ಚುನಾವಣೆಗೂ ಮೊದಲು ಅಭ್ಯರ್ಥಿಗಳ ಅಪರಾಧ ಮಾಹಿತಿ ಬಹಿರಂಗಗೊಳ್ಳಬೇಕು: ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ

ನವದೆಹಲಿ: ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಅಪರಾಧಗಳ ಸಂಪೂರ್ಣ ವಿವರಗಳನ್ನು ಸಂಬಂಧಿತ ರಾಜಕೀಯ ಪಕ್ಷಗಳು ಚುನಾವಣೆ ನಡೆಯುವುದಕ್ಕೆ ಮೊದಲು, ಅಂದರೆ 48 ಗಂಟೆ ಮುಂಚಿತವಾಗಿ ಸಾರ್ವಜನಿಕವಾಗಿ ಬಹಿರಂಗಗೊಳ್ಳುವುದು ಕಡ್ಡಾಯವಾಗಿದೆ ಎಂದು ಸುಪ್ರೀಂ ಕೋರ್ಟ್‌ ಮಹತ್ವ ಆದೇಶವನ್ನು ನೀಡಿದೆ.

2020 ಫೆಬ್ರವರಿಯಲ್ಲಿಯೂ ಇದೇ ರೀತಿಯ ಆದೇಶವನ್ನು ನೀಡಿದ್ದ ಸುಪ್ರೀಂ ಕೋರ್ಟ್‌ ಆದೇಶಕ್ಕೆ(ಆದೇಶದ ಪ್ಯಾರಾ 4.4) ಮಾರ್ಪಾಡು ಮಾಡಿದ್ದು, ಚುನಾವಣೆಗೂ ಮುನ್ನವೇ ಅಭ್ಯರ್ಥಿಗಳ ಅಪರಾಧದ ವಿವರಗಳನ್ನು ಸಾರ್ವಜನಿಕಗೊಳಿಸುವುದು ಕಡ್ಡಾಯವೆಂದು ಹೇಳಿದೆ.

2020ರಲ್ಲಿ ಬಿಹಾರ ವಿಧಾನಸಭಾ ಚುನಾವಣೆ ಕಾಲದಲ್ಲಿ ಅನೇಕ ಅಭ್ಯರ್ಥಿಗಳು ಕಾನೂನು ಕುಣಿಕೆಯಿಂದ ತಪ್ಪಿಸಿಕೊಂಡು ತಮ್ಮ ಅಪರಾಧ ವಿವರಗಳನ್ನು ಬಹಿರಂಗ ಪಡಿಸಿರಲಿಲ್ಲ. ಇದಕ್ಕೆ ಸಂಬಂಧಿಸಿದಂತೆ ಅನೇಕ ಅರ್ಜಿಗಳು ಸುಪ್ರೀಂ ಕೋರ್ಟಿನಲ್ಲಿ ದಾಖಲಾಗಿದ್ದವು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಚುನಾವಣೆಗೂ ಮುನ್ನ ಅಭ್ಯರ್ಥಿಗಳ ಅಪರಾಧ ಹಿನ್ನಲೆ ಬಹಿರಂಗ ಕಡ್ಡಾಯ ಎಂದು ಹೇಳಿದೆ.

ಇದನ್ನು ಓದಿ: ಪೆಗಾಸಸ್‌ ಹಗರಣ ವಿಚಾರಣೆ: ಸಾಮಾಜಿಕ ಜಾಲತಾಣ ಚರ್ಚೆಗಳಿಂದ ದೂರವಿರಲು ಅರ್ಜಿದಾರರಿಗೆ ಸುಪ್ರೀಂ ಸೂಚನೆ

ಎಲ್ಲಾ ರಾಜಕೀಯ ಪಕ್ಷಗಳೂ ತಾನು ಆಯ್ಕೆ ಮಾಡುವ ಅಭ್ಯರ್ಥಿಗಳ ಅಪರಾಧ ಹಿನ್ನೆಲೆ ಹೊಂದಿದ್ದರೂ ಸಹ ಅವರನ್ನು ಚುನಾವಣೆ ಕಣಕ್ಕೆ ಇಳಿಸುತ್ತಿರುವ ಬಗ್ಗೆ  ಮತ್ತು ಆ ಅಪರಾಧ ವಿಚಾರಗಳ ಬಗ್ಗೆ ಪಕ್ಷಗಳ ವೆಬ್​ಸೈಟ್​​​ನಲ್ಲಿ ಸಮಗ್ರವಾಗಿ ಪ್ರಕಟಿಸಬೇಕೆಂದು ಸುಪ್ರೀಂ ಕೋರ್ಟ್​ ತಿಳಿಸಿದೆ.

ಹೈಕೋರ್ಟಿನ ಅನುಮತಿ ಇಲ್ಲದೆ ಕೇಸುಗಳನ್ನು ಹಿಂಪಡೆಯುವಂತಿಲ್ಲ

ಇದೇ ಸಂದರ್ಭದಲ್ಲಿ ಸಂಸತ್ತಿನ ಸದಸ್ಯರು (ಸಂಸದರು) ಮತ್ತು ಶಾಸಕಾಂಗ ಸಭೆಗಳ ಸದಸ್ಯರು (ಶಾಸಕರು) ವಿರುದ್ಧದ ಅಪರಾಧ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ಸಂಬಂಧಿತ ಹೈಕೋರ್ಟಿನ ಅನುಮತಿ ಕಡ್ಡಾಯವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ವಿನೀತ್ ಸರನ್ ಅವರ ತ್ರಿಸದಸ್ಯ ಪೀಠ ಈ ಆದೇಶವನ್ನು ನೀಡಿದೆ. ವಿಚಾರಣೆಯ ಸಂದರ್ಭದಲ್ಲಿ ಹಾಜರಿದ್ದ ಅಮಿಕಸ್ ಕ್ಯೂರಿ ವಿಜಯ್ ಹನ್ಸಾರಿಯಾ ನ್ಯಾಯಪೀಠದ ಆದೇಶದ ಬಗ್ಗೆ ಒಪ್ಪಿಗೆ  ಸೂಚಿಸಿದ್ದಾರೆ.

ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದರೆ, ಅವುಗಳ ಕುರಿತು ನಿಗದಿತ ನಮೂನೆಯಲ್ಲಿ ಮಾಹಿತಿ ಸಲ್ಲಿಸುವಂತೆ ಎಲ್ಲ ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಜನರಲ್‌ ಅವರಿಗೆ ನಿರ್ದೇಶನ ನೀಡಲಾಗಿದೆ. ಬಾಕಿ ಇರುವ ಪ್ರಕರಣಗಳ ಸಂಖ್ಯೆ ಹಾಗೂ ಅವುಗಳ ವಿಚಾರಣೆ ಯಾವ ಹಂತಗಳಲ್ಲಿದೆ ಎಂಬ ಮಾಹಿತಿ ನೀಡುವಂತೆಯೂ ನ್ಯಾಯಪೀಠ ಸೂಚಿಸಿದೆ.

Donate Janashakthi Media

Leave a Reply

Your email address will not be published. Required fields are marked *