ಬೆಂಗಳೂರು : ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆಗೆ ಸಂಬಂಧಿಸಿದಂತೆ ಸ್ವಾಮೀಜಿಗಳು ವಿರೋಧ ವ್ಯಕ್ತಪಡಿಸಿದ್ದು, ಜಯಬಸವಾನಂದ ಸ್ವಾಮೀಜಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬರಹಗಾರ ವಡ್ಡಗೆರೆ ನಾಗರಾಜಯ್ಯ ಸ್ವಾಮೀಜಿ ಅವರಲ್ಲಿ ಅಡಗಿರುವ ಅಜ್ಞಾನವನ್ನು ಎತ್ತಿತೋರಿಸಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಜಯಬಸವಾನಂದ ಸ್ವಾಮೀಜಿಯವರೇ, ಅದೆಲ್ಲಿಂದ ವಕ್ಕರಿಸ್ತಾರೋ ನಿಮ್ಮಂತಹ ಅಜ್ಞಾನಿಗಳು ನನಗಂತೂ ತಿಳಿಯುತ್ತಿಲ್ಲ. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೆಳೆಯಲು ಬಿಸಿಯೂಟ, ಹಾಲು, ಪುಸ್ತಕ, ಬಟ್ಟೆ ಇತ್ಯಾದಿಗಳನ್ನು ಸರ್ಕಾರ ಕೊಡುತ್ತಿರಬಹುದೆಂದು ನೀವು ಭಾವಿಸಿದಂತಿದೆ. ಅದರ ಮುಂದುವರಿಕೆಯ ಭಾಗವಾಗಿಯೇ ಮೊಟ್ಟೆ ಹಣ್ಣು ನೀಡಲು ಸರ್ಕಾರ ಮುಂದಾಗಿದ್ದು, ಮೊಟ್ಟೆಯ ಕಾರಣದಿಂದಲೇ ಸಸ್ಯಾಹಾರಿಗಳ ಮಕ್ಕಳು ಸರ್ಕಾರಿ ಶಾಲೆಗಳಿಗೆ ಹೋಗದಂತಾಗುತ್ತಾರೆಂದೂ ನೀವು ಭಾವಿಸಿರುವಂತಿದೆ ಎಂದು ಹೇಳಿದ್ದಾರೆ.
ಜಯಬಸವಾನಂದ ಸ್ವಾಮೀಜಿ ಅವರು “ಶಾಲೆಗಳು ಪಾಠ ಶಾಲೆಗಳಾಗಿರಲಿ ಪಾಕ ಶಾಲೆಗಳಾಗದಿರಲಿ… ಮಕ್ಕಳು ಅವರವರ ಮನೆಗಳಲ್ಲಿಯೇ ಊಟ ಮಾಡಿಕೊಂಡು ಬರಲಿ. ಅಕ್ಕಿ ಬೇಳೆ ಕಾಳು ಮೊಟ್ಟೆ ಹಣ್ಣು ಇವುಗಳನ್ನು ಶಾಲಾ ಮಕ್ಕಳ ಮನೆಗಳಿಗೇ ವಿತರಿಸಿರಿ… ಅವರು ಮನೆಗೆ ತೆಗೆದುಕೊಂಡು ಹೋಗಿ ತಿನ್ನಲಿ… ನನ್ನ ಈ ಅನಿಸಿಕೆಯನ್ನು ಮುಖ್ಯಮಂತ್ರಿಗಳು ಗಮನಿಸಬೇಕಾಗಿ ಕೋರುತ್ತೇನೆ” ಎಂದು ಹೇಳಿದ್ದರು.
ವಾಸ್ತವವಾಗಿ ನಮ್ಮ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳು ಸಾಮಾಜಿಕವಾಗಿಯೂ ಆರ್ಥಿಕವಾಗಿಯೂ ಹಿಂದುಳಿದಿದ್ದಾರೆ. ಲಕ್ಷಾಂತರ ಆದಿವಾಸಿಗಳು ಮತ್ತು ಅಲೆಮಾರಿಗಳು ಈಗಲೂ ಶಾಲೆಯ ಕಲಿಕೆಯಿಂದ ಹೊರಗುಳಿದಿದ್ದಾರೆ. ಟೆಂಟು ಡೇರೆ ಗುಡಾರ ಬಿಡಾರಗಳ ಅಪಾರ ಸಂಖ್ಯೆಯ ಮಕ್ಕಳು ಸಮೀಕ್ಷೆಗೂ ಕೂಡಾ ಸಿಕ್ಕಿಲ್ಲ. ಪೋಷಕರು ನೀವು ಹೇಳುವಂತೆ ಬೆಲ್ಲ ಬೇಳೆ ಪಡೆದು ಲಂಚ್ ಡಬ್ಬಿಯನ್ನು ಶಾಲೆಗಳಿಗೆ ತುಂಬಿ ಕಳಿಸಲಾರರು. ಅಮೇರಿಕಾದ ಅಧ್ಯಕ್ಷ ಜಾನ್ ಎಫ್.ಕೆನಡಿಯವರು ಭಾರತದ ಬಡಮಕ್ಕಳಿಗೆ ಶಾಲೆಯಲ್ಲಿ ಮಧ್ಯಾಹ್ನ ಉಪ್ಪಿಟ್ಟು ಕೊಡುವಂತೆ ಅನುಕೂಲ ದೊರಕಿಸಿಕೊಟ್ಟ ಕಾರಣದಿಂದಲೇ ನಾನು ಅಕ್ಷರಸ್ಥನಾಗಲು ಸಾಧ್ಯವಾಯಿತು. ಆಗ್ಗಿಂತಲೂ ಈಗಿನ ಬಡ ಜನರ ಪರಿಸ್ಥಿತಿ ಭಿನ್ನವಾಗಿಯೇನೂ ಇಲ್ಲ ಎಂದು ವಡ್ಡಗೆರೆ ನಾಗರಾಜಯ್ಯ ತಿಳಿಸಿದ್ದಾರೆ.
ನಮ್ಮ ಸರ್ಕಾರಿ ಶಾಲೆಗಳು ಮತ್ತು ಅನುದಾನಿತ ಶಾಲೆಗಳಲ್ಲಿ ಕಲಿಯುತ್ತಿರುವ ನನ್ನಂತಹ ಕೌಟುಂಬಿಕ ಹಿನ್ನೆಲೆಯಿಂದ ಬಂದಿರುವ ಬಡ ವಿದ್ಯಾರ್ಥಿಗಳಿಗೆ ಬಿಸಿಯೂಟ, ಮೊಟ್ಟೆ, ಹಾಲು, ಹಣ್ಣು ಹೀಗೆ ಎಲ್ಲಾ ರೀತಿಯ ಪೌಷ್ಟಿಕಾಹಾರಗಳು ಸಿಗಲಿ. ಸಾಧ್ಯವಾದರೆ ವಾರದಲ್ಲಿ ಯಾವುದಾದರೊಂದು ದಿನ ಮಾಂಸಾಹಾರವೂ ಇರಲಿ ಎಂಬುದೇ ನನ್ನ ಆಶಯ ಎಂದಿದ್ದಾರೆ.