ಬೆಂಗಳೂರು: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆಗೆ ಬೆದರಿಕೆಯೊಡ್ಡಿ ಅತ್ಯಾಚಾರ ಎಸಗಿದ್ದರು ಎಂಬುದು ತನಿಖೆಯಲ್ಲಿ ದೃಧಿಢಪಟ್ಟಿದೆ ಎಂದು ಸಿಐಡಿ ಎಸ್ಐಟಿ ನ್ಯಾಯಾಲಯಕ್ಕೆ ತಿಳಿಸಿದೆ.
ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ 40 ವರ್ಷದ ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿದ್ದ ಪ್ರತ್ಯೇಕ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಎಸ್ಐಟಿ, ಶುಕ್ರವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ 1,691 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದೆ.
ಆರೋಪಿ ಪ್ರಜ್ವಲ್, ಸಂತ್ರಸ್ತೆ ಮೇಲೆ ಬಲವಂತದಿಂದ ಅತ್ಯಾಚಾರ ಎಸಗಿರುವುದು ತನಿಖೆಯಲ್ಲಿ ದೃಧಿಢಪಟ್ಟಿದೆ ಎಂದು ಸಾಕ್ಷ್ಯಾಧಾರಗಳನ್ನು ಲಗತ್ತಿಸಿದೆ. ಸಂತ್ರಸ್ತೆ ಹೇಳಿಕೆ, 120 ಸಾಕ್ಷಿದಾರರ ಹೇಳಿಕೆಗಳು, ಎಫ್ಎಸ್ಎಲ್ ವರದಿ ಹಾಗೂ ಡಿಜಿಟಲ್ ಸಾಕ್ಷ್ಯಾಧಾರಗಳನ್ನು ಲಗತ್ತಿಸಲಾಗಿದೆ ಎಂದು ಎಸ್ಐಟಿ ತಿಳಿಸಿದೆ.
ಹಾಸನದ ಸಂಸದರ ಕ್ವಾರ್ಟರ್ಸ್ನಲ್ಲಿಯೇ ಪ್ರಜ್ವಲ್ ರೇವಣ್ಣ, ಸಂತ್ರಸ್ತೆ ಮೇಲೆ ಕೃತ್ಯ ಎಸಗಿ ಮೊಬೈಲ್ನಲ್ಲಿ ವಿಡಿಯೋ ಮಾಡಿಟ್ಟುಕೊಂಡಿದ್ದರು. ಅತ್ಯಾಚಾರದ ಕುರಿತು ಯಾರಿಗಾದರೂ ತಿಳಿಸಿದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿದ್ದರು. ಈ ಕುರಿತು ಸಂತ್ರಸ್ತೆ ಹೇಳಿಕೆ ದಾಖಲಿಸಿರುವುದು ತನಿಖೆಯಲ್ಲೂ ಋುಜುವಾತಾಗಿದೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ಒಂದನೇ ಕೇಸ್ ಬಾಕಿ
ನಾಲ್ವರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ನಾಲ್ಕು ಪ್ರತ್ಯೇಕ ಪ್ರಕರಣಗಳ ಬಗ್ಗೆ ತನಿಖೆ ನಡೆಸಿರುವ ಸಿಐಡಿ ಎಸ್ ಐ ಟಿ, ಮೂರು ಕೇಸ್ಗಳಲ್ಲಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದೆ. ಮತ್ತೊಂದು ಕೇಸ್ನ ತನಿಖೆ ಅಂತಿಮದಲ್ಲಿದ್ದು, ಶೀಘ್ರವೇ ಚಾರ್ಜ್ಶೀಟ್ ಸಲ್ಲಿಸಲು ಸಿದ್ಧತೆ ನಡೆಸಿದೆ.
ಏಪ್ರಿಲ್ ಅಂತ್ಯದಲ್ಲಿ ಪ್ರಜ್ವಲ್ ರೇವಣ್ಣ ಭಾಗಿಯಾಗಿದ್ದಾರೆ ಎನ್ನಲಾದ ಅಶ್ಲೀಲ ವಿಡಿಯೊಗಳು ವೈರಲ್ ಆಗಿದ್ದವು. ಪ್ರಜ್ವಲ್ ವಿರುದ್ಧ ಮೊದಲು ಹೊಳೆನರಸೀಪುರ ಠಾಣೆಯಲ್ಲಿ ಸಂತ್ರಸ್ತೆಯೊಬ್ಬರು ದೂರು ದಾಖಲಿಸಿದ್ದರು. ಇದಾದ ಬಳಿಕ ಹೊಳೆನರಸೀಪುರದಲ್ಲಿ ಎರಡು ಹಾಗೂ ಸಿ ಐ ಡಿ ಬಳಿ ಒಂದು ಕೇಸ್ ದಾಖಲಾಗಿದ್ದವು.
ಲೈಂಗಿಕ ಹಗರಣ ಹೊರಬರುತ್ತಲೇ ಏಪ್ರಿಲ್ 27 ರಂದು ವಿದೇಶಕ್ಕೆ ಹಾರಿದ್ದ ಪ್ರಜ್ವಲ್ ರೇವಣ್ಣ, ಮೇ 31 ರಂದು ಭಾರತಕ್ಕೆ ಮರಳಿದ್ದರು. ಅದೇ ದಿನ ಪ್ರಜ್ವಲ್ರನ್ನು ಬಂಧಿಸಿದ್ದ ಎಸ್ ಐ ಟಿ, ನಾಲ್ಕು ಪ್ರಕರಣಗಳ ಸಂಬಂಧ ಹಂತ – ಹಂತವಾಗಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದೆ. ಪ್ರಜ್ವಲ್ ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾರೆ.
ಇದನ್ನೂ ನೋಡಿ: ಒಕ್ಕೂಟ ವ್ಯವಸ್ಥೆಯ ಎಲ್ಲ ನೀತಿಗಳನ್ನು ಬಿಜೆಪಿ ಮುರಿಯುತ್ತಿದೆ’ – ಎಲ್.ಹನುಮಂತಯ್ಯJanashakthi Media