ಪೌರಕಾರ್ಮಿಕರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಜಾಥಾ

ಬೆಂಗಳೂರು: ಶೌಚಾಲಯ, ವಿಶ್ರಾಂತಿ ಕೊಠಡಿ ಮತ್ತು ಕುಡಿಯುವ ನೀರಿನ ಮೂಲಭೂತ ಸೌಕರ್ಯಗಳು ಕಾರ್ಮಿಕರಿಗೆ ಲಭ್ಯವಾಗದಿರುವುದು ಬಹಳಷ್ಟು ತೊಂದರೆಯನ್ನುಂಟು ಮಾಡಿದೆ ಎಂದು ಪೌರಕಾರ್ಮಿಕರು ಹೇಳಿದರು. ಇಂತಹ ಅಮಾನವೀಯ ಪರಿಸ್ಥಿತಿಯಲ್ಲಿ ಏಕೆ ನಮ್ಮನ್ನು ಕೆಲಸ ಮಾಡಿಸುತ್ತಿದ್ದಾರೆ ಎಂದು ಪೌರಕಾರ್ಮಿಕರು ಪ್ರಶ್ನಿಸಿದರು.

ಮುಂಜಾನೆ 6 ರಿಂದ ವೆಂಗಯ್ಯನಕೆರೆ ಬಳಿ ಬಿಬಿಎಂಪಿ ಪೌರಕಾರ್ಮಿಕರ ಜಾಥಾ ಹಮ್ಮಿಕೊಳ್ಳುವ ಮೂಲಕ ಈಗಾಗಲೇ ಸಿಗುತ್ತಿರುವ ಕಡಿಮೆ ವೇತನದಲ್ಲಿ ಮತ್ತಷ್ಟು ಕಡಿತಗಳನ್ನು ಮಾಡಲಾಗುತ್ತಿದೆ ಅದು ಅಕ್ರಮವಾಗಿ ಎಂದು ತಿಳಿಸಿದರು. ಒಂದು ದಿನ ರಜೆ ಹಾಕಿದರೆ, ಮೂರು ದಿನದ ವೇತನದ ಕಡಿತ ಮಾಡಲಾಗುತ್ತಿದೆ. ಅಚ್ಚರಿ ಸಂಗತಿ ಏನೆಂದರೆ, ಇಲ್ಲಿ ಕೆಲಸ ನಿರ್ವಹಿಸುವ ಘನತ್ಯಾಜ್ಯ ನಿರ್ವಹಣೆಯ ಆಟೋ ಚಾಲಕರಿಗೆ ಮತ್ತು ಸಹಾಯಕರಿಗೆ 3 ತಿಂಗಳ ಸಂಬಳ ನೀಡಿಲ್ಲ. 4 ತಿಂಗಳ ವೇತನ ಇನ್ನೂ ಸಹ ಬಾಕಿ ಇರುತ್ತದೆ. ತಮ್ಮ ಎಲ್ಲಾ ಹಕ್ಕುಗಳನ್ನು ಪಡೆದುಕೊಳ್ಳುವವರೆಗೂ ನಾವು ಹೋರಾಡುತ್ತೆವೆಂದು ಕಾರ್ಮಿಕರು ಘೋಷಿಸಿದ್ದಾರೆ.

ಕೆ.ಆರ್.ಪುರಂ ಮಾರುಕಟ್ಟೆ, ಆಯ್ಯಪ್ಪನಗರ ಮತ್ತು ಹೂಡಿ ಪ್ರದೇಶಗಳಲ್ಲಿ ಜಾಥಾವನ್ನು ಹಮ್ಮಿಕೊಳ್ಳಲಾಯಿತು. ಜಾಥಾದ ಸಂದರ್ಭದಲ್ಲಿ ಕಾರ್ಮಿಕರು ಕರಪತ್ರವನ್ನು ಹಂಚುವ ಮೂಲಕ ಸಾರ್ವಜನಿಕರಲ್ಲಿ ತಮ್ಮ ಸಮಸ್ಯೆಗಳನ್ನು ವಿವರಿಸಿದರು. ಬೀದಿ ವ್ಯಾಪಾರಿಗಳು, ಅಂಗಡಿಯವರು ಮತ್ತು ಸಾರ್ವಜನಿಕರು, ಪೌರಕಾರ್ಮಿಕರ ಈ ಹೋರಾಟಕ್ಕೆ ಬೆಂಬಲವನ್ನು ಸೂಚಿಸಿದರು.

ಬಿಬಿಎಂಪಿ ವಾರ್ಡ್ ಸಂಖ್ಯೆ 82 (ಗರುಡಾಚಾರಪಾಳ್ಯ) ರಲ್ಲಿ ಕೆಲಸ ನಿರ್ವಹಿಸುವ ಆಟೋ ಚಾಲಕರು, ಸಹಾಯಕರು ಮತ್ತು ಪೌರಕಾರ್ಮಿಕರ ಬರಬೇಕಿರುವ ವೇತನವನ್ನು ಕೇಳಿದರೆ ಕೆಲಸದಿಂದ ವಜಾಗೊಳಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು. ರೂ.14,000ದಲ್ಲಿ ನಾವು ಹೇಗೆ ಬದುಕಬೇಕು ಎಂದು ಪ್ರಶ್ನಿಸಿದರು. ಬೆಲೆ ಏರಿಕೆಯ ಪರಿಸ್ಥಿತಿಯಲ್ಲಿ ಮತ್ತು ಬಿಬಿಎಂಪಿ ಸಕಾಲದಲ್ಲಿ ವೇತನ ನೀಡದಿರುವುದರಿಂದ ಜೀವನ ದುಸ್ತರವಾಗಿದೆ ಎಂದರು. ಈ ನಿಟ್ಟಿನಲ್ಲಿ ಎಲ್ಲಾ ಪೌರಕಾರ್ಮಿಕರಿಗೆ ರೂ. 35,000 ವೇತನ ನೀಡಿ ಅವರ ಕೆಲಸವನ್ನು ಖಾಯಂಗೊಳಿಸಬೇಕೆಂದು ಒತ್ತಾಯಿಸಿದರು.

ಅಯ್ಯಪ್ಪನಗರ ಮತ್ತು ಹೂಡಿಯಲ್ಲಿ ಪೌರಕಾರ್ಮಿಕರು ವಾಸಿಸುವ ಪ್ರದೇಶಗಳಲ್ಲಿ ಜಾಥಾ ಸಂಚರಿಸಿದೆ. ನಗರದ ಮೂಲಭೂತ ಕೆಲಸದಲ್ಲಿ ತೊಡಗಿರುವ ಈ ಕಾರ್ಮಿಕರಿಗೆ ಸರಿಯಾದ ವಸತಿ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ನೀರು ಮತ್ತು ಶೌಚಾಲಯದ ವ್ಯವಸ್ಥೆಗಳಿಲ್ಲ. ಮಹಿಳಾ ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲಿ ಆಗಲಿ ಮನೆಯ ಬಳಿಯಾಗಲಿ ಶೌಚಾಲಯಕ್ಕೆ ಹೋಗಲು ಅಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಪೌರಕಾರ್ಮಿಕರಿಗೆ ಎಲ್ಲಾ ಸೌಲಭ್ಯಗಳು ಇರುವ ಉನ್ನತ ಮತ್ತು ಉಚಿತ ವಸತಿ ವ್ಯವಸ್ಥೆಯನ್ನು ನೀಡಬೇಕು ಎಂದು ಒತ್ತಾಯಿಸಿದರು.

ಲೈಂಗಿಕ ಕಿರುಕುಳ ಮತ್ತು ಜಾತಿ ದೌರ್ಜನ್ಯವನ್ನು ಎಸಗುವ ಪ್ರತಿಯೊಬ್ಬ ಅಪರಾಧಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಮತ್ತು ಪ್ರತಿಯೊಬ್ಬ ಪೌರಕಾರ್ಮಿಕರಿಗೆ ಸುರಕ್ಷಿತ ಕೆಲಸದ ವಾತಾವರಣ ರೂಪಿಸಬೇಕು. ಕೋವಿಡ್‌ ಬಿಕ್ಕಟ್ಟಿನಿಂದಾಗಿ ಕಳೆದ 2 ವರ್ಷಗಳಿಂದ ಪೌರಕಾರ್ಮಿಕರ ಮಕ್ಕಳು ಶಿಕ್ಷಣ ಪಡೆಯುವುದರಿಂದ ವಂಚಿತರಾಗಿದ್ದಾರೆ. ಕಷ್ಟಪಟ್ಟು ಪೌರಕಾರ್ಮಿಕರಾಗಿ ದುಡಿದು ತಮ್ಮ ಮಕ್ಕಳು ತಮ್ಮಂಥೆ ವೃತ್ತಿಯಲ್ಲಿ ತೊಡಗದಿರಲಿ ಎಂದು ಶ್ರಮವಹಿಸುತ್ತಿದ್ದಾರೆ. ಆದರೆ, ಶಾಲಾ/ಕಾಲೇಜಿನ ಫೀಸ್ ಅತಿಹೆಚ್ಚಾಗಿರುವ ಕಾರಣ, ಶಿಕ್ಷಣ ಪಡೆಯುವುದು ಕಷ್ಟಕರವಾಗಿದೆ. ಪೌರಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಬೇಕೆಂದು ಒತ್ತಾಯಿಸಿದರು.

ಬಿಬಿಎಂಪಿ ಪೌರಕಾರ್ಮಿಕರ ಸಂಘವು ಕೋವಿಡ್ ಸಮಯದಲ್ಲಿ ಅಗಲಿದ ಪೌರಕಾರ್ಮಿಕರ ನೆನಪಿನಲ್ಲಿ ಕಿರುಚಿತ್ರವೊಂದನ್ನು ತಯಾರಿಸಿದ್ದು, ಅದನ್ನು ಪೌರಕಾರ್ಮಿಕರ ಮನೆಗಳಲ್ಲಿ ತೋರಿಸಲಾಗುತ್ತಿದೆ.

ಬೆಂಗಳೂರಿನ ಪ್ರದೇಶಗಳಲ್ಲಿ ಜಾಥಾ ಸಂಚರಿಸಿ ಸಾರ್ವಜನಿಕರಲ್ಲಿ ಪೌರಕಾರ್ಮಿಕರ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕೈಗೊಂಡಿದ್ದಾರೆ. ಈ ಜಾಥಾವು ನಗರದ ವಿವಿಧ ಪ್ರದೇಶಗಳಲ್ಲಿ ಒಂದು ವಾರ ಸಂಚರಿಸಲಿದೆ.

Donate Janashakthi Media

Leave a Reply

Your email address will not be published. Required fields are marked *