ಹುಬ್ಬಳ್ಳಿ: ಕೆಲ ದಿನಗಳ ಹಿಂದೆ ಸಂಭವಿಸಿದ ಕೋಮು ಗಲಭೆ ಪ್ರಕರಣದ ಹಿನ್ನೆಲೆ ಬಂಧನಕ್ಕೆ ಒಳಗಾಗಿರುವ ಪ್ರಮುಖ ಆರೋಪಿ ಅಭಿಷೇಕ ಹಿರೇಮಠ್ ಪೊಲೀಸ್ ಬಿಗಿ ಭದ್ರತೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಮತ್ತೆ ಜೈಲಿಗೆ ವಾಪಸ್ಸಾಗಿದ್ದಾನೆ.
ಅಭಿಷೇಕ್ ಹಿರೇಮಠ ನನ್ನು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಕೋರ್ಟ್ ಅವಕಾಶ ನೀಡಿದ್ದರಿಂದ ಇಂದು ಪೊಲೀಸರು ಆರೋಪಿಯನ್ನು ಬಿಗಿ ಭದ್ರತೆಯಲ್ಲಿ ಪರೀಕ್ಷೆಗಾಗಿ ಹುಬ್ಬಳ್ಳಿಯ ಪ್ರಿಯದರ್ಶಿನಿ ಕಾಲೋನಿ ಡಾ. ಬಿ ಆರ್ ಪಾಟೀಲ ಮಹೇಶ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದರು.
ಅಭಿಷೇಕ ಹಿರೇಮಠ ಅವರಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ.
ಅಭಿಷೇಕ್ ಹಿರೇಮಠ ಮಸೀದಿ ಮೇಲೆ ಭಗವಾಧ್ವಜ ಹಾರಿಸುವ ತಿದ್ದುಪಡಿ ಮಾಡಿರುವ ಛಾಯಾಚಿತ್ರವೊಂದನ್ನು ತನ್ನ ವಾಟ್ಸಪ್ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದರು. ಈ ಚಿತ್ರವು ವೈರಲ್ ಆಗುತ್ತಿದ್ದಂತೆ ಆತನನ್ನು ಬಂಧಿಸುವಂತೆ ಕಳೆದ ಶನಿವಾರ(ಏಪ್ರಿಲ್ 16) ರಾತ್ರಿ ಒಂದು ಸಮುದಾಯದ ಜನರು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿಯ ಹಳೇ ಪೊಲೀಸ್ ಠಾಣಾ ಬಳಿ ನಡೆದ ಗಲಭೆಯಲ್ಲಿ 12 ಪೊಲೀಸರು ಗಾಯಗೊಂಡಿದ್ದರು. ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 134 ಆರೋಪಿಗಳನ್ನು ಬಂಧಿಸಲಾಗಿದೆ.
ಗಲಭೆಗೆ ಸಂಬಂಧಿಸಿದಂತೆ ಸೋಮವಾರ ಆರೋಪಿ ಅಭಿಷೇಕ್ ಹಿರೇಮಠನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಆರೋಪಿಯನ್ನು ಏಪ್ರಿಲ್ 30ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿತ್ತು.
ಅಭಿಷೇಕ್ ಹಿರೇಮಠ ಪರ ವಕೀಲರು ಹುಬ್ಬಳ್ಳಿ ನ್ಯಾಯಾಲಯಕ್ಕೆ ಮಧ್ಯಂತರ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ ಕೋರ್ಟ್ ಜಾಮೀನು ಅರ್ಜಿ ವಜಾಗೊಳಿಸಿತ್ತು. ಪೊಲೀಸ್ ಭದ್ರತೆಯಲ್ಲಿ ಪರೀಕ್ಷೆ ಬರೆಯಲು ಒಪ್ಪಿಗೆ ನೀಡಿತ್ತು.