ʻಪ್ರಾಚೀನ ಭಾರತದ ತಾಯಿʼ ಉಪನ್ಯಾಸಗಳ ಬಗ್ಗೆ ಯುಜಿಸಿ ಸುತ್ತೋಲೆ: ಎಐಡಿಡಬ್ಲ್ಯೂಎ ಖಂಡನೆ

ನವದೆಹಲಿ: ಪ್ರಾಚೀನ ಭಾರತದ ಪ್ರಜಾಪ್ರಭುತ್ವ ಕುರಿತು ಸಂವಿಧಾನದ ದಿನ (ನವೆಂಬರ್‌ 26, 2022) ಉಪನ್ಯಾಸಗಳನ್ನು ಏರ್ಪಡಿಸಲು ಯುಜಿಸಿಯು (ವಿಶ್ವವಿದ್ಯಾಲಯ ಅನುದಾನ ಆಯೋಗ) ವಿಶ್ವವಿದ್ಯಾಲಯಗಳಿಗೆ ನಿರ್ದೇಶನ ನೀಡಿರುವುದನ್ನು ಹಿಂದಕ್ಕೆ ಪಡೆಯಬೇಕೆಂದು ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘಟನೆ(ಎಐಡಿಡಬ್ಲ್ಯೂಎ)ಯು ಒತ್ತಾಯಿಸಿದೆ.

ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಎಐಡಿಡಬ್ಲ್ಯೂಎ ರಾಷ್ಟ್ರೀ ಅಧ್ಯಕ್ಷರಾದ ಮಾಲಿನಿ ಭಟ್ಟಾಚಾರ್ಯ ಅವರು, ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿಯು) 45 ಕೇಂದ್ರ ವಿಶ್ವವಿದ್ಯಾಲಯಗಳಿಗೆ ಮತ್ತು 45 ಕಲ್ಪಿತ (ಡೀಮ್ಡ್) ವಿಶ್ವವಿದ್ಯಾಲಯಗಳಿಗೆ ನವೆಂಬರ್ 15, 2022 ರಂದು ಪತ್ರವನ್ನು ಬರೆದು ಸಂವಿಧಾನ ದಿನವಾದ 26.11.2022 ರಂದು “ಭಾರತ – ಪ್ರಜಾಪ್ರಭುತ್ವದ ತಾಯಿ” ಕುರಿತು  ಉಪನ್ಯಾಸಗಳನ್ನು ಏರ್ಪಡಿಸಬೇಕೆಂದು ನಿರ್ದೇಶಿಸಿದೆ. ಭಾರತೀಯ ಪ್ರಜಾಪ್ರಭುತ್ವದ ಪ್ರಾಚೀನ ಮೂಲಗಳ ಕುರಿತು ಉಪನ್ಯಾಸಗಳನ್ನು ಏರ್ಪಡಿಸುವುದರ ಜತೆಯಲ್ಲೇ ಸಂವಿಧಾನದ ಪ್ರಸ್ತಾವನೆ ಮತ್ತು ಮೂಲಭೂತ ಕರ್ತವ್ಯಗಳ ಅಧ್ಯಾಯವನ್ನು ಓದಬೇಕು ಎಂದು ಪತ್ರದಲ್ಲಿ ನಿರ್ದೇಶಿಸಲಾಗಿದೆ. ಯುಜಿಸಿಯ ಸುತ್ತೋಲೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.

ಈ ವಿಷಯ ಕುರಿತು ಒಂದು ಪರಿಕಲ್ಪನಾ ಟಿಪ್ಪಣಿಯನ್ನು ಯುಜಿಸಿ ವಿತರಿಸಿದ್ದು ಅದು 15 ವಿಷಯಗಳನ್ನು ಗುರುತಿಸಿದಂತೆ ಕಾಣುತ್ತದೆ. ಈ ಟಿಪ್ಪಣಿಯನ್ನು ಸಾರ್ವಜನಿಕವಾಗಿ ಪ್ರಕಟಿಸಿಲ್ಲವಾದರೂ, ಆ ವಿಷಯಗಳು ಮಹಿಳಾ ವಿರೋಧಿ ಪ್ರಾಚೀನ ಗ್ರಂಥಗಳು ಮತ್ತು ಆಚರಣೆಗಳನ್ನು ವೈಭವೀಕರಿಸುತ್ತವೆ ಎನ್ನುವುದನ್ನು ಹಲವಾರು ಮಾಧ್ಯಮ ವರದಿಗಳು ಮತ್ತು ಯುಜಿಸಿಯ ಅಧ್ಯಕ್ಷರ ಹೇಳಿಕೆಗಳು ಸ್ಪಷ್ಟಪಡಿಸುತ್ತವೆ.

ಖಾಪ್ ಪಂಚಾಯತುಗಳು, ಪಾಳೇಗಾರಿ ಮತ್ತು ಸರ್ವಾಧಿಕಾರಿ ರಾಜಪ್ರಭುತ್ವಗಳು ಹಾಗೂ ಮನುಸ್ಮೃತಿಯಲ್ಲಿ ಉಲ್ಲೇಖಿಸಿರುವ ಮಹಿಳಾ ವಿರೋಧಿ ಸಂಪ್ರದಾಯಗಳು ಆ ಉಪನ್ಯಾಸಗಳ ವಿಷಯಗಳಾಗಿವೆ. ವಿಪರ್ಯಾಸವೆಂದರೆ ಮಹಿಳೆಯರಿಗೆ ಒಂದು ಘನತೆಯ ಹಾಗೂ ಸಭ್ಯ ಬದುಕಿನ ಹಕ್ಕುಗಳನ್ನು ಕಡೆಗಣಿಸುವ ರೀತಿಯಲ್ಲಿ ಸಂವಿಧಾನ ದಿನವನ್ನು ಆಚರಿಸಬೇಕು ಎಂದು ಯುಜಿಸಿಯು ವಿಶ್ವವಿದ್ಯಾಲಯಗಳನ್ನು ಕೇಳಿಕೊಂಡಿದೆ. ಸಂವಿಧಾನದ ಪ್ರಸ್ತಾವನೆಯನ್ನು ಓದಬೇಕು ಎನ್ನುವಾಗಲೇ ಪ್ರಾಚೀನ ಕಾಲದಿಂದಲೂ ಮಹಿಳೆಯರ ಮೇಲಿನ ದಾಳಿ ದಬ್ಬಾಳಿಕೆಗಳಿಗೆ ಬುನಾದಿ ಹಾಕುವ ಚಿಂತನೆ ಹಾಗೂ ಗ್ರಂಥಗಳನ್ನು ಅದು ಉತ್ತೇಜಿಸುತ್ತದೆ ಎಂದು ಎಐಡಿಡಬ್ಲ್ಯೂಎ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಎಐಡಿಡಬ್ಲ್ಯೂಎ ಪ್ರಧಾನ ಕಾರ್ಯದರ್ಶಿ ಮರಿಯಂ ಧವಳೆ ಅವರು, ವೈದಿಕ ಸಂಸ್ಕೃತಿಯ ಪಠ್ಯಗಳನ್ನು ತುರುಕುವ ಮತ್ತು ಹಿಂದುತ್ವ ಬ್ರಿಗೇಡಿನ ಪುರುಷಪ್ರಧಾನ ಮೌಲ್ಯಗಳಿಗೆ ಸರಿಹೊಂದುವಂತೆ ಶೈಕ್ಷಣಿಕ ಪಠ್ಯಗಳನ್ನು ಬದಲಾಯಿಸಲು ಯುಜಿಸಿ ಪ್ರಯತ್ನಿಸುತ್ತಿದೆ. ತಾನೊಂದು ಸ್ವಾಯತ್ತ ಸಂಸ್ಥೆಯಾಗಿದ್ದು ಆಧುನಿಕ ಶಿಕ್ಷಣದ ಮೌಲ್ಯಗಳಿಗೆ ಬದ್ಧವಾಗಿರಬೇಕೆನ್ನುವುದನ್ನು ಬದಿಗೊತ್ತಿದ ಯುಜಿಸಿಯು ಹಿಂದುತ್ವ ಬ್ರಿಗೇಡಿನ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿದೆ. ವೈದಿಕ ಪ್ರಜಾಪ್ರಭುತ್ವವನ್ನು ಒಂದು ಆದರ್ಶ ರಾಜಕೀಯ ವ್ಯವಸ್ಥೆಯನ್ನಾಗಿ ಪ್ರೋತ್ಸಾಹಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಿರ್ದೇಶನವನ್ನು ಯುಜಿಸಿ ನೇರಾ ನೇರಾ ಅನುಸರಿಸುತ್ತಿದೆ. ಈ ಪರಿಕಲ್ಪನೆಯು ನಮ್ಮ ಸಂವಿಧಾನದ ಮೂಲ ಆಶಯ ಹಾಗೂ ತತ್ವಗಳಿಗೆ ಮೂಲತಃ ವಿರುದ್ಧವಾಗಿದೆ ಮತ್ತು ಎನ್.ಇ.ಪಿ. 2020 ರ ಪ್ರತಿಗಾಮಿ ಹಾಗೂ ಮಹಿಳಾ ವಿರೋಧಿ ಮೌಲ್ಯಗಳನ್ನು ಉತ್ತೇಜಿಸುತ್ತದೆ ಎಂದು ತಿಳಿಸಿದ್ದಾರೆ.

ವಿಶ್ವವಿದ್ಯಾಲಯಗಳಲ್ಲಿ ಹಿಂದುತ್ವ ನೈತಿಕತೆಯನ್ನು ಉತ್ತೇಜಿಸಲು ಎನ್.ಇ.ಪಿ. 2020 ತಳಪಾಯ ಹಾಕುತ್ತಿದೆ ಮತ್ತು ಪುರುಷ ಪ್ರಧಾನ ಸಂಪ್ರದಾಯಗಳನ್ನು ವೈಭವೀಕರಿಸಲು ಒತ್ತಾಸೆ ನೀಡುತ್ತದೆ. ಕಾನೂನುಬಾಹಿರ ಸಂಪ್ರದಾಯವಾದಿ ಸಾಮಾಜಿಕ ಸಂಸ್ಥೆಗಳಾದ ಖಾಪ್ ಪಂಚಾಯತುಗಳನ್ನು ನ್ಯಾಯಬದ್ಧಗೊಳಿಸುವ ಯತ್ನಗಳನ್ನು ಯುಜಿಸಿ ಅಧ್ಯಕ್ಷರ ಇತ್ತೀಚಿನ ಹೇಳಿಕೆಗಳು ಸಮರ್ಥಿಸುವಂತಿದೆ. ಅಂತಹ ಸಂಸ್ಥೆಗಳ ವಿರುದ್ಧ ಎಐಡಿಡಬ್ಲ್ಯುಎ ಅವಿರತವಾಗಿ ದೀರ್ಘ ಕಾಲದ ಹೋರಾಟಗಳನ್ನು ನಡೆಸಲಿದೆ ಎಂದು ತಿಳಿಸಿದೆ.

ಸಾಂವಿಧಾನಿಕ ಮೌಲ್ಯಗಳ ಆಧಾರದಲ್ಲಿ ರೂಪುಗೊಂಡಿರುವ ಆಧುನಿಕ ಶಿಕ್ಷಣವನ್ನು ಉತ್ತೇಜಿಸಬೇಕೆಂಬ ಸಾಂವಿಧಾನಿಕವಾಗಿ ನಿರ್ದೇಶಿಸಲ್ಪಟ್ಟಿರುವ ತನ್ನ ಕರ್ತವ್ಯವನ್ನು ಯುಜಿಸಿಯು ನಿರ್ವಹಿಸಬೇಕೆಂದು ಎಐಡಿಡಬ್ಲ್ಯುಎ ಒತ್ತಾಯಿಸಿದೆ. ಯುಜಿಸಿಯ ಸ್ವರೂಪವನ್ನು ಬದಲಾಯಿಸಿ ಅದನ್ನು ಸಂಪ್ರದಾಯವಾದಿ ಹಿಂದುತ್ವ ರಾಜಕೀಯದ ಸಾಧನವನ್ನಾಗಿ ಪರಿವರ್ತಿಸುವ ಎಲ್ಲಾ ಪ್ರಯತ್ನಗಳನ್ನು ವಿಶ್ವವಿದ್ಯಾಲಯಗಳ ಎಲ್ಲಾ ಸದಸ್ಯರುಗಳು ವಿರೋಧಿಸಬೇಕೆಂದು ಎಐಡಿಡಬ್ಲ್ಯುಎ ಮನವಿ ಮಾಡಿದೆ.

Donate Janashakthi Media

Leave a Reply

Your email address will not be published. Required fields are marked *