ಪ್ರಧಾನ ಮಂತ್ರಿಯೋ ಇಲ್ಲ ಪ್ರಧಾನ ಪೂಜಾರಿಯೋ : ವಿಜಯರಾಘವನ್ ವ್ಯಂಗ್ಯ

ಬಾಗೇಪಲ್ಲಿ : ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ 8ನೇ ರಾಜ್ಯ ಸಮ್ಮೇಳನವನ್ನು ರಾಷ್ಟೀಯ ಅಧ್ಯಕ್ಷ ವಿಜಯರಾಘವನ್ ಉದ್ಘಾಟಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಜನ ವಿರೋದಿ ನೀತಿಗಳ ವಿರುದ್ದ ಕಿಡಿಕಾರಿದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಸಮ್ಮೇಳನವು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಹಮ್ಮಿಕೊಳ್ಳಲಾಗಿದ್ದು, ಇಂದು ಮತ್ತು ನಾಳೆ(ನವೆಂಬರ್‌ 29-30) ನಡೆಯುತ್ತಿದೆ. ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಜಯರಾಘವನ್‌, ಬಾಗೇಪಲ್ಲಿ ತಾಲೂಕಿಗೆ ದೊಡ್ಡ ಪರಂಪರೆ ಇದೆ‌‌‌. ಹಲವು ದಶಕಗಳಿಂದ ಈ ಭಾಗದಲ್ಲಿ ಹಲವು ಹೋರಾಟಗಳು ನಡೆದಿವೆ. ಈ ಭಾಗದಲ್ಲಿ ಮೂರ್ನಾಲ್ಕು ಬಾರಿ ಕಮ್ಯುನಿಸ್ಟ್ ಪಕ್ಷದ ಶಾಸಕರನ್ನು ಗೆಲ್ಲಿಸಿದ್ದಿರಿ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇದೇ ಸ್ಥಳಕ್ಕೆ ಬಂದು ಸಾವಿರಾರು ಮಂದಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಬಿಜೆಪಿ ಪಕ್ಷ, ಕುದುರೆ ವ್ಯಾಪಾರದ ಮೂಲಕ ಶಾಸಕರನ್ನು ಕೊಂಡುಕೊಂಡು ಕರ್ನಾಟಕದಲ್ಲಿ ಸರ್ಕಾರ ರಚಿಸಿ ಆಡಳಿತ ಮಾಡುತ್ತಿದೆ. ಜನರ ಸಂಕಷ್ಟಗಳನ್ನು ನಿವಾರಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ.  ಬಾಗೇಪಲ್ಲಿ ಇಡೀ ಕರ್ನಾಟಕಕ್ಕೆ ಕೆಂಪು ನಕ್ಷತ್ರವಾಗಿ ಗೊಚರಿಸುತ್ತಿದೆ. ದುಡಿಯುವ ಜನರ ಧ್ವನಿಯಾಗಿ ಬಾಗೇಪಲ್ಲಿ ಮಾರ್ಪಟ್ಟಿದೆ.

ಬಿಜೆಪಿಯ ಕೇಂದ್ರ ಮತ್ತು ರಾಜ್ಯ  ಎರಡು ಸರ್ಕಾರಗಳು ಜನಾ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ. ಕೃಷಿ ಕೂಲಿಕಾರರು, ಕಾರ್ಮಿಕರು, ಬಡವರಿಗೆ ತೀವ್ರತರವಾದ ಸಂಕಟ ಉಂಟುಮಾಡಿದೆ. ಇತ್ತೀಚಿನ ದಿನಗಳಲ್ಲಿ ಬಾರಿ ಪ್ರಮಾಣದಲ್ಲಿ ಬೆಲೆ ಏರಿಕೆಯಾಗುತ್ತಿದೆ. ಬಡವರ ಬದುಕಿನ ಪರಿಸ್ಥಿತಿ, ಮಕ್ಕಳ ಶಿಕ್ಷಣದ ಪರಿಸ್ಥಿತಿ, ಆರೋಗ್ಯದ ಸ್ಥಿತಿ ಕೈಗೆ ಎಟಕದಂತಾಗಿದೆ. ಕೋವಿಡ್ ಮಹಾ ಸಂಕಷ್ಟದಲ್ಲಿ ಬೊಮ್ಮಾಯಿ ಸರ್ಕಾರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿತ್ತು. ಕೋವಿಡ್ ಸಂದರ್ಭದಲ್ಲಿ ಯಾವುದೇ ಆರ್ಥಿಕ ಸಹಾಯ ನೀಡದೆ ಬಡವರನ್ನು ಜರ್ಜರಿತ ಮಾಡಿತ್ತು. ಜನರಿಗೆ ಸರಿಯಾದ ಆರೋಗ್ಯದ ವ್ಯವಸ್ಥೆ ಇಲ್ಲದೆ ಪರದಾಡಿದರು. ಆಸ್ಪತ್ರೆಗಳ ಖರ್ಚು ಹೆಚ್ಚಾಗಿ ಜನಸಾಮಾನ್ಯರು ನರಳಾಡಿದರು‌‌. ಎಲ್ಲಿ ಹೋದರು ನಮ್ಮದು ಡಬಲ್ ಇಂಜಿನ್ ಸರ್ಕಾರ ಎಂದು ಹೇಳಿಕೊಳ್ಳುತ್ತಾರೆ. ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಎಂದರೆ ಒಂದು ಇಂಜಿನ್ ಬಡತನ ಮತ್ತೊಂದು ಹಸಿವು ಇಂತಹ ಡಬ್ಬಲ್ ಇಂಜಿನ್ ಸರ್ಕಾರವನ್ನು ನಡೆಸುತ್ತಿದೆ. ಇದರಿಂದ ಸಾಮಾನ್ಯ ಜನರಿಗೆ ಯಾವುದೇ ಬೆಂಬಲ ಸಹಕಾರ ಸಿಗುತ್ತಿಲ್ಲ. ಸರ್ಕಾರಗಳು ಎಲ್ಲಾ ವಿಚಾರದಲ್ಲೂ ಜನ ವಿರೋಧಿ ಧೋರಣೆಯನ್ನು ಅನುಸರಿಸುತ್ತುದೆ. ವಿದ್ಯಾರ್ಥಿ, ಯುವಜನ, ಮಹಿಳೆ, ಕಾರ್ಮಿಕ,  ರೈತ ಮತ್ತು ಕೂಲಿಕಾರ ಸರ್ಕಾರಗಳ ನೀತಿಯಿಂದ ವೇದನೆಪಡುವಂತಾಗಿದೆ. ಸರ್ಕಾರದ ಜನ ವಿರೋದಿ ನೀತಿಗಳ ಬಗ್ಗೆ ಜನಾಂದೋಲ ಮಾಡಬೇಕಾಗಿದೆ. ರಾಜ್ಯ ಮತ್ತು ಮುಂದೆ ನಡೆಯುವ ರಾಷ್ಟ್ರ ಸಮ್ಮೇಳನದಲ್ಲಿ ಈ ಬಗ್ಗೆ ನಿರ್ಣಯಗಳನ್ನು ಕೈಗೊಳ್ಳುತ್ತುದೆ.

ಹಸಿವಿನ ಸೂಚ್ಯಂಕದಲ್ಲಿ ವಿಶ್ವದ 121 ದೇಶದಲ್ಲಿ ಭಾರತ 107 ನೇ ಸ್ಥಾನದಲ್ಲಿದೆ. ದಿನದಿಂದ ದಿನಕ್ಕೆ ಭಾರತ ದೇಶದಲ್ಲಿ ಹಸುವಿನ ಸಮಸ್ಯೆ ಹೆಚ್ಚಾಗುತ್ತಿದೆ. ಕಾರಣ ಒಂದೆಡೆ ನಿರುದ್ಯೋಗ ಸಮಸ್ಯೆ ಆದರೆ ಮತ್ತೊಂದೆಡೆ ಬೆಲೆ ಹೆಚ್ಚಾಗುತ್ತಿರುವುದು. ಗ್ರಾಮೀಣ ಭಾಗದಲ್ಲಿ ನಿರುದ್ಯೋಗದ ಸಮಸ್ಯೆ ವಿಪರಿತ ಹೆಚ್ಚಾಗಿ ಹಸಿವಿನಿಂದ ನರಳುವವರ ಸಂಖ್ಯೆಯು ಹೆಚ್ಚಾಗುತ್ತಿದೆ. ಎಡಪಕ್ಷಗಳ ಸಹಕಾರದಿಂದ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮನಮೋಹನ್ ಸಿಂಗ್ ಸರ್ಕಾರ  ಎಡ ಪಕ್ಷಗಳ ಒತ್ತಡದಿಂದ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತಂದಿತ್ತು. ಪ್ರಸ್ತುತದಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ಸಂಪೂರ್ಣ ತೆಗೆದು ಹಾಕಬೇಕು ಎಂಬ ಆಲೋಚನೆ ನಡೆಯುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯ ರಂಬೆ ಕೊಂಬೆಗಳನ್ನು ಒಂದೊಂದಾಗಿ ಕತ್ತರಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ನರೇಗಾ ಯೋಜನೆ ಅಡಿಯಲ್ಲಿ ಕನಿಷ್ಠ ಕೂಲಿಯನ್ನು ನೀಡುತ್ತಿಲ್ಲ.

ಕೂಲಿಕಾರರು ಮಾಡಿದ ಕೆಲಸಕ್ಕೆ ಸರಿಯಾದ ಸಮಯಕ್ಕೆ ಕೂಲಿ ಹಣವನ್ನು ಪಾವತಿಸುತ್ತಿಲ್ಲ. ಅಲ್ಲದೆ ಕೂಲಿಕಾರರಿಗೆ ಹೆಜ್ಜೆ ಹೆಜ್ಜೆಗೂ ಸಮಸ್ಯೆಯನ್ನು ಉಂಟುಮಾಡಲು ಪ್ರಾರಂಭ ಮಾಡಿದೆ‌. ಉದ್ಯೋಗ ಖಾತ್ರಿಯನ್ನು ನಾಶಪಡಿಸುವ ಉದ್ದೇಶಕ್ಕಾಗಿ ಪರಮರ್ಶನ ಸಮಿತಿಯನ್ನು ರಚನೆ ಮಾಡಲಾಗಿದೆ. ಕೇರಳದಲ್ಲಿ ನರೇಗಾ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗುತ್ತಿದೆ. ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿ ಆಗಿರುವ ಉತ್ತರ ಪ್ರದೇಶದಲ್ಲಿ ಬಹಳ ಕಳಪೆ ಮಟ್ಟದ ಸಾಧನೆಯಲ್ಲಿದೆ. ಕೇಂದ್ರ ಸರ್ಕಾರಕ್ಕೆ ಉದ್ಯೋಗ ಖಾತ್ರಿ ಯೋಜನೆ ಯಾಕೆ ಬೇಕು ಎಂದು ಚಿಂತಿಸುತ್ತಿದೆ. ಮುಂದಿನ ದಿನಗಳಲ್ಲಿ ಇಡೀ ದೇಶಾದ್ಯಂತ ಇದರ ಬಗ್ಗೆ ಹೋರಾಟವನ್ನು ಮಾಡಬೇಕಾಗಿದೆ. ಉದ್ಯೋಗ ಖಾತ್ರಿ ಯೋಜನೆಯನ್ನು ಉಳಿಸಿ ಬೆಳೆಸಬೇಕು ಬೆಳೆಸಲು ನಾವೆಲ್ಲ ಪಡತೊಡಬೇಕಾಗಿದೆ.

ಬಡವರಿಗೆ ನಿರಂತರವಾಗಿ ತೊಂದರೆ ಕೊಡುತ್ತಿರುವ ಬಿಜೆಪಿ ಸರ್ಕಾರಗಳು ಶ್ರೀಮಂತರ ಪರವಾದ ಧೋರಣೆಗಳನ್ನು ಅನುಸರಿಸುತ್ತಿವೆ. ಶ್ರೀಮಂತರ ಸಾಲವನ್ನು ಮನ್ನಾ ಪ್ರವೃತ್ತಿಯನ್ನು ಮುಂದುವರಿಸುತ್ತಿವೆ. ಬಡವರು ದಿನನಿತ್ಯ ಬಳಸುವ ಅಕ್ಕಿ ಬೇಳೆ ಸೇರಿದಂತೆ ದಿನನಿತ್ಯ ವಸ್ತುಗಳಿಗೆ ಜಿಎಸ್‌ಟಿ, ತೆರಿಗೆ ವಿಧಿಸಲು ಮುಂದಾಗಿದೆ. ಕೃಷಿ ಕೂಲಿಕಾರರ ಜನ ವಿರೋಧಿ ನೀತಿಗಳ ವಿರುದ್ಧ ಹೋರಾಟ ಮಾಡಲು ಸಜ್ಜಗಬೇಕಾಗಿದೆ.

ಮೋದಿ ಆಡಳಿತದಲ್ಲಿ ಶ್ರೀಮಂತರ ದನ ಕನ ಹೆಚ್ಚಾಗುತ್ತಿದೆ‌. ಆದರೆ ಬಡವರನ್ನು ವಿಭಜಿಸುವ ಕೆಲಸ ನಡೆಯುತ್ತಿದೆ. ಅಲ್ಪಸಂಖ್ಯಾತರ ಮಸೀದಿ ಮತ್ತು ಚರ್ಚ್ ಗಳ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದೆ. ಕರ್ನಾಟಕ ಈ ವಿಚಾರವಾಗಿ ದೊಡ್ಡ ಪ್ರಯೋಗ ಶಾಲೆಯಾಗಿದೆ. ಹಿಜಾಬ್ ಎಂಬ ವಿಚಾರ ದೊಡ್ಡ ಸದ್ದು ಮಾಡಿದೆ. ಕೋಮು ದ್ವೇಷವನ್ನು ಗ್ರಾಮೀಣ ಭಾಗದಲ್ಲಿ ಬಿತ್ತುವ ಕೆಲಸವನ್ನು ಕರ್ನಾಟಕ ಸರ್ಕಾರ ಮಾಡುತ್ತಿದೆ. ದೇಶದ ದೇವಸ್ಥಾನವನ್ನು ಕಟ್ಟಲು ಪ್ರದಾನ ಮಂತ್ರಿಯೇ ಭೂಮಿ ಪೂಜೆ ಮಾಡುತ್ತಾರೆ‌. ಅಂದರೆ ಇವರು ಪ್ರಧಾನಮಂತ್ರಿಯೋ ಅಥವಾ ದೇಶದ ಪ್ರಧಾನ ಪೂಜಾರಿಯೋ ಎಂದು ವ್ಯಂಗ್ಯವಾಡಿದರು.

ಕೇರಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಜನ್ ದನ್ ಖಾತೆಯನ್ನು ಕೂಡ ಕ್ಲೋಸ್  ಮಾಡಿಸಿದ್ದಾರೆ. ಕೇರಳದಲ್ಲಿ ಸರ್ಕಾರಿ ಶಾಲೆಗಳನ್ನ ಹೈಟೆಕ್ ಮಾಡಲಾಗಿದೆ. ಸರ್ಕಾರಿ ಶಾಲೆಗಳನ್ನು ಉನ್ನತಿಕರಿಸಲಾಗಿದೆ ಸರ್ಕಾರಿ ಶಾಲೆಗಳಿಗೆ ಕೇರಳದಲ್ಲಿ ಹೆಚ್ಚಿನ ಬೇಡಿಕೆ ಇದೆ ಆದರೆ ಕರ್ನಾಟಕದಲ್ಲಿ ಶಿಕ್ಷಣದ ಕಥೆ ಏನಾಗಿದೆ. ನಿರಂತರವಾಗಿ ಕನ್ನಡ ಮತ್ತು ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಭಾರತವನ್ನು ಹೊರತುಪಡಿಸಿದರೆ ಉಳಿದೆಲ್ಲ ರಾಷ್ಟ್ರಗಳಲ್ಲೂ  ಬೇಡಿಕೆಗೆ ಅನುಗುಣವಾಗಿ ಕೋವಿಡ್  ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ನೀಡಿದವು.  ಜನರಿಗೆ ಒಳ್ಳೆಯದನ್ನು ಮಾಡಿ ಅನುಕೂಲ ಕಲ್ಪಿಸಿಕೊಟ್ಟು ಅಧಿಕಾರಿಕೆ ಬರಬೇಕು ಎಂಬ ಹಂಬಲ ಬಿಜೆಪಿಗಿಲ್ಲ. ಶಾಸಕರನ್ನು ಕುದುರೆ ವ್ಯಾಪಾರದಲ್ಲಿ ಖರಿದಿ ಮಾಡಿಕೊಂಡು ಅಧಿಕಾರಕ್ಕೆ ಬಂದರೆ ಸಾಕು ಎಂದು ಭಾವಿಸಿದ್ದಾರೆ. ಇಂಥವರನ್ನು ರಾಜ್ಯ ದೇಶದಿಂದ ಓಡಿಸಬೇಕಿದೆ. ಹೋರಾಟ ಮಾಡುವ ಜನರನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂದರು.

ರಾಜ್ಯಗಳಿಗೆ ಹೆಚ್ಚು ಅಧಿಕಾರ ಕೊಡಬೇಕು ಎಂಬುದನ್ನು ಕೇಂದ್ರ ಸರ್ಕಾರ ಮೊಟಕುಗೊಳಿಸುತ್ತುದೆ. ನಮ್ಮ ಸಂವಿಧಾನದ ತಿರುಚಿವ ಕೆಲಸ ನಡೆಯುತ್ತಿದೆ. ಬ್ರಿಟಿಷರನ್ನು ಹೇಗೆ ಜನರು ಭಾರತ ಬಿಟ್ಟು ಓಡಿಸಿದೇವೋ ಹಾಗೆ ದೊಡ್ಡ ದೊಡ್ಡ ಕಂಪನಿಯ ಮಾಲೀಕರು ಮತ್ತು ಕೋಮು ದ್ವೇಷವನ್ನು ಹಾಗೂ ಸರ್ಕಾರ ಜನ ವಿರೋಧಿ ನೀತಿಗಳನ್ನು ಓಡಿಸಿ ಬಿಜೆಪಿಯನ್ನು ನಾವು ಮಣಿಸಬೇಕಾಗಿದೆ ಎಂದರು.

ಉದ್ಘಾಟನೆಗೂ ಮೊದಲು  ಬೃಹತ್ ಮೆರವಣಿಗೆ ನಡೆಯಿತು.  ಕೂಲಿಕಾರರು ಬಾಗೇಪಲ್ಲಿಯ ಪ್ರಮುಖ ನಗರಗಳಲ್ಲಿ ಘೋಷಣೆ, ಹಾಡುಗಳ ಮೂಲಕ ಜನಮನ ಸೆಳೆದರು. ನಂತರ ನಡೆದ ಬೃಹತ್ ಬಹಿರಂಗೆ ಸಭೆಯಲ್ಲಿ ಸಾವಿರಾರು ಜನ ಭಾಗಿಯಾಗಿದ್ದರು.

ವೇದಿಕೆಯ ಮೇಲೆ ರಾಜ್ಯಸಭಾ ಸದಸ್ಯರಾದ ಶಿವದಾಸನ್, ಕೃಷಿ ಕೂಲಿಕಾರರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬಿ.ವೆಂಕಟ್, ಮುಖಂಡರಾದ ಕೆ.ಎಸ್.ಲಕ್ಷ್ಮೀ, ಜಿ.ಎನ್.ನಾಗರಾಜ್, ಚಂದ್ರಪ್ಪ ಹೋಸ್ಕೇರಾ, ಡಾ. ಅನೀಲ್ ಕುಮಾರ್, ಸಾವಿತ್ರಮ್ಮ, ಜಯರಾಮರೆಡ್ಡಿ, ಎಂ.ಪಿ.ಮುನಿವೆಂಕಟಪ್ಪ ಇದ್ದರು. ಸಭೆಯ ಅಧ್ಯಕ್ಷತೆಯನ್ನು ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷರಾದ ನಿತ್ಯಾನಂದ ಸ್ವಾಮಿ ವಹಿಸಿದ್ದರು.

ವರದಿ : ಬಿ.ಎ.ಮಧುಕುಮಾರ

Donate Janashakthi Media

Leave a Reply

Your email address will not be published. Required fields are marked *