ಮತದಾರರ ದತ್ತಾಂಶ ಕಳವು ಹಗರಣ: ಹುಬ್ಬಳ್ಳಿ, ದಾವಣಗೆರೆ, ಕನಕಗಿರಿಯಲ್ಲಿಯೂ ಅಕ್ರಮ ಪತ್ತೆ

ಬೆಂಗಳೂರು: ಮತದಾರರ ದತ್ತಾಂಶ ಕಳವು ಪ್ರಕರಣದ ಬಗ್ಗೆ ತನಿಖೆ ಚುರುಕುಗೊಳಿಸಿರುವ ಪೊಲೀಸ್‌ ಇಲಾಖೆಯು ‘ಚಿಲುಮೆ’ ಸಂಸ್ಥೆಯ ಐವರನ್ನು ಬಂಧಿಸಿದ್ದಾರೆ. ಚಿಲುಮೆಯ ಮುಖ್ಯಸ್ಥರಾದ ರವಿಕುಮಾರ್, ನಿರ್ದೇಶಕ ರೇಣುಕಾ ಪ್ರಸಾದ್, ಕೆಂಪೇಗೌಡ, ಮ್ಯಾನೇಜರ್ ಎಚ್.ಆರ್.ಧರ್ಮೇಶ್, ಮೇಲ್ವಿಚಾರಕರಾದ ಪ್ರಜ್ವಲ್ ಬಂಧಿತ ಆರೋಪಿಗಳು.

ಬೆಂಗಳೂರಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂದು ದೂರು ದಾಖಲಾಗುತ್ತಿದ್ದಂತೆಯೇ ರವಿಕುಮಾರ್‌ ತಲೆಮರೆಸಿಕೊಂಡಿದ್ದ. ಆತನ ಬಂಧನಕ್ಕಾಗಿ ವಿಶೇಷ ತಂಡ ರಚಿಸಲಾಗಿತ್ತು. ರವಿಕುಮಾರ್ ತಲೆಮರೆಸಿಕೊಂಡಿದ್ದರಿಂದ ಅವರ ಪತ್ನಿ ಐಶ್ವರ್ಯಾ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಭಾನುವಾರ ಹಲಸೂರು ಗೇಟ್ ಪೊಲೀಸರು ರವಿಕುಮಾರ್ ನನ್ನು ಬಂಧಿಸಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಐವರನ್ನು ಬಂಧಿಸಲಾಗಿದೆ.

ಮತದಾರರ ದತ್ತಾಂಶ ಕಳವು ಪ್ರಕರಣದಲ್ಲಿ ರವಿಕುಮಾರ್ ಮುಖ್ಯ ಸೂತ್ರಧಾರಿ ಆಗಿದ್ದಾರೆ. ಸೋಮವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗುವುದು ಎಂದು ಮೂಲಗಳು ತಿಳಿಸಿವೆ.

ಮತದಾರರ ವೈಯಕ್ತಿಕ ಮಾಹಿತಿ  ಕಳವು ಪ್ರಕರಣದ ಸಂಬಂಧ ಚಿಲುವೆ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವಿರುದ್ಧ ಹಲಸೂರುಗೇಟ್‌ ಮತ್ತು ಕಾಡುಗೋಡಿ ಪೊಲೀಸ್‌ ಠಾಣೆಗಳಲ್ಲಿ ಬಿಬಿಎಂಪಿ ದೂರು ದಾಖಲಿಸಿತ್ತು.

ಸಾಕ್ಷ್ಯಾಧಾರ ಸಲ್ಲಿಸಲು ಸಮನ್ವಯ ಟ್ರಸ್ಟ್‌ ಗೆ ಸೂಚನೆ

ಬೆಂಗಳೂರಿನಲ್ಲಿ ನಡೆದಿರುವ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ‘ಚಿಲುಮೆ’ ಸಂಸ್ಥೆಯಿಂದ ನಡೆದಿರುವ ಅಕ್ರಮದ ಕುರಿತು ದೂರು ಸಲ್ಲಿಸಿದ ಸಮನ್ವಯ ಟ್ರಸ್ಟ್​ ಗೆ ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ನೊಟೀಸು ಜಾರಿ ಮಾಡಲಾಗಿದೆ. ಬುಧವಾರ ವಿಚಾರಣೆಗೆ ಖುದ್ದು ಹಾಜರಾಗಿ, ಸಂಗ್ರಹಿಸಿರುವ ಸಾಕ್ಷ್ಯಾಧಾರ ನೀಡಬೇಕು ಎಂದು ಸೂಚಿಸಲಾಗಿದೆ.

ಬಿಬಿಎಂಪಿ ಅಧಿಕಾರಿಗಳ ವಿಚಾರಣೆ

ಭಾರೀ ದೊಡ್ಡ ಪ್ರಮಾಣದಲ್ಲಿ ಅಕ್ರಮ ನಡೆದಿದೆ ಎನ್ನಲಾಗಿದ್ದು, ಈ ಬಗ್ಗೆ ಹಲವು ಆಯಾಮದಲ್ಲಿ ತನಿಖೆ ಮುಂದುವರಿಸಿರುವ ಪೊಲೀಸರು ಇಂದಿನಿಂದ  ಬಿಬಿಎಂಪಿಯ ಕಂದಾಯ ಅಧಿಕಾರಿಗಳ ವಿಚಾರಣೆ ನಡೆಸಲು ಮುಂದಾಗಿದ್ದಾರೆ.

ಅಕ್ರಮದ ಬಗ್ಗೆ ತನಿಖೆ ಮುಂದುವರೆದಿದ್ದು, ಈ ಬಗ್ಗೆ ಮಾಹಿತಿ ನೀಡಿರುವ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ಡಿಜಿಟಲ್ ಆ್ಯಪ್ ಮಾಡಿದವರನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ. ಲ್ಯಾಪ್‌ಟಾಪ್‌ಗಳನ್ನು ಪರಿಶೀಲನೆಗೆ ಒಳಪಡಿಸಿಲಾಗಿದ್ದು, ಆ್ಯಪ್​ಗೆ ಸಂಬಂಧಿಸಿದ ಸರ್ವರ್ ಡೌನ್ ಮಾಡಿರುವುದರಿಂದ ಪೂರ್ಣ ಮಾಹಿತಿ ಲಭ್ಯವಾಗುತ್ತಿಲ್ಲ. ಆದರೆ ಆರೋಪಿ ಕೆಂಪೇಗೌಡ ಸಂಗ್ರಹಿಸಿದ ದತ್ತಾಂಶಗಳ ಬಗ್ಗೆ ಕೆಲ ಮಾಹಿತಿ ನೀಡಿದ್ದಾನೆ. ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತದಾರರ ಜಾತಿ, ಉಪಜಾತಿ, ಲಿಂಗ ಸೇರಿ ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದಾರೆ. ಕೆಂಪೇಗೌಡ ಎನ್ನುವಾತ ಆ್ಯಪ್ ಮೂಲಕ ಸಂಗ್ರಹಿಸಿದ ಮಾಹಿತಿಯನ್ನು ರವಿಕುಮಾರ್‌ಗೆ ನೀಡುತ್ತಿದ್ದ. ಈ ಮಾಹಿತಿಯನ್ನು ಬೇರೆ ರೀತಿಯಲ್ಲಿ ಬಳಸುತ್ತಿದ್ದ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. 15 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದರು.

ಹುಬ್ಬಳ್ಳಿ, ದಾವಣಗೆರೆ, ಕನಕಗಿರಿಯಲ್ಲಿ ಮತದಾರರ ಹೆಸರು ನಾಪತ್ತೆ

ಚಿಲುಮೆ ಸಂಸ್ಥೆ ನಡೆಸಿರುವ ಅಕ್ರಮ ಕೇವಲ ಬೆಂಗಳೂರು ಮಾತ್ರವಲ್ಲದೆ, ಹುಬ್ಬಳ್ಳಿ, ದಾವಣಗೆರೆ, ಕನಕಗಿರಿಯಲ್ಲಿ ನಡೆದಿದೆ ಎನ್ನಲಾಗಿದೆ. ಕಾಂಗ್ರೆಸ್‌ ಮತ ಕ್ಷೇತ್ರಗಳಲ್ಲಿ ಹೆಚ್ಚಿನ ಅಕ್ರಮಗಳು ನಡೆದಿದೆ ಎಂದು ವರದಿಯಾಗಿದೆ. ಬೆಂಗಳೂರು ಮೂಲದ ಐಐಎಂಟಿ ಸಂಸ್ಥೆಯು ಧಾರವಾಡ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ 6 ತಿಂಗಳ ಹಿಂದೆಯೇ ಮಾಹಿತಿ ಸಂಗ್ರಹಿಸಿದೆ. ಅದರಲ್ಲೂ ಕಾಂಗ್ರೆಸ್ ಮಹಾನಗರ ಪಾಲಿಕೆ ಸದಸ್ಯರ ಕ್ಷೇತ್ರಗಳ ವ್ಯಾಪ್ತಿಯಲ್ಲಿಯೇ ಮತದಾರರ ಮಾಹಿತಿ ಸಂಗ್ರಹ ಮಾಡಲಾಗಿದೆ. ‘ಸ್ಮಾರ್ಟ್​ ಸಿಟಿ’ ವಿಭಾಗದಿಂದ ಸರ್ವೆಗೆ ಬಂದಿರುವುದಾಗಿ ತಂಡದ ಸದಸ್ಯರು ಹೇಳಿಕೊಂಡಿದ್ದರು. ಗಾರ್ಡನ್​ ರೀಸರ್ಚ್​​ ಸೊಸೈಟಿ ಕೇಳಿದ್ದ ಪಾಲಿಕೆ ಅನುಮತಿ ಪತ್ರಕ್ಕೆ ಆಯುಕ್ತರು ಕೇವಲ ಸ್ವೀಕೃತಿ ಪತ್ರ ಮಾತ್ರ ನೀಡಿದ್ದರು. ಅನುಮತಿ ಪತ್ರ ನೀಡಿರಲಿಲ್ಲ ಎಂದು ಸದಸ್ಯರು ವಿವರಿಸಿದ್ದಾರೆ.

ಬೆಂಗಳೂರು ಮತದಾರರ ಪಟ್ಟಿ ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ದಾವಣಗೆರೆಯ ಮತದಾರರು ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ಮುಂದಾದರು. ಈ ವೇಳೆ 1,718 ಸಾವಿರಾರು ಮಂದಿಯ ಹೆಸರು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಯಾವುದೇ ವ್ಯಕ್ತಿಯು ಮತದಾರರ ಪಟ್ಟಿಯಿಂದ ಹೆಸರು ತೆಗೆಸಲು ನಮೂನೆ 7ರ ಅರ್ಜಿಯನ್ನು ಭರ್ತಿ ಮಾಡಬೇಕು. ಆದರೆ ಈ ಪ್ರಕ್ರಿಯೆಯೇ ನಡೆಯದೇ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಕಾಂಗ್ರೆಸ್ ನಾಯಕರಾದ ಎ.ನಾಗರಾಜ್ ಹೇಳಿದ್ದಾರೆ.

ದಾವಣಗೆರೆಯ ಮೆಹಬೂಬ್ ನಗರ, ಆಜಾದ್ ನಗರ, ಕೆಟಿಜೆ ನಗರದಲ್ಲಿ ಇಂಥ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. ಕೂಲಿ ಕಾರ್ಮಿಕರು, ದಲಿತರು ಹಾಗೂ ಅಲ್ಪಸಂಖ್ಯಾತರೇ ಹೆಚ್ಚಾಗಿರುವ ಪ್ರದೇಶದಲ್ಲಿ ಈ ಅಕ್ರಮ ಬೆಳಕಿಗೆ ಬಂದಿದೆ. ದಾವಣಗೆರೆ ಅಕ್ರಮದ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ಕನಕಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 9 ಸಾವಿರ ಮತದಾರರ ಸಂಖ್ಯೆ ಕಡಿಮೆ ಆಗಿದೆ. ​ಬಿಜೆಪಿಯವರು ಸೋಲಿನ ಭೀತಿಯಿಂದ ಈ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಆರೋಪಿಸಿದ್ದಾರೆ. ನಾವು ನಮ್ಮ ಕಾರ್ಯಕರ್ತರ ಮೂಲಕ ಬೂತ್ ಮಟ್ಟದಲ್ಲಿ ಮತದಾರರ ಪಟ್ಟಿಯನ್ನು ಪರಿಶೀಲಿಸುತ್ತಿದ್ದೇವೆ. ಎಸ್​ಸಿ, ಎಸ್​ಟಿ, ಒಬಿಸಿ ಮತಗಳನ್ನು ಗುರಿಯಾಗಿಸಿಕೊಂಡು ಬಿಜೆಪಿಯವರು ಆಟವಾಡುತ್ತಿದ್ದಾರೆ. ಮತದಾರರ ಹಕ್ಕು ಕಸಿದುಕೊಳ್ಳುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಅವರು ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *