ಬೆಳಗಾವಿ: ಕೆಳ ಹಂತದಲ್ಲಿ ನಡೆಯುತ್ತಿರುವ ಅಕ್ರಮಗಳ ಕಡೆಗೆ ಸಚಿವರಾಗಿ ನೀವು ಗಮನ ಹರಿಸಬೇಕು ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ವಿರುದ್ಧ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಗರಂ ಆದರು.
ನಗರ ಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್ ಸ್ಥಳೀಯ ಸಂಸ್ಥೆಗಳು ಆಡಳಿತದಲ್ಲಿ ಯಾವ ಹಿಡಿತ ಇಲ್ಲ ಎಂಬ ಸ್ಥಿತಿಗೆ ಬಂದಿದೆ. ಹಲವು ಕಡತಗಳು ಬಾಕಿ ಉಳಿದಿದೆ. ಅಧಿಕಾರಿಗಳಿಗೆ ಜವಾಬ್ದಾರಿ ಇಲ್ಲವಾಗಿದೆ. ಎಂದಿನ ಕೆಲಸವೋ ಮತ್ಯಾವಗೋ ಮಾಡುವುದು. ಕಡತಗಳ ವಿಲೇವಾರಿ ಪೂರ್ಣಗೊಳಿಸಲು ನಿಮ್ಮ ಅಧಿಕಾರಿಗೆ ಎಷ್ಟು ವರ್ಷ ಬೇಕು ಎಂದು ಸಭಾಧ್ಯಕ್ಷ ಸಚಿವ ನಾಗರಾಜ್ ಅವರನ್ನು ಪ್ರಶ್ನೆ ಮಾಡಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ವಿಧಾನಸಭೆಯ ಕಲಾಪದ ವೇಳೆಯಲ್ಲಿ ಸಭಾಧ್ಯಕ್ಷರು ಪೌರಾಡಳಿತ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡರು.
ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರು ನಗರ ಸಭೆಗಳು ಆರ್ಥಿಕ ಸಂಕಷ್ಟ ಅನುಭವಿಸುತ್ತಿವೆ. ಯಾವುದೇ ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳಲು ಆಗುತ್ತಿಲ್ಲ. ನಗರೋತ್ಥಾನ ಯೋಜನೆ ಮೂಲಕ ನಗರಗಳ ಅಭಿವೃದ್ಧಿಗೆ ಪ್ರಯತ್ನ ನಡೆದಿದೆ. ಈ ಯೋಜನೆ ಬರದೇ ಇದ್ದರೆ ಕೀಳು ಮಟ್ಟಕ್ಕೆ ಹೋಗುತ್ತಿತ್ತು. ನಗರರೋತ್ಥಾನ 4 ತರುತ್ತೇವೆ ಎಂಬ ಆಶ್ವಾಸನೆ ಕೊಡುತ್ತಿದ್ದೀರಿ. ರಸ್ತೆ ಅಗೆಯಲಾಗಿದೆ, ಒಳಚರಂಡಿ ಕಾಮಗಾರಿ ಆಗಿಲ್ಲ, ನಗರದ ಸಭೆಗೆ ಆದಾಯ ಬರುತ್ತಿಲ್ಲ, ನಾಲ್ಕನೇ ಹಂತದಲ್ಲಿನ ಆಡಳಿತ ಮಟ್ಟದಲ್ಲಿ ನಗರಸಭೆಗಳಲ್ಲಿ ಗಬ್ಬುನಾರುವ ಹಂತಕ್ಕೆ ಬರುತ್ತವೆ ಎಂದು ವಿಷಯ ಪ್ರಸ್ತಾಪಿಸಿದರು.
ಶಿವಲಿಂಗೇಗೌಡ ಅವರ ಪ್ರಶ್ನೆಗೆ ಪೌರಾಡಳಿತ ಇಲಾಖೆಯ ಬಗ್ಗೆ ಸಭಾಧ್ಯಕ್ಷರು ಸಹ ಗರಂ ಆದರು.
ಸಭಾಧ್ಯಕ್ಷ ಕಾಗೇರಿ ಅವರು ಒಂದು ಸಣ್ಣ ಕೆಲಸ ಮಾಡಬೇಕಾದರೂ ಮುನಿಸಿಪಾಲಿಟಿ ಕಚೇರಿಯಿಂದ ಜಿಲ್ಲಾಧಿಕಾರಿ ಕಛೇರಿಗೆ ಎಷ್ಟು ಸಲ ಕಡತಗಳು ಅಡ್ಡಾಡಬೇಕು. ಜಿಲ್ಲಾಧಿಕಾರಿ ಕಛೇರಿಯಿಂದ ಬೆಂಗಳೂರಿಗೆ ಎಷ್ಟು ಸಲ ಅಡ್ಡಾಡಬೇಕು.
ಇಷ್ಟುಂದು ಬಾರಿ ಯಾಕೆ ಕಡತಗಳು ಅಡ್ಡಾಡಬೇಕು? ಎಲ್ಲ ಸರಿ ಇದ್ದರೂ ಬೆಂಗಳೂರಿನ ಕಚೇರಿಯಲ್ಲಿ ಕೊಕ್ಕೆ ಹಾಕಿ ಕಳಿಸ್ತಾರೆ ಅಲ್ಲಿನ ನಿರ್ದೇಶಕರು. ನಿಮ್ಮ ಗಮನಕ್ಕೆ ಇದು ಬರುವುದಿಲ್ಲ, ಕೆಲ ಹಂತದಲ್ಲಿ ಈ ಮಟ್ಟದಲ್ಲಿ ಕಡತಗಳ ಅಲೆದಾಟ ನಡೆಯುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದಾದರೆ ಲಕ್ಷಾಂತರ ಜನ ಕಷ್ಟ ಪಡುವಂತಾಗಿದೆ.
ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದ ಸಭಾಧ್ಯಕ್ಷ ಕಾಗೇರಿ ಅವರು ಆಡಳಿತ ಮಾಡಬೇಕು ಎಂಬ ಇಚ್ಚಾಶಕ್ತಿ ಕಾರ್ಯದರ್ಶಿಗಳಲ್ಲಿ ಇಲ್ಲವಾಗಿದೆ ಎಂದರು.