ಗುಡಿಬಂಡೆ: ಶನಿವಾರ ಸಂಜೆ ಆರು ಗಂಟೆಯಿಂದ ವಿದ್ಯುತ್ ಸಂಪರ್ಕವಿಲ್ಲದೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳು ಕತ್ತಲೆಯಲ್ಲಿ ಇದ್ದರು. ಆಸ್ಪತ್ರೆಯ ಕೊಠಡಿಗಳಲ್ಲಿ ಹೀಗೆ ಅಧ್ವಾನವಾಗಿದ್ದರೂ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ಇತ್ತ ಸುಳಿಯಲಿಲ್ಲ!
ತುಂಬಾ ದಿನಗಳಿಂದ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿದ್ಯುತ್ ಸಮಸ್ಯೆ ಇರುವ ಬಗ್ಗೆ ಒಳ ರೋಗಿಗಳು ಹಾಗೂ ಸಾರ್ವಜನಿಕರು, ಆಸ್ಪತ್ರೆ ಸಿಬ್ಬಂದಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ವಹಿಸುತ್ತಿಲ್ಲ. ಗುಡಿಬಂಡೆ
‘ತಾಂತ್ರಿಕ ಸಮಸ್ಯೆ ಇದೆ. ತಡವಾಗುತ್ತೆ’ ಎಂಬ ಸಿದ್ದ ಉತ್ತರ ನೀಡುತ್ತಾರೆ ಎಂದು ರೋಗಿಗಳು ಆರೋಪಿಸಿದ್ದಾರೆ. ಒಳ ರೋಗಿಗಳು ಮೊಬೈಲ್ ಟಾರ್ಚ್ ಹಿಡಿದು ಊಟ ಮಾಡಿದರು.
ಇದನ್ನೂ ಓದಿ: ಗಣತಂತ್ರದ ಆಶಯವೂ ಪ್ರಜಾತಂತ್ರದ ಅಡಿಪಾಯವೂ
ಆಸ್ಪತ್ರೆಯಲ್ಲಿ ವಿದ್ಯುತ್ ಸಮಸ್ಯೆ ಇರುವ ವಿಚಾರ ಗೊತ್ತಿದ್ದರೂ ಪರ್ಯಾಯ ವ್ಯವಸ್ಥೆ ಮಾಡದಿರುವ ಬಗ್ಗೆ ರೋಗಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
‘ಶನಿವಾರ ಸಂಜೆಯಿಂದ ವಿದ್ಯುತ್ ಇಲ್ಲ. ಕತ್ತಲೆಯಲ್ಲಿಯೇ ಮಲಗಿದ್ದೇವೆ. ಕೊಠಡಿಯೊಳಗೆ ಯಾರು ಬರುತ್ತಾರೋ ಯಾರು ಹೋಗುತ್ತಾರೋ ಗೊತ್ತಾಗುತ್ತಿಲ್ಲ’ ಎಂದು ರೋಗಿಗಳು ಬೇಸರ ವ್ಯಕ್ತಪಡಿಸಿದರು.
ಬಾಣಂತಿಯರ ಕೊಠಡಿಯಲ್ಲಿ ಕಂದಮ್ಮಗಳನ್ನು ಕತ್ತಲಿನಲ್ಲಿ ನೋಡಿಕೊಳ್ಳಲು ಪೋಷಕರು ಹರಸಾಹಸಪಡುತ್ತಿದ್ದ ದೃಶ್ಯ ಕಂಡು ಬಂದಿತು.
‘ಶಾಸಕ ಎಸ್. ಎನ್. ಸುಬ್ಬಾರೆಡ್ಡಿ ಅವರು ಈ ಕುರಿತು ಸೂಕ್ತ ಕ್ರಮ ಜರುಗಿಸಬೇಕು. ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು’ ಎಂದು ರೋಗಿಗಳು ಒತ್ತಾಯಿಸಿದರು.
ಇದನ್ನೂ ನೋಡಿ: ಮಂಥರೆಯಾಗಿ ಯಕ್ಷರಂಗದಲ್ಲಿ ಮಿಂಚಿದ ನಟಿ ಉಮಾಶ್ರೀ Janashakthi Media