ನವದೆಹಲಿ: ತ್ರಿಪುರಾ ರಾಜ್ಯದಲ್ಲಿ ನಡೆಯುವ ನಾಗರಿಕ ಸಂಸ್ಥೆ ಚುನಾವಣೆಯನ್ನು ಮುಂದೂಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ತ್ರಿಪುರಾದಲ್ಲಿ ಚುನಾವಣೆಗೂ ಮುನ್ನ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.
ತ್ರಿಪುರಾದಲ್ಲಿ ನಾಗರಿಕ ಚುನಾವಣೆ ಹಿನ್ನೆಲೆ ಕಾನೂನು ಮತ್ತು ಸುವ್ಯವಸ್ಥೆ ತುಂಬಾ ಹದಗೆಟ್ಟಿದೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ನಡೆಸಿತು.
ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಿದೆ ಮತ್ತು ನವೆಂಬರ್ 23ರ 4:30ಕ್ಕೆ ಚುನಾವಣಾ ಪ್ರಚಾರ ಕೊನೆಗೊಳ್ಳಲಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ನವೆಂಬರ್ 25 ರಂದು ಮತದಾನ ಮತ್ತು ನವೆಂಬರ್ 28 ರಂದು ಮತ ಎಣಿಕೆ ನಡೆಯಲಿದೆ.
ಟಿಎಂಸಿಯೂ ಚುನಾವಣೆಯನ್ನು ಮುಂದೂಡುವಂತೆ ಕೋರ್ಟ್ಗೆ ಕೋರಿತ್ತು. ಚುನಾವಣೆಯನ್ನು ಮುಂದೂಡಬೇಕೆಂದು ಹೇಳಲಾಗುವುದಿಲ್ಲ. ಆದರೆ, ತ್ರಿಪುರಾ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡುವ ಮೂಲಕ ಸೂಕ್ತವಾಗಿ ಸಮಸ್ಯೆಯನ್ನು ಪರಿಹರಿಸಬಹುದು ಎಂದು ನ್ಯಾಯಾಲಯ ಹೇಳಿದೆ. ಅಲ್ಲದೇ ಮುನ್ಸಿಪಲ್ ಚುನಾವಣೆಯ ಉಳಿದ ಹಂತಗಳು ಶಾಂತಿಯುತ ಮತ್ತು ಕ್ರಮಬದ್ಧವಾಗಿ ನಡೆಯುವುದು ಎಂದಿದೆ.
ಸುಪ್ರೀಂಕೋರ್ಟ್‌ನ ನಿರ್ದೇಶನಗಳು:
1) ಉಳಿದ ಹಂತದ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಪ್ಯಾರಾ ಮಿಲಿಟರಿ ಪಡೆಗಳ ಲಭ್ಯತೆ ಬಗ್ಗೆ ಡಿಜಿಪಿ ಮತ್ತು ಐಜಿಪಿ (ಎಲ್ ಅಂಡ್ ಒ) ನವೆಂಬರ್ 24 ರ ಬೆಳಗ್ಗೆ ರಾಜ್ಯ ಚುನಾವಣಾ ಆಯೋಗದೊಂದಿಗೆ ಜಂಟಿ ಸಭೆಯನ್ನು ನಡೆಸುತ್ತಾರೆ.
ಕ್ಷೇತ್ರ ಕರ್ತವ್ಯಕ್ಕಾಗಿ ರಾಜ್ಯದಲ್ಲಿ ಸಿಆರ್‌ಪಿಎಫ್‌ನ ಮೂರು ಬೆಟಾಲಿಯನ್‌ಗಳಿವೆ. 78 ವಿಭಾಗಗಳನ್ನು ಒಳಗೊಂಡ ಹದಿನೇಳು ಕಂಪನಿಗಳು ಚುನಾವಣಾ ಕರ್ತವ್ಯಕ್ಕಾಗಿ ರಚಿಸಲಾಗಿದೆ. ಇನ್ನೂ ಹನ್ನೆರಡು ವಿಭಾಗಗಳನ್ನು ರಚಿಸಬೇಕಾಗಿದೆ. ರಾಜ್ಯದಲ್ಲಿನ ಮೂರು ಸಿಆರ್‌ಪಿಎಫ್ ಬೆಟಾಲಿಯನ್‌ಗಳ ಪೈಕಿ ಸುಮಾರು 2 ಬೆಟಾಲಿಯನ್ನನ್ನು ಚುನಾವಣೆಗೆ ನಿಯೋಜಿಸಲು ಕೋರ್ಟ್ ಸೂಚಿಸಿದೆ.
2) ಪರಿಸ್ಥಿತಿಯ ಅವಲೋಕನ ಮಾಡಿದ ನಂತರ ಸಿಆರ್‌ಪಿಎಫ್‌ಗೆ ವಿನಂತಿಯನ್ನು ಮಾಡಲಾಗುವುದು.
3) ಡಿಜಿಪಿ ಮತ್ತು ಐಜಿಪಿ ಅವರು ಚುನಾವಣಾ ಪ್ರಕ್ರಿಯೆಯು ಯಾವುದೇ ಅಡ್ಡಿಯಿಲ್ಲದೆ, ವಿಶೇಷವಾಗಿ ಮತದಾನದ ದಿನಾಂಕದಂದು ಶಾಂತಿಯುತ ಮತ್ತು ಕ್ರಮಬದ್ಧವಾಗಿ ನಡೆಯಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ.
4) ತ್ರಿಪುರಾ ಸರ್ಕಾರವು ದೂರುಗಳ ಹೇಳಿಕೆಯನ್ನು ಸಲ್ಲಿಸಬೇಕು, ಎಫ್‌ಐಆರ್‌ಗಳನ್ನು ದಾಖಲಿಸಬೇಕು, ತೆಗೆದುಕೊಂಡ ಕ್ರಮಗಳು ಮತ್ತು ಬಂಧದ ವರದಿಯನ್ನು ಸಲ್ಲಿಸಬೇಕು.
5) ಸುಪ್ರೀಂಕೋರ್ಟ್ ಕಾನೂನು ಜಾರಿ ಸಂಸ್ಥೆಗಳಿಗೆ ತಮ್ಮ ಕರ್ತವ್ಯವನ್ನು ಪಕ್ಷಾತೀತ ರೀತಿಯಲ್ಲಿ ನಿರ್ವಹಿಸುವಂತೆ ಸೂಚಿಸಿದೆ.
ತ್ರಿಪುರಾ ಪೊಲೀಸರು ಪಕ್ಷದ ಕಾರ್ಯಕರ್ತರೊಂದಿಗೆ ಕ್ರೂರವಾಗಿ ವರ್ತಿಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ದೆಹಲಿಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದರ ನಿಯೋಗವನ್ನು ಭೇಟಿ ಮಾಡಿದ್ದರು.
ತ್ರಿಪುರಾದಲ್ಲಿ ಗಂಭೀರ ಪರಿಸ್ಥಿತಿ
ಭಾನುವಾರ, ಅಗರ್ತಲಾದ ಪೊಲೀಸ್ ಠಾಣೆಯೊಳಗೆ ಬಿಜೆಪಿ ಸದಸ್ಯರು ತಮ್ಮ ಪಕ್ಷದ ಕಾರ್ಯಕರ್ತರಿಗೆ ದೊಣ್ಣೆ ಮತ್ತು ಕಲ್ಲುಗಳಿಂದ ಹೊಡೆದಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ. ಬೆಳಗ್ಗೆ ಪಕ್ಷದ ನಾಯಕಿ ಸಯೋನಿ ಘೋಷ್ ಅವರನ್ನು ವಿಚಾರಣೆಗೆಂದು ಕರೆದೊಯ್ದ ನಂತರ ಟಿಎಂಸಿ ಸದಸ್ಯರು ಪೊಲೀಸ್ ಠಾಣೆಯಲ್ಲಿ ಜಮಾಯಿಸಿದ್ದರು.
ಶನಿವಾರ ರಾತ್ರಿ “ಖೇಲಾ ಹೋಬೆ” (ನಾವು ಆಡುತ್ತೇವೆ) ಎಂದು ಕೂಗುವ ಮೂಲಕ ರಾಜ್ಯ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರ ಸಭೆಗೆ ಅಡ್ಡಿಪಡಿಸಿದ ನಂತರ ಟಿಎಂಸಿ ನಾಯಕಿ ಸಯೋನಿ ಘೋಷ್ ಅವರನ್ನು ಕೊಲೆ ಯತ್ನದ ಆರೋಪದ ಮೇಲೆ ಬಂಧಿಸಲಾಯಿತು.