ತಮಿಳುನಟ, ರಾಜಕಾರಣಿ ವಿಜಯಕಾಂತ್ (71) ನಿಧನ

ಚೆನ್ನೈ: ತಮಿಳಿನ ಖ್ಯಾತ ನಟ, ಡಿಎಂಡಿಕೆ ಸಂಸ್ಥಾಪಕ ವಿಜಯಕಾಂತ್ ಅವರು ಗುರುವಾರ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಅವರು ನ್ಯುಮೋನಿಯಾಗೆ ತುತ್ತಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿ, ವೆಂಟಿಲೇಟರ್ ಬೆಂಬಲದೊಂದಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಮಿಯೋಟ್ ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ.

“ಕ್ಯಾಪ್ಟನ್ ವಿಜಯಕಾಂತ್ ಅವರು ನ್ಯುಮೋನಿಯಾಕ್ಕೆ ತುತ್ತಾಗಿ ದಾಖಲಾದ ನಂತರ ವೆಂಟಿಲೇಟರಿ ಬೆಂಬಲದಲ್ಲಿದ್ದರು. ವೈದ್ಯಕೀಯ ಸಿಬ್ಬಂದಿಯ ಅತ್ಯುತ್ತಮ ಪ್ರಯತ್ನದ ಹೊರತಾಗಿಯೂ ಅವರು ಡಿಸೆಂಬರ್ 28, 2023 ರಂದು ಬೆಳಿಗ್ಗೆ ನಿಧನರಾದರು” ಎಂದು ಆಸ್ಪತ್ರೆಯ ಪ್ರಕಟಣೆ ಹೇಳಿದೆ.

ಇದನ್ನೂ ಓದಿ: ‘ಕೊರೊನಾ ಅಕ್ರಮಗಳ ದಾಖಲೆ ನೀಡಿ’ | ಯತ್ನಾಳ್‌ಗೆ ಸಚಿವ ಖರ್ಗೆ ಮನವಿ

ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಅವರ ಪಕ್ಷವು ಈ ಹಿಂದೆ ಹೇಳಿಕೆಯಲ್ಲಿ ತಿಳಿಸಿತ್ತು. ಎರಡನೇ ಸುತ್ತಿನ ಮಾದರಿಗಳ ಫಲಿತಾಂಶಗಳು ಲಭ್ಯವಾಗುವ ಮೊದಲೇ ಪಕ್ಷವು ಆ ಹೇಳಿಕೆಯನ್ನು ನೀಡಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ ಎಂದು ಪಿಟಿಐ ವರದಿ ಮಾಡಿದೆ.

ನಟ ಕಳೆದ 4-5 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಮತ್ತು ಅವರ ಪತ್ನಿ ಪ್ರೇಮಲತಾ ಅವರು ಡಿಸೆಂಬರ್ 14 ರಂದು ಚೆನ್ನೈನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಘೋಷಿಸಲ್ಪಟ್ಟಿದ್ದರಿಂದ ಔಪಚಾರಿಕವಾಗಿ ಡಿಎಂಡಿಕೆಯ ಅಧಿಕಾರವನ್ನು ವಹಿಸಿಕೊಂಡಿದ್ದರು.

ಮಿಲಿಟರಿ ಪಾತ್ರಗಳ ಮೂಲಕ ಭಾರಿ ಜನಪ್ರಿಯತೆ ಗಳಿಸಿದ್ದ ಅವರನ್ನು “ಕ್ಯಾಪ್ಟನ್” ಎಂದು ಪ್ರೀತಿಯಿಂದ ಕರೆಯಲಾಗುತ್ತಿತ್ತು. ಸಿನಿಮಾ ರಂಗದಲ್ಲಿ ಯಶಸ್ವಿಯಾಗಿದ್ದ ಅವರು ಬಹುಮುಖ ನಟರಾಗಿ ಪ್ರಸಿದ್ದರಾಗಿದ್ದಾರೆ. ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಅವರು 154 ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ಡಿಎಂಕೆ ಮತ್ತು ಎಐಎಡಿಎಂಕೆಯಂತಹ ದ್ರಾವಿಡ ಪಕ್ಷಗಳಿಗೆ ಬದಲಾಗಿ ತಮಿಳುನಾಡಿನಲ್ಲಿ ಪರ್ಯಾಯ ರಾಜಕೀಯ ವೇದಿಕೆಯನ್ನು ಒದಗಿಸುವ ಉದ್ದೇಶದಿಂದ ವಿಜಯ ಕಾಂತ್ 2005 ರಲ್ಲಿ ದೇಶೀಯ ಮುರ್ಪೊಕ್ಕು ದ್ರಾವಿಡ ಕಳಗಂ (ಡಿಎಮ್‌ಡಿಕೆ) ಸ್ಥಾಪಿಸಿದರು.

ಇದನ್ನೂ ಓದಿ: ಒಕ್ಕಲಿಗರ ಪರ ಮಾತನಾಡಿದ್ದಕ್ಕೆ ಸಿಎಂ ಸ್ಥಾನ ಕಿತ್ತುಕೊಳ್ಳಲಾಗಿತ್ತು – ಬಿಜೆಪಿ ಸಂಸದ ಸದಾನಂದ ಗೌಡ

2006 ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿ ಕಣಕ್ಕೆ ಇಳಿದಿದ್ದ DMDK ತನ್ನ ಚೊಚ್ಚಲ ಪ್ರಯತ್ನದಲ್ಲೆ ಸ್ವತಂತ್ರವಾಗಿ ಸ್ಪರ್ಧಿಸಿತ್ತು. ಅಲ್ಲದೆ ಗಮನಾರ್ಹ ಸಂಖ್ಯೆಯ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿ ಕೂಡಾ ಆಗಿತ್ತು. ಈ ಮೂಲಕ ರಾಜ್ಯದ ರಾಜಕೀಯದಲ್ಲಿ ಪಕ್ಷವೂ ಪರಿಗಣಿಸಲ್ಪಡುವ ಶಕ್ತಿಯಾಗಿ ಗುರುತಿಸಿಕೊಂಡಿತ್ತು.

2011 ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ, ವಿಜಯ ಕಾಂತ್ ಅವರ ಪಕ್ಷವು ಇತಿಹಾಸವನ್ನು ಬರೆದಿತ್ತು. ಈ ಚುನಾವಣೆಯಲ್ಲಿ ಡಿಎಂಕೆಗಿಂತ ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದ ಪಕ್ಷವು ಆ ವರ್ಷ ಪ್ರಧಾನ ವಿರೋಧ ಪಕ್ಷವಾಗಿ ಹೊರಹೊಮ್ಮಿತು. ಹೀಗಾಗಿ ವಿಜಯಕಾಂತ್ ಅವರು 2011-2016ರವರೆಗೆ ತಮಿಳುನಾಡು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದರು.

ಆದರೆ 2014ರ ಲೋಕಸಭೆ ಚುನಾವಣೆಯಲ್ಲಿ ಡಿಎಂಡಿಕೆ ಪಕ್ಷವು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಸೇರಿ ಚುನಾವಣೆ ಸ್ಪರ್ಧಿಸಿತ್ತು. ಆದರೆ ಗಮನಾರ್ಹ ಯಶಸ್ಸನ್ನು ಸಾಧಿಸಲಿಲ್ಲ. ಈ ವೇಳೆ ಪಕ್ಷವು ಪ್ರಮುಖ ನಾಯಕರ ಪಕ್ಷಾಂತರ ಸೇರಿದಂತೆ ಆಂತರಿಕ ಸವಾಲುಗಳನ್ನು ಎದುರಿಸಿತು. ಇದು ನಂತರದ ಚುನಾವಣೆಗಳಲ್ಲಿ ಪಕ್ಷದ ಚುನಾವಣಾ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಿತು.

ಇದನ್ನೂ ಓದಿ: ಶಿವಮೊಗ್ಗ | ದಲಿತ ಯುವತಿಯನ್ನು ಮದುವೆಯಾಗಿದ್ದಕ್ಕೆ ವರನ ಕುಟುಂಬಕ್ಕೆ ಬಹಿಷ್ಕಾರ

ಮುಖ್ಯಮಂತ್ರಿ ಸ್ಟಾಲಿನ್ ಅವರು ವಿಜಯಕಾಂತ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಅಂತಿಮ ಗೌರವ ಸಲ್ಲಿಸಿದ್ದಾರೆ. ಅಲ್ಲದೆ ಅವರ ಅಂತಿಮ ಕಾರ್ಯವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

“ಒಳ್ಳೆಯ ಹೃದಯದ ಗೆಳೆಯ ವಿಜಯ ಕಾಂತ್ ಅವರು ಚಿತ್ರರಂಗದಲ್ಲಿ ಮತ್ತು ಸಾರ್ವಜನಿಕ ಜೀವನದಲ್ಲಿ ತಮ್ಮ ಕಠಿಣ ಪರಿಶ್ರಮದಿಂದ ಯಶಸ್ವಿ ಛಾಪು ಮೂಡಿಸಿದ ಸಾಧಕರು. ನಟರಾಗಿ, ಕಲಾವಿದರ ಸಂಘದ ಅಧ್ಯಕ್ಷರಾಗಿ, ರಾಜಕೀಯ ಪಕ್ಷದ ನಾಯಕರಾಗಿ, ಶಾಸಕರಾಗಿ, ವಿರೋಧ ಪಕ್ಷದ ನಾಯಕರಾಗಿ ಯಾವುದೇ ಕಾರ್ಯವನ್ನು ಕೈಗೆತ್ತಿಕೊಂಡರೂ ಅದಕ್ಕೆ ಸಂಪೂರ್ಣ ತಮ್ಮನ್ನು ತೊಡಗಿಸಿಕೊಂಡು ಸುತ್ತಲಿನ ಎಲ್ಲರಿಗೂ ಬೆಂಬಲ ನೀಡುತ್ತಿದ್ದರು. ಅವರು ನನಗೆ ಕುಟುಂಬದ ಸ್ನೇಹಿತರಾಗಿ ಆತ್ಮೀಯರಾಗಿದ್ದರು. ಈ ದುಃಖದ ಸನ್ನಿವೇಶದಲ್ಲಿ ಕ್ಯಾಪ್ಟನ್ ವಿಜಯ ಕಾಂತ್ ಅವರನ್ನು ಕಳೆದುಕೊಂಡು ತತ್ತರಿಸುತ್ತಿರುವ ಸಹೋದರಿ ಪ್ರೇಮಲತಾ ವಿಜಯ ಕಾಂತ್ ಸೇರಿದಂತೆ ಅವರ ಕುಟುಂಬದವರು, ಅವರ ಪಕ್ಷದ ಕಾರ್ಯಕರ್ತರ ದುಃಖದಲ್ಲಿ ಭಾಗಿಯಾಗುತ್ತೇನೆ” ಎಂದು ಸ್ಟಾಲಿನ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ವಿಜಯಕಾಂತ್ ನಿಧನಕ್ಕೆ ಸಂತಾಪ ಸೂಚಿಸಿದ್ದು, ಅವರ ನಿಧನದಿಂದ ತುಂಬಾ ದುಃಖವಾಗಿದೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

“ತಮಿಳು ಚಲನಚಿತ್ರ ಪ್ರಪಂಚದ ದಂತಕಥೆ, ಅವರ ವರ್ಚಸ್ವಿ ಅಭಿನಯವು ಲಕ್ಷಾಂತರ ಜನರ ಹೃದಯ ಗೆದ್ದಿದೆ. ರಾಜಕೀಯ ನಾಯಕರಾಗಿ, ಅವರು ಸಾರ್ವಜನಿಕ ಸೇವೆಗೆ ಬದ್ಧರಾಗಿದ್ದರು. ತಮಿಳುನಾಡಿನ ರಾಜಕೀಯದಲ್ಲಿ ಅವರು ಶಾಶ್ವತ ಪ್ರಭಾವವನ್ನು ಬೀರಿದ್ದಾರೆ. ಅವರ ನಿಧನವು ತುಂಬಲು ಕಷ್ಟಕರವಾದ ಶೂನ್ಯವನ್ನು ಸೃಷ್ಟಿಸಿದೆ. ಅವರು ನನ್ನ ಆತ್ಮೀಯ ಸ್ನೇಹಿತರಾಗಿದ್ದರು ಮತ್ತು ವರ್ಷಗಳಿಂದ ನಾನು ಅವರೊಂದಿಗಿನ ನನ್ನ ಸಂವಹನವನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ಈ ದುಃಖದ ಸಮಯದಲ್ಲಿ ನಾನು ಅವರ ಕುಟುಂಬ, ಅಭಿಮಾನಿಗಳು ಮತ್ತು ಹಲವಾರು ಅನುಯಾಯಿಗಳೊಂದಿಗೆ ಇರಲಿದೆ” ಎಂದು ಮೋದಿ ಹೇಳಿದ್ದಾರೆ.

ವಿಡಿಯೊ ನೋಡಿ: ಘನತೆಯ ಬದುಕು, ಹೋರಾಟದ ಹಾದಿ, ಕಲೆಯ ದಾರಿ – ಕಲಾವಿದರು ಹೋರಾಟಗಾರರ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *