ಚಿಕ್ಕಮಗಳೂರು: ಜಿಲ್ಲೆಯ ಕಿರುಗುಂದ ಗ್ರಾಮದ ದಲಿತ ಯುವಕನ ಮೇಲೆ ಗೋಣಿಬೀಡು ಪೊಲೀಸ್ ಠಾಣಾಧಿಕಾರಿ ದಲಿತ ಯುವಕನಿಗೆ ಮೂತ್ರ ಕುಡಿಸಿದ್ದಲ್ಲದೇ, ಮೂತ್ರವನ್ನು ನಾಲಿಗೆಯಿಂದ ನೆಕ್ಕಿಸಿಸುವ ಮೂಲಕ ಅಮಾನವೀಯ ಕೃತ್ಯ ಎಸಗಿದ್ದಾರೆಂದು ನೊಂದ ಯುವಕ ಹೇಳಿಕೆ ನೀಡಿದ್ದಾನೆ.
ಕಿರುಗುಂದ ಗ್ರಾಮದ ವಿವಾಹಿತ ಮಹಿಳೆ ಹಾಗೂ ಆಕೆಯ ಪತಿಯ ನಡುವಿನ ಜಗಳ ಸಂಬಂಧಿಸಿದಂತೆ ಗೋಣಿಬೀಡು ಪೊಲೀಸ್ ಠಾಣೆಯ ಪಿಎಸ್ಐ ಅರ್ಜುನ್ ಅದೇ ಗ್ರಾಮದ ದಲಿತ ಸಮುದಾಯದ ಯುವಕ ಗ್ರಾಮ ಪಂಚಾಯತಿ ದಿನಗೂಲಿ ನೌಕರ ಕೆ.ಎಲ್. ಪುನೀತ್ (22) ಎಂಬ ಯುವಕನ ಮೇಲೆ ಶಂಕೆಗೊಂಡು ಮೇ 10ರಂದು ಆತನನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದರು.
ಇದನ್ನು ಓದಿ: ಆಧುನಿಕ ವೈದ್ಯಕೀಯ ಔಷಧಿಗಳ ಬಗ್ಗೆ ಅವಹೇಳನ: ರಾಮದೇವ್ ವಿರುದ್ಧ ಕ್ರಮಕ್ಕೆ ಆಗ್ರಹ
ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರ ಇಲ್ಲದಿದ್ದರೂ ಸಹ ಈ ವೇಳೆ ಯುವಕ ಪುನೀತ್ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಆರೋಪ ಹೊರಿಸಿಸಲಾಗಿದೆ. ಅಲ್ಲದೆ, ಮಹಿಳೆಯೊಂದಿಗಿನ ಸಂಬಂಧವಿದೆ ಎಂದು ಒಪ್ಪಿಕೊಂಡು ಆಕೆಯನ್ನು ಬಚ್ಚಿಟ್ಟಿರುವುದಾಗಿ ಹೇಳಬೇಕೆಂದು ಪಿಎಸ್‌ಐ ಅರ್ಜುನ್ ದೌರ್ಜನ್ಯವನ್ನು ಎಸಗಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ಆ ಯುವಕನನ್ನು ಠಾಣೆಯ ಕೊಠಡಿಯೊಂದರಲ್ಲಿ ತಲೆಕೆಳಗೆ ಮಾಡಿ ನೇತು ಹಾಕಿ ಪಿಎಸ್ಐ ಹಲ್ಲೆ ನಡೆಸಿದ್ದರು.
ಆರು ತಿಂಗಳ ಹಿಂದೆ ಪುನೀತ್ ಕಾಣೆಯಾದ ಹೆಂಗಸಿನ ನಂಬರ್ ಗೆ ಕರೆ ಮಾಡಿರುತ್ತಾನೆ. ಈ ವಿಚಾರ ಅವರ ಮನೆಗೂ ಗೊತ್ತಾಗಿ ಕರೆಸಿ ಮದುವೆಯಾದ ಹೆಣ್ಣುಮಕ್ಕಳಿಗೆ ಕರೆ ಮಾಡಬಾರದೆಂದು ಬುದ್ದಿ ಹೇಳಿ ಕಳಿಸುತ್ತಾರೆ. ಇದೀಗ ಆ ಹೆಣ್ಣುಮಗಳು ಪಕ್ಕದ ಮನೆಯಾತನೊಂದಿಗೆ ಓಡಿ ಹೋಗಿದ್ದು ಇದರಲ್ಲಿ ಪುನೀತನ ಕೈವಾಡ ಇರಬಹುದೆಂಬ ಶಂಕೆಯಿಂದ ಕೆಲವರು ಆತನ ಮನೆ ಮುಂದೆ ಬಂದು ಜಗಳ ಮಾಡುತ್ತಾರೆ.
ಮೇ10ರ ಬೆಳಗ್ಗೆ 10 ಗಂಟೆಗೆ ಗ್ರಾಮದಲ್ಲಿರುವ ತನ್ನ ಮನೆಗೆ ಅದೇ ಗ್ರಾಮದ ಕೆಲವರು ಬಂದು ಮಹಿಳೆಯ ಬಗ್ಗೆ ವಿಚಾರಿಸುತ್ತಾ ತನ್ನ ಮೇಲೆ ಹಲ್ಲೆ ನಡೆಸಲು ಮುಂದಾದಾಗ ತಾನು ಪೊಲೀಸ್ ಹೆಲ್ಪ್ ಲೈನ್ 112ಕ್ಕೆ ಕರೆ ಮಾಡಿದ್ದೆ. ಆಗ ಸ್ಥಳಕ್ಕೆ ಬಂದ ಗೋಣೀಬೀಡು ಪಿಎಸ್‍ಐ ಅರ್ಜುನ್ ಎಂಬವರು ತನ್ನ ಮೇಲೆ ಸಾರ್ವಜನಿಕರ ಎದುರೇ ಹಲ್ಲೆ ನಡೆಸಿದ್ದಲ್ಲದೇ, ವಾಹನಕ್ಕೆ ಹತ್ತಿಸಿಕೊಂಡು ಗೋಣೀಬೀಡು ಠಾಣೆಗೆ ಕರೆದೊಯ್ದರು. ಠಾಣೆಯ ಮಹಡಿಯ ಕೊಠಡಿಯೊಳಗೆ ಕರೆದೊಯ್ದು ತನ್ನ ಬಟ್ಟೆ ಬಿಚ್ಚಿಸಿ ಕೈಕಾಲು ಕಟ್ಟಿ ಮೇಲಕ್ಕೆ ತೂಗುಹಾಕಿ ಪಾದ ಹಾಗೂ ಮೈಕೈಗೆ ತೀವ್ರ ಹಲ್ಲೆ ನಡೆಸಿದ್ದಾರೆ.
ಪುನೀತ್ ಗೆ ಜಾತಿ ವಿಚಾರಿಸಿ ಜಾತಿ ನಿಂದನೆ ಮಾಡಿದ್ದಲ್ಲದೆ, ಅದೇ ದಿನ ರಾತ್ರಿ 10 ಗಂಟೆಗೆ ಮನೆಗೆ ಕಳುಹಿಸಿದ್ದಾರೆಂದು ಆರೋಪಿಸಿ ನೊಂದ ಯುವಕ ಎಸ್ಪಿ, ಐಜಿ, ಡಿಐಜಿಗೆ ಪತ್ರ ಬರೆದು ತನಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದ್ದರು.
ಗ್ರಾಮ ಪಂಚಾಯ್ತಿಯಲ್ಲಿ ದಿನಗೂಲಿ ನೌಕರನಾಗಿ ದುಡಿದು ಜೀವನ ನಡೆಸುತ್ತಿದ್ದೇನೆ. ಯಾವುದೋ ಮಹಿಳೆಯ ವಿಚಾರಕ್ಕೆ ಸಂಬಂಧಿಸಿ ನನ್ನ ಮೇಲೆ ತೀವ್ರ ಹಲ್ಲೆ ನಡೆಸಿರುವ ಕಾರಣದಿಂದ ಮೈಕೆ ಮೂಳೆಗಳು ತೀವ್ರ ಹಾನಿಗೊಳಗಾಗಿದೆ. ಇನ್ನು ಮುಂದೆ ನನಗೆ ಕೆಲಸಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆಳಲು ತೋಡಿಕೊಂಡನು.
ದೂರಿನ ಮೇರೆಗೆ ಚಿಕ್ಕಮಗಳೂರು ಎಸ್ಪಿ, ಘಟನೆ ಸಂಬಂಧ ತನಿಖೆ ನಡೆಸಲು ಡಿವೈಎಸ್ಪಿ ಒಬ್ಬರನ್ನು ನೇಮಿಸಿದ್ದರು. ಬಳಿಕ ಗೋಣಿಬೀಡು ಠಾಣಾಧಿಕಾರಿ ಅರ್ಜುನ್ ಅವರನ್ನು ಎಸ್ಪಿ ಕಚೇರಿಗೆ ವರ್ಗಾವಣೆ ಮಾಡಿದ್ದ ಚಿಕ್ಕಮಗಳೂರು ಎಸ್ಪಿ ಎಂ.ಎಚ್ ಅಕ್ಷಯ್, ಗೋಣಿಬೀಡು ಠಾಣೆಗೆ ಮಹಿಳಾ ಪಿಎಸ್ಐ ಒಬ್ಬರನ್ನು ನೇಮಿಸಿದ್ದರು.
ಈ ಬೆಳವಣಿಗೆಗಳ ಬಳಿಕ ಮೂಡಿಗೆರೆ ತಾಲೂಕಿನ ದಲಿತ ಪರ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರು, ಎಸ್ಪಿ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿ ಪಿಎಸ್ಐ ಅರ್ಜುನ್ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದ್ದರು. ಆದರೆ ಈ ಸಂಬಂಧ ಚಿಕ್ಕಮಗಳೂರು ಎಸ್ಪಿ ಯಾವುದೇ ಕ್ರಮಕೈಗೊಂಡಿರಲಿಲ್ಲ.
ನೊಂದ ಯುವಕನ ಆಗ್ರಹವೇನು?
ಪಿಎಸ್ಐ ಅರ್ಜುನ್ ಅವರಿಂದ ದೌರ್ಜನ್ಯಕ್ಕೆ ಒಳಗಾದ ಯುವಕ ಪುನೀತ್, ಪಿಎಸ್ಐ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡದ್ದಾನೆ. ಪಿಎಸ್ಐ ಹಲ್ಲೆ ಮಾಡಿರುವುದಲ್ಲದೇ ಠಾಣೆಯಲ್ಲಿ ಕುಡಿಯಲು ನೀರು ಕೇಳಿದ್ದಕ್ಕೆ ಮೂತ್ರವನ್ನು ಕುಡಿಸಿದ್ದಾರೆಂದು ಆರೋಪಿಸಿದ್ದಾನೆ.
“ಮೇ 10ರಂದು ಯಾವುದೇ ದೂರು ಇಲ್ಲದಿದ್ದರೂ 112 ವಾಹನದಲ್ಲಿ ಬಂದು ನನ್ನನ್ನು ಗೋಣಿಬೀಡು ಠಾಣೆಗೆ ಕರೆದೊಯ್ದಿದ್ದರು. ಮಹಿಳೆಯೊಂದಿಗೆ ಸಂಬಂಧವಿದೆ ಎಂದು ಒಪ್ಪಿಕೊಳ್ಳುವಂತೆ ಹೇಳಿದ್ದರು. ಆದರೆ ನಾನು ಒಪ್ಪಿಕೊಳ್ಳದಿದ್ದಾಗ ತಲೆಕೆಳಗೆ ಮಾಡಿ ಠಾಣೆಯಲ್ಲಿ ಕಟ್ಟಿ ಹಾಕಿ ಹಲ್ಲೆ ಮಾಡಿದರು” ಎಂದು ಹೇಳಿರುವನು.
ಹಲ್ಲೆಯಿಂದ ನಿತ್ರಾಣಗೊಂಡಿದ್ದ ವೇಳೆ ಕುಡಿಯಲು ನೀರು ಕೇಳಿದಾಗ, ಪೊಲೀಸ್ ಠಾಣೆಯಲ್ಲೇ ಇದ್ದ ಕಳ್ಳತನದ ಆರೋಪಿಯಿಂದ ನನ್ನ ಬಾಯಿಗೆ ಮೂತ್ರ ಮಾಡಿಸಿದ್ದಾರೆ. ನಂತರ ಮೂತ್ರವನ್ನು ನೆಕ್ಕಿಸಿದ್ದಾರೆ ಈ ಸಂಬಂಧ ಎಸ್ಪಿ, ಐಜಿ, ಡಿಐಜಿ ಹಾಗೂ ಮಾನವ ಹಕ್ಕು ಆಯೋಗಕ್ಕೂ ದೂರು ನೀಡಿದ್ದರೂ, ಪಿಎಸ್ಐ ವಿರುದ್ಧ ಯಾವುದೇ ಕಾನೂನು ಕ್ರಮಕೈಗೊಂಡಿಲ್ಲ ಎಂದು ನೊಂದ ದಲಿತ ಯುವಕನ ಆರೋಪವಾಗಿದೆ.
“ಪೊಲೀಸ್ ಠಾಣಾಧಿಕಾರಿಯನ್ನು ಅಮಾನತು ಮಾಡದೇ ಎಸ್ಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ಪಿಎಸ್ಐ ಹಲ್ಲೆ, ಅಮಾನವೀಯ ಹಿಂಸೆಯಿಂದ ನಾನು ಮಾನಸಿಕವಾಗಿ, ದೈಹಿಕವಾಗಿ ನೊಂದಿದ್ದು, ತನಗೆ ನ್ಯಾಯ ಕೊಡಿಸಿ” ಎಂದು ಪುನೀತ್ ಆಗ್ರಹಿಸಿದ್ದಾನೆ.