ಬೆಂಗಳೂರು,ಫೆ. 11 : ಜನವರಿ 01, 2021 ರಿಂದ ಪತ್ರಿ ಕೆ.ಜಿ ಕೋಳಿ ಸಾಕಾಣಿಕೆ ದರವನ್ನು 7.50 ನಿಗದಿ ಮಾಡುವುದಾಗಿ ಕರ್ನಾಟಕ ರಾಜ್ಯ ಪಶು ಸಂಗೋಪನ ಇಲಾಖೆ ನಿರ್ದೇಶಕರು, ಕುಂದು ಕೊರತೆ ಪರಿಹಾರ ಅಧ್ಯಕ್ಷರು ಸಭೆ ನಡೆಸಿ ತಾತ್ಕಾಲಿಕವಾಗಿ ಜನವರಿ 01 2021 ರಿಂದ ಜಾರಿಮಾಡಲು ಆದೇಶ ಹೊರಡಿಸಿದ್ದರು. ಅದರ ಅನ್ವಯ ಕಂಪನಿಗಳು ದರವನ್ನು ನಿಗದಿ ಮಾಡದಿರುವುದನ್ನು ಖಂಡಿಸಿ, ಮತ್ತು ಸಂಬಂಧಿಸಿದ ಇಲಾಖೆಯ ನಿರ್ಲಕ್ಷ್ಯವನ್ನು ವಿರೋಧಿಸಿ ರಾಜ್ಯ ಮಟ್ಟದ ಕೋಳಿ ಸಾಕಾಣಿಕೆದಾರ ರೈತರ ಪ್ರತಿಭಟನಾ ಧರಣಿ ನಡೆಸುವುದಾಗಿ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ದಿ ಸಂಘ ತಿಳಿಸಿದೆ.
ತಜ್ಞರ ಸಮಿತಿಯ ವರದಿಯಂತೆ ಶಾಶ್ವತ ಸೂತ್ರದಂತೆ, ಅಂತಿಮ ಮಾಡುವ ತಿರ್ಮಾನ ಕೈಗೊಂಡಿದೆ. ಆದರೆ ಈ ವರೆಗೆ ಇಲಾಖೆಯ ಸಭೆಯ ತಿರ್ಮಾನದಂತೆ ಯಾವ ಕಂಪನಿಯೂ ದರಗಳನ್ನು ನೀಡುತ್ತಿಲ್ಲ. ಇದನ್ನು ಜಾರಿ ಮಾಡಬೇಕಾದ ಪಶು ಸಂಗೋಪನ ಇಲಾಖೆ ಮತ್ತು ರಾಜ್ಯ ಸರ್ಕಾರ ದೃಢವಾದ ಕ್ರಮವನ್ನು ಕೈಗೊಮಡಿಲ್ಲ. ಇಲಾಖೆ ಈ ನಿರ್ಲಕ್ಷ್ಯವನ್ನು ವಿರೋಧಿಸಿ ಫೆಬ್ರವರಿ 16 ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಪಶು ಭವನದ ಮುಂದೆ ರಾಜ್ಯ ಮಟ್ಟದ ಕೋಳಿ ಸಾಕಾಣಿಕೆದಾರ ರೈತರ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳುವುದಾಗಿ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ದಿ ಸಂಘ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜ್ಯದಲ್ಲಿ ಹತ್ತಾರು ಸಾವಿರ ರೈತರು ಕೋಳಿ ಸಾಕಾಣಿಕೆಯಲ್ಲಿ ತೊಡಗಿದ್ದಾರೆ. ಅದರಲ್ಲಿ ಕಂಪನಿಗಳ ಜೊತೆ ಒಪ್ಪಂದದ ಆಧಾರದಲ್ಲಿ ಕೋಳಿ ಸಾಕಾಣಿಕೆಯಲ್ಲಿ ತೊಡಗಿರುವವರ ಸಂಖ್ಯೆ ಅತಿ ಹೆಚ್ಚು. ಈ ಕೋಳಿ ಸಾಕಾಣಿಕೆ ರೈತರು ಹತ್ತಾರು ಲಕ್ಷ ಬಂಡವಾಳ ಹೂಡಿದ್ದಾರೆ. ಅದರಲ್ಲಿ ಈಗಾಗಲೇ ಬಹುಸಂಖ್ಯಾತರು ನಷ್ಟಕ್ಕೆ ಒಳಗಾಗಿ ಬ್ಯಾಂಕ್ ಸಾಲವನ್ನು ತೀರಿಸಲಾಗದೇ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ರೈತರ ದುಡಿಮೆಗೆ ಕಂಪನಿಗಳಿಂದ ಸಾಕಾಣಿಕೆ ದರ ಪಡೆಯಲು ಸಾಧ್ಯವಾಗದಿರುವುದು. ಕಂಪನಿಗಳು ಮತ್ತು ರೈತರ ನಡುವೇ ಆಗುತ್ತಿರುವ ಒಪ್ಪಂದಗಳು ಕಂಪನಿಗಳ ಪರವಾಗಿದ್ದು, ಹತ್ತಾರು ವರ್ಷಗಳಿಂದ ರೈತರಿಗೆ ಮೋಸ ಮಾಡುತ್ತಾ ಬರಲಾಗುತ್ತಿದೆ.
ಈ ವಿಚಾರಕ್ಕೆ ಇಲಾಖೆ ಮಧ್ಯಪ್ರವೇಶ ಮಾಡದೇ ತಮಗೆ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದೆ. ಸಾವಿರಾರು ಕೋಟಿ ರೂ ಗಳ ವ್ಯವಹಾರ ನಡೆಸುತ್ತಿರುವ ಬಹತೇಕ ಕಂಪನಿಗಳು ಸೂಪರ್ ಲಾಭ ಪಡೆಯುತ್ತಿವೆ. ಆದರೆ ರೈತರ ಶ್ರಮದಿಂದ ಉತ್ಪಾದನೆಯಾಗುತ್ತಿರುವ ಈ ಸಂಪತ್ತಿನಲ್ಲಿ ಲಾಭವನ್ನು ಹಂಚಿಕೊಳ್ಳಲು ಕಂಪನಿಗಳು ಸಿದ್ದವಿಲ್ಲ. ಹಾಗಾಗಿ ಈ ನೀತಿಯನ್ನು ವಿರೋಧಿಸಿ ನಾವು ಪ್ರತಿಭಟನೆಯನ್ನು ಕೈಗೊಳ್ಳುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ದಿ ಸಂಘದ ಗೌರವಾಧ್ಯಕ್ಷರಾದ ಜಿ.ಸಿ ಬಯ್ಯಾರೆಡ್ಡಿ ತಿಳಿಸಿದ್ದಾರೆ.