- ಎಂಟು ವರ್ಷದ ಅಂಚೆಗಳನ್ನ ಗ್ರಾಮಸ್ಥರಿಗೆ ನೀಡದ ಪೋಸ್ಟ್ ಮ್ಯಾನ್
- ಅಂಚೆಯಣ್ಣನ ನಿರ್ಲಕ್ಷ್ಯ, ಜನರ ಜೀವನದ ಜೊತೆ ಚೆಲ್ಲಾಟ
- ಪೋಸ್ಟ್ ಮ್ಯಾನ್ ವಿರುದ್ಧ ಜನರ ಆಕ್ರೋಶ
ಕನಕಗಿರಿ : ಬಂದಿರೋ ಪೋಸ್ಟ್ ಗಳನ್ನ ಸಂಬಂಧಪಟ್ಟವರಿಗೆ ತಲುಪಿಸುವುದು ಪೋಸ್ಟ್ ಮ್ಯಾನ್ ಕೆಲಸ. ಆದ್ರೆ, ಇಲ್ಲೊಬ್ಬ ಅಂಚೆ ವಿತರಕ ಎಂಟು ವರ್ಷದಿಂದ ಅಂಚೆಪತ್ರಗಳನ್ನು ಜನರಿಗೆ ಹಂಚದೆ, ಮೂಟೆ ಕಟ್ಟಿ ಊರಾಚೆ ಎಸೆದು ಕೈ ತೊಳೆದುಕೊಂಡಿದ್ದಾನೆ. ಕ್ರಮ ಕೈಗೊಳ್ಳಬೇಕಿದ್ದ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ.
ಚೆಲ್ಲಾಪಿಲ್ಲಿಯಾಗಿ ಬಿದ್ದಿರೋ ಅಂಚೆಪತ್ರಗಳನ್ನು ಜನ ಹುಡುಕಿ ಹುಡಿಕಿ ನೋಡುತ್ತಿದ್ದಾರೆ. ತಮಗೆ ಸಂಬಂಧಿಸಿದ ದಾಖಲಾತಿ ಇವೆಯಾ ಎಂದು , ಅಯ್ಯೊ ನಂಗೆ ಎಟಿಎಂ ಕಾರ್ಡ್ ಬರಬೇಕಿತ್ತು, ಊರಿಂದ ಪತ್ರ ಬರೆದಿದ್ರು , ಕಚೇರಿಂದ ಇನ್ನೊಂದು ಪತ್ರ ಬರಬೇಕಿತ್ತು ಇದರಲ್ಲಿ ಇದೆಯಾ ಎಂದು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ರಾಶಿ ರಾಶಿ ಪತ್ರಗಳನ್ನು ಕೆದಕಿ ಹುಡುಕುತ್ತಿರುವ ದೃಶ್ಯಗಳು ಕಂಡು ಬಂದಿದ್ದು ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಗೌರಿಪುರ ಗ್ರಾಮದಲ್ಲಿ.
ಕಳೆದ ಎಂಟು ವರ್ಷದಿಂದ ಒಂದೂ ಅಂಚೆಪತ್ರಗಳನ್ನು ಸಂಬಂಧಿಸಿದವರ ಮನೆಗೆ ತಲುಪಿಸದ ಅಂಚೆ ವಿತರಕನಿಗೆ ಇಲ್ಲಿನ ಜನ ಹಿಡಿ ಶಾಪ ಹಾಕುತ್ತಿದ್ದಾರೆ. ಅಮಾನವೀಯ ಮರೆದ ಪೋಸ್ಟ್ಮ್ಯಾಮ್ಯಾನ್ ಹೆಸರು ವಿನಯ ಅಂತಾ. ಗೌರಿಪುರ ಅಂಚೆ ಕಚೇರಿ ವ್ಯಾಪ್ತಿಯ ಬಸರಿಹಾಳ, ಬೈಲಕ್ಕಂಪುರ, ದೇವಲಾಪೂರ ಮತ್ತು ಚಿಕ್ಕ ವಡ್ಡರಕಲ್ ಗ್ರಾಮಗಳಿಗೆ ಇತ ಅಂಚೆ ಪತ್ರಗಳನ್ನು ವಿತರಣೆ ಮಾಡಬೇಕು. ಸರ್ಕಾರದಿಂದ ತಿಂಗಳು ತಿಂಗಳು ಸಂಬಳ ಪಡೆಯುತ್ತಿದ ವಿನಯ್, ಸಂಬಂಧಪಟ್ಟ ವಿಳಾಸಕ್ಕೆ ತಲುಪಿಸಬೇಕಿದ್ದ ವಿವಿಧ ದಾಖಲಾತಿ, ಆಧಾರ್ ಕಾರ್ಡ್, ಮಾಸಾಶನ ಆದೇಶ ಪತ್ರ, ಲೋನ್ ನೋಟಿಸ್ಗಳನ್ನ ಡೆಲೆವರಿ ಮಾಡಿಲ್ಲ. ಬದಲಾಗಿ ಮೂಟೆಕಟ್ಟಿ ಊರಾಚೆ ಎಸೆದಿದ್ದಾನೆ. ಮಕ್ಕಳು ಆಟವಾಡುವಾಗ ಮೂಟೆ ತೆಗೆದು ನೋಡಿದ್ದು, ಅಂಚೆ ವಿತರಕನ ಬಂಡವಾಳ ಬಯಲಾಗಿದೆ.
ಕಳೆದ 10 ವರ್ಷದ ಹಿಂದೆ ಗೌರಿಪುರ ಗ್ರಾಮದಲ್ಲಿ ಕೆಲಸಕ್ಕೆ ಸೇರಿರೋ ಈತ ಆರಂಭದ ಎರಡು ವರ್ಷ ಮಾತ್ರ ಸರಿಯಾಗಿ ಕೆಲಸ ಮಾಡಿದ್ದಾನಂತೆ. ಕಳೆದ 8 ವರ್ಷದಿಂದ ಯಾವುದೇ ಅಂಚೆಗಳನ್ನ ಡೆಲೆವರಿ ಮಾಡಿಲ್ಲ ಎಂಬುದು ಸಾರ್ವಜನಿಕರ ಆರೋಪ. ಇಂದು ಊರಾಚೆ ಸಿಕ್ಕ ಮೂಟೆಯಲ್ಲಿನ ದಾಖಲಾತಿ ನೋಡಿ ಗೌರಿಪುರ ಜನ ಬೆಚ್ಚಿ ಬಿದ್ದಿದ್ದಾರೆ. ತಾವು ಕಳೆದ 8 ವರ್ಷದಿಂದ ಅಂಚೆ ಕಚೇರಿಗೆ ಎಡತಾಕಿ ಕೇಳುತ್ತಿದ್ದ ನೂರಾರು ಜನರ ಆಧಾರ್ ಕಾರ್ಡ್, ಪಾನ್ ಕಾರ್ಡ್, ಎಟಿಎಂ ಕಾರ್ಡ್, ಬ್ಯಾಂಕ್ ಚೆಕ್ ಬುಕ್, ವಿವಿಧ ಮಾಸಾಶನಗಳ ಆದೇಶ ಪತ್ರ, ಸರ್ಕಾರಿ ನೌಕರರ ಜಾಯಿನಿಂಗ್ ಲೆಟರ್, ಎಲ್ಐಸಿ ಪಾಲಿಸಿಯ ನೋಟಿಸ್, ಚಿನ್ನದ ಮೇಲಿನ ಸಾಲದ ಹರಾಜು ನೋಟೀಸ್ ಗಳು ಕಂಡು ಆಕ್ರೋಶಗೊಂಡಿದ್ದಾರೆ. ನೋಟೀಸ್ ತಲುಪದ ಹಿನ್ನೆಲೆ ಅದೆಷ್ಟೋ ಜನ ತಮ್ಮ ಚಿನ್ನ ಕಳೆದುಕೊಂಡಿದ್ದಾರಂತೆ. ಕೆಲವರು ಮಾಸಾಶನದಿಂದ ವಂಚಿತರಾಗಿದ್ದಾರೆ.
ಅಂಚೆ ಇಲಾಖೆ ಇಂದಿಗೂ ವಿಶ್ವಾಸ ಉಳಿಸಿಕೊಂಡಿದ್ದು, ಕೋರ್ಟ್ ಸೇರಿದಂತೆ ಎಲ್ಲ ಸರ್ಕಾರಿ ಇಲಾಖೆಗಳು ಭಾರತೀಯ ಅಂಚೆ ಮೂಲಕವೇ ಪತ್ರ ವ್ಯವಹಾರ ನಡೆಸುತ್ತವೆ. ಇಂಥ ಅಡ್ನಾಡಿ ಅಂಚೆ ವಿತರಕನಿಂದ ಇಡೀ ಅಂಚೆ ಇಲಾಖೆ ತಲೆ ತಗ್ಗಿಸುವಂತೆ ಆಗಿದ್ದು, ತಪ್ಪಿತಸ್ಥನ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.