ಬೆಂಗಳೂರು: ಪಠ್ಯಪುಸ್ತಕ ಮರು ಪರಿಷ್ಕರಣೆ ವಿಚಾರದಲ್ಲಿ ಬರಹಗಾರರು, ಸಾಹಿತಿಗಳ ಪ್ರತಿರೋಧ ವ್ಯಕ್ತಪಡಿಸಿ ತಮ್ಮ ಲೇಖನಗಳನ್ನು ಹಿಂಡೆದಿದ್ದರ ಗಂಭೀರತೆಯನ್ನು ಸರಿಪಡಿಸುವ ಬದಲು, ಅದುವೇ ಸರಿಯಾದದ್ದು ಎಂದು ಮನಗಂಡ ಸರ್ಕಾರ ಆ ಪಠ್ಯಗಳನ್ನು ಕೈ ಬಿಟ್ಟು, ಬೋಧಿಸದಂತೆ ಸುತ್ತೋಲೆ ಹೊರಡಿಸಿದೆ. ಸರ್ಕಾರದ ನಿಲುವನ್ನು ಖಂಡಿಸಿರುವ ಎಐಡಿಎಸ್‌ಓ ಸಂಘಟನೆಯು ಆಗಿರುವ ತಪ್ಪುಗಳನ್ನು ಸರಿಪಡಿಸಬೇಕೆಂದು ಕೋರಿದೆ.
ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಎಐಡಿಎಸ್‌ಓ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಅವರು, ಬರಹಗಾರರ ನ್ಯಾಯಯುತ ಬೇಡಿಕೆಯನ್ನು ಈಡೇರಿಸಿ, ಪಠ್ಯಪುಸ್ತಕದಲ್ಲಿ ಪ್ರಗತಿಪರ ಹಾಗೂ ಮಾನವೀಯ ಮೌಲ್ಯಗಳನ್ನು ಸಾರುವ ಪಾಠಗಳನ್ನು ಮರು ಸೇರ್ಪಡೆ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇತ್ತೀಚಿಗೆ ಭಾರೀ ವಿವಾದಕ್ಕೆ ಕಾರಣವಾಗಿರುವ ಪಠ್ಯ ಪುಸ್ತಕ ಮರು ಪರಿಷ್ಕರಣೆಯಲ್ಲಿ ಆಗಿರುವ ಭಾರೀ ದೊಡ್ಡ ಪ್ರಮಾದವನ್ನು ಸರ್ಕಾರ ಸರಿಪಡಿಸಲಿಲ್ಲ. ಹೀಗಿರುವಾಗ, ವಿವಾದ ಆರಂಭದ ದಿನಗಳಲ್ಲೇ, ಪಠ್ಯಪುಸ್ತಕದಲ್ಲಿ ತಮ್ಮ ಪಾಠಗಳನ್ನು ಬೋಧಿಸಬಾರದು ಎಂಬ ನಿಲುವು ಹೊಂದಿ, ತಮ್ಮ ಪ್ರತಿರೋಧದ ಸಂಕೇತವಾಗಿ ಹಲವು ಬರಹಗಾರರು, ಸಾಹಿತಿಗಳು ತಮ್ಮ ಲೇಖನಗಳನ್ನು ಹಿಂಪಡೆದಿದ್ದರು. ಈಗ ರಾಜ್ಯ ಸರ್ಕಾರವು ಆ ಎಲ್ಲ ಪಾಠಗಳನ್ನು ಪಠ್ಯದಿಂದ ಕೈ ಬಿಟ್ಟು, ಬೋಧಿಸದಂತೆ ಸುತ್ತೋಲೆ ಹೊರಡಿಸಿದೆ. ಅಂದರೆ, ತಮ್ಮ ಪಾಠಗಳು ಇರಬಾರದು ಎಂಬ ಬರಹಗಾರರ ಬೇಡಿಕೆಗೆ ಸರ್ಕಾರವು ಒಪ್ಪಿಗೆ ಸೂಚಿಸಿದಂತಾಗುತ್ತದೆ.
ಪಠ್ಯಪುಸ್ತಕ ಮರು ಪರಿಷ್ಕರಣೆಯಲ್ಲಿ ಇತಿಹಾಸದ ಮಹಾನ್ ವ್ಯಕ್ತಿಗಳಿಗೆ, ಮಾನವೀಯ ವಿಚಾರಗಳಿಗೆ ಧಕ್ಕೆ ತರುವ ವಿಷಯಗಳನ್ನು ವಿರೋಧಿಸಿ ತಮ್ಮ ಲೇಖನಗಳನ್ನು ಹಿಂಪಡೆದ ಲೇಖಕರ ನಿಲುವು ಶ್ಲಾಘನೀಯ. ಪಠ್ಯದಲ್ಲಿ ಮನಬಂದಂತೆ ತಿದ್ದುಪಡಿ ಆಗಿರುವುದು ಮತ್ತು ಅತ್ಯಂತ ಗೊಂದಲಪೂರಿತ ಮಾರ್ಪಾಡುಗಳನ್ನು ಪ್ರತಿರೋಧಿಸಿ, ಅಂತಹವುಗಳನ್ನು ವಾಪಸ್ ಪಡೆಯಬೇಕು ಎಂದು ಅವರು ಹೇಳಿದ್ದರು. ಇಲ್ಲದಿದ್ದರೆ ತಮ್ಮ ಲೇಖನಗಳ ಪರವಾನಗಿ ಹಿಂಪಡೆಯುವುದಾಗಿ ಸ್ಪಷ್ಟ ನಿಲುವನ್ನು ತಾಳಿದ್ದರು. ಆದರೆ, ಸರ್ಕಾರ ಅವರ ಬೇಡಿಕೆ ಈಡೇರಿಸದೇ, ಅವರ ಪಾಠಗಳನ್ನು ಬೋಧನೆಯಿಂದ ಕೈ ಬಿಟ್ಟಿದೆ ಮತ್ತು ಆ ಎಲ್ಲ ಪ್ರಗತಿಪರ ಅಂಶಗಳು, ಮಾನವೀಯ ಮೌಲ್ಯಗಳು ಹೊಂದಿದ್ದ ಪಾಠಗಳನ್ನು ವಿದ್ಯಾರ್ಥಿಗಳಿಂದ ದೂರ ಇಡಲು ನಿರ್ಧರಿಸಿದೆ. ಇದು ಹಿತಕರ ಬೆಳವಣಿಗೆಯಲ್ಲ ಎಂದು ಅಜಯ್ ಕಾಮತ್ ತಿಳಿಸಿದ್ದಾರೆ.
ಈ ಕೂಡಲೇ ಲೇಖಕರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಮತ್ತು ಪಠ್ಯಪುಸ್ತಕದಲ್ಲಿ ಕ್ರಾಂತಿಕಾರಿ ಭಗತ್ ಸಿಂಗ್ ಕುರಿತು ಲೇಖನ ಸೇರಿದಂತೆ, ವಿದ್ಯಾರ್ಥಿಪರ, ಶಿಕ್ಷಣಪರ, ಪ್ರಗತಿಪರ ಅಂಶಗಳು, ಮಾನವೀಯ ಮೌಲ್ಯಗಳನ್ನು ಹೊಂದಿರುವ ಪಾಠಗಳನ್ನು ಮರು ಸೇರ್ಪಡೆ ಮಾಡಬೇಕು ಎಂದು ಎಐಡಿಎಸ್‌ಓ ವಿನಂತಿಸಿಕೊಂಡಿದೆ.