ಪ್ರಧಾನಿ ಕಛೇರಿಯನ್ನ ‘40% ಕಮಿಷನ್ ದೂರು ಕೇಂದ್ರ’ ಎಂದು ಹೆಸರು ಬದಲಾಯಿಸಿ

ಬೆಂಗಳೂರು: ಪ್ರಧಾನಿಗಳ ಕಛೇರಿಗೆ ರಾಜ್ಯದ 40% ಕಮಿಷನ್ ಸರ್ಕಾರದ ಆರೋಪಗಳು ದಾಖಲೆ ಸಮೇತ ಸಾಲು ಸಾಲು ಪತ್ರಗಳು ತಲುಪುತ್ತಿವೆ. “40% ಕಮಿಷನ್ ದೂರು ಕಛೇರಿ” ಎಂದು ಪ್ರಧಾನಿ ಕಚೇರಿಯ ಹೆಸರು ಬದಲಾಯಿಸಿಕೊಳ್ಳುವುದು ಒಳ್ಳೆಯದು ಎಂದು ಹೇಳಿರುವ, ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಬಿ ಕೆ ಹರಿಪ್ರಸಾದ್‌ ದಿನದ 18 ಗಂಟೆಗಳ ಕೆಲಸ ಮಾಡುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಬಿಡುವಿನ ವೇಳೆಯಲ್ಲಿ ಒಮ್ಮೆ ಈ ಬಗ್ಗೆ ಕಣ್ಣಾಡಿಸಿ ಎಂದು ಸಲಹೆ ನೀಡಿದ್ದಾರೆ.

ಇದನ್ನು ಓದಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಕೆ.ಎಸ್. ಈಶ್ವರಪ್ಪ

ಸುದ್ದಿಗಾರರೊಂದಿಗೆ ಮಾತನಾಡಿದ ಬಿ ಕೆ ಹರಿಪ್ರಸಾದ್‌, ಹನುಮಂತನ ಬಾಲದಂತೆ ಸರ್ಕಾರದ ಕಮಿಷನ್‌ ಹಗರಣಗಳ ದಾಖಲೆಗೊಂದು ಪ್ರತಿದಿನ ಧಾರಾವಾಹಿಯಂತೆ ಜಗಜ್ಜಾಹೀರಾಗುತ್ತಿದೆ. ಈಗಾಗಲೇ ಪ್ರಧಾನಿ ಕಚೇರಿಯ ಬಾಗಿಲು ಬಡಿದು, ಬಂದ ದಾರಿಗೆ ಸುಂಕವಿಲ್ಲದೆ ಅಮಾಯಕ ಗುತ್ತಿಗೆದಾರ ಸಂತೋಷ್ ಪಾಟೀಲ್ ಕೆ ಎಸ್‌ ಈಶ್ವರಪ್ಪ ಅವರಿಗೆ 40% ಕಮಿಷನ್ ಕೊಡಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಜೆಗಳ ಹಿತಾಸಕ್ತಿಯನ್ನು ಕಾಪಾಡದ ಸರ್ಕಾರ ಆತ್ಮಹತ್ಯೆಗೆ ದೂಡಿದೆ. ಅದರಲ್ಲೂ ಸಚಿವರೇ ಪ್ರಕರಣದಲ್ಲಿ A1 ಆರೋಪಿ ಎಂದರೆ ಇದೊಂದು ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ಆರೋಪಿಸಿದರು.

ಗೋಮಾತೆ, ಗೋ ರಕ್ಷಕರು ಎಂದು ಪುಂಗಿ ಊದುವ ನಿಮ್ಮ ಸರ್ಕಾರ ಗೋವು ತಿನ್ನುವ ಮೇವಿನಲ್ಲಿ ಕಮಿಷನ್ ಪಡೆಯುತ್ತಿದೆ ಎಂದು ಮೇವು ಸರಬರಾಜು ಮಾಡುವ ಗುತ್ತಿದಾರರು ನಿಮ್ಮ ಕಚೇರಿಗೆ ಪತ್ರ ಬರೆದಿದ್ದಾರೆ. ಎಪ್ಪತ್ತು ವರ್ಷಗಳಲ್ಲಿ ಏನೂ ಮಾಡಿಲ್ಲ ಎಂದು ಅಬ್ಬರಿಸಿ ಬೊಬ್ಬೆ ಹಾಕುತ್ತಿದ್ದ ನಿಮ್ಮ ಟೆಲಿಪ್ರಾಂಪ್ಟರ್ ಭಾಷಣದಲ್ಲಿ ಇಂತಹ ಆರೋಪಗಳನ್ನು ತಾವೇ ಮಾಡಿರುವುದಕ್ಕೆ ಸಾಧ್ಯವಿಲ್ಲ, ಬೇಕಿದ್ರೆ ಒಮ್ಮೆ ಚೆಕ್ ಮಾಡಿಕೊಳ್ಳಿ.

ಇದನ್ನು ಓದಿ: ನನ್ನ ಸಾವಿಗೆ ಸಚಿವ ಈಶ್ವರಪ್ಪ ಕಾರಣ – ಡೆತ್‌ನೋಟ್‌ ಬರೆದಿಟ್ಟು ನಾಪತ್ತೆಯಾದ ಬಿಜೆಪಿ ಕಾರ್ಯಕರ್ತ ಅಲಿಯಾಸ್‌ ಗುತ್ತಿಗೆದಾರ ಸಂತೋಷ ಪಾಟೀಲ್‌

ಸರ್ಕಾರದ ಪ್ರತಿಯೊಂದು ಇಲಾಖೆಗಳ ಕಾಮಗಾರಿಗಳಲ್ಲಿ 40% ಕಮಿಷನ್, ಗೋವುಗಳ ಮೇವಿನಲ್ಲಿ 40% ಕಮಿಷನ್, ಮಠಗಳ ಅನುದಾನದಲ್ಲೂ 30% ಕಮಿಷನ್, ಪರೀಕ್ಷೆ ನಿರ್ವಹಣೆಯಲ್ಲೂ 20% ಕಮಿಷನ್ ಕಡ್ಡಾಯಗೊಳಿಸಿದ್ದಾರೆ. ಮಠಾದೀಶರೇ ಕಮಿಷನ್ ಗೆ ಬೇಸತ್ತು ಬಹಿರಂಗ ಹೇಳಿಕೆ ನೀಡುತ್ತಿರುವುದು ಕರ್ನಾಟಕದ ಇತಿಹಾಸದಲ್ಲಿಯೇ ಮೊದಲು. ಬಹುಶಃ ನಿಮ್ಮ ಪಕ್ಷದ ನೇತೃತ್ವದ ಸರ್ಕಾರ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ “ಕಾಮಗಾರಿಗಳಲ್ಲಿ ಕಮಿಷನ್ ಕಡ್ಡಾಯ ಕಾಯ್ದೆ” ತರಬಹುದೇ? ಎಂದು ಬಿ ಕೆ ಹರಿಪ್ರಸಾದ್‌ ಪ್ರಶ್ನಿಸಿದ್ದಾರೆ.

ಪಿಎಸ್‌ಐ ನೇಮಕಾತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವಾಗಿರುವ ಬಗ್ಗೆ ಪತ್ರಿಕೆಗಳ ಮುಖಪುಟದಲ್ಲಿ ಭ್ರಷ್ಟಾಚಾರದ ಮುಖವಾಡಗಳು ಬಯಲಾಗುತ್ತಿವೆ.  ಪಿಎಸ್‌ಐ ನೇಮಕಾತಿಯಲ್ಲಿ ನೂರಾರು ಕೋಟಿ ಭ್ರಷ್ಟಾಚಾರ ಎಸೆಗಿದ್ದಾರೆ. ಸ್ವಪಕ್ಷದ ಸಚಿವರು, ಶಾಸಕರುಗಳೇ ಮುಖ್ಯಮಂತ್ರಿಗೆ ಪತ್ರ ಬರೆಯುತ್ತಿದ್ದಾರೆ. ನಮ್ಮ‌ಇಲಾಖೆಯಲ್ಲಿ ಭ್ರಷ್ಟಾಚಾರವೇ ನಡೆದಿಲ್ಲ ಎಂದು ವಿಧಾನ ಪರಿಷತ್ತಿನಲ್ಲಿ ನನ್ನ ಪ್ರಶ್ನೆಗೆ ಉತ್ತರ ಕೊಟ್ಟ ಗೃಹ ಸಚಿವ ಅರಗ ಜ್ಞಾನೇಂದ್ರ ಈಗ ತನಿಖೆಗೆ ಆದೇಶಿಸಿದ್ದಾರೆ. ತನಿಖೆಯಲ್ಲಿ ಬಿಜೆಪಿಯ ಮುಖಂಡರುಗಳೇ ಬಂಧನವಾಗುತ್ತಿದ್ದಾರೆ ಎಂದರು.

ಇದನ್ನು ಓದಿ: ಸಂತೋಷ್ ಆತ್ಮಹತ್ಯೆ ಪ್ರಕರಣ : ಕೆಎಸ್ ಈಶ್ವರಪ್ಪ ವಿರುದ್ಧ ಕೇಸ್ ದಾಖಲು, ಎಫ್‌ಐಆರ್‌ನಲ್ಲಿ ಏನಿದೆ?

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯನವರದ್ದು 10% ಕಮಿಷನ್ ಸರ್ಕಾರ ಎಂದು ತಲೆಯೂ ಇಲ್ಲದ ಬುಡವೂ ಇಲ್ಲದ ಆರೋಪ ಮಾಡಿದ ಬಿಜೆಪಿ ಪಕ್ಷದವರು ಅಧಿಕಾರಕ್ಕೆ ಬಂದರೆ ಭ್ರಷ್ಟ ಸರ್ಕಾರದ ದಾಖಲೆಗಳನ್ನ ಬಿಡುಗಡೆ ಮಾಡುತ್ತೇವೆ ಎಂದು ತೌಡು ಕುಟ್ಟಿದ್ದೀರಿ. ರಾಜ್ಯದಲ್ಲಿ ನಿಮ್ಮದೇ ಸರ್ಕಾರ ಬಂದು ಎರಡು ವರ್ಷಗಳೇ ಕಳೆದಿವೆ ಹಗರಣಗಳು ಬರುತ್ತಿರುವುದು ನಿಮ್ಮ ಮಂತ್ರಿ ಮಹಾಶಯರುಗಳದ್ದೇ ಹೊರತು ಕಾಂಗ್ರೆಸ್ ಸರ್ಕಾರದ್ದಲ್ಲ ಎಂದು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *