ಕಾರವಾರ: ಮುಂಗಾರು ಮಳೆ ಹಾಗೂ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಆರ್ಭಟಕ್ಕೆ ಕಾಳಿ ನದಿ ಪ್ರವಾಹ ಉಂಟಾಗಿದ್ದರಿಂದ ಹಾನಿಗೊಳಗಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಪ್ರದೇಶಗಳಿಗೆ ಇಂದು ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರವಾಹದಿಂದ ಹಾನಿಗೊಳಗಾದ ಗ್ರಾಮಗಳ ಜನರೊಂದಿಗೆ ಸಭೆ ನಡೆಸಿ ಅಹವಾಲನ್ನು ಸ್ವೀಕರಿಸಿದ ಸಿದ್ದರಾಮಯ್ಯ ಹಲವು ಗ್ರಾಮಸ್ಥರು ತಮ್ಮ ನೋವನ್ನು ತೋಡಿಕೊಂಡರು. ತಮಗೆ ಪದೇ ಪದೇ ಪ್ರವಾಹದಿಂದ ಕಷ್ಟಕ್ಕೆ ಸಿಲುಕುವಂತಾಗಿದ್ದು, ಶಾಶ್ವತ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿಕೊಂಡರು.
ಇದನ್ನು ಓದಿ: ಸಿಎಂ ಬೊಮ್ಮಾಯಿ ಅವರಿಂದ ನೆರೆ ಪ್ರದೇಶಗಳ ಭೇಟಿ ಕೇವಲ ಕಾಟಾಚಾರವೇ: ಕಾಳಜಿ ಕೇಂದ್ರದಲ್ಲಿನ ಸಂತ್ರಸ್ತರ ಅಳಲು
ಕಾಳಿ ನದಿ ಉಕ್ಕಿ ಹರಿದ ಪರಿಣಾಮ ಕದ್ರಾ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಹೊರಬಿಟ್ಟಿದ್ದರಿಂದ ಕಾರವಾರ ತಾಲೂಕಿನ ಹಲವಾರು ಗ್ರಾಮಗಳು ಮುಳುಗಡೆಯಾಗಿದ್ದವು. ಅಲ್ಲದೆ, ಜುಲೈ 23 ರಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ನೆರೆ ಸೃಷ್ಟಿಯಾಗಿದೆ. ಇಲ್ಲಿನ ಕೆಲವು ಗ್ರಾಮಗಳಿಗೆ ಎದುರಾಗಿರುವ ಅನಾಹುತದಿಂದಾಗಿ ಜಲಾಶಯದ ಸಮೀಪ ಇರುವ ಮಲ್ಲಾಪುರ, ಕುರ್ನಿಪೇಟೆ, ಗಾಂಧಿನಗರ ಗ್ರಾಮಗಳಲ್ಲಿ ಮನೆಗಳೇ ಪ್ರವಾಹದಿಂದ ಕೊಚ್ಚಿ ಹೋಗಿದ್ದವು. ತಾಲೂಕಿನ ಕದ್ರಾ ಜಲಾಶಯದ ಸುತ್ತಮುತ್ತಲಿನ ಗ್ರಾಮಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ಸಿದ್ದರಾಮಯ್ಯ ಗ್ರಾಮಗಳಲ್ಲಿ ಪ್ರವಾಹದಿಂದ ಸಂಭವಿಸಿದ ಅಪಾರ ಹಾನಿ ಕುರಿತು ವೀಕ್ಷಣೆ ಮಾಡಿದರು.
ಇದಾದ ನಂತರ ಕೆಪಿಸಿ ಅಧಿಕಾರಿಗಳ ಸಭೆಯನ್ನು ನಡೆಸಿದ ಸಿದ್ದರಾಮಯ್ಯ ಯಾವುದೇ ಮುನ್ಸೂಚನೆ ನೀಡದೆ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಟ್ಟು ಜನರನ್ನ ಸಮಸ್ಯೆಗೆ ಸಿಲುಕಿಸಿದ್ದೀರಿ ಎಂದು ಅಧಿಕಾರಗಳನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ ನಿರಾಶ್ರಿತರಾದವರಿಗೆ ಕೆಪಿಸಿ ಕಾಲೋನಿಯಲ್ಲಿಯೇ ಉಳಿದುಕೊಳ್ಳಲು ಸೂರು ನೀಡುವಂತೆ ಆಜ್ಞೆ ಮಾಡಿದ್ದು, ಕಾಯಂ ಬದಲಿ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದರು.
ಸಿದ್ದರಾಮಯ್ಯ ಕೆಪಿಸಿ ಅಧಿಕಾರಿಗಳ ಜೊತೆ ಕಂದಾಯ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳಿಗೂ ಕ್ಲಾಸ್ ತೆಗೆದುಕೊಂಡರು. ಈ ಸಂದರ್ಭದಲ್ಲಿ ಮಾಜಿ ಸಚಿವ ಆರ್.ವಿ ದೇಶಪಾಂಡೆ, ಮಾಜಿ ಶಾಸಕರಾದ ಸತೀಶ್ ಸೈಲ್, ಮಂಕಾಳು ವೈದ್ಯ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ಆರ್.ವಿ ದೇಶಪಾಂಡೆ ಮಾತನಾಡಿ ಕೆಪಿಸಿ ಅಧಿಕಾರಿಗಳು ನೋಟಿಸ್ ನೀಡದೆ ನೀರು ಬಿಟ್ಟು ಅನಾಹುತಕ್ಕೆ ಕಾರಣವಾಗಿದ್ದಾರೆ. ಸೂಕ್ತ ಪರಿಹಾರ ಹಾನಿಗೊಳಗಾದವರಿಗೆ ಸರ್ಕಾರ ಕೊಡಬೇಕು ಎಂದು ಆಗ್ರಹಿಸಿದರು. ಇದಲ್ಲದೇ ವಿಧಾನಸೌದದಲ್ಲಿ ಈ ವಿಷಯ ಪ್ರಸ್ತಾಪಿಸುವುದಾಗಿ ತಿಳಿಸಿದರು.
ಇದನ್ನು ಓದಿ: ಕೃಷ್ಣಾ ನದಿಯಲ್ಲಿ ಹೆಚ್ಚಿದ ನೀರಿನ ಪ್ರವಾಹ: ನದಿ ಪಾತ್ರದ 60 ಗ್ರಾಮ ಜಲಾವೃತ
ಸಿದ್ದರಾಮಯ್ಯ ಕಾರವಾರ ನಂತರ ಅಂಕೋಲಾ ತಾಲೂಕಿನಲ್ಲಿ ಗಂಗಾವಳಿ ನದಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಂಕೋಲಾ ಪಟ್ಟಣದಲ್ಲೂ ನಿರಾಶ್ರಿತರ ಅಹವಾಲು ಸಭೆ ನಡೆಸಿದರು. ನಂತರ ಯಲ್ಲಾಪುರಕ್ಕೆ ತೆರಳಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ವೀಕ್ಷಣೆ ನಡೆಸಿದರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿದ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶದ ಜನರಿಗೆ ಸಾಂತ್ವಾನ ಹೇಳಲು ಮುಂದಾಗಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲೂ ಸಾಕಷ್ಟು ಸಂಚಲನ ಮೂಡಿಸಿದೆ.