ಬೆಂಗಳೂರು: ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ನಲ್ಲಿರುವ ರಾಸಲೀಲೆಯ ವೀಡಿಯೊಗಳು ಅಸಲಿ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ದೃಢಪಡಿಸಿದೆ.
ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯದ ವೀಡಿಯೊಗಳು ಲೋಕಸಭಾ ಚುನಾವಣೆಗೂ ಮುನ್ನ ಹಾಸನ ಜಿಲ್ಲೆಯ ಬೀದಿ ಬೀದಿಗಳಲ್ಲಿ ಸಿಕ್ಕಿದ್ದವು. ಅಲ್ಲದೇ ಸಾಮಾಜಿಕ ಜಾಲತಾಣದಲ್ಲೂ ಹರಿದಾಡಿದ್ದವು.
ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದ ಬೆನ್ನಲ್ಲೇ ತನಿಖೆ ಕೈಗೆತ್ತಿಕೊಂಡಿದ್ದ ಎಸ್ ಐಟಿ ಪೊಲೀಸರು ಪೆನ್ ಡ್ರೈವ್ ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿತ್ತು. ವಿಧಿ ವಿಜ್ಞಾನ ಪರೀಕ್ಷೆಯಲ್ಲಿ ಎಲ್ಲಾ ವೀಡಿಯೊಗಳು ನೈಜವಾಗಿದ್ದು, ಯಾವುದೇ ರೀತಿಯಲ್ಲಿ ತಿರುಚಿಲ್ಲ ಎಂದು ಸ್ಪಷ್ಟಪಡಿಸಿದೆ.
ಪೆನ್ ಡ್ರೈವ್ ನಲ್ಲಿರುವ ವೀಡಿಯೊಗಳು ನೈಜ ಎಂಬುದು ದೃಢಪಟ್ಟಿದ್ದರೂ ವೀಡಿಯೊದಲ್ಲಿರುವ ವ್ಯಕ್ತಿ ಪ್ರಜ್ವಲ್ ರೇವಣ್ಣನೇ ಅಥವಾ ಬೇರೆಯವನೇ ಎಂಬ ಬಗ್ಗೆ ವಿಧಿ ವಿಜ್ಞಾನ ಪರೀಕ್ಷೆ ನಡೆಯಬೇಕಿದೆ.
ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಆಗಿರುವ ವೀಡಿಯೊದಲ್ಲಿ ಪ್ರಜ್ವಲ್ ರೇವಣ್ಣ ಅವರ ಮುಖವನ್ನು ಮರೆ ಮಾಚಲಾಗಿದೆ. ಆದ್ದರಿಂದ ವೀಡಿಯೊದಲ್ಲಿರುವ ವ್ಯಕ್ತಿ ಪ್ರಜ್ವಲ್ ರೇವಣ್ಣನೇ ಅಥವಾ ಬೇರೋಬ್ಬನೇ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕಿದೆ ಎಂದು ವರದಿ ಹೇಳಿದೆ.
ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಆಧರಿಸಿ ಎಸ್ ಐಟಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ವರ್ಗಾವಣೆ ಆದ ಪೊಲೀಸರನ್ನು ತನಿಖೆ ಮುಂದುವರಿಸಲು ಮರು ನೇಮಕ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಲಾಗಿದೆ.