್ಕೆ ಇಲ್ಲದ ಸಮಾಜ ಮತ್ತು ಸಂಸ್ಕೃತಿ ಜಡಗಟ್ಟಿಹೋಗುತ್ತದೆ. ಇದನ್ನು ತಪ್ಪಿಸಲೆಂದೇ ಡಾ. ಬಿ.ಆರ್. ಅಂಬೇಡ್ಕರ್ ಅವರು ಆಚರಣೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ, ವೈಚಾರಿಕತೆ-ವೈಜ್ಞಾನಿಕ ಮನೋಭಾವಕ್ಕೆ, ಸೋದರತ್ವ ಮತ್ತು ಸಹಬಾಳ್ವೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ಸಂವಿಧಾನದ ಪೀಠಿಕೆಯನ್ನು ಅಕ್ಷರಶಃ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಭಾರತದ ಪ್ರಜಾಪ್ರಭುತ್ವವನ್ನು ಭವಿಷ್ಯದ ಪೀಳಿಗೆಗಾಗಿ ಉಳಿಸಿಹೋಗಲು ಸಾಧ್ಯ. ಇದೇ ಸಂವಿಧಾನದ ಫಲಾನುಭವಿಗಳಾಗಿರುವ ಪ್ರತಿಯೊಬ್ಬ ಪ್ರಜೆಯೂ ಈ ನಿಟ್ಟಿನಲ್ಲಿ ಪ್ರಜ್ಞಾವಂತಿಕೆಯಿಂದ ಯೋಚಿಸಬೇಕಿದೆ. ಜನತೆಯ ಜೀವನ, ಜೀವನೋಪಾಯ ಮತ್ತು ಭವಿಷ್ಯವನ್ನು ಬಾಧಿಸುವ ಆಡಳಿತ ನೀತಿಗಳು ಸಂವಿಧಾನದ ಪೀಠಿಕೆಯ ಆಶಯಗಳನ್ನು ಈಡೇರಿಸುವಂತೆ ಇದ್ದರೆ ಮಾತ್ರ ಸಂವಿಧಾನ ತನ್ನ ಗ್ರಾಂಥಿಕ ಅಸ್ತಿತ್ವವನ್ನು ದಾಟಿ ಮೌಲಿಕವಾಗಿ ಉಳಿದುಕೊಳ್ಳುತ್ತದೆ. ಈ ದೃಷ್ಟಿಯಿಂದಲೇ ಸಂವಿಧಾನ ಪೀಠಿಕೆ ಓದಿನ ಮೂಲಕ ತನ್ನ ಪ್ರಜಾಸತ್ತಾತ್ಮಕ ಬದ್ಧತೆಯನ್ನು ಪ್ರದರ್ಶಿಸುವ ಸರ್ಕಾರವು ಶ್ರಮಜೀವಿ ಜನತೆಯ ಸಾಂವಿಧಾನಿಕ ಹಕ್ಕುಗಳನ್ನು ಎಲ್ಲ ಆಯಾಮಗಳಿಂದಲೂ ರಕ್ಷಿಸಲು ಪಣ ತೊಡಬೇಕಾಗುತ್ತದೆ. ಇಲ್ಲವಾದಲ್ಲಿ ಇದು ಮತ್ತೊಂದು ಆಡಂಬರದ ಉತ್ಸವವಾಗಿ ಪರಿಸಮಾಪ್ತಿಯಾಗುತ್ತದೆ.