ಒಂದೆಡೆ ಪ್ರಾದೇಶಿಕತೆಯ ಮಾತು, ಇನ್ನೊಂದೆಡೆ ಬಿಜೆಪಿಯ ಆಕರ್ಷಣೆ- ಇವೆರಡರ ನಡುವಣ ಸ್ವಯಂ ವೈರುದ್ಧ್ಯಗಳ ನಡುವೆ ಜೆಡಿಎಸ್ ತನ್ನ ರಾಜಕೀಯ ನಡೆಸುತ್ತಿದೆ. ಆ ಪಕ್ಷಕ್ಕೆ ಪ್ರಾದೇಶಿಕ ಅಭಿವೃದ್ಧಿಯ ಬಗೆಗೆ ಯಾವುದೇ ತಿಳುವಳಿಕೆ ಇದ್ದಂತಿಲ್ಲ. ಬಡವರ ಅಭಿವೃದ್ಧಿ, ಕಡಿಮೆ ಬೆಲೆಗೆ ಅಕ್ಕಿ, ಎಲ್ಲರಿಗೂ ಮನೆ, ಬಡ ಮಕ್ಕಳಿಗೆ ಸೈಕಲ್, ಮೊದಲಾದುವುಗಳನ್ನು ಹೇಳುವುದಕ್ಕೆ ‘ಪ್ರಾದೇಶಿಕ’ ಪದ ಯಾಕೆ ಬೇಕು? ಅದು ಎಲ್ಲರಿಗೂ ಬೇಕಾದ್ದೇ ಅಲ್ವಾ? ಕರ್ನಾಟವನ್ನು ಒಂದು ಪ್ರಾದೇಶಿಕ ಘಟಕವಾಗಿ ಗ್ರಹಿಸಿ ಅದಕ್ಕೊಂದು ರಾಜಕೀಯ ಆಯಾಮವನ್ನು ನೀಡುವುದು ಸುಲಭವಲ್ಲ. ಸದ್ಯ ಪ್ರಚಲಿತದಲ್ಲಿರುವ ‘ಪ್ರಾದೇಶಿಕ ಪಕ್ಷ’ವೆಂಬ ಮಾತು ಅವಕಾಶವಾದೀ ರಾಜಕಾರಣದ ಸಂಕೇತವಾಗಿಯಷ್ಟೇ ಕಾಣುತ್ತಿದೆ
– ಪುರೊಷೋತ್ತಮ ಬಿಳಿಮಲೆ
ರಾಜಕೀಯ ಪಕ್ಷವೊಂದು ರಾಷ್ಟ್ರೀಯ ಪಕ್ಷವಾಗಲು ಹೊರಟು, ಅಲ್ಲಿ ವಿಫಲವಾದಾಗ, ತನ್ನ ಜಾತಿಯನ್ನೋ, ಕುಟುಂಬದವರನ್ನೋ, ಊರನ್ನೋ ಆಧರಿಸಿಕೊಂಡು ಸೀಮಿತವಾಗಿ ಬೆಳೆದರೆ, ಅದನ್ನು ಪ್ರಾದೇಶಿಕ ಪಕ್ಷ ಎಂದು ಕರೆಯಲಾಗದು. ಇಂಥ ಪಕ್ಷಗಳಿಗೆ ಪ್ರಾದೇಶಿಕ ನಿಷ್ಠವಾದ ವಸ್ತು ವಿಷಯಗಳನ್ನು ಆಧರಿಸಿ ಜನರ ಬಳಿ ಹೋಗುವ ಸೈದ್ಧಾಂತಿಕ ತಿಳಿವಳಿಕೆಯಾಗಲೀ, ಅದಕ್ಕೆ ಬೇಕಾದ ಪೂರ್ವ ತಯಾರಿಯಾಗಲೀ ಇಲ್ಲ. ಪ್ರಾದೇಶಿಕ ಪಕ್ಷವೆಂದು ಘೋಷಿಸಿಕೊಂಡವರ ಪ್ರಣಾಳಿಕೆಯನ್ನು ಯಾವ ರಾಷ್ಟ್ರೀಯ ಪಕ್ಷಕ್ಕಾದರೂ ಸುಲಭವಾಗಿ ಅನ್ವಯಿಸಬಹುದಾದರೆ, ಅವುಗಳನ್ನು ಪ್ರಾದೇಶಿಕ ಪಕ್ಷಗಳ ಪ್ರಣಾಳಿಕೆ ಎಂದು ಯಾಕಾದರೂ ಕರೆಯಬೇಕು? ಹಿಂದುತ್ವದೊಡನೆ ಗುರುತಿಸಿಕೊಂಡೇ ರಾಜಕೀಯ ಮಾಡಿದ ಶ್ರೀ ಯಡಿಯೂರಪ್ಪನವರೂ ಕೆಜೆಪಿ ಕಟ್ಟಿದಾಗ ಅವರ ಪ್ರಣಾಳಿಕೆಯಲ್ಲಿ ಕರ್ನಾಟಕ ಎಂಬ ಪದ ಸೇರಿದ್ದು ಬಿಟ್ಟರೆ, ಉಳಿದಂತೆ ಯಾವ ಬದಲಾವಣೆಯೂ ಆಗಿರಲಿಲ್ಲ. ಹಾಗಾಗಿ ಅವರಿಗೆ ಮತ್ತೆ ಭಾಜಪದಲ್ಲಿ ಅವಕಾಶ ಸಿಕ್ಕಾಗ ಹಿಂದಿರುಗಲು ಯಾವುದೇ ಸಮಸ್ಯೆ ಆಗಲಿಲ್ಲ. ರಾಜಕೀಯ ಅವಕಾಶವಾದಿತನವನ್ನು ಪ್ರಾದೇಶಿಕ ಎಂದು ಕರೆದು ಜನರ ಭಾವನೆಗಳನ್ನು ಬಡಿದೆಬ್ಬಿಸುವ ಕೆಲಸವನ್ನು ರಾಜಕಾರಣಿಗಳು ಮಾಡುತ್ತಾರೆ. ಅದನ್ನು ನಂಬಬಾರದು ಅಷ್ಟೇ.
ತಮಿಳುನಾಡಿನಲ್ಲಿ ಎರಡು ಪ್ರಮುಖ ಪ್ರಾದೇಶಿಕ ಪಕ್ಷಗಳಿವೆ. ಡಿಎಂಕೆ ಮತ್ತು ಎಐಎಡಿಎಂಕೆ. ಈ ಎರಡೂ ಪಕ್ಷಗಳಿಗೆ ಸುದೀರ್ಘವಾದ ಹಿನ್ನೆಲೆಯಿದೆ. ಸ್ವಾತಂತ್ರ್ಯಪೂರ್ವ ಕಾಲಘಟ್ಟದಲ್ಲಿ ಸಕ್ರಿಯವಾಗಿದ್ದ ಸ್ವತಂತ್ರ ಪಕ್ಷವು ವಾಸ್ತವವಾಗಿ ‘ಸ್ವತಂತ್ರ ದ್ರಾವಿಡಸ್ಥಾನ‘ ದ ಬೇಡಿಕೆಯನ್ನು ಮುಂದಿಟ್ಟು, ಉತ್ತರ ಭಾರತದ ‘ಆರ್ಯ ಕೇಂದ್ರಿತ’ ಚಿಂತನಾ ಕ್ರಮವನ್ನು ದಿಟ್ಟವಾಗಿ ವಿರೋಧಿಸಿತ್ತು. ಇದರ ಜೊತೆಗೆ ಜಸ್ಟೀಸ್ ಪಕ್ಷವು ’ತಮಿಳು ಹೆಮ್ಮೆ’ ಯನ್ನು ಆಧರಿಸಿ, ಹಿಂದಿಯ ಹೇರಿಕೆಯ ಬಗ್ಗೆ ಹೋರಾಟ ನಡೆಸಿತ್ತು. ನಿಧಾನವಾಗಿ ಈ ಎರಡೂ ಪಕ್ಷಗಳೂ ಒಟ್ಟು ಸೇರಿ ಡಿಎಂಕೆ ಆಯಿತು. ಡಿಎಂಕೆಯು ಪ್ರತ್ಯೇಕ ದ್ರಾವಿಡ ಸ್ಥಾನದ ಬೇಡಿಕೆಯನ್ನು ಕೈಬಿಟ್ಟು, ಭಾರತದ ಒಕ್ಕೂಟ ವ್ಯವಸ್ಥೆಯಡಿಯಲ್ಲಿ ‘ತಮಿಳುನಾಡಿಗೆ’ ಬೇಡಿಕೆ ಸಲ್ಲಿಸಿತು, ಅದರಲ್ಲಿ ಯಶಸ್ವಿಯಾಯಿತು. ಉತ್ತರ ಭಾರತದ ಸಾಂಸ್ಕøತಿಕ ಆಕ್ರಮಣ, ಬ್ರಾಹ್ಮಣೀಕರಣ, ಹಿಂದಿ ಹೇರಿಕೆ, ಮತ್ತು ‘ಆರ್ಯ ವಿರೋಧೀ’ ಧೋರಣೆಗಳು ತಮಿಳುನಾಡಿನ ಜನರನ್ನು ಪ್ರಾದೇಶಿಕ ಪಕ್ಷ ಡಿಎಂಕೆಯ ಕಡೆಗೆ ಭಾವನಾತ್ಮಕವಾಗಿ ಸೆಳೆದವು. ಇದು ಸ್ವಲ್ಪ ಕಾಲ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದು ನಿಜ, ಆದರೆ 1972ರಲ್ಲಿ ಎಂ ಜಿ ರಾಮಚಂದ್ರನ್ ಅವರು ಪ್ರತ್ಯೇಕ ಪಕ್ಷವೊಂದನ್ನು ಕಟ್ಟಿದಾಗ ಚಳುವಳಿ ದುರ್ಬಲವಾಯಿತು ಮಾತ್ರವಲ್ಲ, ಮುಂದೆ ಜಯಲಲಿತಾ ಅವರು ಬಿಜೆಪಿ ಜೊತೆ ಸಖ್ಯ ಮಾಡಿಕೊಂಡಲ್ಲಿಗೆ ಅದರ ಪ್ರಾದೇಶಿಕ ಹೋರಾಟದ ಸ್ವರೂಪ ವಿರೂಪಗೊಂಡಿತು. ಮುಂದೆ ಡಿಎಂಕೆ ಕಾಂಗ್ರೆಸ್ನೊಂದಿಗೆ ಕೈ ಜೋಡಿಸಿತು. ತಮಿಳುನಾಡಿನ ಮಾದರಿಯಲ್ಲಿಯೇ 1982ರಲ್ಲಿ ‘ತೆಲುಗು ಸಾಂಸ್ಕøತಿಕ ಹೆಮ್ಮೆ’ ಯನ್ನು ಆಧರಿಸಿ ತೆಲುಗು ದೇಶಂ ಅಸ್ತಿತ್ವಕ್ಕೆ ಬಂದು ಸ್ವಲ್ಪ ಕಾಲ ಸದ್ದು ಮಾಡಿತು, ಅದರೆ ಮುಂದೆ ಚಂದ್ರಬಾಬು ನಾಯಿಡು ಕಾಲದಲ್ಲಿ ಅದು ಕೂಡಾ ರಾಷ್ಟ್ರಿಯ ಪಕ್ಷವಾದ ಬಿಜೆಪಿ ಜೊತೆ ಸಖ್ಯ ಮಾಡಿಕೊಂಡಿತು. ಅಲ್ಲಿಗೆ ಅದರೆ ತೆಲುಗು ಹೆಮ್ಮೆಯ ಕತೆ ಕೊನೆಯಾಯಿತು.
ಪಂಜಾಬ್ ಪರಿಸರದಲ್ಲಿ ಅಸ್ತಿತ್ವಕ್ಕೆ ಬಂದ ಅಕಾಲಿ ದಳವು ಸ್ವಾತಂತ್ರ್ಯಪೂರ್ವದಲ್ಲಿ ‘ಸಿಖ್ ಧರ್ಮ’ ವನ್ನು ಆಧರಿಸಿ ‘ಪ್ರಾದೇಶಿಕ’ ಬೇಡಿಕೆಯನ್ನು ಮಂಡಿಸಿತ್ತು. ಪರಿಣಾಮವಾಗಿ 1966ರಲ್ಲಿ ‘ಪಂಜಾಬ್’ ರಚನೆಯಾಯಿತು. ಮುಂದೆ ಅಕಾಲಿ ದಳದಲ್ಲಿದ್ದ ಕೆಲವು ಉಗ್ರಗಾಮಿಗಳು ಪ್ರತ್ಯೇಕ ಖಾಲಿಸ್ಥಾನಕ್ಕೆ ಬೇಡಿಕೆಯಿಟ್ಟರೂ ಅದು ವಿಫಲವಾಯಿತು. ‘ಪಂಜಾಬೀ ಹೆಮ್ಮೆ’ ಯ ತೀವ್ರ ಪ್ರತಿಪಾದಕರಾದ ಅಕಾಲಿ ದಳವು ಕೂಡಾ ಮುಂದೆ ಬಿಜೆಪಿಯ ತೆಕ್ಕೆಗೆ ಸೇರಿಕೊಂಡಿತು. ಮಹಾರಾಷ್ಟ್ರ ಮತ್ತು ಅಸ್ಸಾಮಿನಲ್ಲಿ ಪ್ರಾದೇಶಿಕ ಪಕ್ಷಗಳ ರಚನೆಗೆ ಕಾರಣವಾದ್ದು ‘ಮಣ್ಣಿನ ಮಕ್ಕಳ’ ಪರಿಕಲ್ಪನೆ. ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಅಸ್ಸಾಮನ್ನು ಪೂರ್ವ ಬಂಗಾಳದೊಂದಿಗೆ ಸೇರಿಸಲಾಗಿತ್ತು. ಕಾರಣ ಬಂಗಾಳಿಗಳು ಅಸ್ಸಾಮಿನ ಉದ್ದಗಲಗಳಲ್ಲಿ ಇರುವುದು ಸಹಜವಾಗಿತ್ತು. ಅಸ್ಸಾಂನಿಂದ ಬಂಗಾಲಿಗಳನ್ನು ಹೊರಹಾಕುವ ಮತ್ತು ಮುಸ್ಲಿಮರನ್ನು ದ್ವೇಷಿಸುವ ಪ್ರಣಾಳಿಕೆ ಇರಿಸಿಕೊಂಡ ಅಸೋಂ ಗಣ ಪರಿಷತ್ಗೆ 1980 ರ ದಶಕದಲ್ಲಿ ಗಣನೀಯವಾಗಿ ಬೆಂಬಲ ದೊರೆಯಿತು. ಮುಂದೆ ಈ ಪಕ್ಷವೂ ಕೂಡಾ ಬಿಜೆಪಿಯೊಂದಿಗ ರಾಜಿ ಮಾಡಿಕೊಂಡಿತು. ಹೆಚ್ಚು ಕಡಿಮೆ ಇಂಥದ್ದೇ ಪರಿಸ್ಥಿತಿಯಲ್ಲಿ ಗುಜರಾತೀ ಮತ್ತು ಕನ್ನಡಿಗರನ್ನು ಹೊರಹಾಕುವ ಉದ್ದೇಶದಿಂದ ಬೆಳೆದ ಮಹಾರಾಷ್ಟ್ರದ ಶಿವಸೇನೆಯು ಮರಾಠೀ ಹೆಮ್ಮೆಯನ್ನು ಹಿಂದೂ ಹೆಮ್ಮೆ ಜೊತೆ ಸಮೀಕರಿಸಿಕೊಂಡು ಬೆಳೆಯಿತು ಮತ್ತು ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯೊಂದಿಗೆ ಗೆಳೆತನ ಸಾಧಿಸಿಕೊಂಡಿತು. ಈಗ ಅದು ಕಾಂಗ್ರೆಸ್ಸಿನ ಜೊತೆಗಿದೆ. ಇದೇರೀತಿ ಬೇರೆ ಬೇರೆ ರಾಜ್ಯಗಳಲ್ಲಿ ಇಂದು ಪ್ರಾದೇಶಿಕ ಪಕ್ಷಗಳು ತಲೆ ಎತ್ತುತ್ತಿದ್ದರೂ ಅವುಗಳಲ್ಲ್ಲಿ ಹೆಚ್ಚಿನವು ಬಿಜೆಪಿಯೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುತ್ತಾ ನಿರ್ನಾಮವಾಗುತ್ತಿವೆ. ಮೊದಲು ಕಾಂಗ್ರಸ್ ಪಕ್ಷ ಪ್ರಾದೇಶಿಕ ಪಕ್ಷಗಳನ್ನು ನಿರ್ನಾಮ ಮಾಡಿತ್ತು. ಆ ಕೆಲಸವನ್ನು ಈಗ ಬಿಜೆಪಿ ಮುಂದುವರೆಸುತ್ತಿದೆ. ಬಿಹಾರದ ಜೆಡಿಯು ಈಚಿನ ಉದಾಹರಣೆ.
ಒಂದೆಡೆ ಪ್ರಾದೇಶಿಕತೆಯ ಮಾತು, ಇನ್ನೊಂದೆಡೆ ಬಿಜೆಪಿಯ ಆಕರ್ಷಣೆ- ಇವೆರಡರ ನಡುವಣ ಸ್ವಯಂ ವೈರುದ್ಧ್ಯಗಳ ನಡುವೆ ಜೆಡಿಎಸ್ ತನ್ನ ರಾಜಕೀಯ ನಡೆಸುತ್ತಿದೆ. ಆ ಪಕ್ಷಕ್ಕೆ ಪ್ರಾದೇಶಿಕ ಅಭಿವೃದ್ಧಿಯ ಬಗೆಗೆ ಯಾವುದೇ ತಿಳುವಳಿಕೆ ಇದ್ದಂತಿಲ್ಲ. ಬಡವರ ಅಭಿವೃದ್ಧಿ, ಕಡಿಮೆ ಬೆಲೆಗೆ ಅಕ್ಕಿ, ಎಲ್ಲರಿಗೂ ಮನೆ, ಬಡ ಮಕ್ಕಳಿಗೆ ಸೈಕಲ್, ಮೊದಲಾದುವುಗಳನ್ನು ಹೇಳುವುದಕ್ಕೆ ‘ಪ್ರಾದೇಶಿಕ’ ಪದ ಯಾಕೆ ಬೇಕು? ಅದು ಎಲ್ಲರಿಗೂ ಬೇಕಾದ್ದೇ ಅಲ್ವಾ?
ಕರ್ನಾಟವನ್ನು ಒಂದು ಪ್ರಾದೇಶಿಕ ಘಟಕವಾಗಿ ಗ್ರಹಿಸಿ ಅದಕ್ಕೊಂದು ರಾಜಕೀಯ ಆಯಾಮವನ್ನು ನೀಡುವುದು ಸುಲಭವಲ್ಲ. ಏಕೆಂದರೆ ಕರ್ನಾಟಕವು ಇಂದು ಭೌಗೋಳಿಕವಾಗಿ ಉತ್ತರ, ದಕ್ಷಿಣ ಮತ್ತು ಕರಾವಳಿ ಕರ್ನಾಟಕಗಳೆಂಬ ಪ್ರಾದೇಶಿಕ ವ್ಯತ್ಯಾಸಗಳನ್ನು ಒಳಗೊಂಡಿದೆ. ಕರ್ನಾಟಕದ ಜನಸಮುದಾಯವು, ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣ, ಕುರುಬ, ಮತ್ತಿತರ ಸಮುದಾಯಗಳ ನಡುವೆ ಆಳವಾಗಿ ಒಡೆದು ಹೋಗಿದೆ. ಇಲ್ಲಿನ ಧಾರ್ಮಿಕ ವ್ಯವಸ್ಥೆಯಲ್ಲಿಯೂ ಬಹಳ ವ್ಯತ್ಯಾಸಗಳಿವೆ. ದ್ವೈತ-ಅದ್ವೈತ-ವಿಶಿಷ್ಟಾದ್ವೈತ, ಜೈನ, ಬೌದ್ಧ, ಲಿಂಗಾಯತ-ವೀರಶೈವ, ಇಸ್ಲಾಂ, ಕ್ರಿಶ್ಚಿಯನ್ ಮೊದಲಾದುವುಗಳು ಇಲ್ಲಿವೆ. ಜೊತೆಗೆ, ಕರಾವಳಿಯಲ್ಲಿ ಜನ ಭೂತಾರಾಧನೆಯಲ್ಲಿ ತೊಡಗಿದರೆ, ಹಳೆ ಮೈಸೂರಿನಲ್ಲಿ ಮಾದೇಶ್ವರ- ಮಂಟೇಸ್ವಾಮಿಯವರಿಗೆ ಹರಿಕೆ ಒಪ್ಪಿಸುತ್ತಾರೆ. ಉತ್ತರ ಕರ್ನಾಟಕದಲ್ಲಿ ಹುಲಿಗೆಮ್ಮ , ಎಲ್ಲಮ್ಮ, ಮೈಲಾರ ಮತ್ತಿತರ ಜನಪದ ದೈವಗಳಿದ್ದು, ಇವೆಲ್ಲವುಗಳನ್ನೂ ಒಂದು ವಿವರಣೆಯಿಂದ ಕಟ್ಟಿ ಹಾಕುವುದು ಕಷ್ಟದ ಮಾತು. ಆರ್ಥಿಕವಾಗಿಯೂ ಕರ್ನಾಟದ ಅಭಿವೃದ್ಧಿ ಎಲ್ಲೆಡೆಯೂ ಸಮಾನವಾಗಿಲ್ಲ. ಕನ್ನಡದ ಜೊತೆಗೆ ತುಳು, ಕೊಡವ, ಉರ್ದು, ಕೊಂಕಣಿ, ತಮಿಳು, ತೆಲುಗು, ಮರಾಠೀ ಮೊದಲಾದ 60ಕ್ಕೂ ಹೆಚ್ಚು ಭಾಷೆಗಳೂ ಇಲ್ಲಿವೆ. ಇವೆಲ್ಲವನ್ನೂ ಪರಿಗಣಿಸುತ್ತಾ, ಸಮರ್ಪಕವಾದ ಚೌಕಟ್ಟಿನಲ್ಲಿ ಕರ್ನಾಟಕದ ‘ಪ್ರಾದೇಶಿಕ ಪರಿಕಲ್ಪನೆʼಯನ್ನು ನಿರ್ವಚಿಸುವ ರಾಜಕೀಯ ನಾಯಕರು ಯಾರಿದ್ದಾರೆ?
ಹೀಗಾಗಿ ಸದ್ಯ ಪ್ರಚಲಿತದಲ್ಲಿರುವ ‘ಪ್ರಾದೇಶಿಕ ಪಕ್ಷ’ವೆಂಬ ಮಾತು ಅವಕಾಶವಾದೀ ರಾಜಕಾರಣದ ಸಂಕೇತವಾಗಿಯಷ್ಟೇ ಕಾಣುತ್ತಿದೆ