ಪ್ರವಾಹದಿಂದ ಈ ಬಾರಿ 8,071 ಕೋಟಿ ನಷ್ಟ

  • ಹಾನಿಗೀಡಾದ ಬೆಳೆ, ಮನೆಗಳಿಗೆ ಪರಿಹಾರ
  • ಕೇಂದ್ರ ಅಧ್ಯಯನ ತಂಡಕ್ಕೆ ಮುಖ್ಯಮಂತ್ರಿಗಳ ಮಾಹಿತಿ

 

ಬೆಂಗಳೂರು: ಪ್ರವಾಹದಿಂದಾಗಿ ಈ ಬಾರಿ ಸಹ ಭಾರೀ ಪ್ರಮಾಣದಲ್ಲಿ ಹಾನಿಯಾಗಿದ್ದು, 8,071 ಕೋಟಿ ರೂ.ನಷ್ಟ ಉಂಟಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೇಂದ್ರ ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದ್ದಾರೆ.

ಅತಿವೃಷ್ಟಿ ಹಾನಿ ಸಮೀಕ್ಷೆಗೆ ಬಂದಿರುವ ಕೇಂದ್ರ ತಂಡ ಸಿಎಂ ಸೇರಿದಂತೆ, ಸಚಿವ, ಅಧಿಕಾರಿಗಳ ಜೊತೆ ಸಭೆ ನಡೆಸಿತು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಪ್ರವಾಹದ ಹಾನಿಯ ಸಮೀಕ್ಷೆಗೆ ಕೇಂದ್ರ ಗೃಹ ಮಂತ್ರಾಲಯದ ಕೆ.ವಿ.ಪ್ರತಾಪ್ ನೇತೃತ್ವದ ತಂಡ ಆಗಮಿಸಿತ್ತು. ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳನ್ನು ತಂಡ ಭೇಟಿ ಮಾಡಿ ವಿವರ ಪಡೆಯಿತು. ಈ ವೇಳೆ ರಾಜ್ಯದಲ್ಲಿ ಹಾನಿಯಾಗಿರುವ ಕುರಿತು ಸಿಎಂ ವಿವರಿಸಿದರು.

ಈ ಬಾರಿಯ ಪ್ರವಾಹದಿಂದಾಗಿ ರಾಜ್ಯದಲ್ಲಿ ಒಟ್ಟು 8,071 ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿದೆ. 2018 ಮತ್ತು 2019 ರಲ್ಲಿಯೂ ರಾಜ್ಯದಲ್ಲಿ ಭಾರಿ ಪ್ರವಾಹ ಮತ್ತು ಭೂ ಕುಸಿತ ಉಂಟಾಗಿ 22 ಜಿಲ್ಲೆಗಳು ಸಂಕಷ್ಟಕ್ಕೆ ಸಿಲುಕಿದ್ದವು. ಈ ಬಾರಿಯ ಪ್ರವಾಹದಲ್ಲಿ ಸುಮಾರು 4.03 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳು ಹಾನಿಗೊಳಗಾಗಿವೆ. ರಸ್ತೆ, ಸೇತುವೆ, ವಿದ್ಯುತ್ ಪರಿವರ್ತಕಗಳು, ಶಾಲೆ, ಅಂಗನವಾಡಿ ಮತ್ತು ಸರ್ಕಾರಿ ಕಟ್ಟಡಗಳಿಗೆ ಹಾನಿ ಉಂಟಾಗಿದೆ ಎಂದು ತಿಳಿಸಿದರು.

ಪ್ರವಾಹಕ್ಕೀಡಾದ ಮನೆಗಳನ್ನು ಮರು ನಿರ್ಮಿಸಿ ಕೊಡುವ ಕಾರ್ಯವನ್ನು ಸರ್ಕಾರ ಮಾಡುತ್ತಿದ್ದು, `ಉತ್ತಮವಾಗಿ ಮರುನಿರ್ಮಿಸು’ ತತ್ವ ಆಧರಿಸಿ ವಿಕೋಪ ತಡೆಯಬಲ್ಲ ಮನೆಗಳನ್ನು ನಿರ್ಮಿಸುವ ಪುನರ್ ನಿರ್ಮಾಣ ಯೋಜನೆಗೆ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡುತ್ತಿದೆ. ಈ ಯೋಜನೆಯಡಿ ಸಂಪೂರ್ಣ ಹಾಳಾದ ಮನೆಗಳಿಗೆ 5 ಲಕ್ಷ ರೂ., ತೀವ್ರ ಹಾನಿಗೊಳಗಾದ ಮನೆಗಳಿಗೆ 3 ಲಕ್ಷ ರೂ., ಭಾಗಶಃ ಹಾನಿಗೊಳಗಾದ ಮನೆಗಳಿಗೆ 50,000 ರೂ. ಗಳಂತೆ ಧನ ಸಹಾಯ ನೀಡಲಾಗುತ್ತಿದೆ. ಕಳೆದ ವರ್ಷ 1,500 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ವರ್ಷವೂ ಸಹ ಕೋವಿಡ್ ಸಂಕಷ್ಟದ ನಡುವೆಯೂ 200 ಕೋಟಿ ರೂ.ಗಳನ್ನು ಸರ್ಕಾರ ಭರಿಸಲಿದೆ ಎಂದರು.

ರಾಜ್ಯ ವಿಕೋಪ ಅಪಾಯ ನಿರ್ವಹಣಾ ನಿಧಿಯಡಿ, ನಾಲ್ಕು ಪ್ರತ್ಯೇಕ ನಿಧಿ ಗವಾಕ್ಷಿಗಳನ್ನು ಕೇಂದ್ರ ಸರ್ಕಾರ ಸೃಜಿಸಿದೆ. ಆದರೆ ಕೋವಿಡ್ ನಿಂದಾಗಿ ನಮ್ಮ ಪ್ರಯತ್ನಗಳಿಗೆ ತಡೆಯುಂಟಾಗಿದೆ. ರಾಜ್ಯ ವಿಕೋಪ ನಿರ್ವಹಣಾ ಯೋಜನೆ-2020 ಅಡಿ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಪುನರ್ ನಿರ್ಮಾಣದ ಯೋಜನೆಗಳನ್ನು ಹೊಂದಿದೆ ಎಂದರು.

ಕೋವಿಡ್-19 ನಿಯಂತ್ರಣಕ್ಕೆ ಹಾಗೂ ಪ್ರವಾಹಕ್ಕಾಗಿ ರಾಜ್ಯ ವಿಕೋಪ ಪರಿಹಾರ ನಿಧಿಯಡಿ 460 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಹೆಚ್ಚಳ ಹಾಗೂ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಹೆಚ್ಚಿನ ಮೊತ್ತದ ಅಗತ್ಯವಿದೆ ಎಂದು ಸಿಎಂ ವಿವರಿಸಿದರು.

ರಾಜ್ಯ ವಿಕೋಪ ಪರಿಹಾರ ನಿಧಿ, ರಾಷ್ಟ್ರೀಯ ವಿಕೋಪ ಪರಿಹಾರ ನಿಧಿಯಡಿ ನೆರವು ಒದಗಿಸುವ ಮಾರ್ಗಸೂಚಿಗಳು ಈ ವರ್ಷವೇ ಪರಿಷ್ಕರಣೆಯಾಗಬೇಕಿದ್ದು, ಕೂಡಲೇ ಇದನ್ನು ಪರಿಷ್ಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ, ಸಂಕಷ್ಟದಲ್ಲಿರುವ ಜನರ ಸಹಾಯಕ್ಕೆ ಹೆಚ್ಚಿನ ಮೊತ್ತವನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳು ಕೇಂದ್ರದ ತಂಡಕ್ಕೆ ಮನವಿ ಮಾಡಿದರು.

ಈ ವೇಳೆ ಕೇಂದ್ರ ಆರ್ಥಿಕ ಇಲಾಖೆಯ ನಿರ್ದೇಶಕ ಡಾ.ಭರತೇಂದು ಕುಮಾರ್ ಸಿಂಗ್, ಕೃಷಿ ಮತ್ತು ರೈತರ ಸಹಕಾರ ಸಚಿವಾಲಯದ ನಿರ್ದೇಶಕ ಡಾ.ಮನೋಹರನ್, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧೀಕ್ಷಕ ಅಭಿಯಂತರ ಸದಾನಂದ ಬಾಬು, ಕೇಂದ್ರ ಜಲಶಕ್ತಿ ಸಚಿವಾಲಯದ ಅಧೀಕ್ಷಕ ಅಭಿಯಂತರ ಗುರುಪ್ರಸಾದ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿ ವಿ.ಪಿ.ರಾಜ್ ವೇದಿ, ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ, ಕಂದಾಯ ಸಚಿವ ಆರ್.ಅಶೋಕ್, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಕೃಷಿ ಸಚಿವ ಬಿ.ಸಿ.ಪಾಟೀಲ್, ವಸತಿ ಸಚಿವ ವಿ.ಸೋಮಣ್ಣ, ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಗೋಪಲಯ್ಯ, ಕಾನೂನು ಹಾಗೂ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ, ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಇದ್ದರು.

Donate Janashakthi Media

Leave a Reply

Your email address will not be published. Required fields are marked *