ಜನಸಂಖ್ಯಾ ಹೆಚ್ಚಳವೂ ಪಿತೃಪ್ರಧಾನ ಮೌಲ್ಯಗಳೂ

ಚಾರಿತ್ರಿಕವಾಗಿ ಹೆಣ್ಣನ್ನು ಮಾನವ ಮರುಉತ್ಪಾದನೆಯ ಕೇಂದ್ರವಾಗಿಯೇ  ನೋಡಲಾಗಿದೆ

ಕೇವಲ ಎರಡು ದಶಕಗಳ ಹಿಂದೆ ದೇಶದೆಲ್ಲೆಡೆ ಆರೋಗ್ಯ ಕೇಂದ್ರಗಳಲ್ಲಿ ಪ್ರಧಾನವಾಗಿ ಕಾಣುತ್ತಿದ್ದ ಒಂದು ವಿಶಾಲ ಜಾಹೀರಾತು “ನಾವಿಬ್ಬರು ನಮಗಿಬ್ಬರೇ ಮಕ್ಕಳು” ಎಂಬ ಘೋಷಣೆ. ಹೆಚ್ಚು ಮಕ್ಕಳಿರುವವರನ್ನು ಕೆಂಗಣ್ಣಿನಿಂದ ನೋಡುವ ಒಂದು ಸಾಂಸ್ಕೃತಿಕ ದೃಷ್ಟಿಕೋನವೂ ಪ್ರಚಲಿತವಾಗಿತ್ತು. ವಿಶೇಷವಾಗಿ ಮುಸ್ಲಿಂ ಅಲ್ಪಸಂಖ್ಯಾತರಲ್ಲಿ ಮಕ್ಕಳ ಜನನ ಪ್ರಮಾಣ ಹೆಚ್ಚಾಗಿರುವುದನ್ನು ಉಲ್ಲೇಖಿಸಿ, ಇದು ದೇಶದ ಅಭಿವೃದ್ಧಿಗೆ ಮಾರಕ ಎಂಬ ಪ್ರಚಾರವೂ ವ್ಯಾಪಕವಾಗಿತ್ತು. ಹೆಚ್ಚು ಮಕ್ಕಳನ್ನು ಹೊಂದಿರುವುದು ದೇಶದ್ರೋಹ ಎಂಬ ಭಾವಾತಿರೇಕದ ಮಾತುಗಳೂ ಕೇಳಿಬರುತ್ತಿದ್ದವು. ಆದರೆ ಹಠಾತ್ತನೆ ಭಾರತದ ರಾಜಕೀಯ ಸಂಕಥನದಲ್ಲಿ ಈಗ ಎರಡಕ್ಕಿಂತಲೂ ಹೆಚ್ಚು ಮಕ್ಕಳನ್ನು ಹೊಂದಬೇಕು ಎನ್ನುವ ಆಗ್ರಹ ರಾಜಕೀಯ ಮತ್ತು ಧಾರ್ಮಿಕ ನೆಲೆಗಳಲ್ಲಿ ಕೇಳಿಬರುತ್ತಿದೆ. ಹೆಚ್ಚಳ

-ನಾ ದಿವಾಕರ

ಈ ಹಠಾತ್‌ ಬೆಳವಣಿಗೆಗೆ ಎರಡು ಕಾರಣಗಳನ್ನು ಗುರುತಿಸಬಹುದು. ಆರ್ಥಿಕವಾಗಿ ಜಪಾನ್‌, ಚೀನಾ ಮೊದಲಾದ ದೇಶಗಳು ಜನನ ನಿಯಂತ್ರಣವನ್ನು ಕಟ್ಟುನಿಟ್ಟಾಗಿ ಪಾಲಿಸಿದ ಕಾರಣವಾಗಿ ಇಂದು ಅಲ್ಲಿ ವಯಸ್ಕರ ಪ್ರಮಾಣ ಹೆಚ್ಚಾಗುತ್ತಿದ್ದು, ಯುವಸಮೂಹದ ಸಂಖ್ಯೆ ಕ್ಷೀಣಿಸುತ್ತಿದೆ. ಇದು ಸಾಮಾಜಿಕ ಅಸಮತೋಲನ ಸೃಷ್ಟಿಸುವುದಷ್ಟೇ ಅಲ್ಲದೆ ದೇಶದ ಆರ್ಥಿಕ ಅಭಿವೃದ್ಧಿಗೂ ಅಡ್ಡಿಯಾಗುತ್ತದೆ. ಏಕೆಂದರೆ ಬಂಡವಾಳಶಾಹಿ ಆರ್ಥಿಕತೆಯಲ್ಲಿ ಅಭಿವೃದ್ಧಿ ಸಾಧಿಸಲು ದುಡಿಮೆಯ ಕೈಗಳು ಹೆಚ್ಚಿನ ಸಂಖ್ಯೆಯಲ್ಲಿ ಬೇಕಾಗುತ್ತವೆ. ಅತ್ಯಾಧುನಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಇತ್ಯಾದಿಗಳ ಹೊರತಾಗಿಯೂ, ಮಾನವ ಡುಡಿಮೆಗಾಗಿ ಉತ್ಪಾದಕೀಯ ಶಕ್ತಿಗಳು ಅಗತ್ಯವಾಗಿರುತ್ತವೆ. ಈ ಶಕ್ತಿಯನ್ನು ಯುವ ಸಮೂಹದಲ್ಲೇ ಹೆಚ್ಚು ಕಾಣಲು ಸಾಧ್ಯ ಎನ್ನುವುದು ವಾಸ್ತವ. ಹೆಚ್ಚಳ

ಆದರೆ ಭಾರತದಲ್ಲಿ ಈ ಸಮಸ್ಯೆ ಗಂಭೀರವಾದ ರೂಪ ಪಡೆದಿಲ್ಲ. ಏಕೆಂದರೆ ಭಾರತದ ಜನಸಂಖ್ಯೆಯಲ್ಲಿ ಯುವಸಮೂಹದ ಪ್ರಮಾಣ ಹೆಚ್ಚಾಗಿಯೇ ಇದ್ದು 15 ರಿಂದ 29ರ ವಯೋಮಾನದ ಯುವ ಜನಸಂಖ್ಯೆ 37.14 ಕೋಟಿಯಷ್ಟಿದೆ, ಅಂದರೆ ಒಟ್ಟು ಜನಸಂಖ್ಯೆಯ ಶೇಕಡಾ 27.3ರಷ್ಟು. ದೇಶದ ನಿವ್ವಳ ರಾಷ್ಟ್ರೀಯ ಆದಾಯದಲ್ಲಿ (Gross National Income) ಯುವ ಸಮೂಹದ ಕೊಡುಗೆ ಶೇಕಡಾ 34ರಷ್ಟಿದೆ. ಭಾರತದ ಜನಸಂಖ್ಯೆಯ ಶೇಕಡಾ 43ರಷ್ಟು ಜನರ ವಯೋಮಾನ 24 ವರ್ಷಗಳಿಗಿಂತ ಕಡಿಮೆ ಇದೆ. ಆದರೂ ಈ ಮುನ್ನ ಜನಸಂಖ್ಯೆ ಹೆಚ್ಚಳದ ಬಗ್ಗೆ, ತಮ್ಮದೇ ಆದ ಸೈದ್ಧಾಂತಿಕ-ತಾತ್ವಿಕ-ರಾಜಕೀಯ ಕಾರಣಗಳಿಗಾಗಿ ಆತಂಕ ವ್ಯಕ್ತಪಡಿಸುತ್ತಿದ್ದ ಸಮಾಜ ಇಂದು ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಗಳಿಗಾಗಿ ಆಗ್ರಹಿಸುತ್ತಿದೆ. ಹೆಚ್ಚಳ

ರಾಜಕೀಯ-ಮತೀಯ ಧ್ವನಿಗಳು

ಇವರಲ್ಲಿ ಪ್ರಧಾನವಾಗಿ ಕಾಣುವುದು ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರ ಆಗ್ರಹ. ಹಿಂದೂ-ಮುಸ್ಲಿಂ ಜನಸಂಖ್ಯೆಯಲ್ಲಿನ ವ್ಯತ್ಯಯಗಳನ್ನೇ ಕೇಂದ್ರೀಕರಿಸಿ, ಸಾಮಾಜಿಕ-ಸಾಂಸ್ಕೃತಿಕ ಅಸಮತೋಲನವನ್ನು ಸರಿಪಡಿಸುವ ನಿಟ್ಟಿನಲ್ಲಿ ಆರೆಸ್ಸೆಸ್‌ ನಾಯಕರು ಪ್ರತಿ ಕುಟುಂಬದಲ್ಲೂ ಕನಿಷ್ಠ ಮೂರು ಮಕ್ಕಳು ಇರಬೇಕು ಎಂದು ಆಜ್ಞಾಪಿಸುತ್ತಾರೆ. ಸಂಘಪರಿವಾರದ ನಾಯಕ, ಸಂಸದ ಸಾಕ್ಷಿ ಮಹಾರಾಜ್‌ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹಿಂದೂ ಮಹಿಳೆಯರು ಕನಿಷ್ಠ ನಾಲ್ಕು ಮಕ್ಕಳನ್ನು ಹೆರುವಂತೆ ಆದೇಶಿಸುತ್ತಾರೆ. ರಾಜಕೀಯ ವಲಯದಲ್ಲಿ ದಕ್ಷಿಣ ಭಾರತದಲ್ಲಿ ಈ ಕೂಗು ತನ್ನದೇ ಆದ ವಿಶಿಷ್ಟ ಧ್ವನಿ ಪಡೆದುಕೊಂಡಿದೆ. ಆಂಧ್ರ ಪ್ರದೇಶ ಸರ್ಕಾರ ಎರಡು ಮಕ್ಕಳ ನೀತಿಯನ್ನೇ ತಿದ್ದುಪಡಿ ಮಾಡಲು ಮುಂದಾಗಿದ್ದು, ಆಂಧ್ರದ ಜನರು ಹೆಚ್ಚಿನ ಮಕ್ಕಳನ್ನು ಹೊಂದುವಂತೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆದೇಶಿಸಿದ್ದಾರೆ. ಪ್ರತಿ ಮಹಿಳೆಯೂ ಕನಿಷ್ಠ ಎರಡು ಮಕ್ಕಳನ್ನು ಹೊಂದಿರುವಂತೆ ಕರೆ ನೀಡಿದ್ದಾರೆ. ಮೂರನೆಯ ಮಗು ಹೆಣ್ಣಾದರೆ 50 ಸಾವಿರ ರೂಗಳ ಸಹಾಯಧನವನ್ನೂ ಸರ್ಕಾರ ಘೋಷಿಸಿದೆ. ಹೆಚ್ಚಳ

ಇದನ್ನೂ ಓದಿ: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಇಬ್ಬರು ಶಾಸಕರ ವಿರುದ್ದ ಬಿಜೆಪಿ ಕ್ರಮ

ಈ ನೀತಿಯನ್ನು ಮತ್ತಷ್ಟು ವಿಸ್ತರಿಸಿ ಸ್ಥಳೀಯ ಸಂಸ್ಥೆಗಳು, ಪಂಚಾಯತ್‌ ಚುನಾವಣೆಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಕನಿಷ್ಠ ಎರಡಕ್ಕಿಂತಲೂ ಹೆಚ್ಚು ಮಕ್ಕಳಿರಬೇಕು ಎಂಬ ಅಧಿಕೃತ ನೀತಿಗೂ ಚಂದ್ರಬಾಬು ನಾಯ್ಡು ಸರ್ಕಾರ ಮುಂದಾಗಿದೆ. ನೆರೆ ರಾಜ್ಯ ತೆಲಂಗಾಣದ ಕಾಂಗ್ರೆಸ್‌ ಸರ್ಕಾರವೂ ಇದೇ ನೀತಿಯನ್ನು ಅಳವಡಿಸಲು ಮುಂದಾಗಿದೆ. ಇತ್ತ ತಮಿಳುನಾಡು ಮುಖ್ಯಮಂತ್ರಿ ಎಮ್.ಕೆ. ಸ್ಟಾಲಿನ್‌ ಮತ್ತು ಉಪಮುಖ್ಯಮಂತ್ರಿ ಉಧಯನಿಧಿ ಸ್ಟಾಲಿನ್‌ ಅವರೂ ಸಹ, 2025ರ ಜನಗಣತಿಯ ನಂತರದಲ್ಲಿ ಕೇಂದ್ರ ಸರ್ಕಾರ ನಡೆಸುವ ಚುನಾವಣಾ ಕ್ಷೇತ್ರ ಮರುವಿಂಗಡನೆ (Delimitation) ರಾಜ್ಯದ ಸಂಸತ್‌ ಸ್ಥಾನಗಳನ್ನು ಕಡಿಮೆ ಮಾಡುತ್ತದೆ ಎಂಬ ಕಾರಣಕ್ಕಾಗಿ ಜನಸಂಖ್ಯೆಯನ್ನು ಹೆಚ್ಚಿಸಲು ಕರೆ ನೀಡಿದ್ದಾರೆ. ಈ ರಾಜಕೀಯ ಧ್ವನಿಗಳ ಹಿಂದೆ ಮಾರುಕಟ್ಟೆ ಆರ್ಥಿಕತೆಯ ಛಾಯೆ ಇರುವುದನ್ನೂ ಅಲ್ಲಗಳೆಯಲಾಗುವುದಿಲ್ಲ. ಹೆಚ್ಚಳ

ಜನಸಾಮಾನ್ಯರ ದೃಷ್ಟಿಯಿಂದ ನೋಡಿದಾಗ, ನಿತ್ಯ ದುಡಿಮೆಯನ್ನೇ ನಂಬಿ ಬದುಕುವ ಬಹುಸಂಖ್ಯಾತ ಜನತೆಗೆ ಪ್ರತಿಯೊಂದು ಮಗುವೂ ಒಂದು ದುಡಿಯುವ ಕೈ ಆಗುತ್ತದೆ, ಭೌತಿಕ ಆಸ್ತಿಯಾಗುತ್ತದೆ, ವರಮಾನದ ಮೂಲ ಆಗುತ್ತದೆ. ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲ ಸಮುದಾಯಗಳಲ್ಲೂ ಕಾಣಬಹುದಾದ ಈ ವಿದ್ಯಮಾನವನ್ನು ವೈಜ್ಞಾನಿಕ ನೆಲೆಯಲ್ಲಿ ನೋಡಿದಾಗ, ದುಡಿಮೆಯ ಶಕ್ತಿಗಳು, ಉತ್ಪಾದಕೀಯ ಶಕ್ತಿಗಳಾಗಿ ಆರ್ಥಿಕ ಅಭಿವೃದ್ಧಿಗೆ ಪೂರಕವಾಗುವುದನ್ನು ತಳಸ್ತರದ ಆರ್ಥಿಕತೆಯಲ್ಲಿ ಗುರುತಿಸಬಹುದು. ಆದರೆ ಸಂಕುಚಿತ ಮತೀಯ ಅಥವಾ ಜಾತಿ ದೃಷ್ಟಿಕೋನದಿಂದ ಹೆಚ್ಚು ಮಕ್ಕಳನ್ನು ಹೊಂದಿರುವುದನ್ನು ಲೇವಡಿ ಮಾಡುತ್ತಿದ್ದ, ಈಗಲೂ ಮಾಡುವ ಗಣ್ಯ ಸಮಾಜವನ್ನೂ ನಾವು ನೋಡಿದ್ದೇವೆ. ಹೆಚ್ಚಳ

ಇದರ ಮತ್ತೊಂದು ಬದಿಯಲ್ಲಿ ಮೇಲ್‌ ಮಧ್ಯಮ ವರ್ಗಗಳಲ್ಲಿ ಮತ್ತು ಶ್ರೀಮಂತ ಸಮಾಜದಲ್ಲಿ ತಮ್ಮ ಭೌತಿಕ ಆಸ್ತಿಗೆ ವಾರಸುದಾರರಾಗಲು ಮಕ್ಕಳನ್ನು ಅಪೇಕ್ಷಿಸಲಾಗುತ್ತದೆ. ಇಲ್ಲಿ ಗಂಡು ಸಂತಾನಕ್ಕೆ ಹೆಚ್ಚಿನ ಪ್ರಾಶಸ್ತ್ಯ ಇರುವುದನ್ನು ಗುರುತಿಸಬಹುದು. ಎಲ್ಲ ಸಮಾಜಗಳಲ್ಲೂ ಸಮಾನವಾಗಿ ಕಾಣಬಹುದಾದ ವಿದ್ಯಮಾನ ಎಂದರೆ ಹೆಣ್ಣು ಮಕ್ಕಳನ್ನು ಬಾಧ್ಯತೆ ಅಥವಾ ಹೊರೆ ಎಂದು ಭಾವಿಸುವ ಒಂದು ಪ್ರಾಚೀನ ಪಿತೃಪ್ರಧಾನ ಧೋರಣೆ. ಶ್ರೀಮಂತರಲ್ಲಿ ಇದು ಆಸ್ತಿಯ ಪಾಲುದಾರಿಕೆಯ ಸುತ್ತ ಕಂಡುಬಂದರೆ, ಬಡ ಜನತೆಯಲ್ಲಿ ಹೆಣ್ಣು ಮಕ್ಕಳ ವಿವಾಹ ಮತ್ತು ಭವಿಷ್ಯ ಜೀವನದ ಸುತ್ತ ಕಂಡುಬರುತ್ತದೆ. ಹೇಗೇ ಆದರೂ, ಹೆಣ್ಣು ಅನಪೇಕ್ಷಿತವಾಗುವ ಒಂದು ಸಾಂಪ್ರದಾಯಿಕ ಮನಸ್ಥಿತಿಯಿಂದ ಭಾರತ ಹೊರಬಂದಿಲ್ಲ ಎನ್ನುವುದು ವಾಸ್ತವ. ಹಾಗಾಗಿಯೇ ಹೆಣ್ಣು ಭ್ರೂಣ ಹತ್ಯೆ ಇಂದಿಗೂ ಸಹ ವ್ಯಾಪಕವಾಗಿ, ವ್ಯವಸ್ಥಿತವಾಗಿ ಎಲ್ಲ ಸಮಾಜಗಳಲ್ಲೂ ಕಂಡುಬರುತ್ತದೆ. ಹೆಚ್ಚಳ

ಸ್ತ್ರೀವಾದಿ ನೆಲೆಯಲ್ಲಿ ಜನಸಂಖ್ಯೆ ಹೆಚ್ಚಳ

ರಾಜಕೀಯ ಅಥವಾ ಧಾರ್ಮಿಕ ಕಾರಣಗಳಿಗಾಗಿ ಹೆಚ್ಚು ಮಕ್ಕಳನ್ನು ಹೊಂದಿರಲು ಕರೆ ನೀಡುವ ಪಕ್ಷ-ಸಂಘಟನೆಗಳು ಗಮನಿಸದೆ ಇರುವ ಅಂಶವೆಂದರೆ, ಭವಿಷ್ಯದ ತಲೆಮಾರಿನ ಜೀವನ, ಜೀವನೋಪಾಯ ಮತ್ತು ಸುಸ್ಥಿರ ಬದುಕು. ಮೇಲಾಗಿ ಮಹಿಳಾ ದೃಷ್ಟಿಕೋನದಿಂದ ನೋಡಿದಾಗ, ಮಹಿಳೆಯರ ಶೈಕ್ಷಣಿಕ ಹಂತ, ಆರ್ಥಿಕ ಅವಕಾಶಗಳು, ಭೌಗೋಳಿಕ ಹಾಗೂ ಸಾಮಾಜಿಕ ಸಂದರ್ಭಗಳೂ ಮಕ್ಕಳ ಜನನ ಸಂಖ್ಯೆಯನ್ನೂ ನಿರ್ಧರಿಸುತ್ತವೆ. ಈ ಅಂಶಗಳನ್ನು ವೈಜ್ಞಾನಿಕ ನೆಲೆಯಲ್ಲಿ ಪರಾಮರ್ಶಿಸದೆ ಹೆಚ್ಚು ಅಥವಾ ಕಡಿಮೆ ಮಕ್ಕಳನ್ನು ಹೆರುವಂತೆ ಹೇಳುವುದು, ಅವೈಜ್ಞಾನಿಕ ಮತ್ತು ಅಪ್ರಬುದ್ಧತೆಯ ಸಂಕೇತ. PEW ಸಂಶೋಧನಾ ಕೇಂದ್ರ ನಡೆಸಿದ ಸಮೀಕ್ಷೆಯೊಂದರ ಪ್ರಕಾರ ಭಾರತದ ಶೇಕಡಾ 61ರಷ್ಟು ಮಿಲೆನಿಯಲ್‌ ಯುವ ಸಮೂಹ, ಪಾಲನೆ ಪೋಷಣೆಯ ಸಮಸ್ಯೆಗಳಿಗಾಗಿ  ಮಕ್ಕಳನ್ನೇ ಬಯಸುವುದಿಲ್ಲ. ಹೆಚ್ಚಳ

ಸಾಮಾನ್ಯವಾಗಿ ಭಾರತದ ರಾಜಕೀಯ ವ್ಯವಸ್ಥೆಯನ್ನು ನಿರ್ವಹಿಸಿ, ನಿಯಂತ್ರಿಸಿ, ನಿರ್ದೇಶಿಸುವ ಪಿತೃಪ್ರಧಾನ ಧೋರಣೆಯೇ, ಯಾವುದೇ ಆಡಳಿತ ನಿರೂಪಣೆಯನ್ನೂ ನಿರ್ದೇಶಿಸುವುದರಿಂದ, ಇತ್ತೀಚಿನ ʼ ಹೆಚ್ಚು ಮಕ್ಕಳನ್ನು ಹೊಂದುವ ʼ ರಾಜಕೀಯ ಕೂಗು ಸಹ ಇದೇ ಧಾಟಿಯಲ್ಲೇ ಕಾಣುತ್ತಿದೆ. ಸ್ತ್ರೀವಾದಿ ನೆಲೆಯಲ್ಲಿ ಅಥವಾ ಸಾಮಾನ್ಯ ಮಹಿಳೆಯ ದೈಹಿಕ, ಮಾನಸಿಕ ಹಾಗೂ ಕೌಟುಂಬಿಕ ಸಮಸ್ಯೆಗಳನ್ನು ಪರಿಗಣಿಸದೆಯೇ, ರಾಜಕೀಯ ಅಥವಾ ಧಾರ್ಮಿಕ ಕಾರಣಗಳಿಗಾಗಿ ಹೆಚ್ಚು ಮಕ್ಕಳನ್ನು ಹೆರುವಂತೆ ಆದೇಶಿಸಲಾಗುತ್ತಿದೆ. ಆರ್ಥಿಕ ದೃಷ್ಟಿಕೋನದಿಂದ ನೋಡಿದಾಗ 2022-23ರಲ್ಲಿ ಭಾರತದಲ್ಲಿ ಮಹಿಳೆಯರ ʼ ಕಾರ್ಮಿಕ ಶಕ್ತಿಯ ಭಾಗವಹಿಸುವಿಕೆಯ ದರ ʼ (LFPR) , ಶೇಕಡಾ 37ರಷ್ಟಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದ್ದರೂ, ಶೇಕಡಾ 49 ಇರುವ ಜಾಗತಿಕ ಸರಾಸರಿಗೆ ಹೋಲಿಸಿದರೆ ಕಡಿಮೆ ಎನ್ನಬಹುದು. ಹೆಚ್ಚಳ

ಮಕ್ಕಳ ಜನನ ಸಂಖ್ಯೆ ಹೆಚ್ಚಾಗುವುದರಿಂದ ಮುಂದಿನ ದಿನಗಳಲ್ಲಿ ಈ ದರದಲ್ಲಿ ಕುಸಿತ ಹೆಚ್ಚಾಗುತ್ತಲೇ ಹೋಗುತ್ತದೆ. ಭಾರತೀಯ ಸಮಾಜದಲ್ಲಿ ಈಗಾಗಲೇ ಅವಿಭಕ್ತ ಕುಟುಂಬ ವ್ಯವಸ್ಥೆ ಕ್ಷೀಣಿಸುತ್ತಿರುವುದರಿಂದ, ಸಣ್ಣ ಕುಟುಂಬಗಳಲ್ಲಿ ಮಗುವನ್ನು ಮೊದಲ ಹತ್ತು ವರ್ಷ ಲಾಲನೆ ಪಾಲನೆ ಮಾಡುವ ಹೊರೆ ಮಹಿಳೆಯ ಮೇಲೆ ಬೀಳುತ್ತದೆ. ಮಧ್ಯ ವಯಸ್ಸು ತಲುಪುವುದರಲ್ಲಿ ವಯಸ್ಕ ಪೋಷಕರನ್ನು ಆರೈಕೆ ಮಾಡುವ ಜವಾಬ್ದಾರಿ ಸಹಜವಾಗಿ ಹೆಚ್ಚಾಗುತ್ತದೆ. ಭಾರತದ ಸಾಮಾಜಿಕ-ಸಾಂಸ್ಕೃತಿಕ ವಾತಾವರಣದಲ್ಲಿ, ಸಂಪಾದನೆ ಮಾಡುವ ಯುವ ವಯಸ್ಕರು ಹಿರಿಯರನ್ನು ನೋಡಿಕೊಳ್ಳುವುದು ಸಾಮಾನ್ಯವಾಗಿ ಅನುಸರಿಸಲಾಗುವ ಪದ್ಧತಿ. ಆದರೆ ಬೆಳೆಯುತ್ತಿರುವ ಮಕ್ಕಳು, ತಮ್ಮ ಸ್ವಂತ ದುಡಿಮೆ-ಸಂಪಾದನೆಯ ಬಾಧ್ಯತೆಗಳ ನಡುವೆ ಹಿರಿಯರ ಆರೈಕೆ ಪುನಃ ಕುಟುಂಬದ ಮಹಿಳೆಯ ಜವಾಬ್ದಾರಿಯೇ ಆಗುತ್ತದೆ.

ಮಹಿಳಾ ಸಮೂಹದ ಜಟಿಲ ಸಮಸ್ಯೆಗಳು

ಇಲ್ಲಿ ಪುನಃ ಸ್ತ್ರೀವಾದಿ ನೆಲೆಯಲ್ಲಿ ನಿಂತು ನೋಡಿದಾಗ ಭಾರತದ ಮಹಿಳೆಯರು, ವಿಶೇಷವಾಗಿ ತಳಸಮಾಜದಲ್ಲಿ ದುಡಿಯುವ ಮಹಿಳೆಯರು ಎದುರಿಸುತ್ತಿರುವ ಸವಾಲುಗಳನ್ನು ಗಂಭೀರವಾಗಿ ಪರಾಮರ್ಶಿಸಬೇಕಾಗುತ್ತದೆ. ವೃದ್ಧಾಪ್ಯದಲ್ಲಿರುವವರ ಆರೋಗ್ಯ ರಕ್ಷಣೆ, ದೀರ್ಘಕಾಲದ ಕಾಯಿಲೆಗಳನ್ನು ನಿರ್ವಹಿಸುವುದು, ಮಾನಸಿಕ ಸಮಸ್ಯೆಗಳನ್ನು  ನಿಭಾಯಿಸುವುದು ಅನೌಪಚಾರಿಕ ವಲಯದ ಕುಟುಂಬಗಳು ಎದುರಿಸುವ ಬಹುಮುಖ್ಯ ಸವಾಲುಗಳು. ಆದರೆ ಹೊರಗೆ ದುಡಿಯುವ ಮಹಿಳೆಯೇ ಕುಟುಂಬದ ಒಳಗೂ ಈ ಜವಾಬ್ದಾರಿಯನ್ನು ಹೊರುವ ಪರಿಸ್ಥಿತಿಯೇ ಸಾಮಾನ್ಯವಾಗಿರುವುದರಿಂದ, ಮತ್ತೊಮ್ಮೆ ಮಹಿಳೆ ಗಾಣದೆತ್ತಿನಂತೆ ಹಗಲಿರುಳು ದುಡಿಯುವಂತಾಗುತ್ತದೆ. ಕುಟುಂಬದ ಪುರುಷ ಸದಸ್ಯರೂ ಈ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಮಾಡುವ ಯಾವುದೇ ಪ್ರಯತ್ನಗಳನ್ನು ಸರ್ಕಾರಗಳಿಂದ ನಿರೀಕ್ಷಿಸಲಾಗುವುದಿಲ್ಲ.

ಭಾರತದ ಮಹಿಳಾ ಸಮೂಹ ಎದುರಿಸುತ್ತಿರುವ ಮತ್ತೊಂದು ಪ್ರಮುಖ ಸಮಸ್ಯೆ ಎಂದರೆ ತಾಯಂದಿರ ಮರಣ. ಇತ್ತೀಚಿನ ದಿನಗಳಲ್ಲಿ ಸರ್ಕಾರಗಳ ಸಕಾರಾತ್ಮಕ ಸಬಲೀಕರಣ ನೀತಿಗಳ ಪರಿಣಾಮವಾಗಿ, ಭಾರತದಲ್ಲಿ ತಾಯಂದಿರ ಮರಣ ಪ್ರಮಾಣ (MMR) ಕಡಿಮೆಯಾಗಿರುವುದು ಸ್ವಾಗತಾರ್ಹ ಬೆಳವಣಿಗೆ ಎನ್ನಬಹುದು. ಆದರೂ 2020ರ ಅಂಕಿಅಂಶಗಳ ಅನುಸಾರ ಭಾರತದಲ್ಲಿ ಪ್ರತಿದಿನ 800 ಮಹಿಳೆಯರು ಗರ್ಭಾವಸ್ಥೆಯಲ್ಲಿ ಅಥವಾ ಶಿಶು ಜನನದ ಕೂಡಲೇ ಸಾವನ್ನಪ್ಪುತ್ತಿದ್ದಾರೆ. 2000 ದಿಂದ 2020ರವರೆಗಿನ ಅವಧಿಯಲ್ಲಿ ತಾಯಂದಿರ ಮರಣ ಪ್ರಮಾಣ ವಿಶ್ವದಾದ್ಯಂತ ಶೇಕಡಾ 34ರಷ್ಟು ಕಡಿಮೆಯಾಗಿದ್ದು, ಭಾರತದಲ್ಲಿ ಇನ್ನೂ ಹೆಚ್ಚಿನ ದರದಲ್ಲಿ ಕಡಿಮೆಯಾಗಿದೆ. ಜಾಗತಿಕ ಮಟ್ಟದಲ್ಲಿ ಇದು 339 ರಿಂದ 223ಕ್ಕೆ ಇಳಿದಿದ್ದರೆ, ಭಾರತದಲ್ಲಿ  384 ರಿಂದ 103ಕ್ಕೆ ಇಳಿದಿದೆ. ಇದು ಸಕಾರಾತ್ಮಕ ಬೆಳವಣಿಗೆಯಾದರೂ, ತಾಯಂದಿರ ಮರಣದ ಅಂಕಿಅಂಶಗಳನ್ನು ಗಮನಿಸಿದಾಗ ಕಡಿಮೆ ಮತ್ತು ಮಧ್ಯಮ ಆದಾಯದ ಮಹಿಳೆಯರೇ ಹೆಚ್ಚು ಸಾವಿಗೀಡಾಗುತ್ತಿರುವುದನ್ನೂ ಗುರುತಿಸಬಹುದು. ಶೇಕಡಾ 95ರಷ್ಟು ತಾಯಂದಿರ ಮರಣ ಈ ಸಮಾಜದಲ್ಲೇ ಸಂಭವಿಸುತ್ತದೆ.

ರಾಜಕೀಯ ಕಾರಣಗಳ ನೆಲೆಯಲ್ಲಿ

ಸ್ಥಾನ ಮರುವಿಂಗಡನೆಯಿಂದ (Delimitation) ದಕ್ಷಿಣ ರಾಜ್ಯಗಳು ಈಗಿರುವ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನೂ ಕಳೆದುಕೊಳ್ಳುತ್ತವೆ ಎನ್ನುವುದು ರಾಜಕೀಯ ದೃಷ್ಟಿಯಿಂದ ಒಪ್ಪುವಂತಹ ವಿಚಾರವೇ ಆಗಿದೆ. ಇದು ಉತ್ತರ ಭಾರತದ ಪ್ರಾಬಲ್ಯವನ್ನು ಹೆಚ್ಚಿಸುವುದೇ ಅಲ್ಲದೆ, ಈಗಾಗಲೇ ಶಿಥಿಲವಾಗುತ್ತಿರುವ ಒಕ್ಕೂಟ ವ್ಯವಸ್ಥೆಯನ್ನು ಮತ್ತಷ್ಟು ಬಲಹೀನಗೊಳಿಸುತ್ತದೆ. ಪ್ರಾದೇಶಿಕ ಸಮತೋಲನದ ದೃಷ್ಟಿಯಿಂದ ಇದು ಆತಂಕಕಾರಿ ಬೆಳವಣಿಗೆಯಾಗುತ್ತದೆ. ಅಷ್ಟೇ ಅಲ್ಲದೆ ಬಹುಸಂಖ್ಯಾವಾದಿ ಆಳ್ವಿಕೆಯ ನೆಲೆಯಲ್ಲಿ ಒಂದು ದೇಶ-ಒಂದು ಭಾಷೆ-ಒಂದು ಸಂಸ್ಕೃತಿ ಎಂಬ ಏಕಾಧಿಪತ್ಯ ನೀತಿಯನ್ನು ಬಲವಾಗಿ ಪ್ರತಿಪಾದಿಸುತ್ತಿರುವ ಬಿಜೆಪಿಯ ಬಲಪಂಥೀಯ ರಾಜಕಾರಣಕ್ಕೆ ಇದು ಮತ್ತಷ್ಟು ಪುಷ್ಠಿ ನೀಡುತ್ತದೆ. ಇದರ ವಿರುದ್ಧ ದನಿ ಎತ್ತುವುದು ದಕ್ಷಿಣ‌ ರಾಜ್ಯಗಳಿಗೆ ಅನಿವಾರ್ಯವೂ ಆಗಿದೆ.

ಆದರೆ ಈ ರಾಜಕೀಯ ಕಾರಣಗಳಿಗಾಗಿ ಅಥವಾ ಆರೆಸ್ಸೆಸ್‌ನ ಸಾಂಸ್ಕೃತಿಕ ಕಾರಣಗಳಿಗಾಗಿ ಹೆಚ್ಚು ಮಕ್ಕಳನ್ನು ಹುಟ್ಟಿಸುವಂತೆ ನೀಡುತ್ತಿರುವ ಕರೆಯ ಹಿಂದೆ, ಮಹಿಳಾ ಸಂವೇದನೆ ಮತ್ತು ಲಿಂಗ ಸೂಕ್ಷ್ಮತೆ ಇಲ್ಲದಿರುವುದನ್ನೂ ಗಂಭೀರವಾಗಿ ಪರಿಗಣಿಸಬೇಕಿದೆ. ಸ್ತ್ರೀವಾದಿ ನೆಲೆಯಲ್ಲಿ ನಿಂತು, ಜನಸಂಖ್ಯೆಯ ಹೆಚ್ಚಳ ಅಥವಾ ಹೆಚ್ಚಿನ ಮಕ್ಕಳನ್ನು ಹೆರುವುದರಿಂದ ಮಹಿಳಾ ಸಂಕುಲದ ಮೇಲೆ ಉಂಟಾಗುವ ಆರೋಗ್ಯ ಸಮಸ್ಯೆಗಳಾಗಲೀ, ಮಾನಸಿಕ ತುಮುಲಗಳಾಗಲೀ, ಈಗ ನಡೆಯುತ್ತಿರುವ ರಾಜಕೀಯ ಸಂಕಥನದಲ್ಲಿ ಎಳ್ಳಷ್ಟೂ ಕಾಣುತ್ತಿಲ್ಲ. ಇದು ಭಾರತದ ಪಿತೃಪ್ರಧಾನ ರಾಜಕೀಯ ವ್ಯವಸ್ಥೆಯ ಬೌದ್ಧಿಕ-ನೈತಿಕತೆಯ ಕೊರತೆಯನ್ನು ಸೂಚಿಸುತ್ತದೆ. 1970ರ ದಶಕದಲ್ಲಿ ಜನಸಂಖ್ಯೆ ನಿಯಂತ್ರಣಕ್ಕಾಗಿ ಕಡ್ಡಾಯ ಸಂತಾನಹರಣ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ ಸಂದರ್ಭದಲ್ಲೂ ಹೆಣ್ಣಿನ ಧ್ವನಿಗೆ ಯಾವುದೇ ಅವಕಾಶ ಇರಲಿಲ್ಲ.

1970ರ ಮತ್ತು 2025ರ ಈ ಎಲ್ಲ ಧ್ವನಿಗಳನ್ನೂ ಒಂದೇ ಬುಟ್ಟಿಯಲ್ಲಿ ಹಾಕಿ ತೂಗಿದಾಗ ಕಾಣುವುದು ಒಂದೇ ಅಂಶ. ಅದು ಮಕ್ಕಳನ್ನು ಹುಟ್ಟಿಸುವುದು ಅಥವಾ ನಿಯಂತ್ರಿಸುವುದು ಪುರುಷ ಸಮಾಜದ ಪರಮಾಧಿಕಾರ ಎಂಬ ಪಿತೃಪ್ರಧಾನತೆಯ ಯಜಮಾನಿಕೆಯ ಧೋರಣೆ ಮತ್ತು ದಾರ್ಷ್ಟ್ಯ. ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ ಕುಟುಂಬ, ಸಾಂಸಾರಿಕ ನಿರ್ವಹಣೆ ಮತ್ತು ಜೀವೋತ್ಪಾದನೆಯ ಪ್ರಕ್ರಿಯೆಯಲ್ಲಿ ಸದಾ ತನ್ನ ಅಣತಿಯೇ ಅಂತಿಮ ಎಂಬ ಪಿತೃಪ್ರಧಾನ ವ್ಯವಸ್ಥೆಯ ಒಂದು ಭಾಗವಾಗಿ ಈ ಬೆಳವಣಿಗೆಗಳನ್ನು ನೋಡಬೇಕಿದೆ. ಇತ್ತೀಚಿನ ʼಮಕ್ಕಳನ್ನು ಹೆಚ್ಚಿಸುವʼ ಕರೆಗಳೆಲ್ಲವೂ ಪುರುಷರಿಂದಲೇ ಬಂದಿರುವುದು ಕಾಕತಾಳೀಯವಾದರೂ, ತುರ್ತುಪರಿಸ್ಥಿತಿಯ ಅತಿರೇಕಗಳ ಸಂದರ್ಭದಲ್ಲಾಗಲೀ, ವಿಕಸಿತ ಭಾರತದ ಅವಾಂತರಗಳಲ್ಲಾಗಲೀ, ಹೆಣ್ಣು ಮತ್ತು ಹೆಣ್ಣಿನ ಧ್ವನಿಗೆ ಅವಕಾಶವೇ ದೊರೆತಿಲ್ಲ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ.

ಇಷ್ಟಕ್ಕೂ ಹೆಚ್ಚು ಮಕ್ಕಳನ್ನು ಬಯಸುವ ಕಾರಣಗಳೇನೇ ಇರಲಿ, ಹೆರುವುದು ಹೆಣ್ಣಲ್ಲವೇ ? ಭಾರತದ ಮಹಿಳೆಯರಲ್ಲಿ ಪೌಷ್ಟಿಕಾಂಶದ ಕೊರತೆ ಹೆಚ್ಚಾಗುತ್ತಲೇ ಇರುವುದನ್ನು ನಮ್ಮ ಸಮಾಜ ಗಮನಿಸುತ್ತಿಲ್ಲವೇ ? ಗಂಡು ಸಮಾಜಕ್ಕೆ ಅಗತ್ಯ ಎನಿಸಿದ ಮಾತ್ರಕ್ಕೆ ಹೆತ್ತು ಗುಡ್ಡೆ ಹಾಕಲು ಹೆಣ್ಣು ಚಲಿಸುವ ಕಾರ್ಖಾನೆಯೇ ? ಆಕೆಗೆ ತನ್ನದೇ ಆದ ಭೌತಿಕ, ಮಾನಸಿಕ ಮತ್ತು ಬೌದ್ಧಿಕ ಸ್ವಾತಂತ್ರ್ಯ-ಸ್ವಂತಿಕೆ ಇಲ್ಲವೇ ? ಗಂಡು ಬೇಕೆಂದಾಗ ಮಕ್ಕಳನ್ನು ಹೆರುವ ಪ್ರಾಚೀನ ಸಂಪ್ರದಾಯವನ್ನು 21ನೇ ಶತಮಾನದಲ್ಲಿ ಪುನರ್‌ ಸ್ಥಾಪಿಸುವ ಪುರುಷ ಸಮಾಜದ ಈ ಧೋರಣೆ, ಭಾರತೀಯ ಸಮಾಜದಲ್ಲಿ ಲಿಂಗ ಸೂಕ್ಷ್ಮತೆ ಮತ್ತು ಸಂವೇದನೆ ನಿಶ್ಶೇಷವಾಗಿರುವುದರ ಸೂಚನೆಯಾಗಿದೆ. ಹೆಣ್ಣೆಂದರೆ ಗಂಡು ಸಂಗಾತಿಗೆ ಬೇಕೆಂದಾಗ ಮಕ್ಕಳನ್ನು ಹೆರುವ ಚಲಿಸುವ ಕಾರ್ಖಾನೆ ಅಲ್ಲ. ಆಕೆಗೂ ಒಂದು ಜೀವ ಇದೆ, ಜೀವ ಸಂವೇದನೆ ಇದೆ, ಬೇಕು ಬೇಡಗಳಿವೆ. ಇದನ್ನು ಸಮ್ಮಾನಿಸಬೇಕಾದ್ದು ನಾಗರಿಕತೆಯ ಲಕ್ಷಣ.

ಬಹುಶಃ ಭಾರತೀಯ ಸಮಾಜ, ರಾಜಕೀಯವಾಗಿ ಧಾರ್ಮಿಕವಾಗಿ ಇದನ್ನು ಕಳೆದುಕೊಳ್ಳುತ್ತಿದೆಯೇ  ಎಂದು  ಯೋಚಿಸಬೇಕಿದೆ. ಹೆಣ್ಣನ್ನು ಗೌರವಿಸುವುದೆಂದರೆ ಆಕೆಗೆ ಸ್ವಾಯತ್ತತೆ ನೀಡುವುದೇ ಎನ್ನುವ ಸರಳ ಸತ್ಯವನ್ನು ಇನ್ನಾದರೂ ನಮ್ಮ ಗಂಡು ಸಮಾಜ ಅರ್ಥಮಾಡಿಕೊಳ್ಳಬೇಕಿದೆ.

ಇದನ್ನೂ ನೋಡಿ: Karnataka Legislative Assembly Live Day 08 | ವಿಧಾನಸಭೆ ಬಜೆಟ್ ಅಧಿವೇಶನದ ನೇರ ಪ್ರಸಾರ

Donate Janashakthi Media

Leave a Reply

Your email address will not be published. Required fields are marked *