ಉದ್ಯಮಿ ಪ್ರದೀಪ್ ಆತ್ಮಹತ್ಯೆ: ಮಾಜಿ ಸಚಿವ ಅರವಿಂದ ಲಿಂಬಾವಳಿ ಸೇರಿ 6 ಮಂದಿ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಹಣಕಾಸು ವಿಚಾರಕ್ಕೆ ಸಂಬಂಧಿಸಿ ವಂಚನೆಗೆ ಒಳಗಾದ ಉದ್ಯಮಿ ಪ್ರದೀಪ್‌ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸೇರಿ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ನಗರದ ದಕ್ಷಿಣ ತಾಲೂಕಿನ ನೆಟ್ಟಿಗೆರೆ ಗ್ರಾಮದ ಬಳಿ ನಿನ್ನೆ (ಜನವರಿ 1) ಪ್ರದೀಪ್ (47) ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳಕ್ಕೆ ಎಫ್‌ಎಸ್‌ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮೃತ ಉದ್ಯಮಿ ಪ್ರದೀಪ್ ಪತ್ನಿ ನೀಡಿದ ದೂರಿನನ್ವಯ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 306ರಡಿ (ಆತ್ಮಹತ್ಯೆಗೆ ಪ್ರಚೋದನೆ) ಎಫ್​ಐಆರ್ ದಾಖಲಾಗಿದೆ.

ಪ್ರದೀಪ್‌ ಆತ್ಮಹತ್ಯೆ ಮಾಡಿಕೊಂಡ ವೇಳೆ ಮಹದೇವಪುರ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ, ಜಿ.ರಮೇಶ್‌ ರೆಡ್ಡಿ, ಕೆ.ಗೋಪಿ‌, ಜಯರಾಮ್ ರೆಡ್ಡಿ, ರಾಘವ ಭಟ್, ಸೋಮಯ್ಯ ಹೆಸರುಗಳನ್ನು ಉಲ್ಲೇಖಿಸಿ 2.2 ಕೋಟಿ ರೂ. ಮೋಸವಾಗಿದೆ ಎಂದು ಬರೆದಿರುವುದು ತಿಳಿದುಬಂದಿದೆ.

ಪ್ರದೀಪ್ ಕುಟುಂಬದೊಂದಿಗೆ ಎರಡು ದಿನಗಳ ಹಿಂದೆ ನೆಟ್ಟಿಗೆರೆಯಲ್ಲಿರುವ ವೂಡ್ಸ್ ರೆಸಾರ್ಟಿಗೆ ಹೊಸ ವರ್ಷಾಚರಣೆಗಾಗಿ ಬಂದಿದ್ದು ಡಿಸೆಂಬರ್‌ 31ರ ರಾತ್ರಿ ಪತ್ನಿ ಜೊತೆಗೆ ಜಗಳ ಮಾಡಿಕೊಂಡು ವಾಪಸ್ಸು ಮನೆಗೆ ಹೋಗಿದ್ದಾರೆ. ಮರು ದಿನ ರೆಸಾರ್ಟ್ ಬಳಿ ಬಂದಿದ್ದಾರೆ. ಸಂಜೆ 5 ಗಂಟೆ ಸುಮಾರಿಗೆ ಪ್ರದೀಪ್‌ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ.

ಮೃತ ವ್ಯಕ್ತಿ ಪ್ರದೀಪ್ ಮೈಸೂರು ನಿವಾಸಿಯಾಗಿದ್ದು, ಹಣಕಾಸಿನ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ತನಿಖೆಗೆ ಮುಂದಾಗಿದ್ದು, ಆತ​ ಯಾರೊಂದಿಗೆ ವ್ಯವಹಾರ ಮಾಡಿದ್ದರು ಮತ್ತು ಅವರಿಗೆ ಸಂಬಂಧಿಸಿದ ವಯುಕ್ತಿಕ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ ಎಂದಿದ್ದಾರೆ.

ಬ್ಯಾಂಕ್‌ ವಿವರಗಳನ್ನು ಪರಿಶೀಲಿಸಲಾಗುತ್ತಿದೆ ಎಂದಿರುವ ಪೊಲೀಸರು, ರೆಸಾರ್ಟ್​​ನಲ್ಲಿ ಹೂಡಿಕೆ ಮಾಡಲು ಹಣ ಕೊಟ್ಟಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಮೊದಲಿಗೆ ಐವರಿಗೆ ನೋಟಿಸ್‌ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಎಂಟು ಪುಟಗಳ ಆತ್ಮಹತ್ಯೆ ಪತ್ರ

ಎಂಟು ಪುಟಗಳ ಪತ್ರ ಲಭ್ಯವಾಗಿದ್ದು, ಅದರಲ್ಲಿ ಹೆಚ್ ಎಸ್ ಆರ್ ಲೇಔಟ್ ಸಮೀಪದ ಹರಳೂರಿನಲ್ಲಿ ಕ್ಲಬ್ ತೆರೆಯುವ ಉದ್ದೇಶಕ್ಕೆ ಕೆ. ಗೋಪಿ ಮತ್ತು ಸೋಮಯ್ಯ ಬಳಿ 2018ರಲ್ಲಿ ಚರ್ಚಿಸಿ ರೆಸಾರ್ಟ್ ನಡೆಸಲು ಇವರಿಬ್ಬರು ಒಪ್ಪಿಕೊಂಡು ಪ್ರತಿ ತಿಂಗಳು 3 ಲಕ್ಷ ರೂ. ಲಾಭಾಂಶ ಮತ್ತು ಅಲ್ಲಿಯೇ ಕೆಲಸ ಮಾಡಿದರೆ ತಿಂಗಳಿಗೆ ಒಂದೂವರೆ ಲಕ್ಷ ರೂ ಸಂಬಳ ಕೊಡುವುದಾಗಿ ಹೇಳಿದ್ದರು. ಅದಕ್ಕೆ ಒಪ್ಪಿಕೊಂಡು 2018ರ ಮೇ ಯಿಂದ ಡಿಸೆಂಬರ್ ವರೆಗೆ ಒಂದು ಕೋಟಿ ಹತ್ತು ಲಕ್ಷ ರೂ ಬ್ಯಾಂಕ್‌ಗೆ ಜಮೆ ಮಾಡಿದ್ದೇನೆ.

ಮೈಸೂರಿನಲ್ಲಿ ಇರುವ ಮನೆ ಮಾರಾಟ ಮಾಡಿ 40 ಲಕ್ಷ ರೂಪಾಯಿ ನಗದು ರೂಪದಲ್ಲಿ ಈ ಇಬ್ಬರಿಗೆ ನೀಡಿದ್ದೆ. ನನ್ನನ್ನು ಪಾಲುದಾರನನ್ನಾಗಿ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ, ಇಲ್ಲಿಯವರೆಗೂ ಯಾವುದೇ ಲಾಭ ಕೊಡಲಿಲ್ಲ. ಈ ಬಗ್ಗೆ ಮಾತನಾಡಲು ಶಾಸಕರ ಬಳಿಗೆ ಹೋದಾಗ ರಾಜಿ ಸಂಧಾನ ನೆಪದಲ್ಲಿ ತಿಂಗಳಿಗೆ 1 ಲಕ್ಷ ರೂಪಾಯಿ ಲೆಕ್ಕದಲ್ಲಿ 9 ತಿಂಗಳು ನನ್ನ ಬಳಿ ಹಣ ಪಡೆದರು. ಆನಂತರ 90 ಲಕ್ಷ ರೂ. ವಾಪಸ್ ಕೊಡುತ್ತಾರೆ ಎಂದು ಹೇಳಿದರು. ಆದರೆ, ಆ ವೇಳೆಗೆ ನಾನು ಸಾಕಷ್ಟು ಸಾಲ ಮಾಡಿಕೊಂಡಿದ್ದೆ. ಶಾಸಕ ಅರವಿಂದ ಲಿಂಬಾವಳಿ ಸಹ ನನಗೆ ಸಹಾಯ ಮಾಡಿಲ್ಲ. ರಮೇಶ್ ರೆಡ್ಡಿ ಬಳಿ 10 ಲಕ್ಷ ರೂ. ಸಾಲ ಪಡೆದಿದ್ದೆ. ಅದರ ಪ್ರತಿಯಾಗಿ ಕೃಷಿ ಜಮೀನು ಮಾರಾಟ ಮಾಡಿ 35 ಲಕ್ಷ ರೂ. ಪಾವತಿ ಮಾಡಿದ್ದೇನೆ.

ಆದರೂ ಮತ್ತಷ್ಟು ಹಣ ಸುಲಿಗೆಗೆ ಬೆದರಿಕೆ ಒಡ್ಡುತ್ತಿದ್ದಾರೆ. ರಾಘವ ಭಟ್ ನನ್ನ ಬಳಿ 20 ಲಕ್ಷ ರೂ. ಸಾಲ ಪಡೆದಿದ್ದು, ಇಲ್ಲಿಯವರೆಗೂ ವಾಪಸ್ ಕೊಡದೆ ಮೋಸ ಮಾಡಿದ್ದಾರೆ. ನನಗೆ 2 ಕೋಟಿ 20 ಲಕ್ಷ ಬರಬೇಕಿತ್ತು. ಶಾಸಕರು ರಾಜಿ ಸಂಧಾನ ಮಾಡಿಸಿ 90 ಲಕ್ಷ ರೂ. ಕೊಡಿಸುವುದಾಗಿ ಹೇಳಿ 10 ಲಕ್ಷದ 9 ಚೆಕ್ ಕೊಡಿಸಿದ್ದರು. ಪ್ರತಿ ತಿಂಗಳು ಬ್ಯಾಂಕ್‌ ಖಾತೆಗೆ ಜಮೆ ಮಾಡಿಸಿಕೊಳ್ಳುವಂತೆ ಹೇಳಿದ್ದರು. ಕ್ಲಬ್ ಪ್ರಾರಂಭಿಸಲು ಮಾಡಿಕೊಂಡಿದ್ದ ಸಾಲ ಅದಕ್ಕೆ ಬಡ್ಡಿ ಹಣ ಕಟ್ಟಲು ಪತ್ನಿ ಸಹ ಸಾಲ ಮಾಡಿಕೊಟ್ಟಿದ್ದಾರೆ. ಈ ಎಲ್ಲ ಹಣವೂ ಪತ್ನಿ ಮತ್ತು ಮಗಳಿಗೆ ಕೊಡಿಸಬೇಕು ಎಂದು ಉಲ್ಲೇಖಿಸಿ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *