ಕಲಬುರಗಿ: ಜಿಲ್ಲೆಯಲ್ಲಿ 2019ರಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ, ಬೆಳೆ ಹಾನಿಯಾದವರಿಗೆ ಸರಕಾರದಿಂದ ಇನ್ನು ಪರಿಹಾರ ನೀಡಿಲ್ಲ. ನಂತರದಲ್ಲಿ ಮೂರು ಬಾರಿ ಮಳೆಯಿಂದಾಗಿ ಬೆಳೆಹಾನಿಯಾಗಿದೆ. ಇಲ್ಲಿನ ರೈತರಿಗೆ ಪರಿಹಾರದ ಹಣ ಸಿಗೋದು ಯಾವಾಗ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.
ಈ ಹಿಂದೆ ಪ್ರವಾಹ ಬಂದ ಸಂದರ್ಭದಲ್ಲಿ ನಾನು ಕಲಬುರಗಿ ಜಿಲ್ಲೆಗೆ ಭೇಟಿನೀಡಿ ಜನರ ಸಮಸ್ಯೆಗಳನ್ನು ಆಲಿಸಿದ್ದೆ. ನಷ್ಟಕ್ಕೀಡಾದ ರೈತರಿಗೆ ಕೂಡಲೇ ಪರಿಹಾರ ನೀಡುವಂತೆ ಸದನದ ಒಳಗೆ ಮತ್ತು ಹೊರಗೆ ಸರ್ಕಾರವನ್ನು ಒತ್ತಾಯಿಸಿದೆ, ಆದರೂ ಬಿಜೆಪಿ ಸರ್ಕಾರ ರೈತರಿಗೆ ನೆರವಾಗಿಲ್ಲ ಎಂದು ಆರೋಪಿಸಿದರು.
ಇದನ್ನು ಓದಿ: ಬಿಜೆಪಿ ಅವರಿಗೆ ಸರ್ಕಾರ ನಡೆಸಲು ತಾಕತ್ತಿಲ್ಲ: ಸಂಸದ ಡಿ ಕೆ ಸುರೇಶ್
ಸೇಡಂ ತಾಲೂಕಿನ ಗಡಿಕೇಶ್ವಾರದಲ್ಲಿ ಕಳೆದ ಹದಿನೈದು ದಿನಗಳಿಂದ ನಿರಂತರವಾಗಿ ಭೂಮಿ ಕಂಪಿಸುತ್ತಿದೆ, ಆದರೂ ಬಿಜೆಪಿಯ ಒಬ್ಬ ಜನಪ್ರತಿನಿಧಿಯಾಗಲೀ, ಜಿಲ್ಲಾ ಉಸ್ತುವಾರಿ ಸಚಿವರಾಗಲೀ, ಸಂಸದರಾಗಲೀ ಭೂಕಂಪ ಪೀಡಿತ ಪ್ರದೇಶಕ್ಕೆ ಭೇಟಿನೀಡಿಲ್ಲ. ಸರ್ಕಾರಕ್ಕೆ ಜನರ ಕಷ್ಟ ಕೇಳುವ ಮನಸ್ಸೇ ಇಲ್ಲ ಎಂದು ಹೇಳಿದರು.
ನಾನು ಗಡಿಕೇಶ್ವಾರ ಗ್ರಾಮಕ್ಕೆ ಹೋಗಿದ್ದೆ, ಗ್ರಾಮದ 75% ಜನ ಜೀವಭಯದಿಂದ ಮನೆ ಖಾಲಿ ಮಾಡಿ ಗುಳೆ ಹೋಗಿದ್ದಾರೆ. ಹೀಗೆ ಗುಳೆ ಹೋದವರು ಊಟ, ವಸತಿ, ಸೂರು ಇಲ್ಲದೆ ನಿರಾಶ್ರಿತರಾಗಿ ದಿನ ಕಳೆಯುತ್ತಿದ್ದಾರೆ. ಜನರ ಕಷ್ಟ ಕಂಡು ಸಂಕಟವಾಯಿತು. ಕೂಡಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಕರೆ ಮಾಡಿ ತುರ್ತಾಗಿ ಪರಿಹಾರ ಕಾರ್ಯವನ್ನು ಕೈಗೊಳ್ಳಬೇಕು ಎಂದು ಹೇಳಿದೆ. ನಾಳೆ ಬೆಳಿಗ್ಗೆ ಇಂದ ಜನರಿಗೆ ಅಗತ್ಯ ನೆರವು ನೀಡುತ್ತೇವೆ ಎಂದಿದ್ದಾರೆ.
ಸಮ್ಮಿಶ್ರ ಸರ್ಕಾರ ಉರುಳುವ ಸಂದರ್ಭದಲ್ಲಿ ಅಮೆರಿಕಾಗೆ ಹೋಗಿದ್ದು ಏಕೆ
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇದ್ದಾಗ ಕಾಂಗ್ರೆಸ್ ಮತ್ತು ಜೆಡಿ(ಎಸ್) ತೊರೆದು ಬಿಜೆಪಿ ಸೇರಿದವರು ಒಟ್ಟು 17 ಜನ ಶಾಸಕರು. ಇದರಲ್ಲಿ ಜೆಡಿ(ಎಸ್) ನ 3 ಶಾಸಕರಿದ್ದಾರೆ. ಅವರನ್ನು ನಾನೇ ಕಳಿಸಿದ್ದಾ ಕುಮಾರಸ್ವಾಮಿ ಅವರೇ? ನಿಮ್ಮ ಶಾಸಕರು ನಿಮ್ಮ ಮಾತು ಕೇಳ್ತಾರ ಇಲ್ಲ ನನ್ನ ಮಾತು ಕೇಳ್ತಾರಾ?
ಸಮ್ಮಿಶ್ರ ಸರ್ಕಾರ ಉರುಳುವ ಹಂತಕ್ಕೆ ಹೋದಾಗಲೂ ಕುಮಾರಸ್ವಾಮಿ ಅಮೇರಿಕಾಗೆ ಹೋಗಿ ಕೂತಿದ್ದು ಏಕೆ? ನಾನೇ ಫೋನ್ ಮಾಡಿ ಕುಮಾರಸ್ವಾಮಿ ಅವರೆ ಸರ್ಕಾರ ಬೀಳುವ ಹಂತಕ್ಕೆ ಹೋಗಿದೆ, ಭಾರತಕ್ಕೆ ಬನ್ನಿ ಎಂದರೆ ಬಂದರಾ? ಸರ್ಕಾರ ಉಳಿಸಿಕೊಳ್ಳುವ ಮನಸು ಕುಮಾರಸ್ವಾಮಿಗೇ ಇರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಪುಟಗೋಸಿ ಹುದ್ದೆ ಎಂದು ಕರೆಯುವ ಮೂಲಕ ಕುಮಾರಸ್ವಾಮಿ ಅವರು ಸಂವಿಧಾನಾತ್ಮಕ ಹುದ್ದೆಗೆ ಅವಮಾನ ಮಾಡಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಎಷ್ಟು ಗೌರವ ಕೊಡುತ್ತಾರೆ ಎಂದು ಇದರಿಂದಲೇ ತಿಳಿಯುತ್ತೆ ಎಂದರು.
ಇದನ್ನು ಓದಿ: ಸಮ್ಮಿಶ್ರ ಸರ್ಕಾರ ಮುಗಿದ ಅಧ್ಯಾಯ: ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್
ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗ ದೇವೇಗೌಡರು ವಿರೋಧ ಪಕ್ಷದ ನಾಯಕರಾಗಿದ್ದರು, ನಿಮ್ಮ ತಂದೆ ಕೂಡ ಪುಟಗೋಸೆ ಹುದ್ದೆಯಲ್ಲಿ ಇದ್ದದ್ದಾ ಕುಮಾರಸ್ವಾಮಿ ಅವರೇ? ಶಾಸಕರು, ಮಂತ್ರಿಗಳು ಮತ್ತು ಜನರ ಮಧ್ಯೆ ಇರಬೇಕಾದ ಮುಖ್ಯಮಂತ್ರಿ ತಾಜ್ ವೆಸ್ಟಂಡ್ ಹೋಟೆಲ್ ನಲ್ಲಿ ಕೂತು ಸರ್ಕಾರ ನಡೆಸಿದರೆ ಆ ಸರ್ಕಾರ ಎಷ್ಟು ದಿನ ಉಳಿದೀತು? ಸಮ್ಮಿಶ್ರ ಸರ್ಕಾರ ಉರುಳಲು ಕುಮಾರಸ್ವಾಮಿಯ ಬೇಜವಾಬ್ದಾರಿ ನಡವಳಿಕೆ ಕಾರಣ ಎಂದು ಹೇಳಿದರು.
2005 ರಲ್ಲಿ ಧರಂಸಿಂಗ್ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಾಸು ಪಡೆದ ಕುಮಾರಸ್ವಾಮಿ ಬಿಜೆಪಿ ಜೊತೆ ಕೈಜೋಡಿಸಿದ್ದು ಸನ್ಯಾಸತ್ವಕ್ಕಾಗಿಯೋ ಅಥವಾ ಅಧಿಕಾರಕ್ಕಾಗಿಯೋ? ಕುಮಾರಸ್ವಾಮಿ ಅವರ ಪಕ್ಷದ ಹೆಸರಲ್ಲಷ್ಟೇ ಜಾತ್ಯಾತೀತತೆ ಉಳಿದಿದೆ, ಅಧಿಕಾರ ಬೇಕಾದಾಗ ಕೋಮುವಾದಿ ಬಿಜೆಪಿ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂದರು.
ಯಡಿಯೂರಪ್ಪ ಅವರ ಹುಟ್ಟುಹಬ್ಬದ ದಿನ ಅವರನ್ನು ನಾನು ಕಡೇ ಬಾರಿ ಭೇಟಿಯಾದದ್ದು, ಆಮೇಲೆ ಒಂದು ದಿನವೂ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿಲ್ಲ. ಒಮ್ಮೆಯಾದರೂ ಭೇಟಿಮಾಡಿದ್ದನ್ನು ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ತೇನೆ.
ಯಡಿಯೂರಪ್ಪ ಬಿಜೆಪಿಯ ಮಾಜಿ ಮುಖ್ಯಮಂತ್ರಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ, ಗೃಹ ಸಚಿವ ಅಮಿತ್ ಶಾ ಕೂಡ ಅವರ ಪಕ್ಷದವರೆ, ರಾಜ್ಯದ ವಿರೋಧ ಪಕ್ಷದ ನಾಯಕನಾದ ನನ್ನ ಮಾತು ಕೇಳಿ ನರೇಂದ್ರ ಮೋದಿ ಸರ್ಕಾರ ಯಡಿಯೂರಪ್ಪ ಅವರ ಆಪ್ತರ ಮನೆ ಮೇಲೆ ಐಟಿ ರೇಡ್ ಮಾಡಿಸುತ್ತಾ? ಇದನ್ನು ಜನ ನಂಬುತ್ತಾರಾ ಎಂದು ಸಿದ್ದರಾಮಯ್ಯ ಹೇಳಿದರು.