ಇಲ್ಲವೆಂದರೆ ಅವರು ಸಂಸತ್ತಿಗೆ ಬರುವುದಿಲ್ಲ ಎಂದು ಪ್ರತಿಜ್ಞೆ ಕೈಗೊಳ್ಳುತ್ತಿದ್ದರು ಎಂದು ಕಾಂಗ್ರೆಸ್ ಹೇಳಿದೆ ಅವಿಶ್ವಾಸ ನಿರ್ಣಯ
ನವದೆಹಲಿ: ಅವಿಶ್ವಾಸ ನಿರ್ಣಯದ ಶಕ್ತಿ ಪ್ರಧಾನಿ ಮೊದಿಯನ್ನು ಸಂಸತ್ತಿಗೆ ಎಳೆದು ತಂದಿದ್ದು, ಇಲ್ಲವೆಂದರೆ ಅವರು ಸಂಸತ್ತಿಗೆ ಬರುವುದಿಲ್ಲ ಎಂದು ಪ್ರತಿಜ್ಞೆ ಕೈಗೊಳ್ಳುತ್ತಿದ್ದರು ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಗುರುವಾರ ಲೋಕಸಭೆಯಲ್ಲಿ ಹೇಳಿದ್ದಾರೆ. ‘ಭಾರತ್ ಮಾತಾ ಕಿ ಜೈ’ ಮತ್ತು ‘ವಂದೇ ಮಾತರಂ’ ಘೋಷಣೆಗಳ ಮಧ್ಯೆ ಪ್ರಧಾನಿ ಸದನಕ್ಕೆ ಆಗಮಿಸುತ್ತಿದ್ದಂತೆ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲೆ ಮಾತನಾಡಿದ ರಂಜನ್ ಚೌಧರಿ ಈ ಹೇಳಿಕೆ ನೀಡಿದ್ದಾರೆ. ಬಿಜೆಪಿ ಘೋಷಣೆಗೆ ವಿರುದ್ಧವಾಗಿ ಪ್ರತಿಪಕ್ಷಗಳ ಸದಸ್ಯರು ಕೂಡಾ ಘೋಷಣೆಗಳನ್ನು ಕೂಗಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ರಂಜನ್ ಚೌದರಿ, “ನಿಮ್ಮ ಬಳಿ ಬಹುಮತ ಇರಬಹುದು, ಆದರೆ ಅವಿಶ್ವಾಸ ನಿರ್ಣಯ ಮಂಡಿಸಲು ನಾವು ಹೇಳಿದ್ದು ಯಾಕೆಂದು ಹೇಳುತ್ತೇವೆ. ಈ ಅವಿಶ್ವಾಸ ನಿರ್ಣಯದ ಶಕ್ತಿ ಇಂದು ಪ್ರಧಾನಿಯನ್ನು ಸಂಸತ್ತಿಗೆ ಕರೆತಂದಿದೆ. ಆದರೆ ನಾವು ಯಾರೂ ಅವಿಶ್ವಾಸ ನಿರ್ಣಯದ ಬಗ್ಗೆ ಯೋಚಿಸಿರಲಿಲ್ಲ, ನಾವು ಒತ್ತಾಯಿಸಿದ್ದು ಮಣಿಪುರ ವಿಷಯದ ಬಗ್ಗೆ ಪ್ರಧಾನಿ ಸಂಸತ್ತಿಗೆ ಮಾತನಾಡಬೇಕು ಎಂದು ಮಾತ್ರವಾಗಿತ್ತು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗೂಂಡಾಗಳಿಂದ ನನ್ನ ಹತ್ಯೆಗೆ ಸಂಚು ; ಸ್ವಪಕ್ಷದ ಕೇಂದ್ರ ಸಚಿವರ ವಿರುದ್ಧವೇ ಪ್ರಭು ಚೌಹಾಣ್ ಗಂಭೀರ ಆರೋಪ
ಕ್ವಿಟ್ ಇಂಡಿಯಾ ಚಳವಳಿಯನ್ನು ಉಲ್ಲೇಖಿಸಿದ ರಂಜನ್ ಚೌಧರಿ, ಬಿಜೆಪಿಯ ಪೂರ್ವಜರು ಬ್ರಿಟಿಷರೊಂದಿಗೆ ಕೈಜೋಡಿಸಿದವರಾಗಿದ್ದು, ಕೇಸರಿಕರಣ ಮತ್ತು ಧ್ರುವೀಕರಣದ ವಿರುದ್ಧ ಕ್ವಿಟ್ ಇಂಡಿಯಾದ ರೀತಿಯ ಮತ್ತೊಂದು ಚಳುವಳಿ ನಡೆಯಬೇಕು ಎಂದು ಹೇಳಿದ್ದು, “ನಾವು ಯಾವುದೇ ಬಿಜೆಪಿ ಸದಸ್ಯರನ್ನು ಸಂಸತ್ತಿಗೆ ಬರುವಂತೆ ಒತ್ತಾಯಿಸುತ್ತಿಲ್ಲ. ನಾವು ಒತ್ತಾಯಿಸಿದ್ದು ನಮ್ಮ ಪ್ರಧಾನಿಯನ್ನಾಗಿದೆ” ಎಂದು ಹೇಳಿದ್ದಾರೆ.
“ನೀವು 100 ಬಾರಿ ಪ್ರಧಾನಿಯಾಗಬಹುದು ನಮಗೆ ತೊಂದರೆ ಇಲ್ಲ ಎಂದು ನಾವು ಪ್ರಧಾನಿಗೆ ಹೇಳಲು ಬಯಸುತ್ತೇವೆ. ನಮಗೆ ದೇಶದ ಸಾಮಾನ್ಯ ಜನರ ಬಗ್ಗೆ ಮಾತ್ರ ಕಾಳಜಿಯಿದೆ. ನಾವು ಮಣಿಪುರಕ್ಕೆ ಹೋದಾಗ ಅಲ್ಲಿನ ಜನರ ಪರಿಸ್ಥಿತಿಗಳನ್ನು ನೋಡಿದ್ದೇವೆ. ಪ್ರಧಾನಿಯವರು ರಾಜ್ಯಕ್ಕೆ ಭೇಟಿ ನೀಡಿ ಶಾಂತಿಗಾಗಿ ಮನವಿ ಮಾಡಬೇಕಿತ್ತು. ಅವರು ಮಣಿಪುರದ ಜನರೊಂದಿಗೆ ತಮ್ಮ ‘ಮನ್ ಕಿ ಬಾತ್’ ನಡೆಸಬೇಕಿತ್ತು” ಎಂದು ಚೌಧರಿ ಹೇಳಿದ್ದಾರೆ.
“ಮಣಿಪುರದಲ್ಲಿ ನಡೆದ ಹಿಂಸಾಚಾರ ಸಣ್ಣ ವಿಷಯವಲ್ಲ… ಯುರೋಪ್ ಮತ್ತು ಅಮೆರಿಕಕ್ಕೆ ಪ್ರಧಾನಮಂತ್ರಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಇದು ದೊಡ್ಡ ವಿಷಯವಾಗಿತ್ತು. ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ ಕೊಂದದ್ದನ್ನು ನಾವು ನೋಡಿದ್ದೇವೆ. ಹಸ್ತಿನಾಪುರದಲ್ಲಿ ಕುರುಡನಾಗಿದ್ದ ರಾಜ ಧೃಶ್ರಾಷ್ಟ್ರನ ಮುಂದೆ ದ್ರೌಪದಿಯ ಬಟ್ಟೆಗಳನ್ನು ಕಳಚಲಾಯಿತು. ಮಣಿಪುರದಲ್ಲಿ ನಡೆದಿದ್ದಕ್ಕೂ ಹಸ್ತಿನಾಪುರದ ಘಟನೆಗೂ ವ್ಯತ್ಯಾಸವಿಲ್ಲ…ರಾಜ ಇಂದು ಕೂಡ ಕುರುಡನಾಗಿದ್ದಾನೆ” ಎಂದು ಚೌಧರಿ ಹೇಳಿದ್ದಾರೆ.
ವಿಡಿಯೊ ನೋಡಿ: ಕ್ವಿಟ್ ಇಂಡಿಯಾ ನೆನಪು : ಜನವಿರೋಧಿ ಸರ್ಕಾರವನ್ನು ಸೋಲಿಸಲು ಕರೆ Janashakthi Media