ಪ್ರೊ. ರಾಜೇಂದ್ರ ಚೆನ್ನಿ
ಕೊಡಗಿನ ಪೊನ್ನಂಪೇಟೆಯ ಶಾಲೆಯೊಂದರ ಆವರಣದಲ್ಲಿ ಶಿಬಿರವೊಂದರಲ್ಲಿ ಯುವಕರಿಗೆ ಶಸ್ತ್ರಾಸ್ತ್ರಗಳ ಅಭ್ಯಾಸದ ತರಬೇತಿ ಕೊಡಲಾಯಿತು. ಬಿಡಿಯಾಗಿ ನೋಡಬಹುದಾದ ವಿದ್ಯಮಾನವಿದಾಗಿಲ್ಲ. ಕರ್ನಾಟಕದ ರಾಜಕೀಯವು ಇಂಥ ಅಧೋಗತಿಗೆ ಎಂದೂ ತಲುಪಿರಲಿಲ್ಲ. ‘ಕ್ರಿಯೆಗೆ ಪ್ರತಿಕ್ರಿಯೆ’ ಎನ್ನುವ ತಮ್ಮ ಧ್ಯೇಯವಾಕ್ಯದಿಂದ ರಾಜ್ಯದ ಅಸಂವಿಧಾನಾತ್ಮಕ ಬಲಪಂಥೀಯ ಸಂಸ್ಥೆಗಳಿಗೆ ರಾಜ್ಯದ ಮುಖ್ಯಮಂತ್ರಿಗಳು ಪ್ರಬಲವಾದ ಸೂಚನೆಯನ್ನು ನೀಡಿದರು. ಅಂದಿನಿಂದ ಪ್ರತಿದಿನವೂ ರಾಜ್ಯದಲ್ಲಿ ವಿವಾದಗಳು, ಹಿಂಸೆಗಳು, ಬೆದರಿಕೆಗಳು ಆಗುತ್ತಲೇ ಇವೆ. ಇವುಗಳನ್ನು ತಡೆಯುವ ಇರಾದೆ ತನಗಿಲ್ಲವೆಂದು ಸರಕಾರವು ಬಹಳ ಸ್ಪಷ್ಟವಾದ ಸೂಚನೆ ನೀಡಿದೆ. ಕರ್ನಾಟಕವೆಂದರೆ ಕೋಮುವಾದಿ ರಾಜ್ಯವೆಂದು ದೇಶ ಮಾತ್ರವಲ್ಲ ಅಂತರ್ರಾಷ್ಟ್ರೀಯ ಮಟ್ಟದಲ್ಲಿಯೂ ಹೇಳಲಾಗುತ್ತಿದೆ. ಒಂದು ಕಾಲದಲ್ಲಿ ಪ್ರಗತಿಪರ, ಲಿಬರಲ್ ರಾಜ್ಯವೆಂದು ಹೆಸರು ಮಾಡಿದ ಕರ್ನಾಟಕವು ಇಂದು ದಕ್ಷಿಣ ಭಾರತದ ಉತ್ತರ ಪ್ರದೇಶವೆಂದು ಖ್ಯಾತಿ ಪಡೆಯುತ್ತಿದೆ. ದಕ್ಷಿಣ ಭಾರತದ ಯಾವ ರಾಜ್ಯವೂ ಇಂಥ ಅರಾಜಕತೆ ಹಾಗೂ ದುಷ್ಟ ರಾಜಕೀಯಕ್ಕೆ ವೇದಿಕೆಯಾಗಿಲ್ಲ.
ಒಂದೆರಡು ದಿನಗಳಿಂದ ಆತಂಕ ಹುಟ್ಟಿಸುವ ಕೆಲವು ವಿಡಿಯೋಗಳು, ಚಿತ್ರಗಳು ಅನೇಕ ತಾಣಗಳಲ್ಲಿ ಹರಿದಾಡುತ್ತಿವೆ. ಕೊಡಗಿನ ಪೊನ್ನಂಪೇಟೆಯ ಶಾಲೆಯೊಂದರ ಆವರಣದಲ್ಲಿ ಶಿಬಿರವೊಂದರಲ್ಲಿ ಯುವಕರಿಗೆ ಶಸ್ತ್ರಾಸ್ತ್ರಗಳ ಅಭ್ಯಾಸದ ತರಬೇತಿ ಕೊಡಲಾಯಿತು. ಅವರ ಕೈಗೆ ಕೊಟ್ಟಿದ್ದು ಕೇವಲ ಏರ್ಗನ್ಗಳು, ಶಸ್ತ್ರಗಳಲ್ಲ. ಇನ್ನೊಂದು ಚಿತ್ರದಲ್ಲಿ ದೀಕ್ಷೆ ಕೊಡಲು ಬಳಸಲಾದ ತ್ರಿಶೂಲಗಳು ಶಸ್ತ್ರಗಳಲ್ಲ ಎಂದು ಶಿಬಿರದ ಆಯೋಜಕರು ಹೇಳುತ್ತಿದ್ದಾರೆ. ಆ ಶಿಬಿರಕ್ಕೆ ಭೇಟಿಯಿತ್ತಿದ್ದ ರಾಜಕಾರಣಿಗಳು ಈ ಲೇಖನ ಬರೆಯುವ ಹೊತ್ತಿಗೆ ಹೇಳಿಕೆ ಕೊಟ್ಟಿಲ್ಲ. ತೀವ್ರ ಧ್ರುವೀಕರಣ, ಸಾಮೂಹಿಕ ದ್ವೇಷ ಹಾಗೂ ಸಾರ್ವಜನಿಕ ಹಿಂಸೆಗಳ ನಿರಂತರವಾದ ಕ್ರಿಯೆಗಳನ್ನು ನೋಡುತ್ತ ಬಂದ ನಮಗೆ ಇವರುಗಳು ಕೊಡಬಹುದಾದ ವಿವರಣೆಗಳು ಹೊಸದಾಗಿರುವುದಿಲ್ಲ. ಇಂಗ್ಲಿಷ್ ಭಾಷೆಯಲ್ಲಿ ಹೇಳುವಂತೆ ‘ಅವು predictable and therefore false’ ಆಗಿರುತ್ತವೆ.
ಮೂರು ಬಗೆಯ ಪ್ರತಿಕ್ರಿಯೆಗಳನ್ನು ನಮ್ಮ ನಾಗರಿಕ ಸಮಾಜದಿಂದ ನಿರೀಕ್ಷಿಸಬಹುದು. ಒಂದು, ಅದರಲ್ಲಿ ತಪ್ಪೇನು? ಪುರುಷತ್ವ, ಗಂಡಸುತನ ಇವು ಧರ್ಮಕ್ಕೆ ಅವಶ್ಯವಾಗಿರುವುದರಿಂದ ಮತ್ತು ಇವುಗಳ ಸಂಕೇತಗಳು ಆಯುಧಗಳೇ ಆಗಿರುವುದರಿಂದ ಈ ತರಬೇತಿಯಲ್ಲಿ ತಪ್ಪೇನಿದೆ? ಎರಡು, ಈ ತರಬೇತಿ ಯಾರ ವಿರುದ್ಧವೂ ಅಲ್ಲ, ಸ್ವರಕ್ಷಣೆಗೆ. ಮೂರು, ಇದನ್ನು ನೇರವಾಗಿ ಹೇಳಲಾಗುವುದಿಲ್ಲ. ಆದರೆ ಅದು ಹೆಮ್ಮೆಯದಾಗಿರುತ್ತದೆ. “ಆ ಇತರರು ಹೇಳಿದಂತೆ ಬಿದ್ಕೊಂಡಿರದಿದ್ದರೆ ಬಳಸಲು ಬೇಕಾಗುತ್ತದೆ” ಇತ್ಯಾದಿ.
ಒಂದು ಶಾಲೆಯ ಆವರಣದಲ್ಲಿ ಯುವಕರಿಗೆ ಇಂಥ ತರಬೇತಿ? ಬಿಡಿಯಾಗಿ ನೋಡಬಹುದಾದ ವಿದ್ಯಮಾನವಿದಾಗಿಲ್ಲ. ಇತ್ತೀಚೆಗೆ ರಮಜಾನ್ ಹಬ್ಬದ ಸಮಯದಲ್ಲಿ ಹಿಂದೂ ದೇವರುಗಳ ಹುಟ್ಟು ಹಬ್ಬ ಇತ್ಯಾದಿ ಆಚರಣೆಗಾಗಿ ಮೆರವಣಿಗೆ ಮಾಡಿದಾಗ ಇಂಥದೇ ಯುವಜನರು ಇನ್ನೊಂದು ಸಮುದಾಯವನ್ನು ಅವಮಾನಿಸುವ ಹಾಡುಗಳನ್ನು ಹೇಳಿದರು. ಘೋಷಣೆಗಳನ್ನು ಕೂಗಿದರು. ಕೆಲವು ಕಡೆ ಡಿಜೆ ಸಂಗೀತದ ಜೊತೆಗೆ ಇಂಥ ಹಾಡುಗಳನ್ನು ಹೇಳಿ ಕುಣಿಯಲಾಯಿತು. ಅನೇಕ ಕಡೆಗೆ ಯುವಕರ ಕೈಯಲ್ಲಿ ತಲವಾರುಗಳು ಇದ್ದವು (ಗಾಬರಿ ಬೇಡ, ಅವು ಶಸ್ತ್ರಗಳಲ್ಲ, ಕುತ್ತಿಗೆಗಳೇ ನಡೆದುಕೊಂಡು ಹೋಗಿ ಇರಿದುಕೊಂಡರೆ ಅವುಗಳ ತಪ್ಪಲ್ಲ!). ಇಂಥ ಮೆರವಣಿಗೆಗಳನ್ನು ಪೊಲೀಸರು ತಮ್ಮ ರಕ್ಷಣೆ ನೀಡಿ ಬೆಂಬಲಿಸಿದರು. ಒಂದು ನ್ಯಾಯಾಲಯವೇ ಹೇಳಿದ ಹಾಗೆ ಪೊಲೀಸರು ಈ ಕಾರ್ಯಕ್ರಮಗಳಿಗೆ ‘ಸಾಥ್’ ನೀಡಿದರು. ಈ ಮೆರವಣಿಗೆಗಳಲ್ಲಿ ಹಲವಾರು ಪರಸ್ಪರ ಹಿಂಸೆಯಲ್ಲಿ ಮುಗಿದವು. ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸರಕಾರಗಳು ಅತ್ಯಂತ ತ್ವರಿತವಾಗಿ ಯಾವ ವಿಚಾರಣೆಯೂ ಇಲ್ಲದ ಶಿಕ್ಷೆಯನ್ನು ಘೋಷಿಸಿ ಗಲಭೆಕೋರರ ಅಂಗಡಿಗಳನ್ನು, ಮನೆಗಳನ್ನು ಬುಲ್ಡೋಜರ್ ಮೂಲಕ ಕೆಡವಿದವು. ಪೊನ್ನಂಪೇಟೆಯ ಶಿಬಿರದಲ್ಲಿ ನೀಡಲಾದ ತರಬೇತಿ ಅಂತಿಮವಾಗಿ ಈ ಬಗೆಯ ವಿದ್ಯಮಾನಗಳಿಗೆ ಸಹಾಯವಾಗುತ್ತದೆ.
ಕರ್ನಾಟಕದ ರಾಜಕೀಯವು ಇಂಥ ಅಧೋಗತಿಗೆ ಎಂದೂ ತಲುಪಿರಲಿಲ್ಲ. ‘ಕ್ರಿಯೆಗೆ ಪ್ರತಿಕ್ರಿಯೆ’ ಎನ್ನುವ ತಮ್ಮ ಧ್ಯೇಯವಾಕ್ಯದಿಂದ ರಾಜ್ಯದ ಅಸಂವಿಧಾನಾತ್ಮಕ ಬಲಪಂಥೀಯ ಸಂಸ್ಥೆಗಳಿಗೆ ರಾಜ್ಯದ ಮುಖ್ಯಮಂತ್ರಿಗಳು ಪ್ರಬಲವಾದ ಸೂಚನೆಯನ್ನು ನೀಡಿದರು. ಏಕೆಂದರೆ ಸಮಾಜವನ್ನು ಧ್ರುವೀಕರಣ ಮಾಡಿ ಚುನಾವಣೆ ಗೆಲ್ಲಬೇಕೆಂದು ಅವರಿಗೆ ಸೂಚನೆ ನೀಡಲಾಗಿತ್ತು. ಅಂದಿನಿಂದ ಪ್ರತಿದಿನವೂ ರಾಜ್ಯದಲ್ಲಿ ವಿವಾದಗಳು, ಹಿಂಸೆಗಳು, ಬೆದರಿಕೆಗಳು ಆಗುತ್ತಲೇ ಇವೆ. ಇವುಗಳನ್ನು ತಡೆಯುವ ಇರಾದೆ ತನಗಿಲ್ಲವೆಂದು ಸರಕಾರವು ಬಹಳ ಸ್ಪಷ್ಟವಾದ ಸೂಚನೆ ನೀಡಿದೆ. ಅಷ್ಟು ಮಾತ್ರವಲ್ಲ ಆಳುವ ಪಕ್ಷದ ಅನೇಕರು ಸಾರ್ವಜನಿಕವಾಗಿಯೇ ಹಿಂಸಾಪರ ಸಂಘಟನೆಗಳಿಗೆ ಸಮರ್ಥನೆ ನೀಡಿದ್ದಾರೆ. ಕರ್ನಾಟಕವೆಂದರೆ ಕೋಮುವಾದಿ ರಾಜ್ಯವೆಂದು ದೇಶ ಮಾತ್ರವಲ್ಲ ಅಂತರ್ರಾಷ್ಟ್ರೀಯ ಮಟ್ಟದಲ್ಲಿಯೂ ಹೇಳಲಾಗುತ್ತಿದೆ. ಹುಂಬ ಸ್ವಸಮರ್ಥನೆ, ಅಸಹ್ಯ ಭಾಷೆಯ ಬಳಕೆಯಿಂದಾಗಿ ತಾನು ಮಾಡಿದ ತಪ್ಪುಗಳನ್ನು ಮುಚ್ಚಿಡಬಹುದೆನ್ನುವ ತಪ್ಪು ತಿಳುವಳಿಕೆ ಸರಕಾರಕ್ಕಿದೆ. ಆದರೆ ಮಾಹಿತಿ ಯುಗದ ಈ ಕಾಲದಲ್ಲಿ ಇದು ಅಸಾಧ್ಯ. ಈ ಕಾಲದಲ್ಲಿ ವಾಸ್ತವಗಳು ಎಷ್ಟು ಮುಖ್ಯವೋ ಪ್ರತಿನಿಧೀಕರಣವೂ ಅಷ್ಟೇ ಮುಖ್ಯ. ಒಂದು ಕಾಲದಲ್ಲಿ ಪ್ರಗತಿಪರ, ಲಿಬರಲ್ ರಾಜ್ಯವೆಂದು ಹೆಸರು ಮಾಡಿದ ಕರ್ನಾಟಕವು ಇಂದು ದಕ್ಷಿಣ ಭಾರತದ ಉತ್ತರ ಪ್ರದೇಶವೆಂದು ಖ್ಯಾತಿ ಪಡೆಯುತ್ತಿದೆ. ಒಬ್ಬ ವ್ಯಕ್ತಿಯ ರಾಜಕೀಯ ಅಧಿಕಾರದ ಲಾಲಸೆಯಿಂದ ಒಂದು ರಾಜ್ಯದ ಸಾರ್ವಜನಿಕ ಇಮೇಜ್ ನಾಶವಾಗಿ ಹೋಗಿದೆ. ದಕ್ಷಿಣ ಭಾರತದ ಯಾವ ರಾಜ್ಯವೂ ಇಂಥ ಅರಾಜಕತೆ ಹಾಗೂ ದುಷ್ಟ ರಾಜಕೀಯಕ್ಕೆ ವೇದಿಕೆಯಾಗಿಲ್ಲ.
ಅಲ್ಲದೆ ಭ್ರಷ್ಠಾಚಾರವು ಮನೆ ಮಾತಾಗಿದೆ. 40% ಎನ್ನುವುದು ಕರ್ನಾಟಕದ ಸಂಕೇತವಾಗಿದೆ. ನಾವು ಕಾಣುತ್ತಿರುವುದು ಕೇವಲ ಮೇಲ್ಸ್ತರದ ತುಣುಕುಗಳು ಮಾತ್ರ. ಪಿ.ಎಸ್.ಐ. ಪರೀಕ್ಷೆಯ ಹಗರಣಗಳ ಪ್ರಮಾಣ ಹಾಗೂ ದುಡ್ಡಿನ ಪ್ರಮಾಣ ನೋಡಿದರೆ ಈ ಹಗರಣಗಳಲ್ಲಿ ಸರಕಾರವು, ಮಂತ್ರಿಗಳು ಭಾಗಿಯಾಗಿರುವುದರ ಬಗ್ಗೆ ಯಾವುದೇ ಸಂಶಯವೂ ಇಲ್ಲ. ಆಧಾರ ಕೊಡಿ, ಸಾಕ್ಷಿಕೊಡಿ ಎಂದು ಸರಕಾರವು ಹೇಳುವುದರ ಅರ್ಥವೆಂದರೆ ಸಾಕ್ಷಿ ಉಳಿಯದಂತೆ ಮಾಡಬಾರದ್ದನ್ನು ಮಾಡಿದ್ದೇವೆ ಎಂದು. ಅಥವಾ ಎಲ್ಲಾ ಮಂತ್ರಿಗಳಿಗೆ ಅದೊಂದು ಹಿತೋಪದೇಶವೂ ಆಗಿರಬಹುದು. ಏನಾದರೂ ಮಾಡಿ, ಸಾಕ್ಷಿ ಇಲ್ಲದಂತೆ ಮಾಡಿ ಎನ್ನುವ ಹಿತವಚನ.
ಇದೆಲ್ಲಕ್ಕಿಂತ ಭೀಕರವಾದುದೆಂದರೆ ಯುವಜನರಿಗೆ ಆಯುಧ ಶಸ್ತ್ರಗಳ ತರಬೇತಿ ನೀಡುವುದು. ಆಶ್ಚರ್ಯವೆಂದರೆ ಇದನ್ನು ಆ ಯುವಕರ ತಂದೆತಾಯಿಗಳು ಒಪ್ಪಿಕೊಂಡಿರುವುದು. ನಾನೇ ಸ್ವತಃ ನೋಡಿದ ಹಾಗೆ ಅಪರಾಧಿಗಳ ತಂದೆ ತಾಯಿಗಳು ತಮ್ಮ ಮಕ್ಕಳ ಕೆಲಸಗಳನ್ನು ಸಮರ್ಥಿಸುವುದಿಲ್ಲ. ಮಧ್ಯಮ ವರ್ಗದ ಶಿಕ್ಷಿತ ಪೋಷಕರು ತಮ್ಮ ಮಕ್ಕಳನ್ನು ಹಿಂಸೆಯ ತರಬೇತಿಗೆ ಹೇಗೆ ಒಪ್ಪಿಸುತ್ತಾರೆ? ಅಥವಾ ಅವರು ರಾಷ್ಟ್ರಕ್ಕಾಗಿ ತಮ್ಮ ಮಕ್ಕಳನ್ನು ತ್ಯಾಗ ಮಾಡಿದ್ದಾರೆಯೆ? ಎಂಥ ಭವಿಷ್ಯವನ್ನು ತಮ್ಮ ಮುಂದಿನ ಪೀಳಿಗೆಗೆ ಅವರು ಕೊಡಬಯಸುತ್ತಾರೆ. ಹಿಂಸೆಗೆ ಒಲಿದವರು ಹಿಂಸೆಯಿಂದಲೇ ಸಾಯುತ್ತಾರೆ. ಇದನ್ನು ಈ ತಂದೆ ತಾಯಿಯರು ತಮ್ಮ ಮಕ್ಕಳಿಗೆ ಬಯಸುತ್ತಾರೆಯೆ? ಇದು ನಮಗೆ ಆತಂಕ ಹುಟ್ಟಿಸುವ ಸಂಗತಿಯಾಗಬೇಕು. ಅಂಥ ಭಕ್ತರಾಗಿರುವ ಈ ಪೋಷಕರಿಗೆ ಗೊತ್ತಿರಲಿ. ವಿಶ್ವವು ಭಾರತವನ್ನು ಗಮನಿಸುತ್ತಿದೆ. ವಿಶ್ವಗುರು ಎಂದಲ್ಲ, ಪ್ರಜಾಪ್ರಭುತ್ವ, ಸಮಾನತೆ, ಶಾಂತಿ ಇದಾವುದೂ ಇಲ್ಲದ ದೇಶವಾಗುತ್ತಿದೆಯೆಂದು. ಇದು ಹೀಗೇ ಮುಂದುವರೆದರೆ ಜಾಗತೀಕರಣದಿಂದ ತೆರೆದುಕೊಂಡಿದ್ದ ಅವಕಾಶಗಳು ಇಲ್ಲವಾಗುತ್ತವೆ. ಆಗ ಏರ್ ಗನ್ ತರಬೇತಿಯಿಂದ ಜೀವನ ಸಾಗಿಸಬೇಕಾಗುತ್ತದೆ.
“ಪ್ರತಿದಿನವೂ ರಾಜ್ಯದಲ್ಲಿ ವಿವಾದಗಳು, ಹಿಂಸೆಗಳು, ಬೆದರಿಕೆಗಳು ಆಗುತ್ತಲೇ ಇವೆ. ಇವುಗಳನ್ನು ತಡೆಯುವ ಇರಾದೆ ತನಗಿಲ್ಲವೆಂದು ಸರಕಾರವು ಬಹಳ ಸ್ಪಷ್ಟವಾದ ಸೂಚನೆ ನೀಡಿದೆ”
ಇದು ಅಧಿಕಾರದ ಭೂತವನ್ನು ಬೆನ್ನಿಗೇರಿಸಿಕೊಂಡಿರುವ ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಇರುವ ಪರಿಸ್ಥಿತಿ. ಇದಕ್ಕೆ ಅಂತ್ಯ ಕಾಣುವ ದಿನಗಳೂ ದೂರವಿಲ್ಲ ಎನಿಸುತ್ತಿದೆ.