ಪ್ರಜ್ವಲ್ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಆ.29ಕ್ಕೆ ಮುಂದೂಡಿಕೆ : ‘ರೇವಣ್ಣ ರಿಪಬ್ಲಿಕ್‌ʼ ಪದಪುಂಜ ಬಳಕೆಗೆ ಸಮರ್ಥನೆ

‘ರೇವಣ್ಣ ರಿಪಬ್ಲಿಕ್‌ʼ ಪದಪುಂಜ ಬಳಕೆಗೆ ಪ್ರೊ. ಕುಮಾರ್‌ ಸಮರ್ಥನೆ
ಬೆಂಗಳೂರು : ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರವನ್ನು ಹೈಕೋರ್ಟ್ ಆ.29 ಕ್ಕೆ ಮುಂದೂಡಿದೆ. ವಿಚಾರಣೆ ನಡೆಸಿದ ಹೈಕೋರ್ಟ್‍ನ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಆಕ್ಷೇಪಣೆ ಸಲ್ಲಿಸಲು ವಿಶೇಷ ಅಭಿಯೋಜಕರಿಗೆ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿದೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ಕೋರಿರುವ ಮತ್ತು ಬೆಂಗಳೂರು ಸೈಬರ್‌ ಅಪರಾಧ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್‌ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಗುರುವಾರ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ವಿಶೇಷ ತನಿಖಾ ದಳದ (ಎಸ್‌ಐಟಿ) ವಿಶೇಷ ಸರ್ಕಾರಿ ಅಭಿಯೋಜಕರಾದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು “ಆಕ್ಷೇಪಣೆ ಸಲ್ಲಿಸಲು ಎರಡು ವಾರ ಕಾಲಾವಕಾಶ ನೀಡಬೇಕು” ಎಂದು ಕೋರಿದರು. ಇದನ್ನು ನ್ಯಾಯಾಲಯ ಪುರಸ್ಕರಿಸಿತು.

ಎಫ್‌ಐಆರ್‌ ರದ್ದು ಅರ್ಜಿ ವಿಚಾರಣೆ ಮುಂದೂಡಿಕೆ

ಪುತ್ರ ಪ್ರಜ್ವಲ್‌ನನ್ನು ರಕ್ಷಿಸಲು ಅತ್ಯಾಚಾರ ಆರೋಪ ಮಾಡಿದ್ದ ಮನೆಕೆಲಸದ ಮಹಿಳೆಯನ್ನು ಅಪಹರಣ ಮಾಡಿಸಿದ ಸಂಬಂಧ ಮೈಸೂರು ಜಿಲ್ಲೆಯ ಕೆ ಆರ್‌ ನಗರ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ಜೆಡಿಎಸ್‌ ಶಾಸಕ ಎಚ್‌ ಡಿ ರೇವಣ್ಣ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಮುಂದೂಡಿದೆ.

ಅರ್ಜಿದಾರರ ಪರವಾಗಿ ಹಾಜರಾಗಿದ್ದ ಜಿ ಅರುಣ್‌ ಅವರು “ಎಸ್‌ಐಟಿಯು ಸಂಬಂಧಿತ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ. ನಮಗೆ ಇನ್ನೂ ಸರ್ಟಿಫೈಡ್‌ ಆರೋಪ ಪಟ್ಟಿ ಸಿಕ್ಕಿಲ್ಲ. ಹೀಗಾಗಿ, ವಿಚಾರಣೆ ಮುಂದೂಡಬೇಕು” ಎಂದರು.

ಆಗ ಪೀಠವು “ಆರೋಪ ಪಟ್ಟಿಯಲ್ಲಿ ಹಲವು ಸಂಪುಟಗಳಿವೆ. ಅದನ್ನು ಪಡೆಯುವುದು ಕಷ್ಟ” ಎಂದು ಲಘು ದಾಟಿಯಲ್ಲಿ ಹೇಳಿತು. ಇದಕ್ಕೆ ಪ್ರೊ. ರವಿವರ್ಮ ಕುಮಾರ್‌ ಅವರು “ಈ ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಸುವುದಕ್ಕೂ ಮುಂಚೆಯೇ ಆಕ್ಷೇಪಣೆ ಸಲ್ಲಿಸಲಾಗಿದೆ” ಎಂದರು.

ಆಗ ಪೀಠವು ಎರಡೂ ಪ್ರಕರಣಗಳ ವಿಚಾರಣೆಯನ್ನು ಆಗಸ್ಟ್‌ 29ಕ್ಕೆ ಮುಂದೂಡಲಾಗುವುದು ಎಂದಿತು.

ರೇವಣ್ಣ ರಿಪಬ್ಲಿಕ್:‌ ಪ್ರೊ. ರವಿವರ್ಮ ಕುಮಾರ್‌ ಸಮರ್ಥನೆ

ಕಳೆದ ವಿಚಾರಣೆಯಲ್ಲಿ ಹಾಸನವನ್ನು ಉಲ್ಲೇಖಿಸಿ ತಾನೇಕೆ ʼರೇವಣ್ಣ ರಿಪಬ್ಲಿಕ್‌ʼ ಎಂದಿದ್ದೆ ಎಂಬುದಕ್ಕೆ ಪ್ರೊ.ಕುಮಾರ್‌ ಇಂದು ನ್ಯಾಯಾಲಯದಕ್ಕು ದಾಖಲೆಗಳನ್ನು ಓದುವ ಮೂಲಕ ಸಮರ್ಥನೆ ನೀಡಿದರು.

“ಮನೆ ಕೆಲಸ ಮಾಡಿಕೊಂಡಿದ್ದ ಸಂತ್ರಸ್ತೆಗೆ ಅಪ್ಪ –ಮಕ್ಕಳು (ರೇವಣ್ಣ-ಪ್ರಜ್ವಲ್‌) ಏನು ಮಾಡುತ್ತಿದ್ದರು ಎಂಬುದನ್ನು ಆಕೆ ವಿವರಿಸಿದ್ದಾರೆ. ನನ್ನ ಮೇಲೆ ಅನೇಕ ಬಾರಿ ಲೈಂಗಿಕ ಕಿರುಕುಳ ದಾಳಿ ನಡೆದಿತ್ತು. ಹೀಗಾಗಿ, ನಾನು ಹೆದರಿ ಓಡುತ್ತಿದ್ದೆ. ಇದನ್ನು ಬೇರೆ ಯಾರಿಗಾದರೂ ಹೇಳಿಕೊಳ್ಳೋಣ ಎಂದರೆ ನನ್ನ ಮೇಲೆ ಕಳಂಕ ಮತ್ತು ಕಳ್ಳತನದ ಆರೋಪ ಮಾಡುತ್ತಾರೆ ಎಂದು ಅಲ್ಲಿ ಕೆಲಸ ಮಾಡುತ್ತಿದ್ದವರು ಹೆದರಿಕೆ ಹುಟ್ಟಿಸಿದ್ದರು. ಹೀಗಾಗಿ, ಕೆಲಸ ಬಿಟ್ಟಿದ್ದೆ” ಎಂದು ತಿಳಿಸಿದ್ದಾರೆ.

“ಆಕೆಗೆ ಆಶ್ರಯ ಯೋಜನೆ ಅಡಿಯಲ್ಲಿ ಮಂಜೂರಾಗಿದ್ದ ಮನೆಯನ್ನು ಕಸಿದು, ಆಕೆಯನ್ನು ಹೊರಗೆ ಹಾಕಿಸಿ ಕಿರುಕುಳ ಕೊಟ್ಟಿದ್ದಾರೆ. ಆ ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಹಾಗೂ ಒಡವೆಗಳನ್ನೂ ಆಕೆಗೆ ಕೊಟ್ಟಿರುವುದಿಲ್ಲ. ಆಕೆಯನ್ನು ಮನೆಯಿಂದ ಹೊರಗೆ ಹಾಕಿದ್ದಕ್ಕೆ ಹೊಳೆನರಸೀಪುರ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ದೂರು ಸ್ವೀಕರಿಸರಿಲಿಲ್ಲ. ಆನಂತರ ಆಕೆ ಹಾಸನ ಜಿಲ್ಲಾಧಿಕಾರಿಗೂ ದೂರು ನೀಡಿದ್ದರು. ಇದೇ ಕಾರಣಕ್ಕಾಗಿ ನಾನು ರೇವಣ್ಣ ರಿಪಬ್ಲಿಕ್‌ ಎಂದು ಹೇಳಿದೆ. ಹೀಗಾಗಿ, ನ್ಯಾಯಾಲಯವು ನನ್ನನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು” ಎಂದರು.

Donate Janashakthi Media

Leave a Reply

Your email address will not be published. Required fields are marked *