ಗಾಂಧೀಜಿ ಮೌಲ್ಯಗಳನ್ನು ಕುಗ್ಗಿಸುವ ರಾಜಕೀಯ ಅಪಾಯಕಾರಿಯಾದುದು – ಬರಗೂರು ಕಳವಳ

ಬೆಂಗಳೂರು: ಮಹಾತ್ಮ ಗಾಂಧಿ ಅವರನ್ನು  ರಾಜಕಾರಣಕ್ಕೋಸ್ಕರ ಅಪ್ಪಿಕೊಳ್ಳುವ, ಅವರ ವ್ಯಕ್ತಿತ್ವ ಭಂಜನೆ ಮಾಡುವ ಪಕ್ಷಗಳ ನಡೆಯನ್ನು ಎಚ್ಚರಿಕೆಯಿಂದ ನೋಡಬೇಕು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.

ಸೌಹಾರ್ದ ಕರ್ನಾಟಕವು ಸಂಸ ಬಯಲು ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮಹಾತ್ಮ ಹುತಾತ್ಮ’ ಸೌಹಾರ್ದ ಸಂಕಲ್ಪ ದಿನದಲ್ಲಿ ಅವರು ಆಶಯ ಭಾಷಣ ಮಾಡುತ್ತಾ,  ಸಾಂಕೇತಿಕವಾಗಿ ಸ್ಮರಣೆ ಮಾಡುವ ಸ್ಥಿತಿಗೆ ನಾವು ತಲುಪಿದ್ದೇವೆ. ‘ಗಾಂಧಿ ಜಯಂತಿ, ಪುಣ್ಯ ಸ್ಮರಣೆ ವೇಳೆ ರಾಜಕೀಯ ನಾಯಕರು, ಪಕ್ಷಗಳು ಅವರನ್ನು ನೆನಪು ಮಾಡಿಕೊಳ್ಳುತ್ತವೆ. ಗಾಂಧಿಯನ್ನು ಈ ರೀತಿ ನೋಡುವುದಕ್ಕಿಂತ ಅವರ ವಿಚಾರಗಳೊಂದಿಗೆ ಮುಖಾಮುಖಿ ಆಗಬೇಕಿದೆ’ ಎಂದು ನುಡಿದರು.

ಇದನ್ನೂ ಓದಿ : ಜಾರಿಗೊಂಡ ಸಂಹಿತೆಗಳು ಕಾರ್ಮಿಕರ ಪಾಲಿಗೆ ಮರಣ ಶಾಸನವಾಗಲಿದೆ – ಮೀನಾಕ್ಷಿ ಸುಂದರಂ

ಸಾಮಾಜಿಕ, ಸಮಾನತೆ, ಸೌಹಾರ್ದತೆ, ಸಾಮರಸ್ಯದ ನೆಲೆಯಲ್ಲಿ ಭಾರತ ನೋಡುವ ಅವರ ವಿಚಾರ ಎಂದಿಗೂ ಪ್ರಸ್ತುತವೇ. ಧರ್ಮ ಹಾಗೂ ರಾಷ್ಟ್ರೀಯತೆ ಎನ್ನುವುದು ಬೇರೆಯೇ. ಅವುಗಳನ್ನು ಒಂದೇ ನೆಲೆಯಲ್ಲಿ ನೋಡುವ ಕ್ರಮ ಸರಿಯಲ್ಲ. ಎರಡರ ವಿಚಾರದಲ್ಲಿ ಗಾಂಧೀಜಿ ಚಿಂತನೆ ಸ್ಪಷ್ಟವಾಗಿತ್ತು. ಅವರ ಆ ವಿಚಾರಗಳನ್ನು ಪ್ರಸ್ತುತ ನೆಲೆಯಲ್ಲಿ ನೋಡಬೇಕಿದೆ’ ಎಂದರು.

ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್ ಮಾತನಾಡಿ, ‘ರಾಜಕೀಯ ನೇತಾರರು ರಾಜ್‌ಘಾಟ್‌ಗೆ ಹೋಗಿ ಗಾಂಧೀಜಿಗೆ ನಮಿಸುತ್ತಾರೆ. ಆದರೆ ಅವರ ಚಿಂತನೆಗಳನ್ನು ಎಂದಿಗೂ ತಮ್ಮ ಆಡಳಿತದಲ್ಲಿ ಅಳವಡಿಸಿಕೊಳ್ಳುವುದಿಲ್ಲ. ಇದು ಆತ್ಮವಂಚನೆ’ ಎಂದರು.

ಕಾರ್ಯಕ್ರಮದಲ್ಲಿ ಹಾಡು, ಕವಿತೆಗಳ ಮೂಲಕ ಗಾಂಧಿಯವರನ್ನು ಸ್ಮರಿಸಲಾಯಿತು. ಗಾಂಧೀಜಿ ಕುರಿತು ಸುಬ್ಬು ಹೊಲೆಯಾರ್, ಆರ್.ಜಿ.ಹಳ್ಳಿ ನಾಗರಾಜ್‌, ಎಚ್‌.ಆರ್.ಸುಜಾತ ಕವನ ವಾಚಿಸಿದರು. ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಸಾಹಿತಿ ಕೆ.ಮರುಳಸಿದ್ದಪ್ಪ, ಕೆ.ಆರ್.ಸಂಧ್ಯಾರೆಡ್ಡಿ, ದಲಿತ ಸಂಘರ್ಷ ಸಮಿತಿಯ ಮಾವಳ್ಳಿ ಶಂಕರ್‌ , ಆರ್. ಮೋಹನರಾಜು ಉಪಸ್ಥಿತರಿದ್ದರು. ವಾರ್ತಾ ಇಲಾಖೆ ನಿವೃತ್ತ ನಿರ್ದೇಶಕ ಎನ್‌.ಆರ್.ವಿಶುಕುಮಾರ್ ಸೌಹಾರ್ದ ಸಂಕಲ್ಪ ಬೋಧಿಸಿದರು.

ಇದನ್ನೂ ನೋಡಿ : ಬೆಂಗಳೂರು ಚಲನಚಿತ್ರೋತ್ಸವ| ಪ್ಯಾಲೆಸ್ತೀನ್‌ ಸಿನಿಮಾಗಳಿಗೆ ನಿರ್ಬಂಧ -ಸಿನಿಮಾಸಕ್ತರ ಆಕ್ರೋಶ Janashakthi Media

Donate Janashakthi Media

Leave a Reply

Your email address will not be published. Required fields are marked *