ಮಂಗಳೂರು: ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಡಬೇಕೆಂದು ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಗುತ್ತಿಗೆ ಪೌರಕಾರ್ಮಿಕರಿಗೆ ಸ್ಪಂದಿಸದ ಬಿಜೆಪಿ ಸರಕಾರದ ಕಾರ್ಮಿಕ ವಿರೋಧಿ, ದಲಿತ ವಿರೋಧಿ ನಡೆಯನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಮಂಗಳೂರು ನಗರ ದಕ್ಷಿಣ ಸಮಿತಿ ವಿರೋಧಿಸಿದೆ.
ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಸಿಪಿಐ(ಎಂ) ಮಂಗಳೂರು ನಗರ ದಕ್ಷಿಣ ಸಮಿತಿ ಕಾರ್ಯದರ್ಶಿ ಸಂತೋಷ್ ಬಜಾಲ್, ಪೌರ ಕಾರ್ಮಿಕರ ಬೇಡಿಕೆಗಳನ್ನು ಕೂಡಲೇ ಈಡೇರಿಸಲು ಮುಂದಾಗಬೇಕು ಮತ್ತು ನಗರದಲ್ಲಿ ಕಸ ವಿಲೇವಾರಿಗೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನು ಓದಿ: ಮುನಿಸಿಪಾಲ್ ಕಾರ್ಮಿಕ ಮುಷ್ಕರ ಪರಿಣಾಮ: ನೇರ ಪಾವತಿ-ಪೌರ ಕಾರ್ಮಿಕರ ಖಾಯಂಗೆ ಮುಖ್ಯಮಂತ್ರಿ ಭರವಸೆ
ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಪೌರ ಕಾರ್ಮಿಕರು ತಮ್ಮ ಉದ್ಯೋಗದ ನೇರ ನೇಮಕಾತಿ ಮತ್ತು ಖಾಯಂಗೊಳಿಸಲು ಸೇರಿದಂತೆ ಇತರೆ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸುತ್ತಿದ್ದಾರೆ. ಹಲವಾರು ವರುಷಗಳಿಂದ ಸಂಘಟಿತ ಹೋರಾಟಗಳನ್ನು ನಡೆಸುತ್ತಾ ಬಂದಿದ್ದಾರೂ ಸಹ ಸರಕಾರಗಳು ಈವರೆಗೂ ಪೌರ ಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸದೆ ಸತಾಯಿಸುತ್ತಿರುವುದು ಖಂಡನೀಯ ಎಂದಿದ್ದಾರೆ.
ಸರ್ಕಾರದ ಕಾರ್ಮಿಕ ವಿರೋಧಿ, ದಲಿತ ವಿರೋಧಿ ನೀತಿಗಳನ್ನು ಖಂಡಿಸಿರುವ ಸಂತೋಷ್, ಬಜಾಲ್ ಗುತ್ತಿಗೆ ಪೌರಕಾರ್ಮಿಕರು ಕೆಲಸವನ್ನು ತ್ಯಜಿಸಿ ಪ್ರತಿಭಟನೆಗೆ ಮುಂದಾಗಿರುವುದರಿಂದ ಕಸ ವಿಲೇವಾರಿ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು ಮಂಗಳೂರು ನಗರದ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದು ಗಬ್ಬು ನಾರುತ್ತಿದೆ.
ಇದನ್ನು ಓದಿ: 11 ಸಾವಿರ ಪೌರಕಾರ್ಮಿಕರನ್ನು ಖಾಯಂಗೊಳಿಸಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ
ಮಂಗಳೂರು ಮಹಾನಗರ ಪಾಲಿಕೆ ಸ್ವಯಂ ಘೋಷಿತ ಆಸ್ತಿ ತೆರಿಗೆ ಹೆಸರಲ್ಲಿ ಪ್ರತಿ ಮನೆಗಳಿಂದ ವಿಪರೀತ ತೆರಿಗೆಯನ್ನು ಸಂಗ್ರಹಿಸುತ್ತಿದೆ. ಸ್ವಚ್ಚ ಭಾರತ, ಸ್ವಚ್ಛ ಮಂಗಳೂರು ಎಂಬ ಹೆಸರಿನಲ್ಲಿ ನೂರಾರು ಕೋಟಿ ಕೇಂದ್ರ, ರಾಜ್ಯ ಸರಕಾರದ ಅನುದಾನ ಹಣಗಳನ್ನು ಪೋಲು ಮಾಡುತ್ತಿದ್ದರೂ ನಿಜವಾಗಿಯೂ ಮಂಗಳೂರನ್ನು ಸ್ವಚ್ಚವಾಗಿಡುವ ಪೌರಕಾರ್ಮಿಕರ ವೇತನ ಹೆಚ್ಚಳಕ್ಕಾಗಲಿ ಅಥವಾ ಅವರ ಉದ್ಯೋಗದ ಭದ್ರತೆಗಾಗಲಿ ವಿನಿಯೋಗಿಸದೆ ಕೇವಲ ಕಮಿಷನ್ ಲೂಟಿ ಹೊಡೆಯಲು ಉಪಯೋಗವಾಗುತ್ತಿರುವುದನ್ನು ಸಿಪಿಐ(ಎಂ) ಪಕ್ಷ ಖಂಡಿಸುತ್ತದೆ ಎಂದಿದ್ದಾರೆ.
ಗುತ್ತಿಗೆ ಪೌರಕಾರ್ಮಿಕರು ನಡೆಸುವ ಹೋರಾಟ ನ್ಯಾಯಯುತವಾಗಿದ್ದು ಅವರು ನಡೆಸುವ ಹೋರಾಟಕ್ಕೆ ಸಿಪಿಐಎಂ ಪಕ್ಷ ಬೆಂಬಲ ವ್ಯಕ್ತಪಡಿಸಿದೆ. ರಾಜ್ಯ ಸರಕಾರ ಈ ಕೂಡಲೇ ಗುತ್ತಿಗೆ ಪೌರಕಾರ್ಮಿಕರ ಸೇವೆಗಳನ್ನು ಖಾಯಂಗೊಳಿಸಬೇಕು. ಸಮಾನ ವೇತನ ಮತ್ತು ನೇರ ವೇತನ ಸಹಿತ ಸರಕಾರದ ಮುಂದಿಟ್ಟಿರುವ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಸಿಪಿಐ(ಎಂ) ಪಕ್ಷ ಆಗ್ರಹಿಸಿದೆ.
ಹಲವು ದಿನಗಳಿಂದ ಕಸ ವಿಲೇವಾರಿಗೊಳ್ಳದೆ ಬಾಕಿಯಿದ್ದು, ಮಂಗಳೂರು ಮಹಾನಗರ ಪಾಲಿಕೆ ಆಡಳಿತ ಕೂಡಲೇ ಕ್ರಮಕೈಗೊಳ್ಳಬೇಕೆಂದು ಸಿಪಿಐ(ಎಂ) ಆಗ್ರಹಿಸಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ