ತುಮಕೂರು: ಜಿಲ್ಲೆಯ ಗುಬ್ಬಿ ತಾಲ್ಲೂಕು ಚೇಳೂರು ಹೋಬಳಿ ವ್ಯಾಪ್ತಿಯ ರೈತರ ಭೂಮಿ ಹಕ್ಕು ಹೋರಾಟದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಇಂದು ತುಮಕೂರು ಜಿಲ್ಲಾ ಉಪ ಸಂರಕ್ಷಣಾಧಿಕಾರಿ ಅನುಪಮ ಅವರೊಂದಿಗೆ ಸಭೆ ನಡೆದಿದ್ದು, ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಮುಖಂಡರ ಮಾತುಕತೆ ನಡೆಯಿತು.
ಕೆಪಿಆರ್‌ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ, ಬಗರ್ ಹುಕಂ ಸಾಗುವಳಿ ಸಕ್ರಮ ಕೋರಿ ಸಲ್ಲಿಸಿರುವ ಪಾರಂ 50,53,57 ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇರುವಾಗ, ಕಾನೂನು ಬಾಹಿರವಾಗಿ ಒಕ್ಕಲೆಬ್ಬಿಸಬಾರದು ಮತ್ತು ರೈತರ ಸ್ವಾಧೀನಕ್ಕೆ ತೊಂದರೆ ಉಂಟುಮಾಡಬಾರದು. ಅರ್ಜಿ ಪುರಸ್ಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ಸಕ್ರಮಾತಿ ಸಮಿತಿಗೆ ಮಾತ್ರ ಇರುವುದು. ಶಾಸಕರ ಅಧ್ಯಕ್ಷತೆಯ ಸಮಿತಿ ಅಧಿಕಾರವನ್ನು ಅರಣ್ಯ ಇಲಾಖೆ ಚಲಾಯಿಸಲು ಅವಕಾಶ ಇಲ್ಲ ಎಂದು ಹೇಳಿದರು.
ಇದನ್ನು ಓದಿ: ಬಗರ್‌ಹುಕುಂ ಸಾಗುವಳಿದಾರರ ಹಕ್ಕು ಪತ್ರಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ
ಆದರೆ ಅರಣ್ಯಾಧಿಕಾರಿಗಳು ,ಅರಣ್ಯ ಭೂಮಿಯಲ್ಲಿ ರೈತರು ಸಲ್ಲಿಸಿರುವ ಅರ್ಜಿಗಳಿಗೆ ಮನ್ನಣೆ ನೀಡುವುದಿಲ್ಲ ಎಂದು ತಿಳಿಸಿದರು. ಅಂತಿಮವಾಗಿ ಜಿಲ್ಲಾಧಿಕಾರಿ ಮಧ್ಯಪ್ರವೇಶ ಕೋರಿ ಸಭೆ ಮುಕ್ತಾಯಗೊಳಿಸಲಾಯಿತು.
ರೈತರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ಕರೆದು ಜಿಲ್ಲಾಧಿಕಾರಿ ತೀರ್ಮಾನ ಮಾಡುವವರೆಗೂ ಅರಣ್ಯ ಅಧಿಕಾರಿಗಳು ರೈತರ ಸಾಗುವಳಿ ಭೂಮಿಯಲ್ಲಿ ಯಾವುದೇ ಕಾಮಗಾರಿ ಮಾಡಬಾರದು ಎಂದು ಅರಣ್ಯಾಧಿಕಾರಿಗಳಿಗೆ ವಿನಂತಿಸಲಾಯಿತು.
ಇದನ್ನು ಓದಿ: ರೈತರನ್ನು ಒಕ್ಕಲೆಬ್ಬಿಸಲು ಯತ್ನಿಸಿದ ಅರಣ್ಯ ಇಲಾಖೆ ವಿರುದ್ಧ ಪ್ರಾಂತ ರೈತ ಸಂಘ ಪ್ರತಿಭಟನೆ
ಸಭೆಯನ್ನು ಜಿಲ್ಲಾ ಪಂಚಾಯತಿ ಸದಸ್ಯರಾದ ಶಿವಲಿಂಗಯ್ಯ, ಕೆಪಿಆರ್‌ಎಸ್ ಜಿಲ್ಲಾ ಅಧ್ಯಕ್ಷ ಚೆನ್ನಬಸವಣ್ಣ, ಉಪಾಧ್ಯಕ್ಷ ಎನ್ ಕೆ ಸುಬ್ರಹ್ಮಣ್ಯ, ಕಾರ್ಯದರ್ಶಿ ಸಿ ಅಜ್ಜಪ್ಪ, ಮುಖಂಡರಾದ ದೊಡ್ಡನಂಜಯ್ಯ ,ಬಸವರಾಜು, ನರಸಿಂಹಮೂರ್ತಿ, ಕೋದಂಡಪ್ಪ, ಲೋಕೇಶ್, ಯಾದವ ಮೂರ್ತಿ ಮುಂತಾದವರು ಭಾಗವಹಿಸಿದ್ದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ