ರೌಡಿ ಶೀಟರ್ ರಘು ಸಕಲೇಶಪುರ ಬಂಧನಕ್ಕೆ ಬಲೆ ಬೀಸಿದ ಪೋಲಿಸರು: ಭೂಗತನಾದ ಆರೋಪಿ

ಮುಸ್ಲಿಮರ ವಿರುದ್ಧ ದ್ವೇ‍ಷ ಭಾಷಣ ಮಾಡಿದ್ದ ರಘು ಸಕಲೇಶಪುರ

ಹಾಸನ: ನಗರದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ್ದ ಬಿಜೆಪಿ ಪರ ಸಂಘಟನೆ ಬಜರಂಗದಳದ ನಾಯಕ, ರೌಡಿ ಶೀಟರ್‌ ರಘು ಸಕಲೇಶಪುರ ಬಂಧನಕ್ಕೆ ಜಿಲ್ಲಾ ಪೊಲೀಸರು ಬಲೆ ಬೀಸಿದ್ದು, ಆರೋಪಿ ತಲೆ ಮರೆಸಿಕೊಂಡಿದ್ದಾಗಿ ವರದಿಯಾಗಿದೆ. ತಡ ರಾತ್ರಿ ರೌಡಿಯ ಮನೆ ಮೇಲೆ ದಾಳಿ ನಡೆಸಿದ್ದ ಪೋಲಿಸರು, ಬಂಧನಕ್ಕೆ ಎಲ್ಲೆಡೆ ಶೋಧ ನಡೆಸುತ್ತಿದ್ದಾರೆ.

ಜಾನುವಾರು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಪರ ಸಂಘಟನೆ ವಿಎಚ್‌ಪಿ ಹಾಗೂ ಬಜರಂಗದಳ ಶುಕ್ರವಾರ ಪ್ರತಿಭಟನೆ ನಡೆಸಿತ್ತು. ಈ ವೇಳೆ ಭಾಷಣ ಮಾಡಿದ್ದ ರೌಡಿ ರಘು ಸಕಲೇಶಪುರ, ತಾಲ್ಲೂಕಿನಲ್ಲಿ ತರಕಾರಿ ಮತ್ತು ಮೀನು ಮಾರುವ ಮುಸಲ್ಮಾನರ ಮೇಲೆ ಗುಂಡು ಹಾರಿಸುತ್ತೇವೆ ಎಂದು ಬೆದರಿಕೆ ಹಾಕಿದ್ದ. ಜೊತೆಗೆ ಸಚಿವ ಪ್ರಿಯಾಂಕ ಖರ್ಗೆ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ್ದ ಆರೋಪಿ. “ಅ ದಳ ಈ ದಳ ಎಂದು ಹೇಳದೆ ನೇರವಾಗಿ ಭಜರಂಗದಳ ಎಂದು ಹೇಳಿ. ಆಗ ನಮ್ಮ ತಾಕತ್ತು ತೋರಿಸುತ್ತೇವೆ” ಎಂದು ಸವಾಲು ಹಾಕಿದ್ದ.

ಇದನ್ನೂ ಓದಿ: ಬಲಪಂಥೀಯ ಶಕ್ತಿಗಳು ಸಮಾಜದ ಒಟ್ಟಾರೆ ಸ್ವರೂಪವನ್ನು ಕೋಮುವಾದೀಕರಣಗೊಳಿಸುತ್ತಿವೆ

ಇದೀಗ ರೌಡಿ ರಘು ಸಕಲೇಶಪುರ ಮಾಡಿರುವ ವಿವಾದಾತ್ಮಕ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರ ನಂತರ ಎಚ್ಚೆತ್ತ ಪೊಲೀಸರು ಸು ಮೊಟೊ ಪ್ರಕರಣ ದಾಖಲಿಸಿ, ರಘು ಸಕಲೇಶಪುರ ಸೇರಿದಂತೆ ಇನ್ನಿತರ ವ್ಯಕ್ತಿಗಳನ್ನು ಪೋಲಿಸರು ಬಂಧಿಸಲು ಮುಂದಾಗಿದ್ದಾರೆ. ಆದರೆ ಆರೋಪಿ ತಲೆಮರೆಸಿಕೊಂಡಿದ್ದಾರೆ.

ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೋಲಿಸರನ್ನು ಪಟ್ಟಣದಲ್ಲಿ ನಿಯೋಜಿಸಲಾಗಿದೆ ಎಂದು ಸ್ಥಳೀಯ ಸುದ್ದಿ ಮಾಧ್ಯಮಗಳ ವರದಿ ಹೇಳಿದೆ. ಆರೋಪಿ ತಾಲ್ಲೂಕು ಬಿಟ್ಟು ಹೊರ ಹೋಗದಂತೆ ನಾಕಬಂದಿ ಹಾಕಲಾಗಿದ್ದು, ಪೋಲಿಸರು ಅನೇಕ ತಂಡವಾಗಿ ಶೋಧ ನಡೆಸುತ್ತಿದ್ದಾರೆ.

ರೌಡಿ ಶೀಟರ್‌ ವಿರುದ್ಧ ಕ್ರಮ ಕೈಗೊಳ್ಳಲು ಸಮಾಜಿಕ, ರಾಜಕೀಯ ಪಕ್ಷಗಳ ನಾಯಕರು ಪೋಲಿಸ್ ಇಲಾಖೆ ಮೇಲೆ ಒತ್ತಡ ಹೇರಿದ್ದಾರೆ.

ಮುಸ್ಲಿಮರನ್ನು ಗುಂಡು ಹಾರಿಸಿ ಕೊಲ್ಲುವುದಾಗಿ ಬಹಿರಂಗವಾಗಿ ಘೋಷಿಸಿರುವ ಸಕಲೇಶಪುರದ ರಘು ಎಂಬ ಸಮಾಜಘಾತಕನನ್ನು ಪೋಲೀಸರು ಕೂಡಲೇ ಬಂಧಿಸುವಂತೆ ಸಿಪಿಐಎಂ ಹಾಸನ ಜಿಲ್ಲಾ ಸಮಿತಿಯು ಆಗ್ರಹಿಸಿದೆ. “ಸಕಲೇಶಪುರದ ರಘು ಎಂಬ ಸಮಾಜಘಾತುಕ ಭಜರಂಗದಳದ ಹೆಸರಿನಲ್ಲಿ ಹಲವಾರು ಅಕ್ರಮ ಹಾಗೂ ಕುಕೃತ್ಯಗಳನ್ನು ನಡೆಸಿರುತ್ತಾನೆ. ಅವನ ಮೇಲೆ ಈಗಾಗಲೇ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ‘ಗೋರಕ್ಷಣೆ’, ‘ಹಿಂದೂ’ ಧರ್ಮ ರಕ್ಷಣೆ ಹೆಸರಿನಲ್ಲಿ ರೋಲ್‌ಕಾಲ್, ಗೂಂಡಾಗಿರಿಯಂತಹ ಹಲವಾರು ಕಾನೂನು ಭಾಹಿರ ಚಟುವಟಿಕೆಯಲ್ಲಿ ತೊಡಗಿದ್ದಾನೆ” ಎಂದು ಸಿಪಿಐಎಂ ಆರೋಪಿಸಿದೆ.

ಇದನ್ನೂ ಓದಿ: ಹಿಂದುತ್ವ ಕೋಮುವಾದದ ವಿರುದ್ಧ ಅತ್ಯಂತ ವಿಶಾಲ ಅಣಿನೆರಿಕೆಯ ಪ್ರಯತ್ನ ಆರಂಭವಾಗಿದೆ-ಯೆಚುರಿ

“ಬಿಜೆಪಿ ಸರ್ಕಾರದ ಅವಧಿಯಲ್ಲಿ ಅವನ ವಿರುದ್ಧ ಪೋಲೀಸರು ಕಠಿಣ ಕ್ರಮ ಜರುಗಿಸಲು ವಿಫಲರಾಗಿದ್ದರು. ಸಕಲೇಶಪುರ ತಾಲ್ಲೂಕಿನಲ್ಲಿ ಕೆಲವು ಪೋಲೀಸರೂ ಅವನೊಂದಿಗೆ ಶಾಮೀಲಾಗಿರುವ ಮಾತುಗಳಿವೆ. ಈಗ ಸಕಲೇಶಪುರ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಆಯ್ಕೆಯಾಗಿರುವುದು ಆತನಿಗೆ ಮತ್ತಷ್ಟು ಉತ್ತೇಜನ ಸಿಕ್ಕಂತಾಗಿದೆ. ಸಕಲೇಶಪರ ಕ್ಷೇತ್ರದ ಬಿಜೆಪಿ ಶಾಸಕ ಸಿಮೆಂಟ್ ಮಂಜು ಬೆಂಬಲಿಗನಾಗಿರುವ ರಘು ವಿರುದ್ಧ ಪೋಲೀಸರು ಅತ್ಯಂತ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಬೇಕಿದೆ” ಎಂದು ಸಿಪಿಐಎಂ ಹಾಸನ ಜಿಲ್ಲಾ ಸಮಿತಿ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್ ಒತ್ತಾಯಿಸಿದ್ದಾರೆ.

ರೌಡಿ ಶೀಟರ್ ರಘು ಮತ್ತು ಆತನ ಸಹಚರರು ನಿರಂತರವಾಗಿ ಸಕಲೇಶಪುರದ ಶಾಂತಿ ಕದಡುಲು ಪ್ರಯತ್ನಿಸುತ್ತಿರುವ ಬಗ್ಗೆ ವರದಿಗಳಿಗವೆ. ಇತ್ತೀಚೆಗೆ ಭಜರಂಗದಳ ಸಂಘಟನೆಯನ್ನು ನಿಷೇಧಿಸುವಂತೆ ಹಾಗೂ ದಲಿತರ ಮೇಲೆ ಹಲ್ಲೇ ಮಾಡಿರುವ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ವಿವಿದ ದಲಿತ ಹಾಗೂ ಜನಪರ ಸಂಘಟನೆಗಳು ಈ ಹಿಂದೆ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು.

ರೌಡಿ ರಘು ಸಕಲೇಶಪುರ ಅಕ್ರಮ ಮರಳು ಸಾಗಣೆ ದಂದೆಯಲ್ಲಿ ಸಕ್ರಿಯವಾಗಿದ್ದಾನೆ ಎಂಬ ಆರೋಪವಿದ್ದು, ಹೇಮಾವತಿ ನದಿಯಿಂದ ಪ್ರತಿದಿನ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಮರಳು ಸಾಗಣೆಮಾಡುತ್ತಾನೆ ಎಂದು ಹೇಳಲಾಗುತ್ತಿದೆ. ಸಕಲೇಶಪುರ ತಹಸಿಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ಚಂದ್ರಮ್ಮ ಅವರನ್ನು ಅವಹೇಳನ ಮಾಡಿದ್ದ ಬಗ್ಗೆ ವರದಿಯಾಗಿತ್ತು

Donate Janashakthi Media

Leave a Reply

Your email address will not be published. Required fields are marked *