– ಹಿಂದಕ್ಕೆ ಹೋಗುವುದಿಲ್ಲ, ಹೋರಾಟ ಮುಂದುವರಿಸುತ್ತೇವೆ: ರೈತರ ಪಣ
ನವದೆಹಲಿ: ಎರಡು ದಿನಗಳ ಭದ್ರತಾ ಸಿಬ್ಬಂದಿ ಜೊತೆಗಿನ ಸಂಘರ್ಷದ ಬಳಿಕ ಷರತ್ತುಗಳೊಂದಿಗೆ ದೆಹಲಿ ಪ್ರವೇಶಿಸಲು ಅನುಮತಿ ಪಡೆದಿದ್ದ ರೈತರು ಪೊಲೀಸರು ನಿಗದಿಪಡಿಸಿದ ಧರಣಿ ಸ್ಥಳಕ್ಕೆ ಹೋಗಲು ನಿರಾಕರಿಸಿದ್ದಾರೆ.
ಸಿಂಗು ಗಡಿಯಲ್ಲಿ ಜಮಾವಣೆಗೊಂಡಿರುವ ಸಾವಿರಾರು ರೈತರು ಶನಿವಾರ ಬೆಳಗ್ಗೆ ಭಾರಿ ಭದ್ರತೆಯ ನಡುವೆ ಅಲ್ಲಿಯೇ ಸಭೆ ನಡೆಸಿದ್ದಾರೆ. ರೈತರ ಪ್ರತಿಭಟನೆಗಾಗಿ ಉತ್ತರ ದೆಹಲಿಯಲ್ಲಿ ಪೊಲೀಸರು ನಿಗದಿ ಮಾಡಿರುವ ಸ್ಥಳಕ್ಕೆ ತೆರಳಲು ನಿರಾಕರಿಸಿರುವ ರೈತರು ಸಿಂಗು ಗಡಿಯಲ್ಲಿಯೇ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದ್ದಾರೆ.
ಸಿಂಗು ಗಡಿಯಲ್ಲಿ ನಡೆದ ಸಭೆಯ ನಂತರ, ಮಾತನಾಡಿದ ರೈತ ಮುಖಂಡರೊಬ್ಬರು ಇಲ್ಲಿಯೇ ಪ್ರತಿಭಟನೆ ಮುಂದುವರಿಸುವುದಾಗಿ ಘೋಷಿಸಿದರು.
‘ನಾವು ಇಲ್ಲಿಂದ (ಸಿಂಗು ಬಾರ್ಡರ್) ಬೇರೆಡೆಗೆ ತೆರಳುವುದಿಲ್ಲ. ಇಲ್ಲಿಯೇ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ. ಇಲ್ಲಿಂದ ಹಿಂದಕ್ಕೂ ಹೋಗುವುದಿಲ್ಲ. ಪ್ರತಿಭಟನೆಯಲ್ಲಿ ಭಾಗವಹಿಸಲು ಸಾವಿರಾರು ರೈತರು ಪಂಜಾಬ್ ಮತ್ತು ಹರಿಯಾಣದಿಂದ ಬಂದಿದ್ದಾರೆ’ ಎಂದು ಅವರು ಹೇಳಿದರು.
ಇನ್ನು ಟಿಕ್ರಿ ಗಡಿಯಲ್ಲಿ ಸೇರಿರುವ ರೈತರು ಪೊಲೀಸರು ಗೊತ್ತುಪಡಿಸಿದ ಪ್ರತಿಭಟನಾ ಸ್ಥಳಕ್ಕೆ ತೆರಳಬೇಕೆ ಬೇಡವೇ ಎಂಬುದರ ಬಗ್ಗೆ ನಿರ್ಧರಿಸಿಲ್ಲ. ಈ ಕುರಿತು ಅವರು ಶೀಘ್ರದಲ್ಲಿಯೇ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ.
ರಾಷ್ಟ್ರ ರಾಜಧಾನಿಯ ಸಂತ ನಿರಂಕರಿ ಮೈದಾನದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಶುಕ್ರವಾರ ನೂರಾರು ರೈತರು ದೆಹಲಿ ಪ್ರವೇಶಿಸಲು ಪ್ರಯತ್ನಿಸಿದರು. ಆದರೆ, ಅಶ್ರುವಾಯು, ಜಲಫಿರಂಗಿ, ಭದ್ರತಾ ಪಡೆಗಳೊಂದಿಗಿನ ಘರ್ಷಣೆ ನಂತರ ರೈತರು ಸಿಂಗು ಗಡಿಯಲ್ಲೇ ಉಳಿದರು. ಈ ಮಧ್ಯೆ, ಪ್ರತಿಭಟನೆಗಾಗಿ ಪೊಲೀಸರು ದೆಹಲಿಯಲ್ಲಿ ಸ್ಥಳ ನಿಗದಿ ಮಾಡಿದರಾದರೂ, ರೈತರು ಅಲ್ಲಿಗೆ ಹೋಗಲಿಲ್ಲ.
ರೈತರು ತಾವಿರುವಲ್ಲಿಯೇ ಬೆಳಗ್ಗಿನ ಉಪಾಹಾರ ಸಿದ್ಧಪಡಿಸುತ್ತಿದ್ದ ದೃಶ್ಯ ಇಂದು ಮುಂಜಾನೆ ಕಂಡು ಬಂತು. ಈ ನಡುವೆ ಪ್ರತಿಭಟನೆಗೆ ಇನ್ನೂ ರೈತರು ಆಗಮಿಸುತ್ತಿದ್ದು, ಮಾರ್ಗಮಧ್ಯೆ ಡಾಬಾಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವ ರೈತರ ಉಚಿತವಾಗಿ ಆಹಾರ ಒದಗಿಸುತ್ತಿವೆ.