ಪಾಟ್ನಾ: ಮರಳುಗಾರಿಕೆ ವಿರೋಧಿಸಿ ಪ್ರತಿಭಟನೆ ನಡೆಸಿದ ಗ್ರಾಮದ ಜನರನ್ನು ಪೊಲೀಸರು ಕೈಕಟ್ಟಿ ಕೂರಿಸಿದ ಘಟನೆ ಬಿಹಾರ ರಾಜ್ಯದಲ್ಲಿ ನಡೆದಿದೆ.
ಬಿಹಾರದ ಗಯಾ ಜಿಲ್ಲೆಯಲ್ಲಿ ಪೊಲೀಸರು ಗ್ರಾಮಸ್ಥರನ್ನು ವಶಕ್ಕೆ ತೆಗೆದುಕೊಂಡ ನಂತರ, ಪುರುಷರು ಮತ್ತು ಮಹಿಳೆಯರಿಗೆ ಕೈಕಟ್ಟಿ ಹಾಕಿರುವ ವಿಡಿಯೋ ವೈರಲ್ ಆಗಿದ್ದು, ಜನಾಕ್ರೋಶಕ್ಕೆ ಕಾರಣವಾಗಿದೆ.
ಗಯಾ ಜಿಲ್ಲೆಯ ಬೆಳಗಂಜ್ ಪೊಲೀಸ್ ಠಾಣೆಯ ಅಹತ್ಪುರ ಗ್ರಾಮದಲ್ಲಿ ಮರಳು ಗಣಿಗಾರಿಕೆಗೆ ನದಿಯೊಂದರ ಗಡಿ ಗುರುತಿಸಲು ಬಂದಾಗ ಗ್ರಾಮಸ್ಥರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದೆ. ಮರಳುಗಾರಿಕೆ ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು, ಮಳೆಗಾಲದಲ್ಲಿ ಗ್ರಾಮಕ್ಕೆ ನೀರು ನುಗ್ಗುವ ಸಂಭವವಿದೆ ಎಂದು ಹೇಳಿದ್ದಾರೆ.
ಇದರಿಂದ ಕುಪಿತರಾದ ಗುತ್ತಿಗೆದಾರರು ಮತ್ತು ಪೊಲೀಸ್ ಸಿಬ್ಬಂದಿ ಬಲಪ್ರಯೋಗ ಮಾಡಿ ಅವರನ್ನು ಓಡಿಸಲು ಮುಂದಾಗಿದ್ದಾರೆ. ಈ ವೇಳೆ ಘರ್ಷಣೆ ನಡೆದು ಈ ಘಟನೆ ಜರುಗಿದೆ ಎಂದು ಹೇಳಲಾಗಿದೆ.
ಪೊಲೀಸರು ಅಶ್ರುವಾಯು ಶೆಲ್ಗಳನ್ನು ಸಹ ಹಾರಿಸಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಅವರು ನಮ್ಮ ಮೇಲೆ ಅಶ್ರುವಾಯು ಶೆಲ್ಗಳನ್ನು ಹಾರಿಸಿದರು. ಇದಿರಿಂದ ಹೆದರಿ ನಾವು ನಮ್ಮ ಮನೆಗಳಿಗೆ ಓಡಿಹೋದೆವು. ಆದರೆ, ಅವರು ನಮ್ಮನ್ನು ನಮ್ಮ ಮನೆಗೆ ಹಿಂಬಾಲಿಸಿಕೊಂಡು ಬಂದು ಕ್ರೂರವಾಗಿ ಥಳಿಸಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಮಹಿಳೆಯರು, ಮಕ್ಕಳು ಮತ್ತು ವೃದ್ಧರನ್ನು ಸಹ ಅವರು ಬಿಡಲಿಲ್ಲ. ಥಳಿಸಿದ ನಂತರ ಮಹಿಳೆಯರು ಸೇರಿದಂತೆ ಅನೇಕ ಗ್ರಾಮಸ್ಥರ ಕೈಗಳನ್ನು ಕಟ್ಟಿ ನಂತರ ಬಂಧಿಸಿದರು ಎಂದು ಗ್ರಾಮಸ್ಥರೊಬ್ಬರು ಮಾಹಿತಿ ನೀಡಿದ್ದಾರೆ. ಕೆಲವು ಗ್ರಾಮಸ್ಥರು ಪೊಲೀಸ್ ಪಡೆ ಮೇಲೆ ದಾಳಿ ಮಾಡಿದರು ಪರಿಣಾಮ ಒಂಬತ್ತು ಪೊಲೀಸರು ಗಾಯಗೊಂಡಿದ್ದಾರೆ ಎಂದು ಎಸ್ಪಿ ರಾಕೇಶ್ ಕುಮಾರ್ ಹೇಳಿದ್ದಾರೆ.