ಬನಿಹಾಲ್: ರಾಂಬನ್ ಜಿಲ್ಲೆಯಲ್ಲಿ ಅಕ್ರಮವಾಗಿ ವೆಬ್ ಸುದ್ದಿ ವಾಹಿನಿಗಳು ವ್ಯಾಪಕವಾಗಿ ಹರಡಿಕೊಳ್ಳುತ್ತಿದ್ದು, ಅದನ್ನು ಗಂಭೀರವಾಗಿ ಪರಿಗಣಿಸಿ ನಕಲಿ ಮಾಧ್ಯಮಗಳನ್ನು ಗುರುತಿಸುವಂತೆ ಜಮ್ಮು ಮತ್ತು ಕಾಶ್ಮೀರದ ರಾಂಬನ್ನ ಅಧಿಕಾರಿಗಳು ಪೊಲೀಸರಿಗೆ ಸೂಚಿಸಿದ್ದಾರೆ.
ರಾಂಬನ್ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಸ್ಸರತ್ ಇಸ್ಲಾಂ, ಸರಿಯಾದ ನೋಂದಣಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ನಕಲಿ ಮಾಧ್ಯಮಗಳ ಹಾವಳಿ ಹೆಚ್ಚಾಗುತ್ತಿವೆ. ಇವುಗಳಲ್ಲಿನ ಪತ್ರಕರ್ತರ ಪೂರ್ವಾಪರ ಮತ್ತು ನಿಯಮಗಳನ್ನು ಪೊಲೀಸರ ಮೂಲಕ ಪರಿಶೀಲಿಸುವ ನಿರ್ಧಾರವನ್ನು ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘ ಸ್ವಾಗತಿಸಿದೆ.
ಪೊಲೀಸ್ ವರಿಷ್ಠಾಧಿಕಾರಿ ಮೋಹಿತಾ ಶರ್ಮಾ ಗಾರ್ಗ್ ಅವರಿಗೆ ಜಿಲ್ಲಾಧಿಕಾರಿ ಬರೆದ ಪತ್ರದಲ್ಲಿ, ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ, ವಿಶೇಷವಾಗಿ ಫೇಸ್ಬುಕ್ ಮೂಲಕ ಕಾರ್ಯನಿರ್ವಹಿಸುತ್ತಿರುವ ನೋಂದಾಯಿಸದ ವೆಬ್ ಆಧಾರಿತ ಸುದ್ದಿ ಸಂಸ್ಥೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಚಾರ, ನಕಲಿ ಸುದ್ದಿ, ಮತ್ತು ಜಿಲ್ಲೆಯ ಸರ್ಕಾರಿ ಅಧಿಕಾರಿಗಳನ್ನು ಬ್ಲಾಕ್ಮೇಲ್ ಮಾಡುವುದು ಹೆಚ್ಚಾಗುತ್ತಿವೆ. ಹೆಚ್ಚಿನ ಸಂದರ್ಭಗಳಲ್ಲಿ ಆಡಳಿತಾತ್ಮಕ ವ್ಯವಹಾರಗಳನ್ನು ಸುಗಮವಾಗಿ ನಡೆಸುವುದರಲ್ಲಿಯೂ ನಕಲಿ ಪತ್ರಕರ್ತರು ಮಧ್ಯಪ್ರವೇಶಿಸುತ್ತಿದ್ದಾರೆ. ಅಲ್ಲದೆ, ಸರ್ಕಾರದ ವಿರೋಧಿ ಕಥೆಗಳನ್ನೇ ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.
ಜಿಲ್ಲಾ ಮತ್ತು ವಲಯದ ಅಧಿಕಾರಿಗಳು ತಮ್ಮ ಮೇಲಾಗುತ್ತಿರುವ ಕಿರುಕುಳದ ಬಗ್ಗೆ ಸಾಕಷ್ಟು ದೂರು ನೀಡಿದ್ದಾರೆ. ಯಾವುದೇ ಅಧಿಕೃತ ಗುರುತು ಹೊಂದದ ಸ್ವಯಂ ಘೋಷಿತ ಮಾಧ್ಯಮದವರು, ಕಚೇರಿಗಳಿಗೆ ನುಗ್ಗಿ ವೀಡಿಯೊಗಳನ್ನು ರೆಕಾರ್ಡ್ ಮಾಡಲು ಮತ್ತು ಅದನ್ನು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲು ಪ್ರಾರಂಭಿಸುತ್ತಿದ್ದಾರೆ. ಇದರಿಂದ ದೈನಂದಿನ ಕಾರ್ಯನಿರ್ವಹಣೆಗೆ ಅಡಚಣೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದ್ದಾರೆ.
ಈ ಕಾನೂನುಬಾಹಿರ ಸುದ್ದಿತಾಣ ಮತ್ತು ಪತ್ರಕರ್ತರು ತಪಾಸಣೆಗೆ ಒಳಪಡದಿದ್ದಲ್ಲಿ ಶಾಂತಿಯುತ ವಾತಾವರಣ ಕದಡುವ ಸಾಧ್ಯತೆ ಇದೆ. ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವ ಅಪಾಯವೂ ಇದೆ. ಸಾರ್ವಜನಿಕರ ಹಿತಾಸಕ್ತಿಗಾಗಿ ಜಿಲ್ಲೆಯಲ್ಲಿ ಯಾವುದೇ ಸರಿಯಾದ ನೋಂದಣಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ನಕಲಿ ಮಾಧ್ಯಮ ಗುಂಪುಗಳನ್ನು ಗುರುತಿಸಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಸಕ್ಷಮ ಪ್ರಾಕಾರದಿಂದ ಯಾವುದೇ ಮಾನ್ಯ ಅರ್ಹತೆ ಮತ್ತು ಅನುಮತಿಯಿಲ್ಲದೆ ಕಾನೂನುಬಾಹಿರವಾಗಿ ನಡೆಯುತ್ತಿರುವ ವೆಬ್ಸೈಟ್ಗಳನ್ನು ಮತ್ತು ಅದನ್ನು ನಿರ್ವಹಿಸುವ ಪತ್ರಕರ್ತರ ಪೂರ್ವಾಪರ, ನಿಯ ಮೂಲ ಕುರಿತು ಪರಿಶೀಲನೆ ನಡೆಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾಡಳಿತದ ನಿರ್ಧಾರ ಸ್ವಾಗತಿಸಿ, ವೃತ್ತಿಗೆ ಕೆಟ್ಟ ಹೆಸರು ತರುತ್ತಿರುವ ಇಂತಹವರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂಬುದು ಸಂಘದ ಬಹುದಿನಗಳ ಬೇಡಿಕೆಯಾಗಿದೆ ಎಂದಿದ್ದಾರೆ.