ಪ್ರವೀಣ್‌ ನೆಟ್ಟಾರ್‌ ಕೊಲೆ ಹಿಂದಿನ ರಹಸ್ಯ ಬಹಿರಂಗವಾಗಲಿ: ಮುನೀರ್‌ ಕಾಟಿಪಳ್ಳ

ಮಂಗಳೂರು: ಪ್ರವೀಣ್ ನೆಟ್ಟಾರ್ ಕೊಲೆ ಖಂಡಿತಾ ದೊಡ್ಡ ಪಿತೂರಿ. ಇದು ಬೈಕಿನಲ್ಲಿ ಬಂದ ಮೂರು ಜ‌ನ ಹಂತಕರಿಂದಷ್ಟೇ ನಡೆದ ಕೊಲೆಯಲ್ಲ. ಇದರ ಹಿಂದಿರುವ ದೊಡ್ಡ ತಲೆಗಳು ಹೊರ ಬರಬೇಕು, ಸಂಚುಗಳು ಬಹಿರಂಗ ಆಗಬೇಕು ಆಗಬೇಕೆಂದು ಡಿವೈಎಫ್‌ಐ ರಾಜ್ಯಾದ್ಯಕ್ಷ ಮುನೀರ್‌ ಕಾಟಿಪಳ್ಳ ಒತ್ತಾಯಿಸಿದ್ದಾರೆ.

ಬಿಜೆಪಿ ಬೆಂಬಲಿಗರ ಮುಗಿಲು ಮುಟ್ಟಿದ ಆಕ್ರೋಶ ಶಮನಕ್ಕೆ  “ಎನ್ಕೌಂಟರ್” ಹೆಸರಿನಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಪ್ರಯತ್ನ ನಡೆಯಲಿದೆ ಎಂಬ ಮಾತುಗಳು ಜನ ಸಾಮಾನ್ಯರ ನಡುವೆ ಕೇಳಿ ಬರುತ್ತಿದೆ. ಇದು ಅಸಂಭವ ಏನಲ್ಲ. ಬಿಜೆಪಿಯು ರಾಜಕೀಯ ದಾಳಗಳನ್ನು ಯಾವರೀತಿಯಲ್ಲೂ ಉರುಳಿಸಬಲ್ಲದು‌. ಒಂದು ವೇಳೆ ಕೃತಕ ಎನ್ಕೌಂಟರ್ ನಡೆದು ಒಂದೆರಡು ತಲೆ ಉರುಳಿತು ಅಂತಾದರೆ ಜನರ ಆಕ್ರೋಶ ತಣಿಸಿ ಪ್ರವೀಣ್ ನೆಟ್ಟಾರ್ ಕೊಲೆಯ ಹಿಂದಿನ‌ ರಹಸ್ಯವನ್ನು ಹೂತು ಹಾಕಲಾಯಿತು ಎಂದು ಅರ್ಥೈಸಿಕೊಳ್ಳಬಹುದು ಎಂದು ಹೇಳಿದ್ದಾರೆ.

ಅಂದರೆ, “ಎನ್ಕೌಂಟರ್” ನಡೆಯದಂತೆ ನೋಡಿಕೊಳ್ಳಬೇಕು. ದಕ್ಷ, ಪ್ರಾಮಾಣಿಕ ಅಧಿಕಾರಿಗಳ‌ನ್ನು ಒಳಗೊಂಡ ವಿಶೇಷ ತನಿಖಾ ತಂಡಕ್ಕೆ ಪ್ರಕರಣ ಹಸ್ತಾಂತರಗೊಳ್ಳಬೇಕು ಎಂದು ಆಗ್ರಹಿಸಿರುವ ಮುನೀರ್‌ ಕಾಟಿಪಳ್ಳ ಅವರು, ಪ್ರವೀಣ್ ನೆಟ್ಟಾರ್‌ ಕೊಲೆಯ ಹಿಂದಿರುವ ಪ್ರತಿಯೊಬ್ಬರೂ ಜೈಲು ಸೇರಬೇಕು, ಸಂಚುಗಳು ಬಹಿರಂಗಗೊಳ್ಳಬೇಕು ಎಂದಿದ್ದಾರೆ.

ಅಪರಾಧಿಗಳಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆಗೆ ಗುರಿಯಾಗಬೇಕು. ಮತೀಯ ದ್ವೇಷದ ರಾಜಕಾರಣಕ್ಕೆ ಅಮಾಯಕ ಯುವಕರು ಬೀದಿಯಲ್ಲಿ ಹೆಣವಾಗುವುದು ಕೊನೆಗೊಳ್ಳಬೇಕು. ತಮ್ಮ ಆಕ್ರೋಶದ ಮೂಲಕ ಸರಕಾರವನ್ನೇ ಕಂಗಾಲು ಮಾಡಿದ ಜನರು “ವಿಶೇಷ ತನಿಖಾ ತಂಡ(ಎಸ್‌ಐಟಿ)ʼʼ ರಚನೆಗಾಗಿ ದೊಡ್ಡದಾಗಿ ಧ್ವನಿ ಎತ್ತಬೇಕು ಎಂದು ತಿಳಿಸಿದ್ದಾರೆ.

 ಪ್ರವೀಣ್ ಮನೆಗೆ ಭೇಟಿ ನೀಡುವಾಗ ಅದೇ ಗ್ರಾಮದ ಮಸೂದ್ ಮನೆಗೂ ಭೇಟಿ ನೀಡಿ, ರಾಜಧರ್ಮ ಪಾಲಿಸಿ :ಬೊಮ್ಮಾಯಿಯವರು ಕರ್ನಾಟಕ ರಾಜ್ಯಕ್ಕೆ ಮುಖ್ಯಮಂತ್ರಿ. ಆರು ಕೋಟಿ ಕನ್ನಡಿಗರಿಗೂ ಅವರೇ ಮುಖ್ಯಮಂತ್ರಿ. ಬಿಜೆಪಿ ಪಕ್ಷದವರಿಗೆ, ಒಂದು ಮತ ಧರ್ಮಕ್ಕೆ ಮಾತ್ರ ಮುಖ್ಯಮಂತ್ರಿ ಅಲ್ಲ. ಬೆಳ್ಳಾರೆಯಲ್ಲಿ ಕೊಲೆಗೀಡಾದ ಪ್ರವೀಣ್ ನೆಟ್ಟಾರು ಮನೆಗೆ ಇಂದು ನೀವು ಭೇಟಿ ನೀಡುವಾಗ ಅದೇ ಗ್ರಾಮದಲ್ಲಿ ವಾರದ ಹಿಂದೆ ಮತೀಯ ದ್ವೇಷಕ್ಕೆ ಬಲಿಯಾದ ಅಮಾಯಕ ಹುಡುಗ ಮಹಮ್ಮದ್ ಮಸೂದ್ ಮನೆಗೂ ಭೇಟಿ ನೀಡಬೇಕು ಎಂದು ಮುನೀರ್‌ ಆಗ್ರಹಿಸಿದ್ದಾರೆ. ಪ್ರವೀಣ್ ನ ವಿಧವೆ ಹೆಂಡತಿ, ಅನಾಥ ತಂದೆ ತಾಯಿಯರಿಗೆ ಸಾಂತ್ವನ ಹೇಳುವಾಗ, ಮಸೂದ್ ನ ವಿಧವೆ ತಾಯಿಗೂ ಸಾಂತ್ವನ ಹೇಳಬೇಕು. ಯಾವುದೇ ಕಾರಣಕ್ಕು ತಾರತಮ್ಯ ಎಸಗಬಾರದು. ಕೊಲೆ ಗೀಡಾದ ಎರಡೂ ಕುಟುಂಬದ ಹೆಣ್ಣು ಜೀವಗಳು ಸಮಾನವಾಗಿ ನೊಂದಿವೆ. ಮುಖ್ಯಮಂತ್ರಿಗಳೇ ರಾಜಧರ್ಮ ಪಾಲಿಸಿ.‌ ಇಲ್ಲದಿದ್ದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ನೀವು ಅಯೋಗ್ಯರಾಗಿ ಬಿಡುತ್ತೀರಿ. ಕನ್ನಡ ನಾಡಿನ ಮಹಾನ್ ಪರಂಪರೆಗೆ, ಮುಖ್ಯಮಂತ್ರಿ ಸ್ಥಾನದ ಘನತೆಗೆ ಅಪಚಾರ ಎಸಗಬೇಡಿ‌. ಎಂದು ಮನವಿ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *