ಪ್ರಧಾನಿ ಮೋದಿ ಹುಟ್ಟುಹಬ್ಬ: ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಆದ ನಿರುದ್ಯೋಗ ದಿನ

#NationalUnemploymentDay ಹ್ಯಾಷ್‌ಟ್ಯಾಗ್‌ ಅಡಿ 20 ಲಕ್ಷ (2.3ಮಿಲಿಯನ್‌)ಕ್ಕೂ ಹೆಚ್ಚು ಟ್ವೀಟ್

 

ಹೊಸದಿಲ್ಲಿ: ಇಂದು ಪ್ರಧಾನಿ ನರೇಂದ್ರ ಮೋದಿ  ತಮ್ಮ 70ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.  ಈ ದಿನವನ್ನು ಸಾಮಾಜಿಕ ಜಾಲತಾಣಿಗರು ವಿಶಿಷ್ಟವಾಗಿ, ಅಂದರೆ ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಆಚರಿಸುತ್ತಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಪ್ರಮಾಣವನ್ನು ವಿರೋಧಿಸಿ ಹಾಗೂ ನಿರುದ್ಯೋಗಿ ಯುವಜನತೆಗೆ ಬೆಂಬಲವಾಗಿ ನಿಲ್ಲುವ ಸಲುವಾಗಿ ರಾಷ್ಟ್ರೀಯ ನಿರುದ್ಯೋಗ ದಿನ ಅಥವಾ ರಾಷ್ಟ್ರೀಯ ಬೇರೋಜ್ಗಾರ್ ದಿವಸ್ ಇಂದು ಟ್ವಿಟರ್‍ನಲ್ಲಿ ಟ್ರೆಂಡಿಂಗ್ ಆಗಿದೆ.

ಅಂತೆಯೇ ರಾಷ್ಟ್ರೀಯ ಬೇರೋಜ್ಗಾರ್‌ ಸಪ್ತಾಹ ಕೂಡ ಅಂತ್ಯವಾಗುತ್ತಿದೆ. ಈ ವಾರಾದ್ಯಂತ ಯುವಜನರು ತಾವು ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ವಿವಿಧ ರೀತಿಯಲ್ಲಿ ಮನವರಿಕೆ ಮಾಡಲು ಪ್ರಯತ್ನಿಸುತ್ತಿದೆ. ಯುವಜನರ ಸಮಸ್ಯೆಗಳಲ್ಲಿ ಪ್ರಮುಖವಾದ ನಿರುದ್ಯೋಗ ಕುರಿತು ಸರ್ಕಾರದ ಗಮನ ಸೆಳೆಯಲು #NationalUnemploymentDay ಹ್ಯಾಷ್‌‌ ಟ್ಯಾಗ್‌ ನಡಿ 20 ಲಕ್ಷ (2.3ಮಿಲಿಯನ್‌)ಕ್ಕೂ ಹೆಚ್ಚು ಟ್ವೀಟ್‌ಗಳನ್ನು ಮಾಡಲಾಗಿದೆ.

ಬಣ್ಣನೆಗೆ ಎದುರಾಗಿ ವಾಸ್ತವ

ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ನಿಮಿತ್ತ ಸೆಪ್ಟೆಂಬರ್ 14-20 ರಿಂದ ಬಿಜೆಪಿ ‘ಸೇವಾ ಸಪ್ತಾಹ’ ಹೆಸರಿನಲ್ಲಿ ವಾರ ಪೂರ್ತಿ ಆಚರಣೆಯನ್ನು ಪ್ರಾರಂಭಿಸಿದೆ. ಸೆ.೧7 ಪ್ರಧಾನಿ ಮೋದಿ ಅವರಿಗೆ 70 ವರ್ಷ ತುಂಬಿದೆ. ಈ ದಿನವನ್ನು  ದೇಶಾದ್ಯಂತ COVID-19 ಅನ್ನು ನಿಗ್ರಹಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನ, ಭಾರತ-ಚೀನಾ ಪರಿಸ್ಥಿತಿ ಸೇರಿದಂತೆ ಹಲವು ಕಠಿಣ ಪರಿಸ್ಥಿತಿಗಳನ್ನು ಮೋದಿ ಯಶಸ್ವಿಯಾಗಿ  ನಿಭಾಯಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ, ಮೋದಿ ಬೆಂಬಲಿಗರು ಶ್ಲಾಘನೆ ವ್ಯಕ್ತಪಡಿಸಿ ಟ್ರೆಂಡ್‌ ಮಾಡಲು ಪ್ರಯತ್ನಿಸುತ್ತಿದ್ದರು.

ಜೊತೆಗೆ  ಕೊರೊನಾ ವೈರಸ್ ಸೋಂಕು ಹರಡುವಿಕೆಯು ಪ್ರಧಾನಿ ಮೋದಿಯವರ ಸಮಯೋಚಿತ ಮತ್ತು ಕಠಿಣ ನಿರ್ಧಾರಗಳಿಂದ ನಿಯಂತ್ರಣಕ್ಕೆ ಬಂದಿದೆ ಎಂದು ಡಬ್ಲ್ಯುಎಚ್‌ಒ ಶ್ಲಾಘಿಸಿತ್ತು ಮತ್ತು ಇತರ ಮುಂದುವರಿದ ರಾಷ್ಟ್ರಗಳಿಗಿಂತ ಭಾರತ ಉತ್ತಮ ಸ್ಥಾನದಲ್ಲಿದೆ ಎಂದು ಬಣ್ಣಿಸಿತ್ತು. ಇದೂ ಕೂಡ ಮೋದಿ ಬೆಂಬಲಿಗರ ಉತ್ಸಾಹವನ್ನು ಹೆಚ್ಚಿಸಿತ್ತು.

ಆದರೆ, ಇದೇ ವೇಳೆ ಟ್ವಿಟರ್‌ನಲ್ಲಿ ನೆಟಿಜನ್‌ಗಳು ಸೆಪ್ಟೆಂಬರ್ 17 ಅನ್ನು ರಾಷ್ಟ್ರೀಯ ನಿರುದ್ಯೋಗ ದಿನವೆಂದು ಆಚರಿಸುತ್ತಿದ್ದಾರೆ. #NationalUnemploymentDay  ಹ್ಯಾಷ್‌ಟ್ಯಾಗ್‌ನಡಿ  ಮಾಡಿರುವ ಟ್ವೀಟ್‌ಗಳು ವೈರಲ್ ಆಗಿದೆ.

ಕೇಂದ್ರ ಸರ್ಕಾರದ ಆರ್ಥಿಕ ನೀತಿ ಮತ್ತು ಔದ್ಯೋಗಿಕ ನೀತಿಯ ಕಾರಣದಿಂದ  ಆರಂಭವಾಗಿದ್ದ ಉದ್ಯೋಗ ನಷ್ಟ ಕೋವಿಡ್‌ ನಿಯಂತ್ರಣದ ಹೆಸರಿನಲ್ಲಿ ಹೇರಿದ ಲಾಕ್‌ಡೌನ್‌ನಿಂದ ಅಪಾರ ಪ್ರಮಾಣದಲ್ಲಿ ಘಟಿಸಿತು. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಯುವಜನತೆ  #NationalUnemploymentDay #राष्ट्रीय_बेरोजगारी_दिवस ಹ್ಯಾಶ್‌ಟ್ಯಾಗ್ ಮೂಲಕ ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗವನ್ನು ಸರ್ಕಾರದ ಸೆಳೆಯಲು ಮತ್ತು ಉದ್ಯೋಗ ಸೃಷ್ಟಿಸುವಲ್ಲಿ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸಲು ಟ್ವೀಟ್‌ ಮಾಡಲಾಗಿದೆ.

ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ (ಎನ್‌ಎಸ್‌ಒ) ವರದಿಯ ಪ್ರಕಾರ, ಭಾರತದ ಏಪ್ರಿಲ್-ಜೂನ್ ತ್ರೈಮಾಸಿಕ ಜಿಡಿಪಿ 23.9% ರಷ್ಟು ಕುಸಿತವಾಗಿದೆ.  40 ಕ್ಕೂ ಹೆಚ್ಚು ವರ್ಷಗಳಲ್ಲಿ ಮೊದಲ ಕುಸಿತವಾಗಿದೆ. ನಿರುದ್ಯೋಗಿಗಳ ಸಂಖ್ಯೆಯು ವೇಗವಾಗಿ ಬೆಳೆಯುತ್ತಿದೆ.  ಏಕೆಂದರೆ ಉದ್ಯೋಗ ಸೃಷ್ಟಿ ನಿಂತುಹೋಗಿದೆ.  ಜೊತೆಗೆ  ಈಗಾಗಲೇ ಉದ್ಯೋಗದಲ್ಲಿರುವ ಹಲವಾರು ಜನರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುತ್ತಿದ್ದಾರೆ.  ಇದೇ ವೇಳೆ ಯುವಜನತೆ ನೇಮಕಾತಿ ಪ್ರಕ್ರಿಯೆಗಳಲ್ಲಿ ಸುಧಾರಣೆಗಳನ್ನು ಮಾಡುವಂತೆ ಆಗ್ರಹಿಸಿ ಈ ವಾರವನ್ನು  ರಾಷ್ಟ್ರೀಯ ಬೆರೋಜ್ಗರ್ ಸಪ್ತಾಹ ಎಂದೂ ಆಚರಿಸಲಾಯಿತು.

 

Donate Janashakthi Media

Leave a Reply

Your email address will not be published. Required fields are marked *