ಪ್ರತಿ ಟನ್‌ ಕಬ್ಬಿಗೆ ರೂ.5 ಸಾವಿರ ನೀಡಲು ಪ್ರಾಂತ ರೈತ ಸಂಘ ಆಗ್ರಹ

ಕಲಬುರಗಿ: ಪ್ರತಿ ಟನ್‌ ಕಬ್ಬಿಗೆ ರೂ.5 ಸಾವಿರ ನೀಡಬೇಕು ಮತ್ತು ಕಬ್ಬು ಬೆಳೆಗಾರರಿಗೆ ಸಮಸ್ಯೆಗೆ ಸ್ಪಂದಿಸಬೇಕೆಂದು ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಕಬ್ಬಿನ ಸಮೇತ  ಪ್ರತಿಭಟನೆ ನಡೆಸಿದರು.

ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಂದ ನಿರಂತರವಾಗಿ ಅನ್ಯಾಯವಾಗಿದ್ದು, ಸೂಕ್ತ ಬೆಲೆ ನೀಡುತ್ತಿಲ್ಲ. ಉಪ ಉತ್ಪನ್ನಗಳ ಲಾಭವನ್ನು ರೈತರಿಗೆ ಹಂಚಿಕೆ ಮಾಡುತ್ತಿಲ್ಲ ಮತ್ತು ಬಾಕಿ ಹಣ ಪಾವತಿಸುತ್ತಿಲ್ಲ. ಆದರೂ, ಜಿಲ್ಲಾಡಳಿತ ರೈತರಿಗೆ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣವೇ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ, ರೈತರು, ಜಿಲ್ಲೆಯ ಜನಪ್ರತಿನಿಧಿಗಳ ಸಭೆ ನಡೆಸಿ ಜಿಲ್ಲಾಡಳಿತ ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು. ಕಬ್ಬು ಬೆಳೆಗಾರರ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಸದನದಲ್ಲಿ ಧ್ವನಿ ಎತ್ತಬೇಕು. 2021-22ರ ಸಾಲಿಗೆ ಶೇಕಡಾ 9.5 ಇಳುವರಿಗೆ ರೂ.5 ಸಾವಿರ ಮೊತ್ತವನ್ನು ಪ್ರತಿ ಟನ್‌ ಕಬ್ಬಿಗೆ ನೀಡಬೇಕು. ರಾಜ್ಯ ಸರ್ಕಾರ ಸಲಹಾ ಬೆಲೆ ಕಬ್ಬು ನಾಟಿಗೆ ಮೊದಲೇ ಪ್ರತಿ ವರ್ಷ ಘೋಷಿಸಬೇಕೆಂದು ಒತ್ತಾಯಿಸಿದರು.

ಉಪ ಉತ್ಪನ್ನಗಳಾದ ಪ್ರಸ್‌ಮಡ್‌, ಬಗಾಸಸ್‌, ಎಥೆನಾಲ್‌ ಸೇರಿ ಮುಂತಾದವುಗಳ ಲಾಭ ರೈತರೊಂದಿಗೆ ಹಂಚಿಕೊಳ್ಳಬೇಕು. ಮುಚ್ಚಿರುವ ಕಾರ್ಖಾನೆಗಳನ್ನು ತೆರೆಯಬೇಕು, ಎಥೆನಾಲ್‌ ಉತ್ಪಾದನೆ ಹೆಚ್ಚಿಸಬೇಕು, ಸಹಕಾರಿ ಹಾಗೂ ಸಾರ್ವಜನಿಕ ಸಕ್ಕರೆ ಕಾರ್ಖಾನೆಗಳ ಖಾಸಗೀಕರಣ ಮಾಡಬಾರದು ಎಂದು ಒತ್ತಾಯಿಸಿದರು.

ಕಬ್ಬು ಬೆಲೆ ನಿರ್ಧರಿಸಲು ಆದಾಯ ಹಂಚಿಕೆ ಸೂತ್ರ ಶಾಸನ ರೂಪಿಸಲು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದು, ಕೇಂದ್ರದ ಈ ಆದೇಶ ರದ್ದು ಮಾಡಬೇಕು. ಕಬ್ಬು ಖರೀದಿ ಹಣ ಕಂತುಗಳಲ್ಲಿ ಪಾವತಿಸುವ ಪ್ರಸ್ತಾಪ ವಾಪಸ್‌ ಪಡೆಯಬೇಕು ಮತ್ತು 14 ದಿನದಲ್ಲಿ ಬಾಕಿ ಹಣ ಪಾವತಿಸಬೇಕು. ರೈತರ ಕಬ್ಬು ಸಮಯಕ್ಕೆ ಸರಿಯಾಗಿ ಕಟಾವು ಮಾಡಬೇಕು. ಮಹಾರಾಷ್ಟ್ರ ಮತ್ತು ಪಕ್ಕದ ಜಿಲ್ಲೆಯ ಕಬ್ಬು ತಂದು ಇಲ್ಲಿ ನುರಿಸುತ್ತಿದ್ದು, ಜಿಲ್ಲೆಯ ರೈತರ ಕಬ್ಬು ಕಟಾವು ಮಾಡುತ್ತಿಲ್ಲ. ಇದರಿಂದ ನಿರಂತರ ಅನ್ಯಾಯವಾಗುತ್ತಿದೆ. ಇದನ್ನು ಸರಿಪಡಿಸಬೇಕೆಂದು ಪ್ರತಿಭಟನಾನಿರತರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಮುಖಂಡರಾದ ಪಾಂಡುರಂಗ ಮಾವಿನಕರ, ಎಂ.ಬಿ.ಸಜ್ಜನ, ಅಮೃತರಾವ ಪಾಟೀಲ, ಸಿದ್ದರಾಮ ಧನ್ನೂರ, ಗುರು ಚಾಂದಕವಟೆ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Donate Janashakthi Media

Leave a Reply

Your email address will not be published. Required fields are marked *