ಧರ್ಮ, ದ್ವೇಷದ ರಾಜಕೀಯ ಸಲ್ಲದು – ಜಾತ್ರೆ ವ್ಯಾಪಾರಸ್ಥರ ಸಮಾವೇಶದಲ್ಲಿ ಸುನಿಲ್ ಕುಮಾರ್ ಬಜಾಲ್

ಮಂಗಳೂರು : ಬಡ ಜಾತ್ರೆ ವ್ಯಾಪಾರಸ್ಥರನ್ನು ಗುರಿಯಾಗಿಸಿ ಧರ್ಮಗಳ ನಡುವೆ ದ್ವೇಷ ಹರಡಿ ಬಡಪಾಯಿಗಳ ಬೀದಿಪಾಲು ಮಾಡುವ ಕೀಳುಮಟ್ಟದ ರಾಜಕೀಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ಜನಪರ ಹೋರಾಟಗಾರ ಸುನಿಲ್ ಕುಮಾರ್ ಬಜಾಲ್ ಬುಧವಾರ ಹೇಳಿದರು. ಅವರು ನಗರದ ನಾಸಿಕ್ ಬಂಗೇರ ಭವನದಲ್ಲಿ ಜರಗಿದ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಜಾತ್ರೆ ವ್ಯಾಪಾರಸ್ಥರ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಸಮಾವೇಶದಲ್ಲಿ ಮಾತನಾಡಿದ ಸುನಿಲ್ ಅವರು, “ಸಂವಿಧಾನ ಎಲ್ಲಾ ಜನರಿಗೆ ಬದುಕುವ ಹಕ್ಕನ್ನು ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ಕೆಲವು ಸಮಾಜ ಒಡೆಯುವ ಸ್ಥಾಪಿತ ಹಿತಾಸಕ್ತಿಗಳು ನಿರ್ಧಿಷ್ಟ ಧರ್ಮಿಯರಿಗೆ ಜಾತ್ರೆ ಉತ್ಸವಗಳಲ್ಲಿ ವ್ಯಾಪಾರ ಮಾಡಬಾರದು ಎಂಬ ಅಲಿಖಿತ ಕಾನೂನನ್ನು ಜಾರಿ ಮಾಡಿಸುವ ಹುನ್ನಾರ ನಡೆಸಿ ಪುಣ್ಯ ಕ್ಷೇತ್ರಗಳ ಆದಾಯಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಅಲ್ಲದೆ ಪುಣ್ಯ ಕ್ಷೇತ್ರಗಳ ಆಡಳಿತ ಮಂಡಳಿಯವರ ಮೇಲೆ ಅಲಿಖಿತ ಕಾನೂನನ್ನು ಹೇರುತ್ತಿದ್ದಾರೆ” ಎಂದು ಆರೋಪಿಸಿದರು.

ಇದನ್ನೂ ಓದಿ: ಕುತ್ಪಾಡಿ ಜಾತ್ರೆ: ಮುಸ್ಲಿಮರ ವ್ಯಾಪಾರಕ್ಕೆ ಅಡ್ಡಿ ಮಾಡಲು ಬಂದ ಬಿಜೆಪಿ ಪರ ಸಂಘಟನೆಯವರನ್ನೇ ಓಡಿಸಿದ ಗ್ರಾಮಸ್ಥರು

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ನ್ಯಾಯವಾದಿ ಬಿ.ಎಂ. ಭಟ್ ಮಾತನಾಡಿ, “ಅವಿಭಜಿತ ಜಿಲ್ಲೆಗಳ ಜಾತ್ರೆ ಉತ್ಸವಗಳಲ್ಲಿ ವ್ಯಾಪಾರಕ್ಕೆ ಅಡ್ಡಿಪಡಿಸುವವರ ವಿರುದ್ಧ ಕೋಮು ನಿಗ್ರಹ ಪಡೆಯವರು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಬಡ ವ್ಯಾಪಾರಿಗಳ ಹಿತರಕ್ಷಣೆಗೆ ಬದ್ಧರಾಗಿರಬೇಕು” ಎಂದು ಒತ್ತಾಯಿಸಿದರು.

ಜನಪರ ಹೋರಾಟಗಾರ್ತಿ ಮಂಜುಳಾ ನಾಯಕ್ ಮಾತನಾಡಿ, “ಜಾತ್ರೆ ವ್ಯಾಪಾರಿಗಳಿಗೆ ಧರ್ಮದ ಹೆಸರಿನಲ್ಲಿ ಅಧರ್ಮದ ಕೆಲಸ ಮಾಡುವವರ ವಿರುದ್ದದ ಸಮರ ಸಾರಬೇಕು. ಬಡವರ ಮಧ್ಯೆ ವಿಷ ಹಿಂಡುವವರ ವಿರುದ್ಧ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

ಸಂಘದ ಕಾನೂನು ಸಲಹೆಗಾರರಾದ ಚರಣ್ ಶೆಟ್ಟಿ, ಸಾಮಾಜಿಕ ಹೋರಾಟಗಾರರಾದ ಕವಿರಾಜ್ ಉಡುಪಿ, ನವೀನ್ ಕೊಂಚಾಡಿ, ಭರತ್ ಜೈನ್, ಆರಿಫ್ ಉಡುಪಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಗೌರವಧ್ಯಕ್ಷರಾದ ಬಿ.ಕೆ ಇಮ್ತಿಯಾಝ್ ಅಧ್ಯಕ್ಷತೆ ವಹಿಸಿದ್ದರು.

ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಮುಸ್ತಫಾ, ಮುಖಂಡರಾದ ಆಸೀಫ್ ಬಾವ ಉರುಮನೆ, ನೌಶಾದ್ ಉಳ್ಳಾಲ, ರಹಿಮಾನ್ ಅಡ್ಯಾರ್, ರಿಯಾಝ್, ಆದಂ ಬಜಾಲ್ ಮುಂತಾದವರು ಉಪಸ್ಥಿತರಿದ್ದರು. ಬೀದಿಬದಿ ವ್ಯಾಪಾರಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಸ್ವಾಗತಿಸಿ, ಪ್ರವೀಣ್ ಕುಮಾರ್ ಕದ್ರಿ ವಂದಿಸಿದರು.

ವಿಡಿಯೊ ನೋಡಿ: ಮೂರು ದಶಕಗಳಲ್ಲಿ ಧರ್ಮಸ್ಥಳ, ಬೆಳ್ತಂಗಡಿಯಲ್ಲಿ ನಡೆದ ಅಸಹಜ ಸಾವುಗಳ ತನಿಖೆಗೆ ಖಾವಂದರು ಒತ್ತಾಯಿಸುತ್ತಿಲ್ಲವೇಕೆ?

Donate Janashakthi Media

Leave a Reply

Your email address will not be published. Required fields are marked *