ಹಾವೇರಿ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಕಳೆದರು ಕೂಡಾ ವಿದ್ಯಾರ್ಥಿ ಸಮುದಾಯ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ಹಾವೇರಿ ಜಿಲ್ಲಾ ಕೇಂದ್ರವಾಗಿ 25 ವರ್ಷಗಳಾಗಿವೆ. ಆದರೂ, ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ ವಿದ್ಯಾರ್ಥಿ ಸಮುದಾಯ ನೂರಾರು ಸಮಸ್ಯೆಗಳನ್ನು ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ಇವೆಲ್ಲವೂಗಳ ನಡುವೆ ಕಾನೂನು ವಿದ್ಯಾಭ್ಯಾಸ ಕೈಗೊಳ್ಳು ಕಾನೂನು ಕಾಲೇಜುಗಳು ಇಲ್ಲವಾಗಿದೆ ಹಾಗಾಗಿ, ಪ್ರಸಕ್ತ ವರ್ಷ ವರ್ಷದಿಂದಲೇ ಕಾನೂನು ತರಗತಿ ಪ್ರಾರಂಭಿಸುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ಸರ್ಕಾರಕ್ಕೆ ಮನವಿ ಮಾಡಿದೆ.
ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ ನೇತೃತ್ವದಲ್ಲಿ, ಎಸ್‌ಎಫ್‌ಐ ವಿದ್ಯಾರ್ಥಿ ಸಂಘಟನೆಯ ಮುಖಂಡರ ತಂಡ ತಹಶೀಲ್ದಾರ ಕಛೇರಿಗೆ ಭೇಟಿ ನೀಡಿ, ಉಪತಹಶೀಲ್ದಾರ್ ನಾಗರತ್ನ ಎನ್ ಕಾಳೆ ಅವರ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
ಇದುವರೆಗೂ ಇಲ್ಲಿ ಆಳ್ವಿಕೆ ಮಾಡಿದ ಸಚಿವರು, ಶಾಸಕರು, ಸಂಸದರು ಹಾಗೂ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯತೆಯಿಂದಾಗಿ ವಿದ್ಯಾರ್ಥಿ ಸಮುದಾಯಕ್ಕೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಒದಗಿಸದೆ ಅವರನ್ನು ವಿದ್ಯಾಭ್ಯಾಸದಿಂದ ವಂಚಿತರನ್ನಾಗಿಸಲು ಹೊರಟಿದೆ. ನೂರಾರು ವಿದ್ಯಾರ್ಥಿಗಳು ಇವತ್ತು ಪದವಿ ಮುಗಿಸಿ ಉನ್ನತ ಶಿಕ್ಷಣ ಪಡೆಯಬೇಕು ಅದರಲ್ಲೂ ವಕೀಲರಾಗಬೇಕೆಂದು ಕನಸು ಕಟ್ಟಿಕೊಂಡಿರುತ್ತಾರೆ.
ಆದರೆ, ಹಾವೇರಿ ಜಿಲ್ಲೆಯಲ್ಲಿ ಸರ್ಕಾರಿ ಕಾನೂನು ಕಾಲೇಜು ಇಲ್ಲದೆ ಬೇರೆ ಬೇರೆ ಜಿಲ್ಲೆಗಳ ಕಡೆ ವಿದ್ಯಾರ್ಥಿಗಳು ಮುಖ ಮಾಡುವಂತಾಗಿದೆ. ಇಡೀ ಜಿಲ್ಲೆಯಲ್ಲಿ ಒಂದೇ ಒಂದು ಖಾಸಗಿ ಕಾನೂನು ಕಾಲೇಜು ಇದ್ದು ಅದು ರಾಣೇಬೆನ್ನೂರ ನಲ್ಲಿರುವುದರಿಂದ ಬೇರೆ ಬೇರೆ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಸಿಗದಿರುವುದು ಹಾಗೂ ಸರ್ಕಾರಿ ಶುಲ್ಕಕ್ಕಿಂತ ದುಪ್ಪಟ್ಟು ಶುಲ್ಕ ವಸೂಲಿ ಮಾಡುವುದರಿಂದ ಸಾಮಾನ್ಯ ಬಡ ವಿದ್ಯಾರ್ಥಿಗಳಿಗೆ ಕಾನೂನು ಪದವಿ ಪಡೆಯುವುದು ಅಸಾದ್ಯವಾಗಿದೆ. ಅನಿವಾರ್ಯವಾಗಿ ದಾವಣಗೆರೆ, ಹುಬ್ಬಳ್ಳಿ – ಧಾರವಾಡ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಗೆ ಮೊರೆ ಹೋಗಬೇಕಾಗಿದೆ ಪರಿಸ್ಥಿತಿ ಎದುರಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಎಸ್ಎಫ್ಐ ಸಂಘಟನೆಯು ಅನೇಕ ವರ್ಷಗಳಿಂದ ಹಾವೇರಿ ಜಿಲ್ಲೆಗೊಂದು ಕಾನೂನು ಕಾಲೇಜು ಮಂಜೂರು ಮಾಡುವಂತೆ ಹೋರಾಟ ಮಾಡುತ್ತಾ ಬಂದಿದೆ. ಹೋರಾಟದ ಪ್ರತಿಫಲವಾಗಿ ಕಳೆದ ಆಯವ್ಯಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಹಾಗಾಗಿ ಕಾನೂನು ಪದವಿ ಪಡೆಯಬಯಸುವ ನೂರಾರು ವಿದ್ಯಾರ್ಥಿಗಳು ಹಾವೇರಿಯಲ್ಲಿ ಸರ್ಕಾರಿ ಕಾಲೇಜು ಪ್ರಾರಂಭವಾಗಬಹುದು ಎಂದು ಎದುರು ನೋಡುತ್ತಾ ಕುಳಿತ್ತಿದ್ದಾರೆ.
ಇವೆಲ್ಲವುಗಳ ನಡುವೆ ಇತ್ತೀಚಿಗೆ ಜನಪತ್ರಿನಿಧಿಗಳು, ಅಧಿಕಾರಿಗಳು ಸೇರಿದಂತೆ ಜನರು ಸುಳ್ಳು ವದಂತಿ ಹರಡಿದ್ದಾರೆ. ನೆಲೊಗಲ್ ಗುಡ್ಡದಲ್ಲಿ ಕಟ್ಟಡ ಪ್ರಾರಂಭವಾಗಿದೆ ಎಂದು, ಆದರೆ ಅದು ಐಟಿಐ ಟ್ರೈನಿಂಗ್ ಸೆಂಟರ್ ಆಗಿದೆ. ಅಲ್ಲಿ ಕಾನೂನು ಕಾಲೇಜು ಪ್ರಾರಂಭಿಸುವ ಕುರಿತು ಯಾವುದೇ ರೀತಿಯ ಬೆಳವಣಿಗೆ ಕಂಡು ಬಂದಿರುವುದಿಲ್ಲ.
ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು, ಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಗಮನಾಹರಿಸಿ ಪ್ರಸಕ್ತ ವರ್ಷದಲ್ಲೇ ಕಾನೂನು ತರಗತಿಗಳನ್ನು ಪ್ರಾರಂಭಿಸುವಂತೆ ಎಸ್ಎಫ್ಐ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಎಸ್‌ಎಫ್‌ಐ ಮುಖಂಡರಾದ ಅರುಣ್ ಕಡಕೋಳ, ಕಾವ್ಯ ಹನಗೊಡಿಮಠ, ನಿವೇದಿತಾ ಹೀರೆಮಠ, ವಿವೇಕ್ ಫನಾಸೆ ಉಪಸ್ಥಿತರಿದ್ದರು.