“ಸಾರ್ವತ್ರಿಕ ಮೂಲ ಆದಾಯ”ದ ಪ್ರಶ್ನೆ, ಮೊಟ್ಟೆಗಳನ್ನು ಒಡೆಯದೆ ಆಮ್ಲೆಟ್.. ?

ಪ್ರೊ. ಪ್ರಭಾತ್ ಪಟ್ನಾಯಕ್

ಅನು:ಕೆ.ವಿ.

 

ಸಾರ್ವತ್ರಿಕ ಮೂಲ ಆದಾಯ’ ಉತ್ತಮ ಆಶಯದ ಶ್ಲಾಘನೀಯ ವಿಚಾರವಾಗಿದ್ದರೂ, ಅದನ್ನು ಈಗ ಪ್ರತಿಪಾದಿಸುತ್ತಿರುವಂತೆ ಅದು ಅರ್ಥಹೀನವೇ ಆಗಿದೆ. ನಿಜವಾದ ಅರ್ಥದಲ್ಲಿ ಒಂದು ಸಾರ್ವತ್ರಿಕ ಮೂಲ ಆದಾಯವನ್ನು ಒದಗಿಸಬೇಕಾದರೆ, ಅದು ಆಹಾರ, ಉದ್ಯೋಗ, ಶಿಕ್ಷಣ, ಆರೋಗ್ಯ ಮತ್ತು ಪಿಂಚಣಿಯ ಐದು ಸಾರ್ವತ್ರಿಕ ಆರ್ಥಿಕ ಹಕ್ಕುಗಳ ಸಂಚಯವಾಗಿಯಲ್ಲದೆ ಬೇರಾವ ರೀತಿಯಲ್ಲೂ ಸಾಧ್ಯವಾಗದು. ಸರ್ಕಾರ ಇವನ್ನು ಖಾತರಿಪಡಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕೆ 2016-17ರ ಆರ್ಥಿಕ ಸಮೀಕ್ಷೆಯು ಸೂಚಿಸಿದ್ದಕ್ಕಿಂತ ಬಹಳಷ್ಟು ಹೆಚ್ಚಿನ ವೆಚ್ಚ ತಗಲುತ್ತದೆ. ಇದನ್ನು ಹೊಂದಿಸಿಕೊಳ್ಳುವುದು ಕಷ್ಟವೇನಲ್ಲ. ಆದರೆ ಇದಕ್ಕೆ ಬೂರ್ಜ್ವಾ ವ್ಯವಸ್ಥೆಯನ್ನು ಮೀರಿ ಹೋಗಬೇಕಾಗುತ್ತದೆ, ಅದರಿಂದಾಗಿ ಅದು ಉದಾರವಾದಿ ಅರ್ಥಶಾಸ್ತ್ರಜ್ಞರ ಪರಿಕಲ್ಪನೆಯನ್ನು ಮೀರಿದ ಸಂಗತಿಯೂ ಆಗುತ್ತದೆ. ಮೊಟ್ಟೆಗಳನ್ನು ಒಡೆಯದೆ ಆಮ್ಲೆಟ್ ಮಾಡಲು ಸಾಧ್ಯವಿಲ್ಲವಲ್ಲ.

ಅನೇಕ ಅರ್ಥಶಾಸ್ತ್ರಜ್ಞರು ಭಾರತಕ್ಕೆ ಒಂದು ಸಾರ್ವತ್ರಿಕ ಮೂಲ ಆದಾಯವನ್ನು ಪ್ರತಿಪಾದಿಸುತ್ತಿದ್ದಾರೆ, ಇದನ್ನು 2016-17ರ ಅಧಿಕೃತ ಆರ್ಥಿಕ ಸಮೀಕ್ಷೆಯಲ್ಲಿಯೂ ಸಹ ಪ್ರಸ್ತಾಪಿಸಲಾಗಿದೆ. ನಿಜ, ಈ ನಿಟ್ಟಿನಲ್ಲಿ ಪ್ರಾಯೋಗಿಕ ಪ್ರಸ್ತಾವಗಳು ವಿಭಿನ್ನವಾಗಿವೆ, ಕೆಲವು ನಿರ್ದಿಷ್ಟ ಆದಾಯಕ್ಕಿಂತ ಕೆಳಗಿನ ಎಲ್ಲಾ ವ್ಯಕ್ತಿಗಳಿಗೆ ಸಾಮಾನ್ಯ ಸಾರ್ವತ್ರಿಕ (ನಗದು) ವರ್ಗಾವಣೆಯನ್ನು ಮಾಡಬೇಕು ಎಂದು ಸೂಚಿಸುತ್ತವೆ; ಇತರ ಕೆಲವು ವ್ಯಕ್ತಿಯ ಪರಿಸ್ಥಿತಿ ಎಷ್ಟು ಕೆಟ್ಟದಾಗಿರುತ್ತದೆ ಎಂಬುದರ ಆಧಾರದ ಮೇಲೆ ಶ್ರೇಣೀಕೃತ ವರ್ಗಾವಣೆಯನ್ನು ಸೂಚಿಸುತ್ತವೆ. ಆದರೆ ಇದರ ಹಿಂದಿರುವುದು-ಪ್ರತಿಯೊಬ್ಬ ನಾಗರಿಕನು/ಳು ಸೂಕ್ತ ಸರ್ಕಾರಿ ಹಣ ವರ್ಗಾವಣೆಗಳ ಮೂಲಕ ಒಂದು ನಿರ್ದಿಷ್ಟ ಮೂಲಭೂತ ಕನಿಷ್ಠ ಮಟ್ಟದ ಹಣದ ಆದಾಯವನ್ನು ಹೊಂದಿರಬೇಕು, ಮತ್ತು ಅದು ಕನಿಷ್ಠ ಜೀವನಮಟ್ಟವನ್ನು ಖಾತ್ರಿಪಡಿಸುವ ಸರಕುಗಳ ಒಂದು ಸಂಚಯದ ಮೇಲೆ ಅವರಿಗೆ ಅಧಿಕಾರ ಕೊಡುವಂತಿರಬೇಕು ಎಂಬ ಒಂದು ಸಮಾಜದ ಕಣ್ಣೋಟ.

ಈ ವಿಚಾರಕ್ಕೆ, ಅದರ ಪರಿಕಲ್ಪನೆಗೆ ಸಂಬಂಧಪಟ್ಟಂತೆ ಆಕ್ಷೇಪಣೆಗಳಿವೆ. ಸರಕಾರದ ಆರ್ಥಿಕ ಸಮೀಕ್ಷೆಯು ಇವನ್ನು ವಿವರವಾಗಿ ಪರಿಶೀಲಿಸಿದೆ. ಅಂತಹ ವರ್ಗಾವಣೆಗಳು ಜನರು ಶ್ರಮ ಪಡದಿರುವಂತೆ ನಿರುತ್ತೇಜನೆ ಹರಡುತ್ತವೆ ಎಂಬುದು ಪ್ರಾಥಮಿಕ ಆಕ್ಷೇಪ. ಯಾವುದೇ ಶ್ರಮಪಡದೆ ಕನಿಷ್ಠ ಆದಾಯವನ್ನು ಪಡೆಯಬಹುದಾದರೆ, ಆದಾಯವನ್ನು ಗಳಿಸಲು ಯಾವುದೇ ಪ್ರಯತ್ನವನ್ನು ಏಕೆ ಮಾಡಬೇಕು? ಆದರೆ ಇಂತಹ ಆಕ್ಷೇಪಣೆ ಮಾಡುವವರು ಒಬ್ಬ ವ್ಯಕ್ತಿಯ ಆದಾಯವು ಅವನ ಪ್ರಯತ್ನವನ್ನಷ್ಟೇ ಪ್ರತಿಬಿಂಬಿಸುವಂತಹ ಸಮಾಜವನ್ನು ನಾವು ಹೊಂದಿದ್ದೇವೆ ಎಂದು ಭಾವಿಸುತ್ತಾರೆ. ಇದರಿಂದಾಗಿ ಯಾವುದೇ ಮಧ್ಯಪ್ರವೇಶವು (ಸಾರ್ವತ್ರಿಕ ಮೂಲ ಆದಾಯದ ರೂಪದಲ್ಲಿ) ಸಮಾಜ ಮಾಡಿಕೊಂಡಿರುವ ಈ ಏರ್ಪಾಟನ್ನು ತಲೆಕೆಳಗು ಮಾಡಬಹುದು. ಆದರೆ ಇದು ಅಸಂಬದ್ಧ ಭಾವನೆ. ಏಕೆಂದರೆ ಶ್ರೀಮಂತರು ಯಾವುದೇ ಶ್ರಮವಿಲ್ಲದೆ ಅಪಾರ ಆದಾಯಗಳನ್ನು ಪಡೆಯುತ್ತಾರೆ, ಆದರೆ ಬಡವರು ಹಿಡಿ ಕೂಳಿಗಾಗಿ ಜೀವ ತೇಯುತ್ತಾರೆ.

ವಾಸ್ತವವಾಗಿ, ಅತ್ಯಂತ ದಣಿವಿನ ಮತ್ತು ಅಪಾಯದ ವೃತ್ತಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಆ ದಣಿವನ್ನು ಸರಿದೂಗಿಸುವಂತಹ ಉತ್ತಮ ಆದಾಯವನ್ನು ಪಡೆಯುತ್ತಾರೆ ಎಂಬ ಆಡಮ್ ಸ್ಮಿತ್‍ರವರ ಸಿದ್ಧಾಂತಕ್ಕೆ ತದ್ವಿರುದ್ಧವಾಗಿ ಜಾನ್ ಸ್ಟುವರ್ಟ್ ಮಿಲ್, ಇಂತಹ ಕಾರ್ಮಿಕರು ನಿಜವಾಗಿಯೂ ಅತಿ ಕಡಿಮೆ ಸಂಬಳ ಪಡೆಯುವವರಾಗಿರುವುದು ಕಂಡು ಬಂದಿದೆ ಎಂದಿದ್ದಾರೆ. ಇಂತಹ ಸಂದರ್ಭದಲ್ಲಿ ಸಾರ್ವತ್ರಿಕ ಮೂಲ ಆದಾಯವು ಕೆಲಸ ಮಾಡದಿರುವುದಕ್ಕೆ ಆದಾಯವನ್ನು ಒದಗಿಸುವುದಿಲ್ಲ, ಬದಲಿಗೆ ಅತ್ಯಂತ ಬಡ ಕಾರ್ಮಿಕರ ಕೆಲಸದ ಕೂಲಿ ದರವನ್ನು ಹೆಚ್ಚಿಸುತ್ತದೆ. ಒಬ್ಬ ವ್ಯಕ್ತಿಗೆ ಯಾವುದೇ ಕೆಲಸ ಸಿಗದಿದ್ದರೆ, ಅವನು ನಿರುದ್ಯೋಗಿಯಾಗಿ ಉಳಿದಿರುವುದು ಆ ವ್ಯಕ್ತಿಯ ದೋಷವಲ್ಲ, ಬದಲಾಗಿ, ಅವನು ಯಾವ ಸಾಮಾಜಿಕ ಏರ್ಪಾಟಿನಲ್ಲಿ ವಾಸಿಸುತ್ತಿದ್ದಾನೋ ಅದರ ದೋಷವಾಗಿರುತ್ತದೆ.

ಸಾರ್ವತ್ರಿಕ ಮೂಲ ಆದಾಯವು ಒಬ್ಬ ವ್ಯಕ್ತಿ ಶ್ರಮ ಪಡದಂತೆ ನಿರುತ್ತೇಜಿತಗೊಳಿಸುತ್ತದೆ ಎಂದು ಹೇಳುವುದು, ಸಂಬಳವನ್ನು ಏರಿಸುವುದು ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತದೆ ಎಂಬ ಬಲಪಂಥೀಯ “ಪೂರೈಕೆಯ ಕಡೆಯ” (supply-side) ಪ್ರತಿಪಾದನೆಗೆ ಸಮನಾದದ್ದು. ಅವರೇನು “ಶ್ರೀಮಂತರು ಹೆಚ್ಚು ಕೊಟ್ಟರೆ ಉತ್ತಮವಾಗಿ ಕೆಲಸ ಮಾಡುತ್ತಾರೆ, ಬಡವರು ಕಡಿಮೆ ಕೊಟ್ಟರೆ ಉತ್ತಮವಾಗಿ ಕೆಲಸ ಮಾಡುತ್ತಾರೆ” ಎಂದು ಸೂಚಿಸುತ್ತಿದ್ದಾರೆಯೇ ಎನ್ನುತ್ತ ಇದನ್ನು ಉದಾರವಾದಿ ಅಮೇರಿಕನ್ ಅರ್ಥಶಾಸ್ತ್ರಜ್ಞ ಜೆ ಕೆ ಗಾಲ್‌ಬ್ರೇತ್ ಗೇಲಿ ಮಾಡಿದ್ದರು. ಇಂತಹ ಪ್ರತಿಪಾದನೆ ನೈತಿಕವಾಗಿ ನಿಂದನೀಯ ಮತ್ತು ವಿಶ್ಲೇಷಣಾತ್ಮಕವಾಗಿ ಸಂಪೂರ್ಣವಾಗಿ ಆಧಾರಹೀನ.

ಮೊಟ್ಟೆಗಳನ್ನು ಒಡೆಯದೆ …

ಸಾರ್ವತ್ರಿಕ ಮೂಲ ಆದಾಯವನ್ನು ವಿರೋಧಿಸುವ ಈ ಬಲಪಂಥೀಯ ನಿಲುವಿಗೆ ವಿರುದ್ಧವಾಗಿ, ಈ ಪ್ರಸ್ತಾಪವನ್ನು ಮುಂದಿಡುವುದು ಒಂದು ಪ್ರಗತಿಪರ ಉದಾರವಾದಿ ಪ್ರತಿಪಾದನೆಯನ್ನು ತೋರಿಸುತ್ತದೆ. ಆದರೆ ಹೀಗೆ ಮುಂದಿಡುವುದರಲ್ಲಿನ ಸಮಸ್ಯೆಯೆಂದರೆ ನಿಖರವಾಗಿ ಉದಾರವಾದಿ ನಿಲುವುಗಳಲ್ಲಿ ಸಾಮಾನ್ಯವಾಗಿರುವ ಸಮಸ್ಯೆಯೇ. ಅಂದರೆ ಅದು ಮೊಟ್ಟೆಗಳನ್ನು ಒಡೆಯದೆ ಆಮ್ಲೆಟ್ ಮಾಡಲು ಬಯಸುತ್ತದೆ. ಇದು ಬಂಡವಾಳಶಾಹಿ ವ್ಯವಸ್ಥೆಯೊಳಗೇ ಕಾರ್ಯನಿರ್ವಹಿಸಲು ಬಯಸುತ್ತದೆ, ಬಂಡವಾಳಶಾಹಿಗಳನ್ನು ಹೆಚ್ಚು ಅಸಮಾಧಾನಗೊಳಿಸದೆ ಪರಿಸ್ತಿತಿಯನ್ನು ದುಡಿಯುವ ಜನರಿಗೆ ಹೆಚ್ಚು ಮಾನವೀಯವಾಗಿಸ ಬಯಸುತ್ತದೆ. ಇದರಿಂದಾಗಿ, ಇಂತಹ ಸಾರ್ವತ್ರಿಕ ಮೂಲ ಆದಾಯದ ಮೊತ್ತವು ಸಾಮಾನ್ಯವಾಗಿ ಅತ್ಯಲ್ಪವಾಗಿದ್ದರೆ, ಅದರಲ್ಲಿ ಆಶ್ಚರ್ಯವೇನಿಲ್ಲ.

ಉದಾಹರಣೆಗೆ, 2016-17 ರ ಆರ್ಥಿಕ ಸಮೀಕ್ಷೆಯು 2016-17 ರ ಬೆಲೆಗಳಲ್ಲಿ ಪ್ರತಿ ವ್ಯಕ್ತಿಗೆ ವಾರ್ಷಿಕ 7620 ರೂ.ಗಳ ವಾರ್ಷಿಕ ವರ್ಗಾವಣೆಯನ್ನು ಲೆಕ್ಕಹಾಕಿದೆ, ಇದರ ವೆಚ್ಚ ನಮ್ಮ ಜನಸಂಖ್ಯೆಯ ತುತ್ತತುದಿಯ 25ಶೇ.ವನ್ನು ಹೊರತುಪಡಿಸಿದರೆ, ದೇಶದ ಜಿಡಿಪಿ ಯ 4.9ಶೇ.ದಷ್ಟು ಆಗುತ್ತದೆ. 2011-12ರ ಬೆಲೆಯಲ್ಲಿ ಇದಕ್ಕೆ ಸಮನಾದ ಮೊತ್ತವನ್ನು, 2011-12ರಲ್ಲಿ ಕೆಳಗಿನ ಶೇಕಡಾ 75 ರಷ್ಟು ಜನರಿಗೆ ನೀಡಿದ್ದರೆ, ಆ ವರ್ಷದಲ್ಲಿ ಬಡತನವನ್ನು ಜನಸಂಖ್ಯೆಯ ಕೇವಲ 0.5 ಪ್ರತಿಶತಕ್ಕೆ ಇಳಿಸಬಹುದಿತ್ತು, ಅಂದರೆ, ಅದರಿಂದ ವಾಸ್ತವಿಕವಾಗಿ ಬಡತನ ನಿರ್ಮೂಲನೆಯಾಗಿಯೇ ಬಿಡುತ್ತಿತ್ತು.

ಸರ್ಕಾರವು ಪ್ರಸ್ತುತ ನೀಡುವ ವಿವಿಧ ಸಬ್ಸಿಡಿಗಳನ್ನು ಕಡಿತಗೊಳಿಸುವ ಮೂಲಕ ಈ ಮೊತ್ತವನ್ನು ಒದಗಿಸಬಹುದು ಎಂದು ಸರಕಾರದ ಆರ್ಥಿಕ ಸಮೀಕ್ಷೆಯು ಸೂಚ್ಯವಾಗಿ ಶಿಫಾರಸು ಮಾಡಿತ್ತು.

ಈ ಲೆಕ್ಕಾಚಾರದಲ್ಲಿ ಮೇಲ್ನೋಟಕ್ಕೇ ಎರಡು ಸ್ಪಷ್ಟ ಸಮಸ್ಯೆಗಳು ಕಾಣುತ್ತವೆ. ಮೊದಲನೆಯದಾಗಿ, 2011-12ರ ನಿಜವಾದ ಬಡತನದ ರೇಖೆಯು, ಯೋಜನಾ ಆಯೋಗವು ಸ್ವತಃ ಪರಿಗಣಿಸಿದ ಕನಿಷ್ಠ ಅಗತ್ಯ ಕ್ಯಾಲೋರಿ ಸೇವನೆಯನ್ನು ಪರಿಗಣಿಸಿದರೆ, ಸುಮಾರು 50ಶೇ. ದಷ್ಟು ಹೆಚ್ಚಾಗಿತ್ತು. ಬಡತನವನ್ನು ನಿರ್ಮೂಲನೆ ಮಾಡುವ ಅದೇ ಉದ್ದೇಶವನ್ನು ಸಾಧಿಸಲು ಸರಳ ಲೆಕ್ಕಾಚಾರದ ಪ್ರಕಾರ ವರ್ಗಾವಣೆಯಲ್ಲಿ ಅದೇ ಪ್ರಮಾಣದಲ್ಲಿ ಹೆಚ್ಚಳವನ್ನು ಮಾಡಬೇಕೆಂದು ಇಟ್ಟುಕೊಂಡರೆ, 4.9ಶೇ. ಅಲ್ಲ, ಬದಲಿಗೆ ಜಿಡಿಪಿ ಯ 7.5ಶೇ.ದಷ್ಟು ವೆಚ್ಚ ಮಾಡಬೇಕಾಗುತ್ತದೆ. ಎರಡನೆಯದಾಗಿ, ಸಬ್ಸಿಡಿಗಳನ್ನು ಕಡಿತಗೊಳಿಸುವ ಮೂಲಕ ವರ್ಗಾವಣೆಗೆ ಹಣಕಾಸು ಒದಗಿಸಬೇಕಾದರೆ, ಈ ರೀತಿಯ ಹಣಕಾಸು ಒದಗಿಸುವ ವಿಧಾನದಿಂದಾಗಿಯೇ ವಸ್ತುಗಳು ಹೆಚ್ಚು ದುಬಾರಿಗೊಳ್ಳುವದರಿಂದಾಗಿ, ವರ್ಗಾವಣೆಯ ಮೊತ್ತವನ್ನು ಹೆಚ್ಚಿಸ ಬೇಕಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಆರ್ಥಿಕ ಸಮೀಕ್ಷೆಯಲ್ಲಿ ಉಲ್ಲೇಖಿಸಲಾದ ಅಂಕಿ-ಅಂಶವು ಸಂಪೂರ್ಣ ಅಸಮರ್ಪಕವಾಗುತ್ತಿತ್ತು.

ಸಾಮೂಹಿಕ ಮೂಲ ಆದಾಯವನ್ನು ಒದಗಿಸುವ ಇತರ ಸಲಹೆಗಳ ವ್ಯಾಪ್ತಿ ಸಹಜವಾಗಿ ಕಡಿಮೆ ಮಹತ್ವಾಕಾಂಕ್ಷೆಯದ್ದಾಗಿವೆ.

ಮೂಲ ಉದ್ದೇಶವೇ ಬುಡಮೇಲು

ಆದರೆ, ಇನ್ನೂ ಹೆಚ್ಚು ನಿರ್ಣಾಯಕವಾದ ಮತ್ತೊಂದು ಪರಿಗಣನೆಯಿದೆ. ಇದನ್ನು ಸಂಸತ್ತಿನ ನಿರ್ಣಯದ ಮೂಲಕ ತರಲಾಗುತ್ತದೆ ಎಂದು ನಾವು ಭಾವಿಸಿದರೂ ಸಹ, ಅಂದರೆ, ಪ್ರತಿ ವರ್ಷ ನಿಗದಿತ ಬೆಲೆ-ಸೂಚ್ಯಂಕಕ್ಕೆ ಹೊಂದಿಸಿದ ನಗದು ವರ್ಗಾವಣೆಯನ್ನು ಮಾಡುತ್ತಲೇ ಇರಲು ಸರಕಾರ ಬಾಧ್ಯವಾಗಿದ್ದು, ತನ್ನ ಈ ಬಾಧ್ಯತೆಯಿಂದ ಅದು ಹಿಂದೆ ಸರಿಯುವುದಿಲ್ಲ(ಈಗ ಮನರೇಗದ ವಿಷಯದಲ್ಲಿ ಮಾಡುತ್ತಿರುವಂತೆ) ಎಂದಿಟ್ಟುಕೊಂಡರೂ ಕೂಡ, ಸಾಮಾನ್ಯವಾಗಿ ಶಿಕ್ಷಣ, ಆರೋಗ್ಯ ಮತ್ತು ಇತರ ಬಾಬ್ತುಗಳ ಮೇಲಿನ ವೆಚ್ಚವನ್ನು ಕಡಿತಗೊಳಿಸುವ ಮೂಲಕ ಈ ವರ್ಗಾವಣೆಯನ್ನು ಮಾಡುತ್ತದೆ. ಇದರರ್ಥ ಸರ್ಕಾರವು ಮಾಡಿದ ನಗದು ವರ್ಗಾವಣೆಯಿಂದ ಜನರ ಬಳಿ ಹಣ ಬಂದರೂ, ಅವರಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಸರಿಯಾದ ಸರ್ಕಾರಿ ಶಾಲೆಗಳಿರುವದಿಲ್ಲ ಮತ್ತು ರೋಗಪೀಡಿತ ಸಂಬಂಧಿಕರನ್ನು ಸೇರಿಸಲು ಸರಿಯಾದ ಸರ್ಕಾರಿ ಆಸ್ಪತ್ರೆಗಳಿರುವದಿಲ್ಲ. ಅವರು ಹೆಚ್ಚು ಹಣ ತೆತ್ತು ಖಾಸಗಿ ಶಾಲೆಗಳು ಅಥವಾ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಾಗುತ್ತದೆ. ಆಗ ಮೂಲ ವರ್ಷದಲ್ಲಿನ ಸರಕು ಮತ್ತು ಸೇವೆಗಳ ವೆಚ್ಚಗಳ ಆಧಾರದಲ್ಲಿ ನಿಗದಿಯಾದ ನಗದು ವರ್ಗಾವಣೆ ಸಾಲದೇ ಹೋಗುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ನಿಜಬೆಲೆಗಳಲ್ಲಿ ಸಾರ್ವತ್ರಿಕ ಮೂಲ ಆದಾಯವನ್ನು ಒದಗಿಸುವ ಮೂಲ ಉದ್ದೇಶವು ಅದಕ್ಕೆ ಹಣಕಾಸು ಒದಗಿಸುವ ಪ್ರಕ್ರಿಯೆಯಲ್ಲಿಯೇ ಬುಡಮೇಲಾಗುತ್ತದೆ.

ಆದ್ದರಿಂದ, ಸಾರ್ವತ್ರಿಕ ಮೂಲ ಆದಾಯವನ್ನು ಎಲ್ಲರೂ ಪಡೆಯಬಹುದಾದ ಸಾರ್ವತ್ರಿಕ ಹಕ್ಕಾಗಿ ತೆಗೆದುಕೊಂಡರೂ, ಅದನ್ನು ಹಿಂತೆಗೆದುಕೊಳ್ಳಲು ಸರಕಾರಕ್ಕೆ ಯಾವುದೇ ಅವಕಾಶವಿಲ್ಲದಿದ್ದರೂ ಕೂಡ, ಅದನ್ನು ಸಾಧಿಸಲು ಸರ್ಕಾರವು ಮಾಡುವ ಹಣದ ವರ್ಗಾವಣೆಗಳು ವಾಸ್ತವವಾಗಿ ಅದನ್ನು ಸಾಧಿಸುವುದಿಲ್ಲ. ಆದ್ದರಿಂದ ಎಲ್ಲವನ್ನೂ ಬೆರೆಸಿದ ಒಂದು ಸಾರ್ವತ್ರಿಕ ಮೂಲ ಆದಾಯವೆಂಬ ನಗದು ವರ್ಗಾವಣೆಯ ಹಕ್ಕನ್ನು ಸ್ಥಾಪಿಸುವ ಬದಲು, ಉಚಿತವಾದ ಗುಣಮಟ್ಟದ ಶಿಕ್ಷಣದ ಹಕ್ಕು, ಉಚಿತವಾದ ಗುಣಮಟ್ಟದ ಆರೋಗ್ಯ ರಕ್ಷಣೆಯ ಹಕ್ಕು, ಆಹಾರದ ಹಕ್ಕು, ಉದ್ಯೋಗದ ಹಕ್ಕು, ವಂತಿಗೆರಹಿತವಾದ ಸಾಕಷ್ಟು ಪ್ರಮಾಣದ ವೃದ್ಧಾಪ್ಯ ಪಿಂಚಣಿ ಮತ್ತು ಅಂಗವಿಕಲತೆಯ ಸೌಲಭ್ಯ ಮಂತಾದ ವೈಯಕ್ತಿಕ ಹಕ್ಕುಗಳ ಒಂದು ಸಂಚಯವನ್ನು ಖಾತ್ರಿಪಡಿಸುವ ಶಾಸನವನ್ನು ಹೊಂದುವುದು ಉತ್ತಮ ಎಂದೇ ಹೇಳಬೇಕಾಗುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಸಾರ್ವತ್ರಿಕ ಮೂಲ ಆದಾಯದ ಹಕ್ಕು ಎಂದರೆ ಆರೋಗ್ಯದ ಹಕ್ಕು, ಶಿಕ್ಷಣದ ಹಕ್ಕು ಮತ್ತು ಇತರ ಹಕ್ಕುಗಳಂತಹ ನಿರ್ದಿಷ್ಟ ವೈಯಕ್ತಿಕ ಹಕ್ಕುಗಳ ಸಂಚಯವಲ್ಲದೆ, ಬೇರೇನೂ ಆಗಲು ಸಾಧ್ಯವಿಲ್ಲ.

ಹೆಚ್ಚಿನ ವೆಚ್ಚ – ಆದರೆ ಕಷ್ಟವೇನಲ್ಲ

ಹೀಗೆ, ಸಾರ್ವತ್ರಿಕ ಮೂಲ ಆದಾಯದ ವಿಚಾರವು ಉತ್ತಮ ಆಶಯ ಹೊಂದಿದ್ದರೂ ಮತ್ತು ಶ್ಲಾಘನೀಯವಾಗಿದ್ದರೂ, ಅದು ಈಗ ಪ್ರತಿಪಾದಿಸುತ್ತಿರುವಂತೆ ಅರ್ಥಹೀನವೇ ಆಗಿದೆ. ಇದು ಯಾವುದೇ ರೂಪದಲ್ಲಿ ಕೇವಲ ನಗದು ವರ್ಗಾವಣೆಗಳ ಒಂದು ಸಂಚಯ ಎಂದು ಅರ್ಥೈಸಿದರೆ, ಆಗ ಅದು ನಿಜವಾದ ಸಾರ್ವತ್ರಿಕ ಮೂಲ ಆದಾಯವನ್ನು ಒದಗಿಸುವ ಗುರಿಯನ್ನು ಈಡೇರಿಸಲಾರದು. ಮತ್ತೊಂದೆಡೆ, ನಿಜವಾದ ಅರ್ಥದಲ್ಲಿ ಒಂದು ಸಾರ್ವತ್ರಿಕ ಮೂಲ ಆದಾಯವನ್ನು ಒದಗಿಸಬೇಕಾದರೆ, ಅದು ನಿರ್ದಿಷ್ಟ ಹಕ್ಕುಗಳ – ಆರೋಗ್ಯದ ಹಕ್ಕು, ಶಿಕ್ಷಣದ ಹಕ್ಕು ಮತ್ತು ಅಂತಹ ಇತರ ಹಕ್ಕುಗಳ ಸಂಚಯವಾಗಿಯಲ್ಲದೆ ಬೇರಾವ ರೀತಿಯಲ್ಲೂ ಸಾಧ್ಯವಾಗದು. ಸರ್ಕಾರ ಇವನ್ನು ಒದಗಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಭಾರತವು ಒಂದು ನಿಜವಾದ ಕಲ್ಯಾಣ ಪ್ರಭುತ್ವ್ಯವನ್ನು ಕಟ್ಟಬೇಕಾದರೆ, ಅದು ಪ್ರತಿಯೊಬ್ಬ ವ್ಯಕ್ತಿಗೂ ಈ ನಿರ್ದಿಷ್ಟ ಹಕ್ಕುಗಳನ್ನು ಖಾತರಿಪಡಿಸಬೇಕು; ಆದರೆ ಇದಕ್ಕೆ ಆರ್ಥಿಕ ಸಮೀಕ್ಷೆಯು ಸೂಚಿಸಿದ್ದಕ್ಕಿಂತ ಬಹಳಷ್ಟು ಹೆಚ್ಚಿನ ವೆಚ್ಚ ತಗಲುತ್ತದೆ.

ಉದಾಹರಣೆಗೆ, ಐದು ಸಾರ್ವತ್ರಿಕ ಹಕ್ಕುಗಳನ್ನು, ಅಂದರೆ. ಆಹಾರದ ಹಕ್ಕು (ಈ ಮೂಲಕ ಬಿಪಿಎಲ್ ಜನಸಂಖ್ಯೆಯು ಪಡೆಯಲು ಅರ್ಹರಾಗಿರುವ ಪ್ರಮಾಣದ ಆಹಾರವನ್ನು ಪ್ರತಿಯೊಬ್ಬರೂ ಪಡೆಯುತ್ತಾರೆ), ಉದ್ಯೋಗದ ಹಕ್ಕು (ಉದ್ಯೋಗವನ್ನು ಒದಗಿಸಲಾಗದಿದ್ದರೆ ಶಾಸನಬದ್ಧವಾಗಿ ನಿಗದಿತ ವೇತನದ ಪಾವತಿ), ರಾಷ್ಟ್ರೀಯ ಆರೋಗ್ಯ ಸೇವೆಯ ಮೂಲಕ ಉಚಿತವಾದ ಗುಣಮಟ್ಟದ ಆರೋಗ್ಯ ಪಾಲನೆಯ ಹಕ್ಕು, ಉಚಿತವಾದ ಗುಣಮಟ್ಟದ ಶಿಕ್ಷಣದ ಹಕ್ಕು (ಕನಿಷ್ಠ ಶಾಲಾ ಹಂತದ ವರೆಗೆ), ಮತ್ತು ಸಾರ್ವತ್ರಿಕ, ವಂತಿಗೆರಹಿತ ವೃದ್ಧಾಪ್ಯ ವೇತನದ ಮತ್ತು ವಿಕಲಾಂಗ ಸೌಲಭ್ಯಗಳ ಹಕ್ಕು ಇವನ್ನು ಸ್ಥಾಪಿಸಲು ಈಗಾಗಲೇ ಬಜೆಟಿನಲ್ಲಿ ಇವಕ್ಕೆ ಖರ್ಚು ಮಾಡುತ್ತಿರುವುದಕ್ಕಿಂತ ಹೆಚ್ಚುವರಿಯಾಗಿ ಜಿಡಿಪಿಯ 10ಶೇ.ದಷ್ಟು ವೆಚ್ಚವಾಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಈ ಹೆಚ್ಚುವರಿ ಮೊತ್ತವನ್ನು ಖರ್ಚು ಮಾಡಲು, ಸರ್ಕಾರವು ಜಿಡಿಪಿಯ ಸುಮಾರು 7ಶೇ.ದಷ್ಟು ಹೆಚ್ಚುವರಿ ತೆರಿಗೆ ಆದಾಯವನ್ನು ಸಂಗ್ರಹಿಸಬೇಕು (ಇತರ 3 ಶೇ. ಈ 7% ಹೆಚ್ಚುವರಿ ವೆಚ್ಚದಿಂದ ಉಂಟಾಗುವ ಜಿಡಿಪಿ ಹೆಚ್ಚಳದಿಂದ ತಂತಾನೇ ತೆರಿಗೆ ಆದಾಯವಾಗಿ ಬರುತ್ತದೆ).

ಈ 7 ಶೇ.ವನ್ನು ಎತ್ತುವುದು, ಸರಕಾರ ಶ್ರೀಮಂತರ ಮೇಲೆ ತೆರಿಗೆ ವಿಧಿಸಲು ಸಿದ್ಧವಿದ್ದರೆ, ಕಷ್ಟವೇನಲ್ಲ. ವಾಸ್ತವವಾಗಿ ಜನಸಂಖ್ಯೆಯ ತುತ್ತ ತುದಿಯಲ್ಲಿರುವ 1 ಶೇ. ಮಂದಿಯ ಮೇಲೆ ಕೇವಲ ಎರಡು ತೆರಿಗೆಗಳನ್ನು, 2 ಶೇ. ಸಂಪತ್ತು ತೆರಿಗೆ ಮತ್ತು 33 1/3 ಶೇಕಡಾ ವಾರಸುದಾರಿಕೆ ತೆರಿಗೆ ವಿಧಿಸಿದರೆ, ಈ ಐದು ಮೂಲಭೂತ ಆರ್ಥಿಕ ಹಕ್ಕುಗಳನ್ನು ಖಾತರಿಪಡಿಸುವ ಮೂಲಕ ದೇಶದಲ್ಲಿ ಕಲ್ಯಾಣ ಪ್ರಭುತ್ವವನ್ನು ಕಟ್ಟಲು ಅಗತ್ಯವಾದ ಸಂಪನ್ಮೂಲಗಳನ್ನು ಸಂಗ್ರಹಿಸಲು ಸಾಕಾಗುತ್ತದೆ. ಆದರೆ ಇದು ಭಾರತದಲ್ಲಿ ಕಲ್ಯಾಣ ಪ್ರಭುತ್ವವನ್ನು ಕಟ್ಟುವುದನ್ನು ಬೂರ್ಜ್ವಾ ವ್ಯವಸ್ಥೆಯ ಸಾಮರ್ಥ್ಯವನ್ನು ಮೀರಿದ ವಿಷಯವಾಗಿ ಮಾಡುತ್ತದೆ, ಅದರಿಂದಾಗಿ ಉದಾರವಾದಿ ಅರ್ಥಶಾಸ್ತ್ರಜ್ಞರ ಪರಿಕಲ್ಪನೆಯನ್ನು ಮೀರಿದ ಸಂಗತಿಯೂ ಆಗುತ್ತದೆ.

Donate Janashakthi Media

Leave a Reply

Your email address will not be published. Required fields are marked *