ನವದೆಹಲಿ: ‘ದೇಶದಲ್ಲಿ ಪ್ರಸಕ್ತ ಸನ್ನಿವೇಶದಲ್ಲಿ ಕೋವಿಡ್ ಔಷಧಿಯ ಕೊರತೆ ಅತ್ಯಧಿಕವಾಗಿದೆ. ಇಂತಹ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ನಾಯಕರು ಸಂಗ್ರಹಿಸಿಕೊಂಡಿರುವ ಕೋವಿಡ್ ಔಷಧಿಗಳನ್ನು ಆದಷ್ಟು ಬೇಗನೇ ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಂತಿರುಗಿಸಿ’ ಎಂದು ದೆಹಲಿ ಹೈಕೋರ್ಟ್ ಸೂಚನೆ ನೀಡಿದೆ.
‘ಇದು ಸಾರ್ವಜನಿಕರಿಗಾಗಿ ಇರುವಂತಹ ಔಷಧಿಗಳು. ಇದನ್ನು ರಾಜಕೀಯಕ್ಕೆ ಬಳಸಬಾರದು. ಬಡವರು ಮತ್ತು ಅಗತ್ಯವಿರುವ ಜನರಿಗೆ ಉಪಯೋಗವಾಗಲಿ ಎಂದು ರಾಜಕೀಯ ನಾಯಕರುಗಳು ರೆಮ್ಡಿಸಿವಿರ್ ಸೇರಿದಂತೆ ಕೋವಿಡ್ ನಿವಾರಣೆಗಾಗಿ ಬಳಕೆಯಾಗುವ ಔಷಧಿಗಳನ್ನು ಈಗಾಗಲೇ ದಾಸ್ತಾನು ಮಾಡಿಕೊಂಡಿದ್ದಾರೆ. ಕೂಡಲೇ ಕೋವಿಡ್ ಔಷಧಿಗಳನ್ನು ಆರೋಗ್ಯ ಸೇವೆಗಳ ಪ್ರಧಾನ ನಿರ್ದೇಶಕರು ಮತ್ತು ದೆಹಲಿ ಸರ್ಕಾರಕ್ಕೆ ಒಪ್ಪಿಸಬೇಕು’ ಎಂದು ಹೈಕೋರ್ಟ್ ಹೇಳಿದೆ.
ಇದನ್ನು ಓದಿ: ಸಾಮಾಜಿಕ ಕೊಲೆಯೂ ಮತ್ತು ಕಾಣೆಯಾದ ಪ್ರಭುತ್ವವೂ
ಈ ವಿಚಾರವಾಗಿ ನ್ಯಾಯಮೂರ್ತಿ ವಿಪಿನ್ ಸಂಘಾಯಿ ಮತ್ತು ಜಸ್ಮೀತ್ ಸಿಂಗ್ ಅವರ ಪೀಠವು ವಿಚಾರಣೆ ನಡೆಸಿತು. ಪ್ರಕರಣ ಕುರಿತಾಗಿ ದೆಹಲಿ ಪೊಲೀಸರು ಸಲ್ಲಿಸಿರುವ ವರದಿಯೂ ಅತ್ಯಂತ ನಿರಾಶದಾಯಕವಾಗಿದೆ. ಆದಷ್ಟು ಬೇಗನೇ ಈ ಬಗ್ಗೆ ಸರಿಯಾದ ತನಿಖೆ ನಡೆಸಿ, ನಿಖರವಾದ ವರದಿ ಸಲ್ಲಿಸುವಂತೆ ಸೂಚಿಸಿದೆ.
ಕೋವಿಡ್ ರೋಗಿಗಳು ಔಷಧಿಯಿಲ್ಲದೆ ನರಳುತ್ತಿದ್ದಾರೆ. ಆದರೆ ದೆಹಲಿಯಲ್ಲಿ ರಾಜಕೀಯ ನಾಯಕರು ದೊಡ್ಡ ಪ್ರಮಾಣದಲ್ಲಿ ಔಷಧಿಯನ್ನು ಶೇಖರಣೆ ಮಾಡುತ್ತಿದ್ದಾರೆ ಮತ್ತು ವಿತರಣೆ ಮಾಡುತ್ತಿದ್ದಾರೆ. ಈ ಸಂಬಂಧ ಎಫ್‌ಐಆರ್ ದಾಖಲಿಸುವಂತೆ ನ್ಯಾಯಾಲಯವು ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು.
ಈ ಸಂಬಂಧ ತನಿಖೆ ನಡೆಸಿ, ಒಂದು ವಾರದ ಒಳಗೆ ವರದಿ ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ನ್ಯಾಯಾಲಯವು ಸೂಚನೆ ನೀಡಿದೆ.