ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಪೊಲೀಸರು ಮತ್ತೆ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.
ಮೂಲಗಳ ಪ್ರಕಾರ ಪ್ರಕರಣದ ಪ್ರಮುಖ ಆರೋಪಿಗಳಾದ ಶಿಯಾಬುದ್ದಿನ್ ಅಲಿ, ರಿಯಾಜ್ ಮತ್ತು ಬಶೀರ್ ಎಂಬುವವರನ್ನು ಬಂಧಿಸಲಾಗಿದೆ. ಕೊಲೆ ಮಾಡಿದ ಬಳಿಕ ಮೂವರು ಕೇರಳ ರಾಜ್ಯಕ್ಕೆ ಪರಾರಿಯಾಗಿದ್ದರು ಎನ್ನಲಾಗಿದೆ. ಗೌಪ್ಯ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ತೀವ್ರವಾಗಿ ವಿಚಾರಣೆ ನಡೆಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಜುಲೈ 26ರಂದು ಪ್ರವೀಣ್ ನೆಟ್ಟಾರು ಕೊಲೆ ನಡೆದಿತ್ತು. ಹತ್ಯೆಗೈದಿದ್ದ ಆರೋಪಿಗಳು ಕೇರಳ ರಾಜ್ಯಕ್ಕೆ ಪರಾರಿಯಾಗಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಬೆಳ್ಳಾರೆ ಠಾಣೆ ಪೊಲೀಸರು ಆಗಸ್ಟ್ 08ರಂದು ಮತ್ತೊಬ್ಬ ಆರೋಪಿ ಸುಳ್ಯದ ಜಟ್ಟಿಪಳ್ಳ ನಿವಾಸಿ ಅಬ್ದುಲ್ ಕಬೀರ್.ಸಿ.ಎ(33) ಬಂಧಿಸಿದರು. ಆತನನ್ನು ಕೊಲೆ ಆರೋಪಿಗಳಿಗೆ ನೆರವು ನೀಡಿದ ಹಿನ್ನೆಲೆ ಬಂಧಿಸಲಾಗಿದೆ. ಈವರೆಗೆ ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಬೆಳ್ಳಾರೆ ಪೊಲೀಸರು ಒಟ್ಟು ಏಳು ಜನರನ್ನು ಬಂಧಿಸಿದ್ದಾರೆ.
ಆರೋಪಿ ಸಿ.ಎ. ಕಬೀರ್‌ನನ್ನು ಬುಧವಾರ ಪೊಲೀಸರು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಸುಳ್ಯ ನ್ಯಾಯಾಲಯ ಆಗಸ್ಟ್ 12ರ ತನಕ ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರಮುಖ ಆರೋಪಿಗಳ ಬಂಧನದ ಕುರಿತು ಎಡಿಜಿಪಿ ಅಲೋಕ್ ಕುಮಾರ್ ಖಚಿತಪಡಿಸಿದ್ದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ‘ಗುರುವಾರ ಬೆಳಗ್ಗೆ 8 ಗಂಟೆಗೆ ತಲಪಾಡಿ ಚೆಕ್ ಪೋಸ್ಟ್ ಬಳಿ ಸುಳ್ಯದ ಶಿಯಾಬುದ್ದೀನ್ ಅಲಿ, ಸುಬ್ರಹ್ಮಣ್ಯದ ರಿಯಾಝ್ ಮತ್ತು ಸುಳ್ಯದ ಬಶೀರ್ ಎಂಬವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಹತ್ಯೆಯ ಹಿಂದಿನ ಉದ್ದೇಶ ಇನ್ನೂ ಪತ್ತೆಯಾಗಿಲ್ಲ ಮತ್ತು ಅವರು ಎಸ್‌ಡಿಪಿಐ ಮತ್ತು ಪಿಎಫ್‌ಐ ಜೊತೆ ಸಂಪರ್ಕ ಹೊಂದಿದ್ದಾರೆಂಬ ಶಂಕೆ ಇದೆ. ಆದಾಗ್ಯೂ ನಾವು ಪುರಾವೆಗಳನ್ನು ಸಂಗ್ರಹಿಸಿದ ನಂತರ ನಾವು ಖಚಿತಪಡಿಸುತ್ತೇವೆ. ಪರಾರಿಯಾದ ಆರೋಪಿಗಳು ಪದೇಪದೇ ಸ್ಥಳವನ್ನು ಬದಲಾಯಿಸುತ್ತಿದ್ದರು. ಈ ಪ್ರಕರಣದ ಸೂಕ್ತ ತನಿಖೆಯ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸಲಾಗುವುದು ಎಂದರು.
ಆಧುನಿಕ ನೆಟ್‌ವರ್ಕ್ ಬಳಸಿ ಅವರು ಸುರಕ್ಷಿತ ಸ್ಥಳದತ್ತ ತೆರಳುವಲ್ಲಿ ಹಲವು ಕಾಣದ ಕೈಗಳು ನೆರವು ನೀಡುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಪ್ರವೀಣ್ ಹತ್ಯೆಯ ಹಿಂದೆ ಮತೀಯವಾದ ಅಂಶ ಇರುವುದು ಬಹುತೇಕ ಖಚಿತವಾಗಿದೆ.
ಜುಲೈ 26 ರಂದು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿರುವ ತನ್ನ ಕಚೇರಿ ಎದುರು ಪ್ರವೀಣ್ ನೆಟ್ಟಾರು ಎಂಬುವರನ್ನು ಕೊಲೆ ಮಾಡಲಾಗಿತ್ತು. ಹತ್ಯೆಗೆ ಸಂಚು ರೂಪಿಸಿದ್ದ ಏಳು ಮಂದಿಯನ್ನು ಈ ಹಿಂದೆ ಬಂಧಿಸಲಾಗಿತ್ತು.