ಪೂರ್ಣಗೊಳ್ಳದ ಅಂಗವಿಕಲರ ಪುನರ್ವಸತಿ ಕೇಂದ್ರ: ಸಂಘಟಕರು ಆಕ್ರೋಶ

ಕುಂದಾಪುರ: ಸೇನಾಪುರದಲ್ಲಿ ಕಾದಿರಿಸಿದ ಐದು ಎಕರೆ  ಸರಕಾರಿ ಜಾಗದಲ್ಲಿ ಎಂಡೋಸಲ್ಫಾನ್ ಪೀಡಿತ ಅಂಗವಿಕಲರಿಗಾಗಿ ಪುನರ್ವಸತಿ ಕೇಂದ್ರ ಸ್ಥಾಪಿಸಲು ಒತ್ತಾಯಿಸಿ ತಹಶೀಲ್ದಾರ್ ಕಚೇರಿಗೆ ಅಂಗವಿಕಲರ ಮುತ್ತಿಗೆ ಹೋರಾಟ ಹಮ್ಮಿಕೊಂಡಿದ್ದರು.

ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ, ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಮಂಜುನಾಥ ಹೆಬ್ಬಾರ್ ಕಾಲ್ತೋಡು ಮಾತನಾಡಿ, ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ(ಎನ್‌ಪಿಆರ್‌ಡಿ)ಗೆ ಸಂಯೋಜಿಸಲ್ಪಟ್ಟ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ(ಕೆಎಸ್‌ಡಿಸಿಎಫ್‌) ಉಡುಪಿ ಜಿಲ್ಲಾ ಸಮಿತಿಯ ಸತತ ಪ್ರಯತ್ನದಿಂದಾಗಿ ಗತ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೇನಾಪುರ ಗ್ರಾಮದಲ್ಲಿ ಸರಕಾರಿ ಜಾಗ ಐದು ಎಕರೆಯನ್ನು ಜಿಲ್ಲೆಯ ಎಂಡೋಸಲ್ಫಾನ್ ಪೀಡಿತ ಅಂಗವಿಕಲರಿಗೆ ಪನರ್ವಸತಿ ಕೇಂದ್ರ ಹಾಗೂ ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಿಸಲು ಸ್ಥಳ ಮಂಜೂರಾಗಿದೆ ಎಂದು ತಿಳಿಸಿದರು.

ಈ ಬಗ್ಗೆ ಇಲಾಖಾವತಿಯಿಂದ ಅಂದಾಜು ಕ್ರೀಯಾ ಯೋಜನೆ ರೂಪಾಯಿ ಹತ್ತು ಕೋಟಿ ಮಂಜೂರಾತಿಗಾಗಿ ನಿವೇದನೆ ಮಂಡಿಸಲಾಗಿ, ಅನೇಕ ವರ್ಷ ಕಳೆದರೂ ಪುನರ್ವಸತಿ ಕೇಂದ್ರದ ಕಟ್ಟಡ ನಿರ್ಮಾಣ ಆಗಲೇ ಇಲ್ಲ. ನಮ್ಮ ಅಂಗವಿಕಲರ ಸಂಘಟನೆ ವತಿಯಿಂದ ಈ ಹಿಂದಿನ ಸರಕಾರದಲ್ಲಿ ಸಚಿವರಾಗಿದ್ದ ಜಯಮಾಲ, ಪ್ರಮೋದ್ ಮಧ್ವರಾಜ್ ಹಾಗೂ  ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ  ಬಸವರಾಜ್ ಬೊಮ್ಮಾಯಿ ರವರಿಗೆ ಮನವಿ ಅರ್ಪಿಸಿ ಒತ್ತಾಯಿಸಲಾಗಿದ್ದರೂ ಅನುದಾನ ಬಿಡುಗಡೆಯಾಗಿಲ್ಲ.

ಇದೀಗ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬೆಂಗಳೂರಿನ ಗೃಹ ಕಚೇರಿಯಲ್ಲಿ ಎಂಡೋ ಪೀಡಿತ ಅಂಗವಿಕಲರ ನಿಯೋಗ ಭೇಟಿಮಾಡಿ ಅನುದಾನಕ್ಕಾಗಿ ಅಂಗಲಾಚಿದರೂ ಬಜೆಟ್ ನಲ್ಲಿ ಎಂಡೋ ಪೀಡಿತರನ್ನು ಕಡೆಗಣಿಸಿದ್ದಾರೆ. ಈಗಾಗಲೇ ನೆರೆಯ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡದಲ್ಲಿ ಎಂಡೋ ಪೀಡಿತ ಅಂಗವಿಕಲರ ಪುನರ್ವಸತಿ ಕೇಂದ್ರ ಸ್ಥಾಪನೆಯಾಗಿ, ಸಕಲ ಆರೊಗ್ಯ, ಚಿಕಿತ್ಸಾ ಸೌಲಭ್ಯ ದೊರಕುತ್ತಿದ್ದರೂ, ಉಡುಪಿ ಜಿಲ್ಲೆಯವರು  ವಂಚಿತರಾಗಿದ್ದಾರೆ.

ಆದ್ದರಿಂದ ಈ ಕೂಡಲೆ ಸರಕಾರ ಅಂಗವಿಕಲರ ಪುನರ್ವಸತಿ ಕೇಂದ್ರ, ಆಸ್ಪತ್ರೆ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಎಂಡೋಸಲ್ಫಾನ್ ಪೀಡಿತ ಅಂಗವಿಕಲರು 2022ರ ಏಪ್ರಿಲ್‌ 04ರಂದು, ಸೋಮವಾರ, ಮಧ್ಯಾಹ್ನ 3.00 ಗಂಟೆಗೆ ಕುಂದಾಪುರ ಶಾಸ್ತ್ರೀ ಸರ್ಕಲ್ ನಿಂದ ಮೆರವಣಿಗೆ ಹೊರಟು ತಹಶೀಲ್ದಾರ್ ಕಚೇರಿ ಮುತ್ತಿಗೆ ಹೋರಾಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಸಂಘದ ಗೌರವಾಧ್ಯಕ್ಷ ಕೋಣಿ, ಪ್ರಧಾನ ಕಾರ್ಯದರ್ಶಿ ಕೆ. ಕೃಷ್ಣ ಪೂಜಾರಿ ಕೊಟೇಶ್ವರ ಕರೆ ನೀಡಿದರು.

Donate Janashakthi Media

Leave a Reply

Your email address will not be published. Required fields are marked *